ಪಾರ್ಟಿಗೆ ಕರೆದು ಶೌಚಾಲಯದಲ್ಲಿ ಲೈಂಗಿಕ ದೌರ್ಜನ್ಯ; ದೂರು ನೀಡಿದ ಸಂತ್ರಸ್ತೆ.. ಕಿರುತೆರೆಯ ನಟ ಬಂಧನ
ಸಿನಿಮಾ ಹಾಗೂ ಕಿರುತೆರೆಯಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಪ್ರತಿ ದಿನ ಒಂದಲ್ಲ ಒಂದು ಪ್ರಕರಣಗಳು ಹೊರ ಬೀಳುತ್ತಲೇ ಇವೆ. ಈಗ ಹಿಂದಿಯ ಕಿರುತೆರೆ ನಟ ಆಶಿಶ್ ಕಪೂರ್ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯಲ್ಲಿ ನಡೆದ ಪಾರ್ಟಿಯೊಂದರಲ್ಲಿ ಮಹಿಳೆಯೊಬ್ಬರ ಟಿವಿ ನಟ ಆಶಿಶ್ ಕಪೂರ್ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಅರೆಸ್ಟ್ ಮಾಡಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಟನನ್ನು ಬಂಧಿಸಿ, ವಿಚಾರಣೆ ಆರಂಭಿಸಿದ್ದಾರೆ.
ಆಶಿಶ್ ಕಪೂರ್ ಲೈಂಗಿಕ ದೌರ್ಜನ್ಯ ಕೇಸ್ ಕಿರುತೆರೆ ಹಾಗೂ ಸಿನಿಮಾ ಮಂದಿಗೆ ಶಾಕ್ ಕೊಟ್ಟಿದೆ. ಇತ್ತೀಚೆಗೆ ಕಲಾವಿದರು ಅಪರಾಧ ಪ್ರಕರಣದಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿರುವುದರಿಂದ ಜನರು ಅವರ ಮೇಲಿಟ್ಟಿ ಒಳ್ಳೆಯ ಅಭಿಪ್ರಾಯವನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಶಿಶ್ ಕಪೂರ್ ಪ್ರಕರಣ ಹಿಂದಿ ಕಿರುತೆರೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಅಷ್ಟಕ್ಕೂ ಆಶಿಶ್ ಕಪೂರ್ ಹಾಗೂ ಸಂತ್ರಸ್ತ್ರೆ ಭೇಟಿ ಆಗಿದ್ದೇಗೆ? ಆ ಪಾರ್ಟಿಯಲ್ಲಿ ನಡೆದಿದ್ದೇನು? ಅನ್ನೋದೇ ರೋಚಕ.

ಸಂತ್ರಸ್ತ ಮಹಿಳೆಗೆ ಹಿಂದಿ ಕಿರುತೆರೆಯ ನಟ ಆಶಿಶ್ ಕಪೂರ್ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು. ಇಬ್ಬರ ಪರಿಚಯವಾದ ನಂತರ ನಟ ಆಶಿಶ್ ಕಪೂರ್ ದೆಹಲಿಯ ತನ್ನ ಸ್ನೇಹಿತನ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಸಂತ್ರಸ್ತೆಯನ್ನು ಆಹ್ವಾನಿಸಿದ್ದ. ಆಶಿಶ್ ಕಪೂರ್ ಆಹ್ವಾನವನ್ನು ಒಪ್ಪಿಕೊಂಡು ಆ ಮಹಿಳೆ ಪಾರ್ಟಿಗೆ ಬಂದಿದ್ದರು. ಇಲ್ಲಿ ಆ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ಆರೋಪ ಮಾಡಲಾಗಿದೆ.
ಅಷ್ಟಕ್ಕೂ ಆ ಪಾರ್ಟಿಯಲ್ಲಿ ಏನಾಯ್ತು ಅನ್ನೋದನ್ನು ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತೆ ವಿವರಿಸಿದ್ದಾರೆ. ಪಾರ್ಟಿ ನಡೆಯುತ್ತಿದ್ದ ವೇಳೆ ಯುವತಿ ಶೌಚಾಲಯಕ್ಕೆ ತೆರಳಿದ್ದರು. ಇದನ್ನು ಗಮನಿಸಿದ ಆಶಿಶ್ ಕಪೂರ್ ಸಹ ಅಲ್ಲಿಗೆ ಹೋಗಿದ್ದರು. ಇಬ್ಬರೂ ಶೌಚಾಲಯದ ಕಡೆಗೆ ಹೋದಾಗ ದೀರ್ಘಕಾಲದವರೆಗೆ ಹೊರಗೆ ಬಂದಿರಲಿಲ್ಲ. ಹೀಗಾಗಿ ಆಶಿಶ್ ಕಪೂರ್ ಸ್ನೇಹಿತ ಹಾಗೂ ಆ ಪಾರ್ಟಿಗೆ ಬಂದಿದ್ದ ಅತಿಥಿಗಳು ಶೌಚಾಲಯದ ಕಡೆಗೆ ತೆರಳಿ ಬಾಗಿಲು ತಟ್ಟಲು ಯತ್ನಿಸಿದ್ದರು.
ಪಾರ್ಟಿಯ ಮೂಡ್‌ನಲ್ಲಿದ್ದವರ ನಡುವೆ ಈ ವಿಚಾರಕ್ಕೆ ಜಗಳ ಆರಂಭ ಆಯ್ತು. ಈ ಜಗಳ ಆ ಅಪಾರ್ಟ್‌ಮೆಂಟ್‌ನಲ್ಲಿರುವ ನಿವಾಸಿಗಳೆಲ್ಲರಿಗೂ ಕೇಳಿಸಿತ್ತು. ಈ ಘಟನೆಯಲ್ಲಿ ಅತ್ಯಾಚಾರ ತನ್ನ ಮೇಲೆ ಆಗಿದ್ದರೂ, ನಟ ಆಶಿಶ್ ಕಪೂರ್ ಸ್ನೇಹಿತನ ಹೆಂಡತಿ ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು, ಆಶಿಶ್ ಕಪೂರ್, ಸ್ನೇಹಿತ ಹಾಗೂ ಆತನ ಹೆಂಡತಿಯ ವಿರುದ್ಧ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಉತ್ತರ ವಲಯದ ಉಪ ಆಯುಕ್ತ ರಾಜಾ ಬಂದಿಯಾ ಪ್ರಕರಣ ದಾಖಲಿಸಿಕೊಂಡು ನಟನನ್ನು ಬಂಧಿಸಿದ್ದಾರೆ.
ಕಳೆದ ತಿಂಗಳು ಆಗಸ್ಟ್ 21ರಂದು ಈ ಘಟನೆ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಆಶಿಶ್ ಕಪೂರ್ ಮತ್ತು ಅವರ ಸ್ನೇಹಿತ ಇಬ್ಬರೂ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಹಾಗೇ ಮಹಿಳೆಯೊಬ್ಬಳು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಆಗಸ್ಟ್ 21 ರಂದೇ ಆಶಿಶ್ ಕಪೂರ್ ಸ್ನೇಹಿತ ಮತ್ತು ಅವರ ಪತ್ನಿ ನಿರೀಕ್ಷಣಾ ಜಾಮೀನು ಪಡೆದು ಕೊಂಡಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ, ಸಿಸಿಟಿವಿ ದೃಶ್ಯಗಳನ್ನು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಸಂಗ್ರಹಿಸಲಾಗಿತ್ತು. ಈ ಘಟನೆ ಬಳಿಕ ನಟ ಆಶಿಶ್ ಕಪೂರ್ ತಲೆಮರೆಸಿಕೊಂಡಿದ್ದ. ಹೀಗಾಗಿ ಇವರನ್ನು ಹಿಡಿಯಲು ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿತ್ತು.
ತಲೆಮರೆಸಿಕೊಂಡಿದ್ದ ನಟ ಆಶಿಶ್ ಕಪೂರ್ ಅವರನ್ನು ಹಲವು ಕಡೆಗಳಲ್ಲಿ ಹುಡುಕಿದ್ದರು. ಬಳಿಕ ಪುಣೆಯಲ್ಲಿ ತಲೆಮರೆಸಿಕೊಂಡಿದ್ದ ಕಪೂರ್ ಅವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಟನ ಮೇಲೆ ಸಂತ್ರಸ್ತೆ ಕೇವಲ ಲೈಂಗಿಕ ದೌರ್ಜನ್ಯದ ಆರೋಪ ಅಷ್ಟೇ ಮಾಡಿಲ್ಲ. ಅತ್ಯಾಚಾರದ ವಿಡಿಯೋವನ್ನು ಚಿತ್ರೀಕರಿಸಿದ್ದಾರೆಂದು ಆರೋಪಿಸಿದ್ದರು. ಆದರೆ, ಇಲ್ಲಿವರೆಗೂ ನಡೆಸಿದ ತನಿಖೆಯಲ್ಲಿ ಯಾವುದೇ ವಿಡಿಯೋ ದೊರೆತಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.


Click it and Unblock the Notifications











