Thug Life Trailer: ಜಿದ್ದು, ತ್ಯಾಗ, ಮೋಸ; ಕಮಲ್-ಸಿಂಬು 'ಥಗ್ ಲೈಫ್' ಮಿಸ್ಟರಿ
ಮಣಿರತ್ನಂ ಹಾಗೂ ಕಮಲ್ ಹಾಸನ್ ಕ್ರೇಜಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾ 'ಥಗ್ ಲೈಫ್'. ಸದ್ಯ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಕಮಲ್ ಎದುರು ಸಿಂಬು ಅಬ್ಬರಿಸಿದ್ದು ಸಿನಿಮಾ ಕುತೂಹಲ ಮೂಡಿಸಿದೆ. ಬಹಳ ವಿಭಿನ್ನವಾದ ಕಥೆಯನ್ನು ಈ ಬಾರಿ ಮಣಿ ಹೆಕ್ಕಿ ತರುತ್ತಿರುವಂತೆ ಕಾಣ್ತಿದೆ.
ರಾಜ್ ಕಮಲ್ ಫಿಲಂಸ್ ಇಂಟರ್ನ್ಯಾಷನಲ್, ಮದ್ರಾಸ್ ಟಾಕೀಸ್ ಹಾಗೂ ರೆಡ್ ಜೈಂಟ್ ಮೂವೀಸ್ ಬ್ಯಾನರ್‌ಗಳು ಜಂಟಿಯಾಗಿ 'ಥಗ್ ಲೈಫ್' ಚಿತ್ರ ನಿರ್ಮಿಸಿವೆ. ಕಮಲ್ ಹಾಸನ್, ಆರ್ ಮಹೇಂದ್ರನ್, ಮಣಿರತ್ನಂ, ಶಿವ ಅನಂತ್ ಹಾಗೂ ಉದಯನಿಧಿ ಸ್ಟಾಲಿನ್ ಹಣ ಹೂಡಿದ್ದಾರೆ. ಜೂನ್ 5ಕ್ಕೆ ಸಿನಿಮಾ ತೆರೆಗೆ ಬರಬೇಕಿದೆ. ಕಮಲ್ ಸಿಂಬು ಜೊತೆಗೆ ತ್ರಿಷಾ, ಅಭಿರಾಮಿ, ನಾಸರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಟ್ರೈಲರ್ ಗಮನಿಸಿದರೆ 'ಥಗ್ ಲೈಫ್' ಒಂದು ಗ್ಯಾಂಗ್‌ಸ್ಟರ್ ಡ್ರಾಮಾ ಎನ್ನುವುದು ಗೊತ್ತಾಗುತ್ತದೆ. ದೊಡ್ಡ ಗ್ಯಾಂಗ್‌ಸ್ಟರ್ ರಂಗರಾಯ ಶಕ್ತಿವೇಲ್ ನಾಯ್ಕರ್ ಆಗಿ ಕಮಲ್ ಅಬ್ಬರಿಸಿದ್ದಾರೆ. ರಂಗರಾಯ ಶಕ್ತಿವೇಲ್ ಎದುರು ಅಮರನ್(ಸಿಂಬು) ಬೆಳೆದು ದೊಡ್ಡವನಾಗುತ್ತಾನೆ. ಒಬ್ಬರಿಗೊಬ್ಬರು ಜೀವ ಕೊಡುವಂತಹ ಅನುಬಂಧ ಅವರದ್ದು. ಆದರೆ ಇದ್ದಕ್ಕಿದಂತೆ ಅಮರನ್ ಬದಲಾಗುತ್ತಾನೆ. ರಂಗರಾಯ ಶಕ್ತಿವೇಲ್ ಕುರ್ಚಿ ಮೇಲೆ ಕಣ್ಣಿಡುತ್ತಾನೆ? ಮುಂದೇನು ಎನ್ನುವುದು ಚಿತ್ರದ ಒನ್‌ಲೈನ್ ಕಥೆ ಎನ್ನುವುದು ಗೊತ್ತಾಗುತ್ತದೆ.
ಎಂದಿನಂತೆ ಮಣಿರತ್ನಂ ತಮ್ಮ ಟೇಕಿಂಗ್‌ನಿಂದ ಗಮನ ಸೆಳೆಯುತ್ತಾರೆ. ಮುಖ್ಯವಾಗಿ ಎಮೋಷನಲ್ ಸನ್ನಿವೇಶಗಳನ್ನು ಚೆನ್ನಾಗಿ ಕಟ್ಟಿಕೊಟ್ಟಿರುವಂತೆ ಕಾಣುತ್ತಿದೆ. ಅದಕ್ಕೆ ಸಂಭಾಷಣೆ ಕೂಡ ಪೂರಕವಾಗಿದೆ. ಎ. ಆರ್ ರಹಮಾನ್ ಮ್ಯೂಸಿಕ್ ಕೂಡ ದೊಡ್ಡ ಶಕ್ತಿ ತುಂಬಿದೆ. ಟ್ರೈಲರ್ ಮೊದಲ ನೋಟದಲ್ಲೇ ಇಷ್ಟವಾಗುತ್ತಿದೆ. ಚಿತ್ರದಲ್ಲಿ ಕಮಲ್ ಜೊತೆ ಅಭಿರಾಮಿ, ತ್ರಿಷಾ ನಾಯಕಿಯರಾಗಿ ಮಿಂಚಿದ್ದಾರೆ. ಸಿಂಬುಗೆ ಸಾನ್ಯ ಮಲ್ಹೋತ್ರಾ ಸಾಥ್ ಸಿಕ್ಕಿದೆ.
34 ವರ್ಷಗಳ ಹಿಂದೆ ಬಂದಿದ್ದ 'ದಳಪತಿ' ಚಿತ್ರದಲ್ಲಿ ಕೂಡ ಮಣಿರತ್ನಂ ಗ್ಯಾಂಗ್‌ಸ್ಟರ್ ಕತೆ ಹೇಳಿದ್ದರು. ಅಲ್ಲಿ ರಜನಿಕಾಂತ್ ಹಾಗೂ ಮಮ್ಮುಟ್ಟಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಅದರ ಛಾಯೆ 'ಥಗ್ ಲೈಫ್' ಚಿತ್ರದಲ್ಲಿ ಕೂಡ ಕಾಣುತ್ತಿದೆ. ಕಮಲ್ ಹಾಗೂ ಮಣಿರತ್ನಂ ಇಬ್ಬರೂ ಸೇರಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. 36 ವರ್ಷಗಳ ಬಳಿಕ ಇವರಿಬ್ಬರು ಒಟ್ಟಿಗೆ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ.
ಕನ್ನಡಕ್ಕೂ ಡಬ್ ಆಗಿ 'ಥಗ್ ಲೈಫ್' ಸಿನಿಮಾ ತೆರೆಗೆ ಬರಲಿದೆ. 'ವಿಕ್ರಂ' ಸಿನಿಮಾ ಮಾಡಿ ಗೆದ್ದಿದ್ದ ಕಮಲ್ ಹಾಸನ್ ನಟನೆಯ 'ಇಂಡಿಯನ್'-2 ಸಿನಿಮಾ ಸೋತಿತ್ತು. ಹಾಗಾಗಿ ಹೊಸ ಸಿನಿಮಾ ಬಗ್ಗೆ ಬಹಳ ನಿರೀಕ್ಷೆಯಿದೆ. ಕಮಲ್ ಹಾಗೂ ಸಿಂಬು ನಡುವೆ ತಂದೆ-ಮಗನಂತಹ ಬಾಂಧವ್ಯದ ಕಥೆ ಚಿತ್ರದಲ್ಲಿದೆ. ಆದರೆ ಇಬ್ಬರೂ ಪರಸ್ಪರ ಕದನಕ್ಕೆ ಇಳಿಯುವುದು ಯಾಕೆ? ಎನ್ನುವುದನ್ನು ತೆರೆಮೇಲೆಯೇ ನೋಡಬೇಕು.
ಚೆನ್ನೈ, ಕಾಂಚಿಪುರಂ, ಪಾಂಡಿಚೇರಿ, ನವದೆಹಲಿಯಲ್ಲಿ 'ಥಗ್ ಲೈಫ್' ಚಿತ್ರದ ಚಿತ್ರೀಕರಣ ನಡೆದಿದೆ. ಐಮ್ಯಾಕ್ಸ್ ಫಾರ್ಮೆಟ್‌ನಲ್ಲಿ ಕೂಡ ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಳೇ ಚಿತ್ರದ 4 ಹಾಡುಗಳು ಬಿಡುಗಡೆಯಾಗಿ ಸದ್ದು ಮಾಡ್ತಿದೆ. ನೆಟ್‌ಫ್ಲಿಕ್ಸ್ ಸಂಸ್ಥೆ 149 ಕೋಟಿ ರೂ.ಗೆ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ ಎಂದು ವರದಿಯಾಗಿದೆ. 'ಪೊನ್ನಿಯಿನ್ ಸೆಲ್ವನ್' ಸರಣಿ ಸಿನಿಮಾ ಮಾಡಿ ಸೋತಿದ್ದ ಮಣಿರತ್ನಂ 'ಥಗ್ ಲೈಫ್' ಬಗ್ಗೆ ಬಹಳ ಭರವಸೆಯಿಂದ ಇದ್ದಾರೆ.
ಕಳೆದ ವಾರವೇ ಚಿತ್ರದ ಟ್ರೈಲರ್ ಬಿಡುಗಡೆಗೆ ಸಿದ್ಧತೆ ನಡೆದಿತ್ತು. ಆದರೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಳಿಕ ಭಾರತ-ಪಾಕ್ ಗಡಿಯಲ್ಲಿ ಅಘೋಷಿತ ಯುದ್ಧ ನಡೀತಿತ್ತು. ಹಾಗಾಗಿ ಇಂತಹ ಸಮಯದಲ್ಲಿ ಕಾರ್ಯಕ್ರಮ ಬೇಡ ಎಂದು ಕಮಲ್ ಮುಂದೂಡಿದ್ದರು.


Click it and Unblock the Notifications











