'ವೆಟ್ಟೈಯನ್' ಪೋಸ್ಟರ್ ರಿಲೀಸ್; ರಜನಿ ಮನೆ ಮುಂದೆ ಗಲಾಟೆ ಎಬ್ಬಿಸಿದ್ದೇಕೆ ಮಹಿಳೆ?
ಸೂಪರ್‌ಸ್ಟಾರ್ ರಜನಿಕಾಂತ್ ಮತ್ತೆ ಟ್ರ್ಯಾಕ್ ಮರಳಿದ್ದಾರೆ. 'ಜೈಲರ್' ಸಿನಿಮಾ ಕೈ ಹಿಡಿದ ಬೆನ್ನಲ್ಲೇ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. 'ಜೈ ಭೀಮ್' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಜ್ಞಾನವೇಲ್ ನಿರ್ದೇಶನ ಮಾಡುತ್ತಿದ್ದಾರೆ. ಇದು ರಜನಿಕಾಂತ್ ಹಾಗೂ ಜ್ಞಾನವೇಲ್ ಕಾಂಬಿನೇಷನ್ ಮೊದಲ ಸಿನಿಮಾ. ಈ ಕಾರಣಕ್ಕೆ ನಿರೀಕ್ಷೆ ದುಪ್ಪಟ್ಟಿದೆ.
ಲೈಕಾ ಪ್ರೊಡಕ್ಷನ್ ನಿರ್ಮಿಸುತ್ತಿರುವ ಈ ಸಿನಿಮಾ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ. ಈಗಾಗಲೇ ಅರ್ಥದಷ್ಟು ಚಿತ್ರೀಕರಣ ಮುಗಿದಿರೋ ಬಗ್ಗೆ ಕಾಲಿವುಡ್‌ನಲ್ಲಿ ಸುದ್ದಿ ಹರಿದಾಡುತ್ತಿದೆ. ಏಪ್ರಿಲ್ ಇಲ್ಲವೇ ಮೇ ಹೊತ್ತಿಗೆ ರಜನಿಕಾಂತ್ ಸಿನಿಮಾ ರಿಲೀಸ್ ಆಗಬಹುದು. ಅದಕ್ಕೂ ಮುನ್ನ ಇಂದು (ಜನವರಿ 15) ಪೊಂಗಲ್ ಹಬ್ಬದ ವಿಶೇಷ ದಿನದಂದು 'ವೆಟ್ಟೈಯನ್' ಸಿನಿಮಾದ ಮಾಸ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಸಂಕ್ರಾಂತಿ ಹಬ್ಬದ ಈ ವಿಶೇಷ ದಿನದಂದು ರಜನಿಕಾಂತ್ ಅಭಿನಯದ 'ವೆಟ್ಟೈಯನ್' ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್‌ನಲ್ಲಿ ರಜನಿಕಾಂತ್ ಗನ್ ಹಿಡಿದು ಸ್ಟೈಲಿಶ್ ಆಗಿ ನಿಂತಿರೋದು ಅವರ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ಮತ್ತೆ ಮಾಸ್ ಲುಕ್‌ನಲ್ಲಿ ತಮ್ಮ ಸ್ಟೈಲ್‌ನಲ್ಲಿ ರಜನಿಯನ್ನು ನೋಡಿ ಫ್ಯಾನ್ಸ್ ಕ್ರೇಜಿಯಾಗಿ ಬಿಟ್ಟಿದ್ದಾರೆ.
'ವೆಟ್ಟೈಯನ್' ಸಿನಿಮಾ ಮಾಸ್ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಪೋಸ್ಟರ್ ಅನ್ನು ಟ್ರೆಂಡ್ ಮಾಡುತ್ತಿದ್ದಾರೆ. ಇದರೊಂದಿಗೆ ಸಿನಿಮಾ ಯಾವಾಗ ರಿಲೀಸ್ ಅಂತಲೂ ಕೇಳುತ್ತಿದ್ದಾರೆ. ಇದೇ ವೇಳೆ ರಜನಿ ಅತಿಥಿ ಪಾತ್ರದಲ್ಲಿ ನಟಿಸಿರುವ 'ಲಾಲ್ ಸಲಾಂ' ಕೂಡ ರಿಲೀಸ್‌ಗೆ ರೆಡಿಯಾಗಿದ್ದು, ಮುಂದಿನ ತಿಂಗಳು ರಿಲೀಸ್ ಆಗುವ ಸಾಧ್ಯತೆಯಿದೆ. ಇದನ್ನು ನೋಡಿಕೊಂಡು 'ವೆಟ್ಟೈಯನ್' ರಿಲೀಸ್ ಪ್ಲ್ಯಾನ್ ಮಾಡಬಹುದು.
ಒಂದ್ಕಡೆ 'ವೆಟ್ಟೈಯನ್' ಸಿನಿಮಾ ಪೋಸ್ಟರ್ ರಿಲೀಸ್ ಆಗುತ್ತಲೇ ಅಭಿಮಾನಿಗಳು ರಜನಿ ಮನೆ ಮುಂದೆ ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟನಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಹೇಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಇದರಿಂದ ಕೆರಳಿದ ರಜನಿ ಪಕ್ಕದ ಮನೆಯ ಮಹಿಳೆ ರಜನಿ ಹಾಗೂ ಅವರ ಅಭಿಮಾನಿಗಳ ವಿರುದ್ಧ ತಿರುಗಿಬಿದ್ದಿದ್ದಾರೆ.

ಬರ್ತ್‌ಡೇ, ಹಬ್ಬಗಳು, ಹೊಸ ವರ್ಷ ಹೀಗೆ ರಜನಿಗೆ ಯಾವುದು ವಿಶೇಷ ದಿನವೋ ಆ ವೇಳೆಯೆಲ್ಲ ಅವರ ಅಭಿಮಾನಿಗಳು ಮನೆ ಮುಂದೆ ಸೇರುತ್ತಾರೆ. ತಮ್ಮ ನೆಚ್ಚಿನ ನಟ ಜೊತೆ ಅವರೂ ಸಂಭ್ರಮಿಸುತ್ತಾರೆ. ಸೂಪರ್‌ಸ್ಟಾರ್ ಅನ್ನು ಕಣ್ತುಂಬಿಕೊಂಡು ಅವರ ಮಾತಗಳನ್ನು ಕೇಳಿ ಆನಂದಿಸುವುದು ಹಲವು ವರ್ಷಗಳಿಂದ ಬಂದಿರೋ ವಾಡಿಕೆ.
ಈ ಬಾರಿ ಪೊಂಗಲ್‌ಗೂ ಬೋಯಸ್ ಗಾರ್ಡನ್‌ನಲ್ಲಿರುವ ರಜನಿ ಮನೆ ಮುಂದೆ ಸಹಸ್ರಾರು ಸಂಖ್ಯೆ ಅಭಿಮಾನಿಗಳು ಜಮಾಯಿಸಿದ್ದರು. ಇದರಿಂದ ಕಿರಿಕಿರಿಗೊಂಡ ಪಕ್ಕದ ಮನೆಯ ಮಹಿಳೆ ರಜನಿ ಮನೆ ಮುಂದೆ ಕಿರುಚಾಡಿದ್ದಾರೆ. "ನಾವೂ ತೆರಿಗೆ ಕಟ್ಟುತ್ತೇವೆ. ಇದೇ ಏರಿಯಾದಲ್ಲಿ ಹಲವು ವರ್ಷಗಳಿಂದ ವಾಸ ಮಾಡಿದ್ದೇವೆ. ಪ್ರತಿ ಬಾರಿಯೂ ಅಭಿಮಾನಿಗಳು ಇಲ್ಲಿಗೆ ಬಂದಾಗ ನಮಗೆ ತೊಂದರೆಯಾಗುತ್ತಿದೆ. ಇದಕ್ಕೆ ಕೊನೆಯಿಲ್ಲವೇ" ಎಂದು ಮಹಿಳೆ ಕಿಡಿಕಾರಿರುವ ವಿಡಿಯೋ ವೈರಲ್ ಆಗಿದೆ.
ರಜನಿ ತಮ್ಮನ್ನು ನೋಡಲು ಬಂದ ಅಭಿಮಾನಿಗಳನ್ನು ಭೇಟಿ ಮಾಡಿ ಸಂಕ್ರಾಂತಿ (ಪೊಂಗಲ್) ಹಬ್ಬ ಶುಭಾಶಯಗಳನ್ನು ತಿಳಿದ್ರು. "ಎಲ್ಲರೂ ಆರೋಗ್ಯ ಹಾಗೂ ನೆಮ್ಮದಿಯಿಂದ ಇರಬೇಕು. ನೈತಿಕತೆ ಚಿಂತನೆಯಲ್ಲಿ ಪ್ರಾಮಾಣಿಕತೆ ಇದ್ದರೆ ಜೀವನದಲ್ಲಿ ನೆಮ್ಮದಿ ಇರುತ್ತದೆ" ಎಂದು ಸಂದೇಶ ನೀಡಿದ್ದಾರೆ.


Click it and Unblock the Notifications











