ಕಮಲ್ ಹಾಸನ್ 'ಥಗ್ ಲೈಫ್' ಚಿತ್ರಕ್ಕೆ ಮತ್ತೆ ಸಂಕಷ್ಟ; ಲಕ್ಷ ಲಕ್ಷ ದಂಡ?
ಮಣಿರತ್ನಂ ನಿರ್ದೇಶನದ 'ಥಗ್ ಲೈಫ್' ಚಿತ್ರಕ್ಕೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ. ಕರ್ನಾಟಕದಲ್ಲಿ ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ. ಸುಪ್ರೀಂ ಕೋರ್ಟ್ ಅನುಮತಿ ಕೊಟ್ಟರೂ ವಿತರಕರು ಸಿನಿಮಾ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದಾರೆ. ಇನ್ನು 4 ವಾರಕ್ಕೆ ಸಿನಿಮಾ ಓಟಿಟಿ ಬರುತ್ತದೆ ಎನ್ನುವ ಚರ್ಚೆ ಶುರುವಾಗಿದೆ.
ಜೂನ್ 5ಕ್ಕೆ 'ಥಗ್ ಲೈಫ್' ಸಿನಿಮಾ ತೆರೆಗೆ ಬಂದಿತ್ತು. ಆದರೆ ಪ್ರೇಕ್ಷಕರಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಬೇಸರದಿಂದ ಸಿನಿಮಾ ಬಗ್ಗೆ ಟ್ರೋಲ್ ಮಾಡಿದ್ದರು.ಸಿನಿಮಾ 50 ಕೋಟಿ ನೆಟ್ ಕಲೆಕ್ಷನ್ ಮಾಡುವುದಕ್ಕೂ ತಿಣುಕಾಡುತ್ತಿದೆ. ಸಾಕಷ್ಟು ಚಿತ್ರಮಂದಿರಗಳಲ್ಲಿ ಒಂದೇ ವಾರಕ್ಕೆ ಸಿನಿಮಾ ಎತ್ತಂಗಡಿ ಆಗಿತ್ತು. ಮಣಿರತ್ನಂ ಹಾಗೂ ಕಮಲ್ ಹಾಸನ್ ಮ್ಯಾಜಿಕ್ ನಡೆಯಲೇ ಇಲ್ಲ. ಈಗ 25 ಲಕ್ಷ ರೂ. ದಂಡ ಕಟ್ಟಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.

ಸ್ವತಃ ಕಮಲ್ ಹಾಗೂ ಮಣಿರತ್ನಂ 'ಥಗ್ ಲೈಫ್' ಚಿತ್ರಕ್ಕೆ ಹಣ ಹೂಡಿದ್ದಾರೆ. ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ ಎನ್ನಲಾಗ್ತಿದೆ. ಚಿತ್ರದ ಓಟಿಟಿ ರೈಟ್ಸ್ ಅನ್ನು ನೆಟ್‌ಫ್ಲಿಕ್ಸ್ ಸಂಸ್ಥೆ 130 ಕೋಟಿ ರೂ.ಗೆ ಕೊಂಡುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಸದ್ಯ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಭಾರೀ ಸಮಸ್ಯೆ ಎದುರಾಗಿದೆ.
ಕನ್ನಡ ಭಾಷೆಯ ಉಗಮದ ಬಗ್ಗೆ ಕಮಲ್ ಹಾಸನ್ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ತಮ್ಮ ಹೇಳಿಕೆಗೆ ಕಮಲ್ ಕ್ಷಮೆ ಕೇಳಲೇ ಇಲ್ಲ. ಕ್ಷಮೆ ಕೇಳದ ಹೊರತು ಕರ್ನಾಟಕದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಪಟ್ಟು ಹಿಡಿದಿದ್ದರು. ಆದರೆ ಭದ್ರತೆ ಕೋರಿ ಚಿತ್ರತಂಡ ಹೈಕೋರ್ಟ್ ಮೆಟ್ಟಿಲೇರಿತ್ತು. ಕಮಲ್ ಕ್ಷಮೆ ಕೇಳಬೇಕು ಎಂದು ಹೈಕೋರ್ಟ್ ಹೇಳಿತ್ತು.

ಜೂನ್ 5ರಂದು ರಾಜ್ಯದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆ ಆಗಲಿಲ್ಲ. ಬಳಿಕ ಚಿತ್ರತಂಡ ಸುಪ್ರೀಂ ಕೋರ್ಟ್ ಬಳಿ ಹೋಗಿತ್ತು. ಹೈಕೋರ್ಟ್ ಅನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್ ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಸರ್ಕಾರ ಕೂಡ ಇದಕ್ಕೆ ಒಪ್ಪಿದೆ. ಆದರೆ ಸಿನಿಮಾ ಬಿಡುಗಡೆಗೆ ವಿತರಕರು ಒಪ್ಪುತ್ತಿಲ್ಲ. ಇದೆಲ್ಲದರ ನಡುವೆ 'ಥಗ್ ಲೈಫ್' ಚಿತ್ರಕ್ಕೆ ಇನ್ನೊಂದು ವಿಘ್ನ ಎದುರಾಗಿದೆ.
ಸಾಮಾನ್ಯವಾಗಿ ಯಾವುದೇ ಸಿನಿಮಾ ಚಿತ್ರಮಂದಿರಗಳಲ್ಲಿ 8 ವಾರ ಪ್ರದರ್ಶನ ಕಂಡ ಬಳಿಕ ಓಟಿಟಿಗೆ ಬರುತ್ತವೆ. ಮಲ್ಟಿಪ್ಲೆಕ್ಸ್ ಚೈನ್‌ಗಳು ಕೂಡ ಇದನ್ನೇ ಹೇಳುತ್ತಾ ಬರುತ್ತಿವೆ. ಆದರೆ ನಾಲ್ಕು ವಾರಕ್ಕೆ 'ಥಗ್ ಲೈಫ್' ಸಿನಿಮಾ ಓಟಿಟಿಗೆ ಬರುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಪರಿಣಾಮ 25 ಲಕ್ಷ ರೂ. ದಂಡ ಕಟ್ಟಬೇಕಾಗಿದೆ ಎಂದು ಪಿಂಕ್ ವಿಲ್ಲಾ ವೆಬ್‌ಸೈಟ್ ವರದಿ ಮಾಡಿದೆ.
8 ವಾರ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಆಗಲೇಬೇಕು ಎನ್ನುವ ನಿಯಮ ಉತ್ತರ ಭಾರತಲ್ಲಿದೆ. 'ಥಗ್ ಲೈಫ್' ಸಿನಿಮಾ ಆ ನಿಯಮ ಮೀರಿದರೆ ಮಲ್ಟಿಪ್ಲೆಕ್ಸ್ ಚೈನ್‌ಗಳು ನಿರ್ಮಾಪಕರ ಮೇಲೆ ದಂಡ ವಿಧಿಸುತ್ತವೆ. ಅಂದರೆ ನಿರ್ಮಾಪಕರು ಮತ್ತು ವಿತರಕರು ಹಿಂದಿ ಆವೃತ್ತಿಯಿಂದ ತಮ್ಮ 25 ಲಕ್ಷ ರೂ. ಪಾಲನ್ನು ಬಿಟ್ಟುಕೊಡಬೇಕು ಎನ್ನಲಾಗ್ತಿದೆ.
ನೆಟ್‌ಫ್ಲಿಕ್ಸ್ 130 ಕೋಟಿ ರೂ.ಗೆ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದ್ದರೂ ಸಿನಿಮಾ ಸೋತಿರುವುದರಿಂದ 110 ಕೋಟಿ ರೂ. ಮಾತ್ರ ಕೊಡುವುದಾಗಿ ಚೌಕಾಸಿ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಒಟ್ಟಾರೆ ಕಮಲ್ ಹಾಸನ್ 'ಥಗ್ ಲೈಫ್' ಸಿನಿಮಾ ಪದೇ ಪದೆ ಸಮಸ್ಯೆ ಎದುರಿಸುವಂತಾಗಿದೆ.


Click it and Unblock the Notifications











