Jana Nayagan: 'ಜನ ನಾಯಗನ್'ಗೆ ಇನ್ನೂ ಇಲ್ಲ ಬಿಡುಗಡೆ ಭಾಗ್ಯ; ಫೆ.6ಕ್ಕೂ ಅನುಮಾನ.. ಕೆವಿಎನ್‌ಗೆ ಸಂಕಷ್ಟ
ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾಗೆ ಯಾಕೋ ಬಿಡುಗಡೆ ಭಾಗ್ಯ ಸದ್ಯಕ್ಕೆ ಇಲ್ಲ ಅಂತ ಅನಿಸುತ್ತಿದೆ. ಜನವರಿ 9ರಂದೇ ರಿಲೀಸ್ ಆಗಬೇಕಿದ್ದ ಸಿನಿಮಾ ಸೆನ್ಸಾರ್ ಸಮಸ್ಯೆಯಿಂದ ಮುಂದೂಡಲ್ಪಟ್ಟಿತ್ತು. ಈ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಪರದಾಡುತ್ತಿದೆ. ಸದ್ಯ ಕೋರ್ಟ್ ಮೆಟ್ಟಿಲೇರಿದ್ದು, ಇಂದು (ಜನವರಿ 27) ಮತ್ತೆ ಹಿನ್ನಡೆಯಾಗಿದೆ.
'ಜನ ನಾಯಗನ್' ದಳಪತಿ ವಿಜಯ್ ನಟಿಸುತ್ತಿರುವ ಕೊನೆಯ ಸಿನಿಮಾ. ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ವಿಜಯ್ ಈ ಬಾರಿ ತಮಿಳುನಾಡು ಚುನಾವಣೆಯಲ್ಲಿ ತಮ್ಮ ಪಕ್ಷದ ಮುಖಂಡರನ್ನು ಕಣಕ್ಕೆ ಇಳಿಸುತ್ತಿದ್ದಾರೆ. ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಬಲ ಪಕ್ಷಗಳಿಗೆ ಪೈಪೋಟಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಹೀಗಾಗಿ 'ಜನ ನಾಯಗನ್' ತಮ್ಮ ಕೊನೆಯ ಸಿನಿಮಾವೆಂದು ಅವರೇ ಹೇಳಿಕೊಂಡಿದ್ದಾರೆ.

ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಲು ರೆಡಿಯಾಗಿರುವ ವಿಜಯ್‌ಗೆ 'ಜನ ನಾಯಗನ್' ರಿಲೀಸ್ ಆದರೆ ಲಾಭ. ಪರೋಕ್ಷವಾಗಿ ಈ ಸಿನಿಮಾ ಜನರು ಹಾಗೂ ಅವರ ಅಭಿಮಾನಿಗಳ ಮೇಲೆ ಪ್ರಭಾವ ಬೀರಲಿಲ್ಲ. ಹೀಗಾಗಿ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವಾಗ ರಿಲೀಸ್ ಮಾಡುವುದಕ್ಕೆ ಸ್ಕೆಚ್ ಹಾಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಸೆನ್ಸಾರ್ ಮಂಡಳಿ ಜೊತೆಗಿನ ಭಿನ್ನಾಭಿಪ್ರಾಯದಿಂದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಕೋರ್ಟ್ ಮೇಟ್ಟಿಲೇರಿತ್ತು. ಅಲ್ಲಿಂದ ಇನ್ನೇನು ಬಿಡುಗಡೆಯಾಗುತ್ತೆ ಎನ್ನುವಾಗಲೇ ಮತ್ತೆ ತಡೆಯಾಗಿದೆ.
ಇಂದು (ಜನವರಿ 27) 'ಜನ ನಾಯಗನ್' ವಿರುದ್ಧ ಮದ್ರಾಸ್ ಹೈಕೋರ್ಟ್ ನೀಡಿರುವ ತೀರ್ಪು ವಿಜಯ್ ಅಭಿಮಾನಿಗಳ ನಿರಾಸೆ ಕಾರಣವಾಗಿದೆ. ಕೆವಿಎನ್ ಪ್ರೊಡಕ್ಷನ್ ಆಸೆಗಳಿಗೆ ಕಮರಿದಂತಾಗಿವೆ. ಇಂದು ಮದ್ರಾಸ್ ಹೈಕೋರ್ಟ್ ಹೇಳಿಕೆ ಕೊಡುವುದಕ್ಕೂ ಸುದ್ದಿಯೊಂದು ಹರಿದಾಡಿತ್ತು. ವಿಜಯ್ ಸಿನಿಮಾ ಫೆಬ್ರವರಿ 6ಕ್ಕೆ ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ ಎನ್ನಲಾಗಿತ್ತು. ಆದರೆ, ಮದ್ರಾಸ್ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ ತೀರ್ಪನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿದೆ.
ಈ ಹಿಂದೆ 'ಜನ ನಾಯಗನ್' ಸಿನಿಮಾ ಯು/ಎ ಸರ್ಟಿಫಿಕೇಟ್ ನೀಡುವಂತೆ ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠ ಸೆನ್ಸಾರ್ ಬೋರ್ಡ್‌ಗೆ ಆದೇಶ ನೀಡಿತ್ತು. ಆದರೆ, ಏಕಸದಸ್ಯ ಪೀಠ ನೀಡಿದ ತೀರ್ಪನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ರದ್ದುಗೊಳಿಸಿದ್ದು, ಸೆನ್ಸಾರ್ ಬೋರ್ಡ್‌ನ ವಾದವನ್ನು ಆಲಿಸದೆ ಹೀಗೆ ತೀರ್ಪು ಕೊಡುವುದಕ್ಕೆ ಬರುವುದಿಲ್ಲವೆಂದು ಹೇಳಿದೆ. ಹೀಗಾಗಿ ಸಿನಿಮಾಗೆ ಮತ್ತೆ ಸಂಕಷ್ಟ ಎದುರಾಗಿದೆ.
ಹೀಗಿದ್ದೂ, ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠ ಕೆವಿಎನ್ ಪ್ರೊಡಕ್ಷನ್‌ಗೆ ಏಕಸದಸ್ಯ ಪೀಠಕ್ಕೆ ಹೊಸದಾಗಿ ರಿಟ್ ಅರ್ಜಿಯನ್ನು ಸಲ್ಲಿಸುವಂತೆ ಹೇಳಿದೆ. ಇದರಿಂದ ಕೆವಿಎನ್ ಪ್ರೊಡಕ್ಷನ್ ಫೆಬ್ರವರಿ 6ಕ್ಕೆ ರಿಲೀಸ್ ಪ್ಲಾನ್ ಮಾಡಿಕೊಂಡಿದ್ದು ಮತ್ತೆ ಮುಂದಕ್ಕೆ ಹೋಗಿದೆ ಎನ್ನಲಾಗಿದೆ. ಇದರಿಂದ ನಿರ್ಮಾಣ ಸಂಸ್ಥೆ ಮತ್ತೆ ನಷ್ಟ ಅನುಭವಿಸಬೇಕಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

ಒಂದು ವೇಳೆ ಫೆಬ್ರವರಿಯಲ್ಲಿ ಸಿನಿಮಾ ರಿಲೀಸ್ ಆಗದೇ ಹೋದರೆ, ಚುನಾವಣೆ ಬಳಿಕ 'ಜನ ನಾಯಗನ್' ಅನ್ನು ರಿಲೀಸ್ ಮಾಡಬೇಕಾಗಿ ಬರಬಹುದು. ಹೀಗಾದರೆ, ಅದು ವಿಜಯ್‌ಗೂ ನಷ್ಟ. ಇತ್ತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್‌ಗೂ ನಷ್ಟ. ಯಾಕಂದ್ರೆ, ಈಗಾಗಲೇ ಓಟಿಟಿ ಯಿಂದ ಹಿಡಿದು ಪ್ರೀ-ರಿಲೀಸ್ ಡೀಲ್‌ಗಳನ್ನು ಮಾಡಿಕೊಂಡಿದೆ. ಹೀಗಾಗಿ ಓಟಿಟಿ ಸಂಸ್ಥೆಗಳಿಗೆ ಒತ್ತಡ ಹೆಚ್ಚಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
ಏನೇ ಇದ್ದರೂ ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಸೆನ್ಸಾರ್ ಮಂಡಳಿ ಜಟಾಪಟಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. 'ಜನ ನಾಯಗನ್' ಬಿಡುಗಡೆಗೆ ನೂರು ವಿಘ್ನಗಳು ಎದುರಾಗುತ್ತಿವೆ. ಇದು ರಾಜಕೀಯ ಪ್ರೇರಿತವೋ? ಇಲ್ಲ ಸಿನಿಮಾದಲ್ಲಿ ಸಮಸ್ಯೆ ಇದೆಯೋ? ಮುಂದಿನ ದಿನಗಳಲ್ಲಿ ಗೊತ್ತಾಗಬಹುದು.


Click it and Unblock the Notifications