Bigg Boss ; ಈ ಬಾರಿ ಬಿಗ್ ಬಾಸ್ ಗೆ ಕಮಲ್ ಹಾಸನ್ ಬದಲು ಬರಲಿದ್ದಾರೆ ಈ ಸ್ಟಾರ್ ...?
ಸಕಲ ಕಲಾ ವಲ್ಲಭ, ವಿಶ್ವರೂಪಿ, ಉಳಗನಾಯಗನ್ ಮುಂತಾದ ಬಿರುದುಗಳನ್ನು ಪಡೆದಿರುವವರು ಕಮಲ ಹಾಸನ್. ಅತ್ಯದ್ಭುತ ಅನ್ನಿಸುವ ಸಿನಿಮಾಗಳನ್ನು ನೀಡಿ ಭಾರತೀಯ ಚಿತ್ರರಂಗದ ಹೆಸರನ್ನು ಜಾಗತಿಕ ಮಟ್ಟಕ್ಕೆ ಕರೆದೊಯ್ದವರಲ್ಲಿ ಇವರು ಕೂಡ ಒಬ್ಬರು.
ಆದರೆ ಕಮಲ್ ಹಾಸನ್ ಕಳೆದ ಕೆಲ ವರ್ಷಗಳಿಂದ ಒಂದು ಕಡೆ ಸಿನಿಮಾ ಮತ್ತೊಂದು ಕಡೆ ರಾಜಕಾರಣ ಇನ್ನೊಂದು ಕಡೆ ರಿಯಾಲಿಟಿ ಶೋಗಳನ್ನು ಏಕಕಾಲಕ್ಕೆ ನಿಭಾಯಿಸುತ್ತಾ ಮೂರು ದೋಣಿಯ ನಾವಿಕನಾಗಿದ್ದರು. ಹೀಗಾಗಿ ತಮ್ಮ ನೆಚ್ಚಿನ ನಾಯಕನನ್ನು ಬೆಳ್ಳಿ ತೆರೆಯ ಮೇಲೆ ಹೆಚ್ಚೆಚ್ಚು ನೋಡಲು ಆಗದೇ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಾನೇ ಬಂದಿದ್ದರು. ಹೀಗಾಗಿಯೇ ಏನೋ, ಈಗ ಕಮಲ್ ಹಾಸನ್ ತಮ್ಮ ಹಳೆಯ ಫಾರ್ಮಿಗೆ ಮರಳಿದ್ದಾರೆ. ಸಿನಿಮಾದತ್ತ ಹೆಚ್ಚೆಚ್ಚು ಗಮನ ಕೊಡ್ತಿದ್ದಾರೆ.

ನಿಜಾ. ಇವರ ಹಿಂದಿನ ಸಿನಿಮಾ ಇಂಡಿಯನ್ 2 ಅಂದುಕೊಂಡಂತೆ ಪ್ರೇಕ್ಷಕರ ಹೃದಯ ಗೆಲ್ಲಲಿಲ್ಲ. ಆದರೆ, ಇವತ್ತು ಕೂಡ ಕಮಲ್ ಹಾಸನ್‌ಗೆ ಬೇಡಿಕೆ ಇದ್ದೇ ಇದೆ. ಇದಕ್ಕೆ ಕಲ್ಕಿ ಚಿತ್ರದಲ್ಲಿನ ಇವರ ಚಿಕ್ಕ ಪಾತ್ರಕ್ಕೆ ಸಿಕ್ಕ ಪ್ರಶಂಸೆಯೇ ಸಾಕ್ಷಿ. ಇಂಥಾ ಕಮಲ್ ಹಾಸನ್ ಮೊನ್ನೆಯಷ್ಟೇ ನಾನು ಈ ಬಾರಿ ಬಿಗ್ ಬಾಸ್ ನಿರೂಪಣೆ ಮಾಡಲ್ಲ ಎಂದಿದ್ದರು. ಕೆಲಸದ ಒತ್ತಡ ಮತ್ತು ಒಪ್ಪಿಕೊಂಡಿರುವ ಕೆಲಸಗಳನ್ನು ಮುಗಿಸಲೇಬೇಕಾದ ಕಾರಣದಿಂದ ಈ ಬಾರಿ ನನ್ನಿಂದ ನಿರೂಪಣೆ ಸಾಧ್ಯ ಇಲ್ಲ ಎಂದು ಬಿಗ್ ಬಾಸ್ ಮನೆಗೆ ಧೀರ್ಘ ದಂಡ ನಮಸ್ಕಾರ ಹಾಕಿ ಹೊರಬಂದಿದ್ದರು.
ಹೀಗೆ ಕಮಲ್ ಹಾಸನ್ ಆ ಮನೆಯಿಂದ ನಿರ್ಗಮಿಸಿದ ಬೆನ್ನಲ್ಲಿಯೇ, ಕಮಲ್ ಜಾಗವನ್ನು ಬಿಗ್ ಬಾಸ್ ನಲ್ಲಿ ತುಂಬುವ ಕಲಾವಿದ ಯಾರು ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿತ್ತು. ಯಾಕೆಂದರೆ, ಕಮಲ್ ಹಾಸನ್ ಹಿಂದೆ ರಾಜಕೀಯದತ್ತ ವಾಲಿದಂತೆ ಇಳಯ ದಳಪತಿ ವಿಜಯ್ ಈಗ ರಾಜಕಾರಣದ ಕಡೆ ವಾಲಿದ್ದಾರೆ. ಇನ್ನೂ ಅಜಿತ್ ಯಾರ ಕೈಗೆ ಸಿಗುವುದಿಲ್ಲ. ಅವರದ್ದೇ ಆದ ಪ್ರಪಂಚದಲ್ಲಿ ಅವರು ಇರ್ತಾರೆ.

ವಿಜಯ್ ಮತ್ತು ಅಜಿತ್ ಹೊರತು ಪಡಿಸಿದರೆ, ಬಿಗ್ ಬಾಸ್ ನ ಜವಾಬ್ಧಾರಿ ವಹಿಸಿಕೊಳ್ಳುವ ಶಕ್ತಿ ಇರುವುದು ಸೂಫರ್ ಸ್ಟಾರ್ ರಜಿನಿಕಾಂತ್ ಅವರಿಗೆ ಮಾತ್ರ. ಆದರೆ, ವಯಸ್ಸು ಸೇರಿ ಆರೋಗ್ಯದ ಸಮಸ್ಯೆಗಳು ಇದಕ್ಕೆ ಅಡ್ಡಗಾಲು ಆಗಿವೆ. ಈ ಕಾರಣಕ್ಕೆ ಬಿಗ್ ಬಾಸ್ ನ ಸಾರಥಿ ಎಂಬ ಚರ್ಚೆ ತಮಿಳುನಾಡಿನಲ್ಲಿ ಶುರುವಾಗಿದೆ. ಈ ನಡುವೆ ಮಕ್ಕಳ ಸೆಲ್ವನ್ ವಿಜಯ್ ಸೇತುಪತಿ ಹೆಸರು ಕೇಳಿ ಬರುತ್ತಿದೆ.
ಹೌದು, ಸದ್ಯಕ್ಕೆ ಗುಲ್ಲಾದ ಸುದ್ದಿಯ ಪ್ರಕಾರ ಬಿಗ್ ಬಾಸ್ ಮನೆಯ ಉಸ್ತುವಾರಿಯನ್ನು, ವಿಜಯ್ ಸೇತುಪತಿ ಅವರ ಹೆಗಲಿಗೆ ವಹಿಸುವ ಕಸರತ್ತು ತಮಿಳುನಾಡಿನ ಕಿರುತೆರೆ ಲೋಕದಲ್ಲಿ ಶುರುವಾಗಿದೆ. ಇದಕ್ಕೆ ಪೂರಕವಾಗಿ ಲೆಟ್ಸ್ ಸಿನಿಮಾ ವರದಿಯನ್ನೂ ಕೂಡ ಪ್ರಕಟಿಸಿದೆ. ಆದರೆ, ಇದು ಸಾಧ್ಯನಾ..? ಎನ್ನುವ ಪ್ರಶ್ನೆ ಕೂಡ ಅನೇಕರದ್ದು.

ಯಾಕೆಂದರೆ, ವಿಜಯ್ ಸೇತುಪತಿ ಭಾರತೀಯ ಚಿತ್ರರಂಗ ಕಂಡ ಪ್ರತಿಭಾವಂತ ನಟ. ಮೊನ್ನೆಯಷ್ಟೇ ಐವತ್ತು ಸಿನಿಮಾ ಪೂರೈಸಿರುವ ವಿಜಯ್ ಸೇತುಪತಿಗೆ ಸದ್ಯದ ಚಿನ್ನದ ಬೇಡಿಕೆ ಇದೆ. ಇನ್ನೂ ವಿಜಯ್ ಸೇತುಪತಿ ಕೇವಲ ನಾಯಕನ ಪಾತ್ರಕ್ಕೆ ಸೀಮಿತವಾದವರಲ್ಲ. ಪಾತ್ರ ಯಾವುದೇ ಇದ್ದರೂ ಅದಕ್ಕೆ ಜೀವ ತುಂಬಬಲ್ಲ ಸಾಮರ್ಥ್ಯ ಹೊಂದಿರುವವರು. ಒಂದು ಅರ್ಥದಲ್ಲಿ ವರ್ಷ ಪೂರ್ತಿ ಬ್ಯುಸಿಯಾಗಿರುವವರು ವಿಜಯ್ ಸೇತುಪತಿ. ಇಂಥಾ ವಿಜಯ್ ಸೇತುಪತಿ ಬಿಗ್ ಬಾಸ್ ಗೋಸ್ಕರ ತಮ್ಮ ಚಿತ್ರ ಜೀವನದ ಜೊತೆ ರಾಜಿ ಮಾಡಿಕೊಳ್ತಾರಾ ಅನ್ನುವುದು ಅನೇಕರಲ್ಲಿರುವ ಅನುಮಾನ.
ಉಳಿದಂತೆ ವಿಜಯ್ ಸೇತುಪತಿ ಹೊರತು ಪಡಿಸಿದರೆ ಸಿಲಂಬರಸನ್ ಅಲಿಯಾಸ್ ಸಿಂಬು ಬಿಗ್ ಬಾಸ್ ನಿರೂಪಣೆ ಮಾಡುವ ಸಾಧ್ಯತೆ ಇದೆ. ಈ ಹಿಂದೆ ಸಿಂಬು ಬಿಗ್ ಬಾಸ್ ಅಲ್ಟಿಮೇಟ್ ಓಟಿಟಿ ಸೀಸನ್ ನಿರೂಪಣೆ ಮಾಡಿದ ಕಾರಣದಿಂದ ಸಿಂಬು ಒಪ್ಪಿಕೊಂಡರು ಒಪ್ಪಿಕೊಳ್ಳಬಹುದು. ಒಟ್ನಲ್ಲಿ ಸದ್ಯಕ್ಕೆ ಬಿಗ್ ಬಾಸ್ ರೇಸ್‌ನಲ್ಲಿ ಇವರಿಬ್ಬರ ಹೆಸರು ಮುಂಚೂಣಿಯಲ್ಲಿದೆ. ಈ ಇಬ್ಬರಲ್ಲಿ ಯಾರು ಬಿಗ್ ಬಾಸ್ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಎನ್ನುವ ಪ್ರಶ್ನೆಗೆ ಸದ್ಯದಲ್ಲಿಯೇ ಅಧಿಕೃತವಾಗಿ ಉತ್ತರ ಸಿಗಲಿದೆ.


Click it and Unblock the Notifications











