ಜಯಲಲಿತಾ, ಕರುಣಾನಿಧಿ, ಕಮಲ್ ಬಳಿಕ ರಾಜಕೀಯ ಅಖಾಡಕ್ಕೆ ವಿಜಯ್; ದಳಪತಿ ದಾಳ ಉರುಳಿಸೋದು ಯಾವ್ಯಾಗ?
ತಮಿಳುನಾಡು ರಾಜಕೀಯಕ್ಕೆ ಮತ್ತೊಬ್ಬ ಸ್ಟಾರ್ ನಟ ಎಂಟ್ರಿ ಕೊಡುವುದು ಬಹುತೇಕ ಕನ್ಫರ್ಮ್ ಆಗಿದೆ. ಈಗಾಗಲೇ ತಮಿಳುನಾಡು ರಾಜಕೀಯಕ್ಕೆ ಎಂಜಿಆರ್, ಜಯಲಲಿತಾ, ಕರುಣಾನಿಧಿ, ವಿಜಯಕಾಂತ್ ಅಂತಹ ದಿಗ್ಗಜರು ತಮ್ಮದೇ ಚಾಪು ಮೂಡಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸೂಪರ್‌ಸ್ಟಾರ್ ರಜನಿಕಾಂತ್ ಕೂಡ ರಾಜಕೀಯ ಪಕ್ಷ ಕಟ್ಟುತ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಈಗ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೆ ಬಹುತೇಕ ಖಚಿತಗೊಂಡಿದೆ.
ದಳಪತಿ ವಿಜಯ್ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದು ಹೊಸ ಪರ್ವ ಆರಂಭ ಆಗಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ತೆರೆಮರೆಯಲ್ಲಿ ದಳಪತಿ ವಿಜಯ್ ರಾಜಕೀಯ ಎಂಟ್ರಿಗೆ ಬೇಕಾಗಿರೋ ಎಲ್ಲಾ ಸಿದ್ಧತೆಗಳೂ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಸದ್ಯ ಇನ್ನೂ ಹೆಸರಿಡದ ರಾಜಕೀಯ ಪಕ್ಷವನ್ನು ಫೆಬ್ರವರಿ ಮೊದಲ ವಾರದಲ್ಲಿ ದೆಹಲಿಯಲ್ಲಿ ನೊಂದಣಿ ಮಾಡಿಸಲು ದಳಪತಿ ವಿಜಯ್ ಮುಂದಾಗಿದ್ದಾರೆ ಎಂದು ವರದಿಯಾಗಿವೆ.

ಇದೇ ವರ್ಷ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ವಿಜಯ್ ರಾಜಕೀಯ ಪಕ್ಷವನ್ನು ಅನೌನ್ಸ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ 2026ರಲ್ಲಿ ನಡೆಯಲಿರುವ ತಮಿಳುನಾಡಿನ ರಾಜಕೀಯ ಚುನಾವಣೆಗೆ ವಿಜಯ್ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ವಿಜಯ್ ಅಭಿಮಾನಿ ಸಂಘ 'ವಿಜಯ್ ಮಕ್ಕಳ್ ಇಯಕ್ಕಂ' ಈಗಾಗಲೇ ಸಮಾಜಮುಖಿ ಕೆಲಸಗಳನ್ನು ತೊಡಗಿಸಿಕೊಂಡಿದ್ದಾರೆ. ಇದೇ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ ಅನ್ನೋ ಮಾತು ಕೇಳಿ ಬರುತ್ತಿದೆ.
ಈಗಾಗಲೇ ತಮಿಳು ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ ರಾಜಕೀಯ ಪಕ್ಷಕ್ಕೆ ಬೇಕಾಗಿರೋ ಎಲ್ಲಾ ಕೆಲಸಗಳು ನಡೆಯುತ್ತಿವೆ. ಆಧಾರ್ ಕಾರ್ಡ್, ವೋಟರ್ ಐಡಿ, 100ಕ್ಕೂ ಅಧಿಕ ಜನರಿಂದ ಯಾವುದೇ ರಾಜಕೀಯ ಸಂಘದ ಜೊತೆ ಸೇರಿಕೊಂಡಿಲ್ಲ ಎಂಬ ಸಾಕ್ಷಿಯನ್ನು ಸಂಗ್ರಹಿಸಿ, ಮುಂದಿನ ವಾರ ದೆಹಲಿಯಲ್ಲಿರುವ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುತ್ತೆ ಎಂದು ವರದಿಯಾಗಿದೆ.
ಸದ್ಯ ತಮಿಳುನಾಡಿನ ರಾಜಕೀಯದಲ್ಲಿ ಸಿನಿಮಾ ಮಂದಿಗೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿದೆ. ಎಂಜಿಆರ್‌ಯಿಂದ ಹಿಡಿದು ಜಯಲಲಿತಾ, ಕರುಣಾನಿಧಿ ಇತ್ತೀಚೆಗೆ ನಿಧನರಾದ ವಿಜಯಕಾಂತ್‌ವರೆಗೂ ರಾಜಕೀಯದಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ, ತಮಿಳರ ಪಾಲಿಗೆ ಯುಳಗನಾಯಗನ್ ಎಂದೇ ಜನಪ್ರಿಯರಾಗಿರುವ ಕಮಲ್ ಹಾಸನ್‌ಗೆ ಮಾತ್ರ ಯಶಸ್ಸು ಸಿಕ್ಕಿಲ್ಲ. ಹೀಗಾಗಿ ಸೂಪರ್‌ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಕುತೂಹಲ ಇಟ್ಟುಕೊಳ್ಳಲಾಗಿತ್ತು. ಅನಾರೋಗ್ಯ ಕಾರಣದಿಂದ ರಜನಿಕಾಂತ್ ಪಾಲಿಟಿಕ್ಸ್‌ಗೆ ಬಾರದೆ ಇರಲು ನಿರ್ಧರಿಸಿದ್ದರು.

ಹೀಗಾಗಿ ಈಗ ದಳಪತಿ ವಿಜಯ್ ರಾಜಕೀಯ ಎಂಟ್ರಿ ಮೇಲೆ ಎಲ್ಲರ ನಿರೀಕ್ಷೆಯಿದೆ. 49 ವರ್ಷದ ನಟ ತಮಿಳುನಾಡು ರಾಜಕೀಯದಲ್ಲಿ ಪ್ರಮುಖ ಪಾತ್ರವಹಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಅದೇ ಇನ್ನೊಂದು ಕಡೆ ಡಿಎಂಕೆ ಪಕ್ಷದಿಂದ 46 ವರ್ಷದ ಉದಯ ನಿಧಿ ಸ್ಟ್ಯಾಲಿನ್ ಜನಪ್ರಿಯತೆ ಹೆಚ್ಚಾಗುತ್ತಿದೆ. ಇನ್ನೊಂದು ಕಡೆ 38 ವರ್ಷದ ಅಣ್ಣಾಮಲೈ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿದ್ದಾರೆ. ಹೀಗಾಗಿ 2026 ತಮಿಳುನಾಡಿನ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇತ್ತೀಚೆಗೆ ಹಿರಿಯ ನಟ ವಿಜಯಕಾಂತ್ ನಿಧನರಾಗಿದ್ದರು. ಇವರು ಕೂಡ 'ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ' ಪಕ್ಷ ಕಟ್ಟಿ ಗೆದ್ದಿದ್ದರು. ಸದ್ಯ ತಮಿಳಿನಾಡಿನಲ್ಲಿ ಜಯಲಲಿತಾ, ಕರುಣಾನಿಧಿ, ವಿಜಯಕಾಂತ್ ಬಳಿಕ ಮಾಸ್ ಫೇಸ್ ಅಗತ್ಯವಿದೆ. ಆ ಸ್ಥಾನ ತುಂಬಲು ದಳಪತಿ ವಿಜಯ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಎಂದು ರಾಜಕೀಯ ಲೆಕ್ಕ ಹಾಕುತ್ತಿದ್ದಾರೆ.


Click it and Unblock the Notifications











