ಬೆಂಗಳೂರಿನಲ್ಲಿ ದಳಪತಿ ವಿಜಯ್ ಸಿನಿಮಾ GOAT ಸಖತ್ ಕ್ರೇಜ್: ಯಾವ್ಯಾವ ಥಿಯೇಟರ್‌ನಲ್ಲಿ ಎಷ್ಟು ಟಿಕೆಟ್ ಸೋಲ್ಡ್?
ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಸಿನಿಮಾ ಗೋಟ್ ( GOAT) ನಾಳೆ (ಸೆಪ್ಟೆಂಬರ್ 5) ಬಿಡುಗಡೆಯಾಗುತ್ತಿದೆ. ವಿಜಯ್ ಸಿನಿಮಾ ಅಂದ್ಮೇಲೆ ಅಭಿಮಾನಿಗಳು ಎಲ್ಲಾ ಕಡೆಗೂ ಇದ್ದಾರೆ. ಹೀಗಾಗಿ ಬೆಂಗಳೂರಿನಲ್ಲೂ ಈ ಸಿನಿಮಾಗೆ ಕ್ರೇಜ್ ಜೋರಾಗಿಯೇ ಇದೆ. ಬೆಂಗಳೂರಿನ ಸಿಂಗಲ್ ಸ್ಕ್ರೀನ್‌ಗಳಲ್ಲಿ 'ಗೋಟ್' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಕೂಡ ಸಖತ್ ಆಗಿದೆ. ಮೊದಲ ದಿನ 'ಗೋಟ್' ಸಿನಿಮಾ 3.68 ಲಕ್ಷ ಟಿಕೆಟ್‌ಗಳು ಸೇಲ್ ಆಗಿವೆ ಎಂದು ಎನ್ನಲಾಗಿದೆ.
ಹಾಗೇ ಬೆಂಗಳೂರಿನಲ್ಲೂ ಫ್ಯಾನ್ಸ್ ಶೋನಿಂದ ಹಿಡಿದು ರೆಗ್ಯೂಲರ್ ಶೋಗೆ ಬೇಡಿಕೆ ಹೆಚ್ಚಾಗಿದೆ. ಅಡ್ವಾನ್ಸ್ ಬುಕಿಂಗ್ ಓಪನ್ ಮಾಡುತ್ತಿದ್ದಂತೆ ಎಲ್ಲೆಲ್ಲಿ ಬೆಳ್ಳಂಬೆಳಗ್ಗೆ ಫ್ಯಾನ್ಸ್ ಶೋ ಶುರುವಾಗಿತ್ತೋ ಅಲ್ಲೆಲ್ಲ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಇದು ಈ ವರ್ಷದಲ್ಲಿ ತೆರೆಕಂಡ ತಮಿಳು ಚಿತ್ರರಂಗದ ಅತೀ ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾ ಆಗಬಹುದೆಂಬ ನಿರೀಕ್ಷೆಯಿದೆ. ಸದ್ಯ ಅತೀ ದೊಡ್ಡ ಅಡ್ವಾನ್ಸ್ ಬುಕಿಂಗ್ ಆಗಿರುವ ಸಿನಿಮಾ ಎಂದು ಹೇಳಲಾಗುತ್ತಿದೆ.

ಇನ್ನು ಬೆಂಗಳೂರಿನ ತಮಿಳು ಸೆಂಟರ್ ಥಿಯೇಟರ್‌ಗಳಲ್ಲಿ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (GOAT)ಗೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಕರ್ನಾಟಕದಲ್ಲೂ ಈ ಸಿನಿಮಾ ಮೊದಲ ದಿನ ಮಸ್ತ್ ಓಪನಿಂಗ್ ಸಿಗುತ್ತೆ ನಿರೀಕ್ಷೆ ಮಾಡಲಾಗಿದೆ. ಬೆಂಗಳೂರಿನ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಿದ್ದ ಚಿತ್ರಮಂದಿರಗಳಲ್ಲಿ ಸಾವಿರ ಲೆಕ್ಕದಲ್ಲಿ ಸಿನಿಮಾ ಟಿಕೆಟ್ ಸೇಲ್ ಆಗಿದೆ. ಹಾಗಿದ್ದರೆ ಎಲ್ಲೆಲ್ಲಿ ಎಷ್ಟು ಟಿಕೆಟ್‌ಗಳು ಸೇಲ್ ಆಗಿವೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಬೆಂಗಳೂರಿನ ಸಿಂಗಲ್ ಸ್ಕ್ರೀನ್‌ಗಳಲ್ಲಿ ಗೋಟ್
ಬೆಂಗಳೂರಿನಲ್ಲಿ ಪರಭಾಷೆಯ ಸಿನಿಮಾಗಳೂ ಕೂಡ ಸದ್ದು ಮಾಡುತ್ತಿವೆ. ಸಿನಿಮಾ ಚೆನ್ನಾಗಿದ್ದರೆ, ದಾಖಲೆ ಕಲೆಕ್ಷನ್ ಮಾಡಿದ್ದು ಇದೆ. ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ 'ಜೈಲರ್' ಸಿನಿಮಾ ಕರ್ನಾಟಕ ಬಾಕ್ಸಾಫೀಸ್‌ನಲ್ಲೇ 35 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತ್ತು. ಹಾಗೇ 'ಗೋಟ್' ಸಿನಿಮಾಗೂ ಕೂಡ ಹಾಗೇ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನ ಬೆಂಗಳೂರಿನಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಅಡ್ವಾನ್ಸ್ ಬುಕಿಂಗ್ ಆಗಿವೆ ಎಂದು ಹೇಳಲಾಗುತ್ತಿದೆ.

ಯಾವ್ಯಾವ ಥಿಯೇಟರ್‌ನಲ್ಲಿ ಎಷ್ಟೆಷ್ಟು?
ಬೆಂಗಳೂರಿನ ಮುಕುಂದ, ಊರ್ವಶಿ, ಪುಷ್ಪಾಂಜಲಿ, ಸಿನಿಫಿಲೆ (ಎಚ್‌ಎಸ್‌ಆರ್ ಲೇಔಟ್), ಗೋಪಾಲನ್ ಸಿನಿಮಾಸ್, ಶಂಕರ್‌ನಾಗ್ ಸೇರಿದಂತೆ ತಮಿಳು ಜನರಿರುವ ಏರಿಯಾಗಳಲ್ಲಿ ಭರ್ಜರಿಯಾಗಿ ಟಿಕೆಟ್ ಬುಕಿಂಗ್ ಆಗಿದೆ. ಅದರಲ್ಲೂ ಊರ್ವಶಿ ಚಿತ್ರಮಂದಿರಲ್ಲಿ ಅತೀ ವೇಗವಾಗಿ ಟಿಕೆಟ್ ಬುಕಿಂಗ್ ಆಗಿದೆ ಎನ್ನಲಾಗಿದೆ. ಮುಕುಂದ ಚಿತ್ರಮಂದಿರಲ್ಲಿ 4 ಸಾವಿರ, ಊರ್ವಶಿಯಲ್ಲಿ ಕೇವಲ ಒಂದೂವರೆ ಗಂಟೆಯಲ್ಲಿ ಮೂರು ಸಾವಿರ, ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ಒಂದೂವರೆ ಸಾವಿರ, ಗೋಪಾಲನ್ ಸಿನಿಮಾಸ್‌ನಲ್ಲಿ 4 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಸೋಲ್ಡ್ ಆಗಿವೆ ಎನ್ನಲಾಗುತ್ತಿದೆ. ಹಾಗೇ ಶಂಕರ್‌ನಾಗ್ ಚಿತ್ರಮಂದಿರದಲ್ಲಿ 2 ಸಾವಿರ ಟಿಕೆಟ್ ಸೇಲ್ ಆಗಿದೆ.
ಕರ್ನಾಟಕದಲ್ಲಿ ಎಷ್ಟು ಶೋ?
ದಳಪತಿ ವಿಜಯ್ ಸಿನಿಮಾ ಗೋಟ್‌ಗೆ ಕರ್ನಾಟಕದಲ್ಲಿಯೇ ಸುಮಾರು 150 ಶೋಗಳನ್ನು ಕೊಡಲಾಗಿದೆ ಎಂಬುದು ವಿತರಕರ ವಲಯದಿಂದ ಕೇಳಿ ಬಂದಿರುವ ಸುದ್ದಿ. ಎಚ್‌ಎಸ್‌ಆರ್ ಲೇ ಔಟ್‌ನಲ್ಲಿರುವ ಸಿನಿಫಿಲೆಯಲ್ಲಿಯೇ ಸುಮಾರು 26 ಶೋಗಳನ್ನು ಹಾಕುತ್ತಿರುವ ಬಗ್ಗೆ ಮಾಹಿತಿಯಿದೆ. ಒಂದು ಕನ್ನಡ ಸಿನಿಮಾಗೆ ಸಿಗುವಷ್ಟೇ ಶೋಗಳನ್ನು ಪರಭಾಷೆಯ ಸಿನಿಮಾಗಳಿಗೂ ಸಿಕ್ಕಿರುವುದು ಮತ್ತೊಂದು ವಿಷಯ. ಒಟ್ಟು 'ಗೋಟ್' ಸಿನಿಮಾ 3.68 ಲಕ್ಷ ಟಿಕೆಟ್‌ಗಳು ಸೋಲ್ಡ್ ಆಗಿವೆ ಎಂದು ವರದಿಯಾಗಿವೆ.
ಕನ್ನಡದ ಒಂದೇ ಸಿನಿಮಾ ರಿಲೀಸ್
'ಗೋಟ್' ಇಷ್ಟೊಂದು ಶೋಗಳು ಸಿಗುವುದಕ್ಕೂ ಕಾರಣವಿದೆ. ಕನ್ನಡದಿಂದ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಮಾಸ್ ಅಲ್ಲ. ರೊಮ್ಯಾಂಟಿಕ್ ಡ್ರಾಮ. ಈ ಕಾರಣಕ್ಕೆ ಸಿನಿಮಾ ಪ್ರೇಕ್ಷಕರಿಗೆ ಹಿಡಿಸಿದೆ, ದಿನದಿಂದ ದಿನಕ್ಕೆ ಅವರನ್ನು ಥಿಯೇಟರ್‌ಗೆ ಕರೆದುಕೊಂಡು ಬರುವ ಸಾಧ್ಯತೆಯಿದೆ. ಆದರೆ, 'ಗೋಟ್' ಸಿನಿಮಾದ ಅಬ್ಬರದ ಮುಂದೆ 'ಇಬ್ಬನಿ ತಬ್ಬಿದ ಇಳೆಯಲಿ' ಪ್ರೇಕ್ಷಕರನ್ನು ಸೆಳೆಯುತ್ತಾ? ಸದ್ಯಕ್ಕೆ ಕುತೂಹಲದ ಪ್ರಶ್ನೆ.


Click it and Unblock the Notifications











