'ಜನ ನಾಯಗನ್' 5 ನಿಮಿಷದ ವಿಡಿಯೋ ಲೀಕ್; ವಿಜಯ್ ಕೈಯಲ್ಲಿ 'TVK' ಹಚ್ಚೆ.. ಬೇಕಂತಲೇ ಸೋರಿಕೆ ಆಯ್ತೇ?
ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗಿದೆ. ಈ ಬಾರಿ ವಿಧಾನ ಸಭಾ ಚುನಾವಣೆ ಕುತೂಹಲ ಕೆರಳಿಸಿದ್ದಕ್ಕೆ ಏಕೈಕ ಕಾರಣ ದಳಪತಿ ವಿಜಯ್. ಇಲ್ಲಿವರೆಗೂ ಸಿನಿಮಾಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೆ ನಿರ್ಧರಿಸಿದ್ದರು. ಅದರಂತೆ ವಿಜಯ್ ಯಾವುದೇ ಪಕ್ಷಕ್ಕೆ ಸೇರದೆ, ತಮ್ಮದೇ ಟಿವಿಕೆ ಪಕ್ಷವನ್ನು ಕಟ್ಟಿದ್ದಾರೆ. ಆ ಪಕ್ಷದ ಮೂಲಕವೇ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ 'ಜನ ನಾಯಗನ್' ಸಿನಿಮಾ ಒಪ್ಪಿಕೊಂಡಿದ್ದರು. ಈ ಸಿನಿಮಾವನ್ನು ತಮ್ಮ ಮೊದಲ ಚುನಾವಣೆಗೂ ಮುನ್ನವೇ ರಿಲೀಸ್ ಮಾಡಬೇಕು ಎಂಬ ಪ್ಲಾನ್ ಇತ್ತು. ಈ ವರ್ಷ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಸ್ಕೆಚ್ ಹಾಕಿದ್ದರು. ಆದರೆ, ಸೆನ್ಸಾರ್ ಮಂಡಳಿ ಈ ಸಿನಿಮಾದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿತ್ತು. ಇದನ್ನು ವಿಜಯ್ ಒಪ್ಪಿರಲಿಲ್ಲ.

ಕೆವಿಎನ್ ಸಂಸ್ಥೆ ನಿರ್ಮಾಣ ಸೆನ್ಸಾರ್ ಮಂಡಳಿ ವಿರುದ್ಧ ಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್, ಸುಪ್ರೀಂ ಕೋರ್ಟ್ ಅಂತ ಓಡಾಡಿದ ಬಳಿಕ ಕೇಸ್ ಅನ್ನು ಹಿಂಪಡೆದು ಸೆನ್ಸಾರ್‌ಗೆ ಮರು ಅರ್ಜಿಯನ್ನು ಸಲ್ಲಿಸಿತ್ತು. ಆದರೆ, ನಿರೀಕ್ಷೆ ಮಾಡಿದಂತೆ ಚುನಾವಣೆ ಡೇಟ್ ಅನೌನ್ಸ್ ಆದ ಬಳಿಕವೇ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿತ್ತು. ಚುನಾವಣಾ ನೀತಿ ಸಂಹಿತೆ ಪ್ರಕಾರ 'ಜನ ನಾಯಗನ್' ಚುನಾವಣೆ ಮುಗಿಯುವವರೆಗೂ ಸಿನಿಮಾ ರಿಲೀಸ್ ಆಗುವಂತೆ ಇಲ್ಲ. ಹೀಗಿದ್ದರೂ ಈ ಸಿನಿಮಾದ 5 ನಿಮಿಷದ ತುಣುಕು ಲೀಕ್ ಆಗಿದೆ. ಇದು ಉದ್ದೇಶಪೂರ್ವಕವೋ..? ವಿಜಯ್ ಮಾಸ್ಟರ್ ಪ್ಲ್ಯಾನ್? ಇಲ್ಲ ವಿರೋಧಿಗಳ ಕೃತ್ಯವೋ?
'ಜನ ನಾಯಗನ್' ವಿಜಯ್ ನಟನೆಯ ಕೊನೆಯ ಸಿನಿಮಾ ಎಂದು ಹೇಳಲಾಗಿತ್ತು. ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ರಾಜಕೀಯಕ್ಕೆ ಎಂಟ್ರಿ ಕೊಟ್ಟ ವಿಜಯ್‌ಗೆ ಇದು ಕೊನೆಯ ಸಿನಿಮಾ ಎಂದು ಹೇಳಲಾಗಿತ್ತು. ಹೀಗಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಒಂದಿಷ್ಟು ಅಡೆತಡೆಗಳ ಹೊರತಾಗಿಯೂ ಸಿನಿಮಾ ಬಿಡುಗಡೆಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಅಷ್ಟರಲ್ಲೇ ಈ ಸಿನಿಮಾ 5 ನಿಮಿಷದ ತುಣುಕುಗಳು ಸೋರಿಕೆಯಾಗಿದೆ. ಸಿನಿಮಾ ದೃಶ್ಯ ಸೋರಿಕೆಯಾಗಿದ್ದು ಹೇಗೆ? ಅನ್ನೋ ಗೊಂದಲ ಎಲ್ಲರಲ್ಲೂ ಮೂಡಿದೆ.
ವಿಜಯ್‌ಗೆ 'ಜನ ನಾಯಗನ್' ಸಿನಿಮಾದ ದೃಶ್ಯ ಸೋರಿಕೆಯಿಂದ ಸಂಕಷ್ಟ ಎದುರಾದರೂ ಆಗಬಹುದು. ಇಲ್ಲದೇ ಹೋದರೆ, ವಿಜಯ್ ಅಡ್ವಾಂಟೇಜ್ ಕೂಡ ಆಗಬಹುದು. ಯಾಕಂದ್ರೆ, ಲೀಕ್ ಆಗಿದ್ದು, ಸಿನಿಮಾದ ಪ್ರಮುಖ ದೃಶ್ಯ. ಸಿನಿಮಾದ ಟೈಟಲ್ ಅನೌನ್ಸ್‌ಮೆಂಟ್‌ನಿಂದ ವಿಜಯ್ ಇಂಟ್ರುಡಕ್ಷನ್‌ವರೆಗಿನ ದೃಶ್ಯಗಳು ಸೋರಿಕೆಯಾಗಿವೆ. ಇದರಲ್ಲಿ ವಿಜಯ್ ತನ್ನ ಕೈ ಮೇಲೆ 'TVK' ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಆಫ್ ದಿ ಟಾಪಿಕ್ ಆಗಿದೆ.

ಸೋರಿಕೆಯಾದ ದೃಶ್ಯವನ್ನು ಗಮನಿಸಿದರೆ, ವಿಜಯ್ ಈ ಸಿನಿಮಾವನ್ನು ರಾಜಕೀಯವಾಗಿ ಬಳಸಿಕೊಂಡರೇ.. ಮೊದಲೇ ರಾಜಕೀಯಕ್ಕೆ ಬರಲು ನಿರ್ಧರಿಸಿದ್ದರಿಂದ ಸಿನಿಮಾದಲ್ಲಿ ಈ ದೃಶ್ಯವನ್ನು ಇಡಲಾಗಿತ್ತೇ? ಈ ಸಿನಿಮಾ ಮೂಲಕ ತಮ್ಮ ರಾಜಕೀಯ ಪಕ್ಷವನ್ನು ಜನರಿಗೆ ಪರಿಚಯಿಸುವುದಕ್ಕೆ ನಿರ್ಧರಿಸಿದ್ದರೇ? ಅನ್ನೋ ಅನುಮಾನ ಮೂಡುತ್ತಿದೆ.
ಈ ವಿಡಿಯೋ ಲೀಕ್ ಘಟನೆಯಿಂದ ಚಿತ್ರತಂಡ ಆಘಾತಕ್ಕೊಳಗಾಗಿದೆ. ಮರು-ಸೆನ್ಸಾರ್‌ಗೆ ಹೋಗಿದ್ದ ಚಲನಚಿತ್ರ ಹೇಗೆ ಸೋರಿಕೆಯಾಯಿತು? ಈ ಕೃತ್ಯದ ಹಿಂದಿರುವವರನ್ನು ಪೊಲೀಸರು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಲಾಗಿದೆ. ಇನ್ನೊಂದೆಡೆ, ವಿಜಯ್ ಅವರ 'ತಮಿಳುನಾಡು ವೆಟ್ರಿ ಕಳಗಂ' (TVK) ಪಕ್ಷದ ಕಾರ್ಯಕರ್ತರು, ವಿಜಯ್ ಸುತ್ತ ಹೀಗೆ ಅನೇಕ ಸಮಸ್ಯೆಗಳು ಮುಂದುವರೆಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications