GOAT Box Office Day 5: 5ನೇ ದಿನ 'ಗೋಟ್' ದಿಢೀರ್ ಕುಸಿತ; ಸೋಮವಾರದ ಅಗ್ನಿಪರೀಕ್ಷೆಯಲ್ಲಿ ವಿಜಯ್ ಫೇಲ್
ಗಣೇಶ ಚತುರ್ಥಿಗೆ ಕಾಲಿವುಡ್‌ನಲ್ಲಿ ದಳಪತಿ ವಿಜಯ್ ಮೆಗಾ ಸಿನಿಮಾ 'ಗೋಟ್' (GOAT)ರಿಲೀಸ್ ಆಗಿತ್ತು. ಪ್ರೇಕ್ಷಕರಿಗೆ ಡಬಲ್ ಡೋಸ್ ಕೊಡಲೇಬೇಕು ಅಂತ ನಿರ್ದೇಶಕ ವೆಂಕಟ್ ಪ್ರಭು ಪಣ ತೊಟ್ಟು ನಿಂತಿದ್ದರು. ಈ ಕಾರಣಕ್ಕೆ ದಳಪತಿ ವಿಜಯ್ ಅನ್ನು ಡಬಲ್ ರೋಲ್‌ನಲ್ಲಿ ತೆರೆಮೇಲೆ ತರಲಾಗಿತ್ತು. ವಿಜಯ್ ತಂದೆ ಹಾಗೂ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ವಿಜಯ್ ಫ್ಯಾನ್ಸ್‌ಗೆ ಸಖತ್ ಕಿಕ್ ಕೊಡಬಹುದು ಎಂದೇ ನಿರೀಕ್ಷೆ ಮಾಡಲಾಗಿತ್ತು.
ನಿರೀಕ್ಷೆಯಂತೆ ಮೊದಲ ನಾಲ್ಕು ದಿನ 'ಗೋಟ್' ಭರ್ಜರಿ ಕಲೆಕ್ಷನ್ ಮಾಡಿತ್ತು. ಗಣೇಶ ಚತುರ್ಥಿಯ ಸಂಭ್ರಮವನ್ನು ಸಂಪೂರ್ಣವನ್ನು ಬಳಸಿಕೊಂಡಿತ್ತು. ಆದರೆ, ಮೊದಲನೇ ಸೋಮವಾರ ಯಾವುದೇ ಸಿನಿಮಾ ತಂಡಕ್ಕಾದರೂ ಅಗ್ನಿಪರೀಕ್ಷೆಯಾಗಿರುತ್ತೆ. ಸೋಮವಾರ ಅಗ್ನಿಪರೀಕ್ಷೆಯಲ್ಲಿ 'ಗೋಟ್' ಸೋತಿದೆ. ಬಾಕ್ಸಾಫೀಸ್ ಗಳಿಕೆಯಲ್ಲಿ ಶೇ.50ರಷ್ಟು ಡ್ರಾಪ್ ಆಗಿದೆ ಎಂದು Sacnilk ವರದಿ ಮಾಡಿದೆ.

'ಗೋಟ್' ಮೊದಲ ನಾಲ್ಕು ದಿನಗಳು ಕೂಡ ಉತ್ತಮ ಗಳಿಕೆ ಕಂಡಿತ್ತು. ಅದರಲ್ಲೂ ಕರ್ನಾಟಕದಲ್ಲಿಯೇ ಸುಮಾರು 24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವಿತರಕರ ವಲಯದಲ್ಲಿ ಲೆಕ್ಕ ಹಾಕಲಾಗಿತ್ತು. ಒಂದ್ವೇಳೆ ಸಿನಿಮಾ ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ಗೆದ್ದಿದ್ದರೆ, ಗಳಿಕೆಯಲ್ಲಿ ಇನ್ನಷ್ಟು ಏರಿಕೆ ಆಗುವ ಸಾಧ್ಯತೆಯಿತ್ತು. ಹಾಗಿದ್ರೆ, 5 ನೇ ದಿನ ಭಾರತದಾದ್ಯಂತ ಗಳಿಸಿದ್ದೆಷ್ಟು? ತಿಳಿಯಲು ಮುಂದೆ ಓದಿ.
'ಗೋಟ್' 5ನೇ ದಿನದ ಕಲೆಕ್ಷನ್ ಎಷ್ಟು?
ದಳಪತಿ ವಿಜಯ್ ಐದನೇ ದಿನದ ಕಲೆಕ್ಷನ್ ನಿರ್ಮಾಪಕರಿಗೆ ನಿರಾಸೆಯನ್ನುಂಟು ಮಾಡಿದೆ. ನಾಲ್ಕು ದಿನ ಭರ್ಜರಿ ಕಲೆಕ್ಷನ್ ಐದನೇ ದಿನಕ್ಕೂ ಮುಂದುವರೆಯಬಹುದೆಂಬ ನಿರೀಕ್ಷೆಯಿತ್ತು. ಆದರೆ, ಚಿತ್ರತಂಡದ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿದೆ. ನಿನ್ನೆ (ಸೆಪ್ಟೆಂಬರ್ 9) 'ಗೋಟ್' ಕಲೆಕ್ಷನ್ 34.2 ಕೋಟಿ ರೂಪಾಯಿ ಆಗಿತ್ತು. ಆದರೆ, ಅದೇ ಐದನೇ ದಿನ 14 ಕೋಟಿ ರೂಪಾಯಿಗೆ ಇಳಿಕೆಯಾಗಿದೆ.

ದಿಢೀರ್ ಕುಸಿತಕ್ಕೆ ಕಾರಣವೇನು?
ದಳಪತಿ ವಿಜಯ್ ಸಿನಿಮಾ 'ಗೋಟ್' ಬಾರೀ ಹೈಪ್‌ನಲ್ಲಿತ್ತು. ನಾಲ್ಕು ದಿನದ ಕಲೆಕ್ಷನ್ ಕೂಡ ಚೆನ್ನಾಗಿತ್ತು. ಸೋಮವಾರ ಕಲೆಕ್ಷನ್ ಡ್ರಾಪ್ ಆಗುತ್ತೆ ಅನ್ನೋ ನಿರೀಕ್ಷೆಯಿತ್ತು. ಆದರೆ, ಈ ಮಟ್ಟಕ್ಕೆ ಡ್ರಾಪ್ ಆಗಬಹುದು ಅಂತ ಎಕ್ಸ್‌ಪೆಕ್ಟ್ ಮಾಡಿರಲಿಲ್ಲ. ಸಿನಿಮಾಗೆ ಆರಂಭದ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ತಮಿಳುನಾಡು ಬಿಟ್ಟು ಬೇರೆ ಭಾಗಗಳಲ್ಲಿ ಸಿನಿಮಾ ಡ್ರಾಪ್ ಆಗಿದೆ. ಅದರಲ್ಲೂ ಆಂಧ್ರ, ತೆಲಂಗಾಣ, ಕೇರಳ ಹಾಗೂ ಹಿಂದಿ ಬೆಲ್ಟ್‌ಗಳಲ್ಲಿ ಗಣನೀಯ ಇಳಿಕೆ ಕಂಡಿದೆ.
₹300 ಕೋಟಿ ದಾಟಿದ 'ಗೋಟ್'
ಮೊದಲ ನಾಲ್ಕು ದಿನಗಳಿಗೆ 'ಗೋಟ್' ಸಿನಿಮಾ ವಿಶ್ವದಾದ್ಯಂತ ಅದ್ಭುತ ಕಲೆಕ್ಷನ್ ಮಾಡಿತ್ತು. ಕೇವಲ ನಾಲ್ಕು ದಿನಕ್ಕೆ 288 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಐದನೇ ದಿನ ಕ್ಕೆ 300 ಕೋಟಿ ರೂಪಾಯಿ ಗಡಿದಾಟಿದೆ. ಈ ಮೂಲಕ ವಿಜಯ್ ನಟನೆಯ ಮತ್ತೊಂದು ಸಿನಿಮಾ 300 ಕೋಟಿ ಕ್ಲಬ್ ಸೇರಿದಂತಾಗಿದೆ. 'ಬಿಗಿಲ್', 'ವಾರಿಸು', 'ಲಿಯೋ' ಮೂರು ಸಿನಿಮಾಗಳು ಕೂಡ 300 ಕೋಟಿ ರೂಪಾಯಿ ದಾಟಿದೆ.
₹400 ಕೋಟಿ ಕ್ಲಬ್ ಸೇರಬಹುದೇ?
ದಳಪತಿ ವಿಜಯ್ ಸಿನಿಮಾ 'ಗೋಟ್' ಈ ವಾರದೊಳಗೆ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಮುಂದಿನ ವೀಕೆಂಡ್‌ಗಳಲ್ಲಿ ಸಿನಿಮಾದ ಗಳಿಕೆ ಹೆಚ್ಚಾಗಬಹುದೆಂಬ ನಿರೀಕ್ಷೆ ಮಾಡಲಾಗಿದೆ. ಒಂದು ವೇಳೆ ಈ ವಾರ 400 ಕೋಟಿ ಕ್ಲಬ್ ಸೇರಿದರೆ, ಚಿತ್ರತಂಡ ಸೇಫ್ ಆಗಲಿದ್ದು, ಮುಂದಿನ ದಿನಗಳಲ್ಲಿ ಲಾಭ ಕಾಣಬಹುದು.


Click it and Unblock the Notifications











