ಮುಸಲ್ಮಾನರಿಗೆ ಇಫ್ತಾರ್ ಪಾರ್ಟಿ ಆಯೋಜಿಸಿದ ದಳಪತಿ ವಿಜಯ್: ಟೋಪಿ, ನಮಾಜ್.. ರಾಜಕೀಯ ನಡೆ?
ದಕ್ಷಿಣ ಭಾರತದ ಸ್ಟಾರ್ ನಟ ದಳಪತಿ ವಿಜಯ್ ಸಿನಿಮಾದಿಂದ ರಾಜಕೀಯದ ಕಡೆಗೆ ಹಂತ ಹಂತವಾಗಿ ಸಾಗುತ್ತಿದ್ದಾರೆ. ವಿಜಯ್ ಇತ್ತೀಚೆಗಿನ ನಾಜೂಕಿನ ನಡೆ ಮುಂಬರುವ ಚುನಾವಣೆಗೆ ಸಿದ್ಧರಾಗುತ್ತಿರುವುದನ್ನು ಸೂಚಿಸುತ್ತಿದೆ. ಇಂದು (ಮಾರ್ಚ್ 7) ದಳಪತಿ ವಿಜಯ್ ಚೆನ್ನೈನಲ್ಲಿ ಮುಸಲ್ಮಾನ ಬಾಂಧವರಿಗೆ ಇಫ್ತಾರ್ ಪಾರ್ಟಿಯನ್ನು ಆಯೋಜಿಸಿದ್ದಾರೆ.
ಮುಸಲ್ಮಾನರಿಗೆ ಪವಿತ್ರಾ ರಂಜಾನ್ ನಡೆಯುತ್ತಿದೆ. ಉಪವಾಸ ಮುಗಿಸಿ, ಮುಸ್ಮಿಂ ಸಮುದಾಯದ ಜನರಿಗಾಗಿ ದಳಪತಿ ವಿಜಯ್ ಇಫ್ತಾರ್ ಪಾರ್ಟಿಯನ್ನು ಆಯೋಜಿಸಿದ್ದಾರೆ. ಚೆನ್ನೈನಲ್ಲಿ ಉಪವಾಸ ಮುಗಿಸಿದವರಿಗೆ ಇಫ್ತಾರ್ ಪಾರ್ಟಿಯನ್ನು ನೀಡಿದ್ದು, ಈ ವೇಳೆ ಮುಸ್ಲಿಮರು ಧರಿಸುವ ಟೋಪಿಯನ್ನು ತೊಟ್ಟು, ನಮಾಜ್ ಮಾಡಿದ್ದಾರೆ. ಈ ಫೋಟೊಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ದಳಪತಿ ವಿಜಯ್ 'ತಮಿಳಿಗ ವೆಟ್ರಿ ಕಳಗಂ' (TVK) ಪಾರ್ಟಿಯನ್ನು ಕಟ್ಟಿ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ. 2026ರಲ್ಲಿ ತಮಿಳುನಾಡಿನಲ್ಲಿ ನಡೆಯುವ ಚುನಾವಣೆಯಲ್ಲಿ ದಳಪತಿ ವಿಜಯ್ ಪಾರ್ಟಿ ಕಣಕ್ಕೆ ಇಳಿಯಲಿದೆ. ಅದಕ್ಕಾಗಿ ಈಗಿನಿಂದಲೇ ದಳಪತಿ ವಿಜಯ್ ಅಖಾಡಕ್ಕೆ ಇಳಿದಿದ್ದಾರೆ. ಜನರನ್ನು ತನ್ನತ್ತ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈಗ ಇಫ್ತಾರ್ ಪಾರ್ಟಿ ಆಯೋಜಿಸಿ, ತನ್ನ ರಾಜಕೀಯ ನಡೆಯ ಬಗ್ಗೆ ಎದುರಾಳಿಗಳಿಗೆ ಸುಳಿವು ನೀಡಿದ್ದಾರೆ.
ದಳಪತಿ ವಿಜಯ್ ಇಫ್ತಾರ್ ಪಾರ್ಟಿ ವೇಳೆ ಬಿಳಿ ಬಣ್ಣದ ವಸ್ತ್ರವನ್ನು ಧರಿಸಿ, ಮುಸ್ಲಿಮರು ಧರಿಸುವ ಟೋಪಿ ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ. ಹಾಗೇ ಈ ಸಮುದಾಯದ ಜನರೊಂದಿಗೆ ನಮಾಜ್ ಕೂಡ ಮಾಡಿದ್ದಾರೆ. ಇಫ್ತಾರ್ ಪಾರ್ಟಿ ಆಯೋಜನೆ ಮಾಡುವುದಕ್ಕೂ ಮುನ್ನ ದಳಪತಿ ವಿಜಯ್ ಕೂಡ ಉಪವಾಸವನ್ನು ಮಾಡಿದ್ದರು. ಬಳಿಕ ಮುಸ್ಲಿಂ ಬಾಂಧವರೊಂದಿಗೆ ಉಪವಾಸ ಮುರಿದು ಆಹಾರ ಸೇವಿಸಿದ್ದಾರೆ ಎಂದು ವರದಿಯಾಗಿದೆ.
ದಳಪತಿ ವಿಜಯ್ ಪಕ್ಷ ಈ ಇಫ್ತಾರ್ ಪಾರ್ಟಿಯನ್ನು ಆಯೋಜನೆ ಮಾಡಿತ್ತು. ಚೆನ್ನೈನ ರೋಯಪೀಟದಲ್ಲಿರುವ ವೈಎಂಸಿಎ ಗ್ರೌಂಡ್‌ನಲ್ಲಿ ಈ ಇವೆಂಟ್ ಅನ್ನು ಆಯೋಜನೆ ಮಾಡಲಾಗಿತ್ತು. 15 ಸ್ಥಳೀಯ ಮಸೀದಿಯ ಇಮಾಮ್‌ಗಳನ್ನು ಈ ಪಾರ್ಟಿಗೆ ಆಹ್ವಾನ ನೀಡಲಾಗಿತ್ತು. ಹಾಗೇ ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಈ ಇಫ್ತಾರ್ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.
ದಳಪತಿ ವಿಜಯ್ ಪೊಲಿಟಿಕಲ್ ಎಂಟ್ರಿ ಕೊಟ್ಟಿರುವ ಬೆನ್ನಲ್ಲೇ 2026ರಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಕ್ರಾಂತಿ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಇನ್ನೊಂದು ಕಡೆ ವಿಜಯ್ ಮುಂಬರುವ ಚುನಾವಣೆಯಲ್ಲಿ ಎಐಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ದಳಪತಿ ವಿಜಯ್ ಪಕ್ಷ ಯಾರೊಂದಿಗೂ ಹೊಂದಾಣಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಚುನಾವಣೆಯನ್ನು ಎದುರಿಸಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಒಂದು ವರ್ಷ ಬಾಕಿ ಇದ್ದು ಮುಂದಿನ ದಿನಗಳಲ್ಲಿ ಏನು ಬೇಕಾದರೂ ಬದಲಾವಣೆ ಆಗಬಹುದು ಎನ್ನಲಾಗಿದೆ.
ಟಿವಿಕೆ ಪಕ್ಷ ಆರಂಭಿಸಿದ ಬಳಿಕ ಮೊದಲ ರ್‍ಯಾಲಿ ಮಾಡಿದ್ದ ವಿಜಯ್ "ನನ್ನ ವೃತ್ತಿ ಬದುಕಿನಲ್ಲಿ ಅತೀ ಉತ್ತುಂಗದಲ್ಲಿ ಇರುವಾಗ ಅದನ್ನು ಬಿಟ್ಟು ಬರುತ್ತಿದ್ದೇನೆ. ನಾನು ತೆಗೆದುಕೊಳ್ಳುತ್ತಿರುವ ಸಂಭಾವನೆಯನ್ನು ಬಿಟ್ಟು ಬರುತ್ತಿದ್ದೇನೆ. ನಿಮ್ಮ ವಿಜಯ್ ಅಗಿ ನಿಮ್ಮ ಮುಂದೆ ಬರುತ್ತಿದ್ದೇನೆ" ಎಂದು ವಿಜಯ್ ಹೇಳಿದ್ದರು.
ಈಗಾಗಲೇ ಸಿನಿಮಾಗೆ ಗುಡ್ ಬೈ ಹೇಳುವುದಾಗಿ ಘೋಷಿಸಿದ್ದಾರೆ. ಕೊನೆಯ ಸಿನಿಮಾ 'ಜನನಾಯಗನ್' ಈಗಾಗಲೇ ಸೆಟ್ಟೇರಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚುನಾವಣೆಗೆ ಮುನ್ನ ತಮ್ಮ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ದಳಪತಿ ವಿಜಯ್ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಸಿನಿಮಾವನ್ನು ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಒಟ್ನಲ್ಲಿ ದಳಪತಿ ವಿಜಯ್ ರಾಜಕೀಯದ ಆಟ ಶುರು ಮಾಡಿದ್ದಾರೆ.


Click it and Unblock the Notifications











