GOAT Box Office Day 7: 7ನೇ ದಿನವೂ ಚೇತರಿಕೆ ಕಾಣದ 'ಗೋಟ್'; ಕರ್ನಾಟಕದಲ್ಲಿ ಎಷ್ಟಾಯ್ತು ಕಲೆಕ್ಷನ್?
ದಳಪತಿ ವಿಜಯ್ ಡಬಲ್ ರೋಲ್ ತೆರೆಮೇಲೆ ಜಾದು ಮಾಡುತ್ತೆ ಅಂತಲೇ ನಂಬಲಾಗಿತ್ತು. ಮೊದಲ ನಾಲ್ಕೈದು ದಿನ 'ಗೋಟ್' (GOAT) ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ್ದು ಬಿಟ್ಟರೆ, ಮತ್ತೆ ಈ ಸಿನಿಮಾ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಮೊದಲನೇ ವಾರ ಬಾಕ್ಸಾಫೀಸ್ ಹೊಸ ದಾಖಲೆ ಬರೆಯಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಆ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ.
ವೆಂಕಟ್ ಪ್ರಭು ನಿರ್ದೇಶಿಸಿದ ಸ್ಪೈ- ಥ್ರಿಲ್ಲರ್ ಸಿನಿಮಾ 'ಗೋಟ್'ನಲ್ಲಿ ಬಹುತಾರಾಗಣವೇ ಇತ್ತು. ದಳಪತಿ ವಿಜಯ್ ಜೊತೆಗೆ ಕೋಕಿಲಾ ಮೋಹನ್, ಪ್ರಭುದೇವ, ಪ್ರಶಾಂತ್, ಜಯರಾಂ, ಸ್ನೇಹ, ಲೈಲಾ, ಮೀನಾಕ್ಷಿ ಚೌಧರಿ ಸೇರಿದಂತೆ ದೊಡ್ಡ ಸ್ಟಾರ್‌ಗಳ ದಂಡೇ ಈ ಸಿನಿಮಾದಲ್ಲಿ ಇದೆ. ಅಲ್ಲದೆ ತ್ರಿಶಾ ಹಾಗೂ ಶಿವಕಾರ್ತಿಕೇಯನ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

'ಗೋಟ್' ಸಿನಿಮಾವನ್ನು ಎಜಿಎಸ್ ಎಂಟರ್‌ಟೈನ್ಮೆಂಟ್ 380 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದೆ. ಈ ವೀಕೆಂಡ್‌ನಲ್ಲಿ 'ಗೋಟ್' ಕಲೆಕ್ಷನ್ ದೊಡ್ಡ ಪ್ರಮಾಣದಲ್ಲಿ ಆಗಬೇಕು. ಸದ್ಯ ಐದನೇ ದಿನದಿಂದ ಬಾಕ್ಸಾಫೀಸ್‌ನಲ್ಲಿ ನಿರಂತರ ಕುಸಿತ ಕಂಡಿದೆ. ಇದೇ ಬೆನ್ನಲ್ಲೇ 7ನೇ ದಿನವೂ ಕೂಡ ಡ್ರಾಪ್ ಆಗಿದೆ. ಇನ್ನು ಕರ್ನಾಟಕದಲ್ಲಿ ಪರಿಸ್ಥಿತಿ ಏನಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
7ನೇ ದಿನ ಕರ್ನಾಟಕ ಕಲೆಕ್ಷನ್
ದಳಪತಿ ವಿಜಯ್ ಸಿನಿಮಾ ಕರ್ನಾಟಕದಲ್ಲೂ ಒಳ್ಳೆಯ ಬ್ಯುಸಿನೆಸ್ ಮಾಡುತ್ತೆ. ಕೋಟಿ ಲೆಕ್ಕದಲ್ಲಿಯೇ ಬ್ಯುಸಿನೆಸ್ ಮಾಡುತ್ತೆ. 'ಗೋಟ್'ಗೆ ಕರ್ನಾಟಕದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಅವರ ಅಭಿಮಾನಿಗಳು ಈ ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಹೆಚ್ಚು ವ್ಯತ್ಯಾಸ ಆಗಿಲ್ಲ ಎಂದು ಹೇಳಲಾಗುತ್ತಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 7ನೇ ದಿನ ಕರ್ನಾಟಕದಲ್ಲಿ 'ಗೋಟ್' ಗಳಿಸಿದ್ದು ಒಂದು ಕೋಟಿ ರೂಪಾಯಿ.

ಕರ್ನಾಟಕದಲ್ಲಿ 'ಗೋಟ್' ಹಿಟ್?
'ಗೋಟ್' ದಕ್ಷಿಣ ಭಾರತದ ಕೆಲವು ರಾಜ್ಯದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಆದರೆ, ಕೆಲವು ರಾಜ್ಯಗಳಲ್ಲಿ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿಲ್ಲ. 'ಗೋಟ್' ಮೊದಲ ನಾಲ್ಕು ದಿನಗಳಲ್ಲಿ ದಿನ 25.4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 5ನೇ ದಿನ 1.3 ಕೋಟಿ ರೂಪಾಯಿ ಹಾಗೂ 6ನೇ ದಿನ 1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗೇ 7ನೇ 1 ಕೋಟಿ ರೂಪಾಯಿ. ಒಟ್ಟು 28.8 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನುತ್ತಿವೆ. ಆದರೆ, ಕರ್ನಾಟಕದಲ್ಲಾದ ಕಲೆಕ್ಷನ್ ಬಗ್ಗೆ ವಿತರಕರು ಇನ್ನೂ ಅಧಿಕೃತ ಮಾಹಿತಿ ನೀಡಬೇಕಿದೆ.
ಮುಂಬೈ, ಆರ್‌ಸಿಬಿ ಫ್ಯಾನ್ಸ್ ಬೇಸರ
ಕನ್ನಡದ 'ಗೋಟ್'ಗೆ ಮುಂಬೈ ಇಂಡಿಯನ್ಸ್ ಹಾಗೂ ಆರ್‌ಸಿಬಿ ಫ್ಯಾನ್ಸ್ ಬೆಂಬಲ ಕೊಟ್ಟಿಲ್ಲ. ಈ ಸಿನಿಮಾದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಕೆಲವು ದೃಶ್ಯಗಳನ್ನು ತೋರಿಸಲಾಗಿದೆ. ಇದೇ ಕಾರಣಕ್ಕೆ ತಮಿಳುನಾಡು ಬಿಟ್ಟು ಬೇರೆ ರಾಜ್ಯದಲ್ಲಿ ಸಿನಿಮಾ ಚೆನ್ನಾಗಿ ಪರ್ಫಾಮ್ ಮಾಡುತ್ತಿಲ್ಲ ಎಂದು ನಿರ್ದೇಶಕ ವೆಂಕಟ್ ಪ್ರಭು ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿ ಬೆಲ್ಟ್, ಆಂಧ್ರ, ತೆಲಂಗಾಣದಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ.
ವಿಶ್ವದಾದ್ಯಂತ ಹೇಗಿದೆ ಕಲೆಕ್ಷನ್ ?
6ನೇ ದಿನಕ್ಕೆ ಹೋಲಿಸಿದರೆ, 7ನೇ ದಿನ ಭಾರತದಾದ್ಯಂತ ಎರಡು ಕೋಟಿ ಇಳಿಕೆ ಕಂಡಿದೆ. ನಿನ್ನೆ (ಸೆಪ್ಟೆಂಬರ್ 12) ಈ ಸಿನಿಮಾ 8 ಕೋಟಿ ರೂಪಾಯಿ ಎಂದು Sacnilk ವರದಿ ಮಾಡಿದೆ. ಈ ಮೂಲಕ ಸಿನಿಮಾ ಒಟ್ಟು ಗಳಿಕೆ 170.75 ಕೋಟಿ ರೂಪಾಯಿ (Net) ಆಗಿದೆ. ಅದೇ ರೀತಿ ಓವರ್‌ಸೀನ್ ಕಲೆಕ್ಷನ್ 126.8 ಕೋಟಿ ರೂಪಾಯಿ ಆಗಿದ್ದರೆ, ವಿಶ್ವದಾದ್ಯಂತ ಈ ಸಿನಿಮಾ 318 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.


Click it and Unblock the Notifications











