ವಿಜಯ್ ಪರ ಪ್ರಕಾಶ್ ರಾಜ್ ಬ್ಯಾಟಿಂಗ್; ಎಸ್. ಆರ್ ಬೊಮ್ಮಾಯಿ ಪ್ರಕರಣ ನೆನಪಿಸಿ ಕಮಲ್ ಕಾಮೆಂಟ್
ತಮಿಳುನಾಡಿನಲ್ಲಿ ಈಗ ಸರ್ಕಾರ ರಚನೆ ಭಾರೀ ಚರ್ಚೆ ಹುಟ್ಟಾಕ್ಕಿದೆ. ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಇರುವುದೇ ಇದಕ್ಕೆ ಕಾರಣವಾಗಿದೆ. ಬಹುಮತ ಸಾಬೀತು ಮಾಡಲು 118 ಶಾಸಕರ ಸಹಿ ಇರುವ ಪಟ್ಟಿ ಕೊಡುವಂತೆ ರಾಜ್ಯಪಾಲ ವಿಶ್ವನಾಥ್ ಅರ್ಲೇಕರ್ ಕೇಳಿದ್ದಾರೆ. ಹಾಗಾಗಿ ಇವತ್ತು ನಡೆಯಬೇಕಿದ್ದ ಪ್ರಮಾಣವಚನ ಕಾರ್ಯಕ್ರಮ ರದ್ದಾಗಿದೆ. ಇದೀಗ ಸರ್ಕಾರ ರಚನೆಗೆ ವಿಜಯ್ ಭಾರೀ ಸರ್ಕಸ್ ಮಾಡುವಂತಾಗಿದೆ.
ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ ಸರಿ. ಆದರೂ ಟಿವಿಕೆ ಪಕ್ಷಕ್ಕೆ ಜನರ ಬೆಂಬಲ ಸಿಕ್ಕಿದೆ. 108 ಕ್ಷೇತ್ರಗಳಲ್ಲಿ ಪಕ್ಷ ಗೆದ್ದಿದೆ. ಹಾಗಾಗಿ ಅವರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಬೇಕು ಎನ್ನುವ ಕೂಗು ಜೋರಾಗಿದೆ. ಇದೀಗ ಕಮಲ್ ಹಾಸನ್ ಹಾಗೂ ಪ್ರಕಾಶ್ ರಾಜ್ ಕೂಡ ದಳಪತಿ ಪರ ಬ್ಯಾಟ್ ಬೀಸಿದ್ದಾರೆ. ಇದು ಸಂವಿಧಾನಕ್ಕೆ ವಿರುದ್ಧವಾದ ನಡೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಪ್ರಕಾಶ್ ರಾಜ್ ಟ್ವೀಟ್ ಮಾಡಿ "ರಾಜ್ಯಪಾಲರ ಈ ನಡವಳಿಕೆ ಅಸಹ್ಯಕರ.. ಇದು ಸ್ವೀಕಾರಾರ್ಹವಲ್ಲ ಮತ್ತು ಸಂವಿಧಾನಬಾಹಿರ.. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರಬಹುದು... ಆದರೆ ವಿಜಯ್ ಅವರಿಗೆ ಜನಾದೇಶ ಸಿಕ್ಕಿದೆ. ಅವರಿಗೆ ಸದನದ ಮೇಲೆ ತಮ್ಮ ಹಕ್ಕನ್ನು ಪಡೆಯಲು ಅವಕಾಶ ನೀಡಬೇಕು" ಎಂದು ಬರೆದುಕೊಂಡಿದ್ದಾರೆ. ಸಾಕಷ್ಟು ಜನ ಇದಕ್ಕೆ ಬಂಬಲ ಸೂಚಿಸಿದ್ದಾರೆ.
ಎಸ್.ಆರ್. ಬೊಮ್ಮಾಯಿ ಪ್ರಕರಣ ಉದಾಹರಣೆ ಕೊಟ್ಟು ಕಮಲ್ ಹಾಸನ್, ರಾಜಕೀಯ ಮುಖಂಡ ಕಮಲ್ ಹಾಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ, ಜನರು ಯಾವುದೇ ಒಂದು ಪಕ್ಷಕ್ಕೆ ಸ್ವತಂತ್ರವಾಗಿ ಸರ್ಕಾರ ರಚಿಸುವ ಅಧಿಕಾರವನ್ನು ನೀಡಿಲ್ಲ. ಸೋದರ ಎಂಕೆ ಸ್ಟಾಲಿನ್ "ನಾವು ಜನರ ತೀರ್ಪನ್ನು ಗೌರವಿಸುತ್ತೇವೆ; ನಾವು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತೇವೆ" ಎಂದು ಘೋಷಿಸಿದ್ದಾರೆ. ಅವರ ರಾಜಕೀಯ ಪ್ರಬುದ್ಧತೆಯನ್ನು ನಾನು ಗೌರವಿಸುತ್ತೇನೆ. ಪ್ರಸ್ತುತ ಸಾಂವಿಧಾನಿಕ ಹುದ್ದೆಗಳಲ್ಲಿರುವವರು ಈಗ ಅದೇ ಕರ್ತವ್ಯವನ್ನು ಪೂರೈಸಬೇಕು. ಇದು ಬೇಡಿಕೆಯಲ್ಲ, ಅವರ ಸಾಂವಿಧಾನಿಕ ಬಾಧ್ಯತೆಯ ಜ್ಞಾಪಿಸುತ್ತಿದ್ದೇನೆ" ಎಂದಿದ್ದಾರೆ.
ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ 108 ಸ್ಥಾನಗಳನ್ನು ಗೆದ್ದಿದೆ. ಅವರನ್ನು ಸರ್ಕಾರ ರಚಿಸಲು ಆಹ್ವಾನಿಸದಿರುವುದು ತಮಿಳುನಾಡಿನ ಜನರ ಜನಾದೇಶವನ್ನು ಅಗೌರವಗೊಳಿಸಿದಂತೆ ಎಂದು ಕಮಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ನಡೆಯಿಂದ 233 ಚುನಾಯಿತ ಸದಸ್ಯರು ಇನ್ನೂ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಇದು ರಾಜ್ಯಕ್ಕೆ ಮಾಡಿದ ಅವಮಾನ; ಇದು ಪ್ರಜಾಪ್ರಭುತ್ವಕ್ಕೆ ಹಾನಿ. ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದ್ದು, "ಬಹುಮತವನ್ನು ರಾಜಭವನದಲ್ಲಿ ಅಲ್ಲ, ಶಾಸಕಾಂಗ ಸಭೆಯಲ್ಲಿ ಸಾಬೀತುಪಡಿಸಬೇಕು. ನಾನು ಮಾತನಾಡುತ್ತಿರುವುದು ಪಕ್ಷ ರಾಜಕೀಯವಲ್ಲ. ಇದು ಭಾರತೀಯ ನಾಗರಿಕನ ನೀತಿ ಧ್ವನಿ. ತಮಿಳುನಾಡಿನ ಜನರ ತೀರ್ಪನ್ನು ಗೌರವಿಸಬೇಕು" ಎಂದು ಕಮಲ್ ಬರೆದುಕೊಂಡಿದ್ದಾರೆ.
1988ರಲ್ಲಿ ಕರ್ನಾಟಕದಲ್ಲಿ ಇಂಥದ್ದೇ ಪರಿಸ್ಥಿತಿ ನಿರ್ಮಾಣ ಆಗಿತ್ತು. ಜನತಾ ಪಕ್ಷದ ಬಹುಮತದ ಸರ್ಕಾರ ರಚಿಸಿದ್ದರು. ಬಳಿಕ ಕೆಲ ಶಾಸಕರ ಪಕ್ಷಾಂತರ ಕಾರಣಕ್ಕೆ ಬೊಮ್ಮಾಯಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಸದನದಲ್ಲಿ ಬೊಮ್ಮಾಯಿ ಬಹುಮತ ಸಾಬೀತು ಪಡೆಸಲು ಅವಕಾಶ ಕೇಳಿದರೂ ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆಗ ಐತಿಹಾಸಿಕ ತೀರ್ಪು ಬಂದಿತ್ತು. ಸರ್ಕಾರದ ಬಹುಮತ ರಾಜ್ಯಪಾಲರ ಕಚೇರಿಯಲ್ಲಿ ಅಲ್ಲ, ವಿಧಾನಸಭೆಯಲ್ಲಿ ಸಾಬೀತು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಸದ್ಯ ಚೆನ್ನೈ ಜವಹರಲಾಲ್ ನೆಹರು ಸ್ಟೇಡಿಯಂನಲ್ಲಿ ವಿಜಯ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ.


Click it and Unblock the Notifications