ಶಾಕಿಂಗ್: ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್-ಸೈರಾ ಬಾನು ದಾಂಪತ್ಯದಲ್ಲಿ ಬಿರುಕು; 29 ವರ್ಷಗಳ ಬಳಿಕ ವಿಚ್ಛೇದನ
ಆಸ್ಕರ್ ಪ್ರಶಸ್ತಿ ವಿಜೇತ ಹಾಗೂ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಪತ್ನಿ ಸೈರಾ ಬಾನು ಪತಿಯೊಂದಿಗೆ ಬೇರೆಯಾಗುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಇಂದು ರಾತ್ರಿ (ನವೆಂಬರ್ 19) ಎ ಆರ್ ರೆಹಮಾನ್ ಪತ್ನಿ ಹೇಳಿಯೊಂದನ್ನು ಬಿಡುಗಡೆ ಮಾಡಿದ್ದು, ಪತಿ ಎಆರ್ ರೆಹಮಾನ್‌ರೊಂದಿಗೆ ವಿಚ್ಛೇದನ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಸುದ್ದಿಯಿಂದ ಚಿತ್ರರಂಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ಶಾಕ್ ಆಗಿದೆ.
ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಹಾಗೂ ಸೈರಾ ಬಾನು 29 ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 1995ರಲ್ಲಿ ಸೈರಾ ಬಾನು ಅವರನ್ನು ಎ ಆರ್ ರೆಹಮಾನ್ ವಿವಾಹವಾಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದಾನೆ. ಈ ಹಂತದಲ್ಲಿ ಈ ಜೋಡಿ ವಿಚ್ಛೇದನಕ್ಕೆ ಮುಂದಾಗಿದ್ದು ಸಂಗೀತ ಪ್ರಿಯರಿಗೆ ಶಾಕ್ ಆಗಿದೆ.

ಸೈರಾ ಬಾನು ಪರ ವಕೀಲರಾದ ವಂದನಾ ಷಾ ಬೇರೆಯಾಗುತ್ತಿರುವ ಬಗ್ಗೆ ಅಧಿಕೃತ ಹೇಳಿಯನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ " ಹಲವು ವರ್ಷಗಳ ವಿವಾಹದ ಬಳಿಕ ಸೈರಾ ಬಾನು ಅವರು ತಮ್ಮ ಪತಿ ಎ ಆರ್ ರೆಹಮಾನ್ ಅವರಿಂದ ಬೇರೆಯಾಗುವಂತಹ ಕಠಿಣವಾದ ನಿರ್ಧಾರಕ್ಕೆ ಬಂದಿದ್ದಾರೆ. ಅವ ಸಂಬಂಧದಲ್ಲಿ ಉಂಟಾಗಿದ್ದ ಭಾವನಾತ್ಮಕ ಒತ್ತಡಗಳಿಂದ ಈ ನಿರ್ಧಾರಕ್ಕೆ ಬರಲಾಗಿದೆ" ಎಂದು ಹೇಳಲಾಗಿದೆ.
ಹಾಗೇ " ಇಬ್ಬರಿಗೂ ಒಬ್ಬರ ಮೇಲೆ ಮತ್ತೊಬ್ಬರಿಗೆ ಆಳವಾದ ಪ್ರೀತಿಯಿದೆ. ಅದರ ಹೊರತಾಗಿಯೂ ತಮ್ಮ ನಡುವೆ ಟೆನ್ಷನ್ ಹಾಗೂ ಸಂಕಷ್ಟಗಳು ಇವೆ. ಇದು ಇಬ್ಬರ ನಡುವೆ ದೊಡ್ಡ ಕಂದಕವನ್ನು ಸೃಷ್ಟಿಸಿದ್ದು, ಯಾರೇ ಬಂದರೂ ಈ ಸಮಯದಲ್ಲಿ ಅದನ್ನು ಸೇರಿಸಲು ಸಾಧ್ಯವಿಲ್ಲ ಎಂಬುವುದನ್ನು ಕಂಡು ಕೊಂಡಿದ್ದಾರೆ. ಸೈರಾ ಬಾನು ಅವರು ಈ ನಿರ್ಧಾರವನ್ನು ಸಾಕಷ್ಟು ನೋವು ಹಾಗೂ ಸಂಕಟದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಸಮಯದಲ್ಲಿ ತನ್ನ ಬದುಕಿನಲ್ಲಿ ಬಂದಿರುವ ಈ ಸವಾಲಿನ ಸಮಯವನ್ನು ಎದುರಿಸಲು ಹಾಗೂ ಖಾಸಗಿತನವನ್ನು ಬಯಸುತ್ತಿದ್ದಾರೆ." ಎಂದು ವಕೀಲರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎ ಆರ್ ರೆಹಮಾನ್ ಹಾಗೂ ಪತ್ನಿ ಸೈರಾ ಬಾಬು ಅವರ ದಾಂಪತ್ಯದಲ್ಲಿ ಹಲವು ದಿನಗಳಿಂದ ವೈಮನಸ್ಸು ಮೂಡಿತ್ತು. ಅದು ಮುಂದುವರೆದು ಈಗ ಒಟ್ಟಿಗೆ ಬಾಳುವುದಕ್ಕೆ ಸಾಧ್ಯವೇ ಇಲ್ಲ ಎಂದಾಗ ಈ ನಿರ್ಧಾರಕ್ಕೆ ಬಂದಿದ್ದಾರೆ. ಹಿಂದೊಮ್ಮೆ ಸಿಮಿ ಗರೆವಲ್‌ಗೆ ಎ ಆರ್ ರೆಹಮಾನ್ ನೀಡಿದ ಸಂದರ್ಶನದಲ್ಲಿ ತಮ್ಮ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆ ವೇಳೆ ತಮ್ಮ ತಾಯಿ ಮದುವೆಯನ್ನು ನಿಶ್ಚಯ ಮಾಡಿದ್ದಾಗಿ ಹೇಳಿಕೊಂಡಿದ್ದರು.
ಆ ಸಮಯದಲ್ಲಿ ಹೋಗಿ ಹುಡುಗಿಯನ್ನು ಹುಡುಕಿ ಮದುವೆ ಆಗುವುದಕ್ಕೆ ಸಮಯವಿರಲಿಲ್ಲ. ಈ ಕಾರಣಕ್ಕೆ ಅರೇಂಜ್ಡ್ ಮ್ಯಾರೇಜ್ ಅನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಎ ಆರ್ ರೆಹಮಾನ್ ಹೇಳಿಕೊಂಡಿದ್ದರು. ಎಆರ್ ರೆಹಮಾನ್ ಮದುವೆ ಆಗುವಾಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಆ ವೇಳೆ ಬಾಲಿವುಡ್ ಸಿನಿಮಾಗಳಿಗೂ ಸಂಗೀತವನ್ನು ಕಂಪೋಸ್ ಮಾಡುತ್ತಿದ್ದರು. ಹೀಗಾಗಿ ಸಿಂಪಲ್ ಆಗಿರುವ ಹುಡುಗಿಯನ್ನು ಹುಡುಕುವಂತೆ ತಾಯಿಗೆ ಹೇಳಿದ್ದರಂತೆ. ಆಕೆ ತನ್ನ ಸಂಗೀತಕ್ಕೆ ಹೆಚ್ಚು ತೊಂದರೆ ಕೊಡಬಾರದು ಎಂದು ಹೇಳಿದ್ದೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸೈರಾ ಬಾನು ಗುಜರಾತಿ ಕುಟುಂಬದವರು ಎಂದು ತಿಳಿದು ಬಂದಿದೆ. ಇವರು ಹಿರಿಯ ನಟ ರಶಿನ್ ರೆಹಮಾನ್ ಅವರ ಸೊಸೆ ಎಂದು ವರದಿಯಾಗಿದೆ. ಇವರಿಗೆ ಮೂವರು ಮಕ್ಕಳು ಇದ್ದಾರೆ. ಖತೀಜಾ ರೆಹಮಾನ್ ಹಾಗೂ ರಹಿಮಾ ರೆಹಮಾನ್ ಇಬ್ಬರು ಹೆಣ್ಣು ಮಕ್ಕಳು. ಹಾಗೇ ಅಮೀನ್ ರೆಹಮಾನ್ ಎಂಬ ಪುತ್ರನಿದ್ದಾನೆ. ಚಿತ್ರರಂಗದಲ್ಲಿ ವಿವಾದಗಳಿಂದ ದೂರವೇ ಇರುವ ಎ ಆರ್ ರೆಹಮಾನ್ ವಿಚ್ಛೇದನದ ಸುದ್ದಿ ಇಡೀ ಚಿತ್ರರಂಗಕ್ಕೆ ದೊಡ್ಡ ಮಟ್ಟಕ್ಕೆ ಶಾಕ್ ಆಗಿದೆ.


Click it and Unblock the Notifications











