Thug Life: ಕಮಲ್ ಹಾಸನ್ ನಟನೆಯ 234ನೇ ಚಿತ್ರದ ಶೀರ್ಷಿಕೆ ಘೋಷಣೆ, ವಿಡಿಯೋ ನೋಡಿ, ಫ್ಯಾನ್ಸ್ ದಿಲ್ ಖುಷ್!
ತಮಿಳಿನಲ್ಲಿ ಮೂರು ದಶಕಗಳ ನಂತರ ಲೆಜೆಂಡರಿ ನಟ ಕಮಲ್ ಹಾಸನ್ ಮತ್ತು ನಿರ್ದೇಶಕ ಮಣಿರತ್ನಂ ಜೋಡಿ ಮತ್ತೆ ಒಂದಾಗುತ್ತಿದೆ. 36 ವರ್ಷಗಳ ಹಿಂದೆ ಗ್ಯಾಂಗ್‌ಸ್ಟರ್ ಸಿನಿಮಾ 'ನಾಯಕನ್' ಬಿಡುಗಡೆಯಾಗಿ ಕಮಾಲ್ ಮಾಡಿತ್ತು. ಅದೇ ವೈಭವ ಮತ್ತೆ ಸೃಷ್ಟಿಸಲು ಈ ಸೂಪರ್ ಹಿಟ್ ಜೋಡಿ ಒಂದಾಗುತ್ತಿದೆ. ಸಿನಿಮಾದ ಟೈಟಲ್ ಬಿಡುಗಡೆಯಾಗಿದೆ.
ತಮಿಳು ಸಿನಿರಂಗದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿರುವ ಈ ಜೋಡಿಯ ಸಿನಿಮಾಗೆ ಮೊದಲು ತಾತ್ಕಾಲಿಕವಾಗಿ ಕೆಎಚ್ 234 ಎಂದು ಹೆಸರು ಇಡಲಾಗಿತ್ತು. ಈಗ ಸಿನಿಮಾದ ಹೆಸರು ಬಿಡುಗಡೆ ಮಾಡಲಾಗಿದ್ದು, ಅಧಿಕೃತವಾಗಿ ಥಗ್ ಲೈಫ್ (Thug Life) ಎಂದು ಹೆಸರಿಸಲಾಗಿದೆ.

ಮತ್ತೆ ಒಂದಾಗುತ್ತಿದೆ ನಟ ಕಮಲ್ ಹಾಸನ್ ಮತ್ತು ಮಣಿರತ್ನಂ ಜೋಡಿ
ಕಮಲ್ ಹಾಸನ್ ಅವರ 234ನೇ ಈ ಸಿನಿಮಾ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಸಿನಿಮಾಗೆ ಅಧಿಕೃತವಾಗಿ ಥಗ್ ಲೈಫ್ ಎಂದು ಹೆಸರಿಸಲಾಗಿದೆ. ಸಿನಿಮಾದ ಟೈಟಲ್ ಘೋಷಿಸಲು ವಿಡಿಯೋವನ್ನು ಬಿಡುಗಡೆ ಮಾಡಲಾಗಿದ್ದು, ಕಮಲ್ ಹಾಸನ್ ಲುಕ್, ಆ್ಯಟಿಟ್ಯೂಡ್ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದೆ. ಜೊತೆಗೆ ಸಿನಿಮಾ ಬಗ್ಗೆ ಆಸಕ್ತಿ ಕೆರಳಿಸಿದೆ. ಇಬ್ಬರ ಮ್ಯಾಜಿಕ್ ನೋಡಲು ಚಿತ್ರರಂಗ ಕಾಯುತ್ತಿದೆ.
ನವೆಂಬರ್ 6 ರ ಸೋಮವಾರ ಯೂಟ್ಯೂಬ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದು, ಇದರಲ್ಲಿ ಕಮಲ್ ಹಾಸನ್ ಪಾತ್ರವು ತನ್ನನ್ನು ತಾನು ಪರಿಚಯಿಸಿಕೊಳ್ಳುವುದರ ಜೊತೆಗೆ ಸಿನಿಮಾದ ಸಾರವನ್ನು ತಿಳಿಸುವ ಪ್ರಯತ್ನ ಮಾಡುತ್ತದೆ. ಕಮಲ್ ಹಾಸನ್ ಪಾತ್ರಕ್ಕೆ ರಂಗರಾಜ ಶಕ್ತಿವೇಲ್ ನಾಯ್ಕರ್ ಎಂದು ಹೆಸರಿಡಲಾಗಿದೆ.
ಕಮಲ್ ಹಾಸನ್ ಹುಟ್ಟುಹಬ್ಬದ ಮೊದಲು KH234 ಶೀರ್ಷಿಕೆ ಅನಾವರಣ
ನವೆಂಬರ್ 7ಕ್ಕೆ ನಟ ಕಮಲ್ ಹಾಸನ್ ಅವರ ಹುಟ್ಟುಹಬ್ಬ. ಜನ್ಮದಿನದ ಒಂದು ದಿನ ಮುಂಚಿತವಾಗಿ ನಟ ತನ್ನ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಮುಂಬರುವ ಚಿತ್ರ 'ಥಗ್ ಲೈಫ್' ಫಸ್ಟ್-ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಬಳಿಕ ವಿಡಿಯೋವನ್ನು ಕುಡ ಅಭಿಮಾನಿಗಳಿಗಾಗಿ ನೀಡಿದ್ದಾರೆ.
ಥಗ್ ಲೈಫ್ ಪೋಸ್ಟರ್
ಥಗ್ ಲೈಫ್ ಪೋಸ್ಟರ್‌ನಲ್ಲಿ ಕಮಲ್ ಹಾಸನ್ ಅವರ ಮುಖದ ಕ್ಲೋಸ್ ಅಪ್ ಇದೆ. ಅವರ ಕಣ್ಣುಗಳಲ್ಲಿ ತೀಕ್ಷ್ಣ ನೋಟವಿದ್ದು ಕೆಣಕುವಂತಿದೆ. ವಿಡಿಯೋದಲ್ಲಿ ಕಮಲ್ ಹಾಸನ್ ಜಪಾನಿನ ದರೋಡೆಕೋರರೊಬ್ಬರ ಬಗ್ಗೆ ಮತ್ತು ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡುತ್ತಾ, ಸಕತ್ ಫೈಟಿಂಗ್ ಮಾಡಿದ್ದಾರೆ.

ಇನ್ನು, ಕುತೂಹಲದಿಂದ ಕಾಯುತ್ತಿದ್ದ KH234 ಚಿತ್ರವು ಇಂದು ತನ್ನ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಬಹಿರಂಗಪಡಿಸಿದೆ. ಚಿತ್ರದಲ್ಲಿ ತ್ರಿಶಾ ಕೃಷ್ಣನ್, ದುಲ್ಕರ್ ಸಲ್ಮಾನ್ ಮತ್ತು ಜಯಂ ರವಿ ಸೇರಿದ್ದಾರೆ. ರಾಜ್ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್, ಮದ್ರಾಸ್ ಟಾಕೀಸ್, ರೆಡ್ ಜೈಂಟ್ ಮೂವೀಸ್, ಆರ್ ಮಹೇಂದ್ರನ್ ಮತ್ತು ಶಿವ ಅನಂತ್ ಅವರ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಎಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ.
ಈ ಹಿಂದೆ, ಕಮಲ್ ಹಾಸನ್ ಮತ್ತು ಮಣಿರತ್ನಂ ನಾಯಕನ್ (1987), ಅಂಜಲಿ (1990), ಮತ್ತು ಹೇ ರಾಮ್ (2000) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಒಂದಾಗಿದ್ದಾರೆ. ಈಗ 36 ವರ್ಷಗಳ ನಂತರ ಮತ್ತೆ 'ಥಗ್ ಲೈಫ್' ಮೂಲಕ ಒಂದಾಗುತ್ತಿದ್ದಾರೆ. ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.


Click it and Unblock the Notifications











