ಆಪ್ತನ ಸಿನಿಮಾಗೆ ಪರೋಕ್ಷ ದಾಳಿ ಮಾಡಿದರೇ ವಿಜಯ್? ಶಿವಕಾರ್ತಿಕೇಯನ್ 'ಪರಾಶಕ್ತಿ'ಗೆ ಟಾಂಗ್.. ಏನಿದು ರಾಜಕೀಯ ನಡೆ?
ದಳಪತಿ ವಿಜಯ್ ಸಿನಿಮಾ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಾಗಿದೆ. ಇವರ ಪಕ್ಷ ಟಿವಿಕೆ (ತಮಿಳಗ ವೆಟ್ರಿ ಕಳಗಂ) 2026ರಲ್ಲಿ ನಡೆಯಲಿರುವ ತಮಿಳುನಾಡಿನ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದೆ. ಈ ಚುನಾವಣೆಗಾಗಿ ವಿಜಯ್ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ತಮಿಳಿಗರನ್ನು ತನ್ನ ಪಕ್ಷದೆಡೆಗೆ ಸೆಳೆಯುವುದಕ್ಕೆ ಸಭೆ-ಸಮಾರಂಭಗಳನ್ನು ಮಾಡುತ್ತಿದ್ದಾರೆ. ಇಂದು (ಡಿಸೆಂಬರ್ 18) ಅಲ್ಲಿನ ಈರೋಡ್‌ನಲ್ಲಿ ಬೃಹತ್ ಸಮಾವೇಶ ಮಾಡಿದ್ದಾರೆ.
ಟಿವಿಕೆ ಪಕ್ಷ ಕಟ್ಟಿದ ಕ್ಷಣದಿಂದ ದಳಪತಿ ವಿಜಯ್ ಪ್ರತಿ ಶನಿವಾರ ಒಂದೊಂದು ಜಿಲ್ಲೆಗಳಿಗೆ ತೆರಳಿ ಸಮಾವೇಶ ಮಾಡುತ್ತಿದ್ದರು. ಜನರನ್ನು ನೇರವಾಗಿ ಭೇಟಿ ಮಾಡಿ ತಮ್ಮ ಪಕ್ಷದ ಪರ ಪ್ರಚಾರ ಮಾಡುತ್ತಿದ್ದರು. ಆದರೆ, ಕರೂರ್‌ನಲ್ಲಿ ಇಂತಹದ್ದೇ ಒಂದು ಸಮಾವೇಶದ ವೇಳೆ ನಡೆದ ಕಾಲ್ತುಳಿತದ ದುರ್ಘಟನೆಯಲ್ಲಿ ಸುಮಾರು 41 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯ ಬಳಿಕ ವಿಜಯ್ ಈ ವೀಕೆಂಡ್ ಸಮಾವೇಶಕ್ಕೆ ಬ್ರೇಕ್ ಹಾಕಿದ್ದರು.

ಕರೂರ್ ಕಾಲ್ತುಳಿತ ಘಟನೆಯ ಬಳಿಕ ವಿಜಯ್ ವಿವಾದಕ್ಕೆ ಸಿಲುಕಿದ್ದರು. ಆ ಬಳಿಕ ಎಚ್ಚೆತ್ತುಕೊಂಡ ವಿಜಯ್ ಸೂಕ್ತ ಭದ್ರತೆಯೊಂದಿಗೆ ಪುದುಚೇರಿಯಲ್ಲಿ ಪ್ರಚಾರ ಮಾಡಿದ್ದರು. ಅದು ಬಿಟ್ಟರೆ, ಈಗ ಈರೋಡ್‌ನಲ್ಲಿ ಬೃಹತ್ ಸಮಾವೇಶ ಮಾಡಿದ್ದಾರೆ. ಈ ವೇಳೆ ವಿಜಯ್ ಭಾಷಣದ ತುಣುಕುಗಳು ವೈರಲ್ ಆಗುತ್ತಿವೆ. ಇದರಲ್ಲಿ ತಮ್ಮ ಆಪ್ತ ಶಿವಕಾರ್ತಿಕೇಯನ್ ಸಿನಿಮಾಗೆ ವಿಜಯ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆಂದು ಟೀಕೆಗಳು ವ್ಯಕ್ತವಾಗುತ್ತಿವೆ. ಕೆಲವರು ಈ ಭಾಷಣದ ಹಿಂದಿನ ರಾಜಕೀಯ ನಡೆಯನ್ನು ವಿಶ್ಲೇಷಣೆ ಮಾಡುತ್ತಿದ್ದಾರೆ. ಅದೇನದು ಅಂತ ತಿಳಿಯುವುದಕ್ಕೆ ಮುಂದೆ ಓದಿ.
ಜನರೊಂದಿಗೆ ತನ್ನ ರಾಜಕೀಯ ಸಮಾವೇಶವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದ ವಿಜಯ್ ಮತ್ತೆ ಶುರು ಮಾಡಿದ್ದಾರೆ. ವಿಜಯ್ ನೋಡುವುದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ಸಮಾರಂಭದಲ್ಲೂ ಕೆಲವ ಅಭಿಮಾನಿಗಳು ತನ್ನ ನೆಚ್ಚಿನ ನಟನಿಗಾಗಿ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದರು. ಅದನ್ನು ಗಮನಿಸಿದ ವಿಜಯ್ ತಕ್ಷಣವೇ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಿ ಈರೋಡ್‌ನಲ್ಲಿ ಸಮಾವೇಶ ಮಾಡಲಾಗಿದೆ.
ಈರೋಡ್ ಸಮಾವೇಶದಲ್ಲಿಯೂ ವಿಜಯ್ ಡಿಎಂಕೆ ಪಕ್ಷದ ವಿರುದ್ಧ ಕಿಡಿಕಾರಿದರು. ಡಿಎಂಕೆ ಪಕ್ಷದ ವಿರುದ್ಧ "ತಿರುವಳ್ಳುವರ್ ಕೋಟಂ" ಕುರಿತು ನೀಡಿದ ಹೇಳಿಕೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಈರೋಡ್‌ನಲ್ಲಿ ವಿಜಯ್ ಡಿಎಂಕೆ ವಿರುದ್ಧ ನೀಡಿದ್ದ ಈ ಹೇಳಿಕೆ. "ತಿರುವಳ್ಳುವರ್ ಕೋಟಂಗೆ ತೋರಿಸುವ ಕಾಳಜಿಯನ್ನು ಇಲ್ಲಿನ ಜನರ ಜೀವನೋಪಾಯಕ್ಕೆ ತೋರಲಿಲ್ಲವಲ್ಲ" ಎಂದು ಡಿಎಂಕೆ ಸರ್ಕಾರದ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದರು. ಇದು ವ್ಯಾಪಕವಾಗಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಇನ್ನು ವಿಶೇಷ ಅಂದರೆ, ಇಂದು (ಡಿಸೆಂಬರ್ 18) ಸಂಜೆ ಶಿವಕಾರ್ತಿಕೇಯನ್ ನಟನೆಯ 'ಪರಾಶಕ್ತಿ' ಸಿನಿಮಾದ ವಿಶೇಷ ಕಾರ್ಯಕ್ರಮವಿದೆ. ಈ ಸಿನಿಮಾವನ್ನು ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಸಂಸ್ಥೆ ವಿತರಣೆ ಮಾಡುತ್ತಿದೆ. ಅಲ್ಲದೆ ವಿಜಯ್ ಕೊನೆಯ ಸಿನಿಮಾ 'ಜನ ನಾಯಗನ್' ವಿರುದ್ಧ 'ಪರಾಶಕ್ತಿ' ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಹೀಗಾಗಿ ವಿಜಯ್ ಈ ಹೇಳಿಕೆಯನ್ನು ಕೊಟ್ಟಿದ್ದಾರೆಂದು ಚರ್ಚೆಯಾಗುತ್ತಿದೆ.
ವಿಜಯ್ ಭಾಷಣ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು "ವಿಜಯ್ ಏಕಾಏಕಿ ಬದಲಾದರೇ..?", "ಟಿವಿಕೆ ಸಂಸ್ಥಾಪಕ ಜನ ನಾಯಗನ್ ಆದರೇ?" ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಒಟ್ನಲ್ಲಿ ವಿಜಯ್ ಕಟ್ಟಿ ಹಾಕುವುದಕ್ಕೆ ಡಿಎಂಕೆ ಪರೋಕ್ಷವಾಗಿ ಸಾಕಷ್ಟು ಕಸರತ್ತು ಮಾಡುತ್ತಿದೆ. ಇತ್ತ ವಿಜಯ್ ಎದುರಾಳಿಗಳ ನಡೆಯನ್ನು ತಡೆಯಲು ಹರಸಾಹಸ ಮಾಡುತ್ತಿದ್ದಾರೆ. ಇದೆಲ್ಲವೂ 2026ರ ಚುನಾವಣೆಯಲ್ಲಿ ಯಾರ ಪರ ಕೆಲಸ ಮಾಡಿದೆ ಎಂದು ಗೊತ್ತಾಗಲಿದೆ.


Click it and Unblock the Notifications











