ವಿಜಯ್ ಸೇತುಪತಿ ವಿರುದ್ಧ ಕಾಸ್ಟಿಂಗ್ ಕೌಚ್ ಆರೋಪ; ರಮ್ಯಾ ಮೋಹನ್ ಆರೋಪ ಮಾಡಿ ಪೋಸ್ಟ್ ಡಿಲೀಟ್ ಮಾಡಿದ್ದೇಕೆ?
ತಮಿಳು ಚಿತ್ರರಂಗದ ಸಭ್ಯ ನಟರ ಸಾಲಿನಲ್ಲಿ ವಿಜಯ್ ಸೇತುಪತಿ ಹೆಸರು ಇತ್ತು. ಇವರ ನಟಿಸುವ ಸಿನಿಮಾಗಳು ಕೂಡ ಅವರ ಸ್ವಭಾವವನ್ನು ತಿಳಿಸುತ್ತಿತ್ತು. ವೇದಿಕೆಗಳ ಮೇಲೆ ವಿಜಯ್ ಸೇತುಪತಿ ಆಡಿದ ಮಾತುಗಳಿಗೆ ನೆಟ್ಟಿಗರು ಮನಸೋತಿದ್ದು ಇದೆ. ಇಂದಿಗೂ ವಿಜಯ್ ಹೇಳಿಕೆಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ತಮಿಳು ಪ್ರೇಕ್ಷಕರಿಗೆ ಈ ನಟನ ಮೇಲೆ ವಿಶೇಷವಾದ ಕಾಳಜಿಯಿದೆ.
ಆದರೆ, ಒಂದೇ ಒಂದು ಸೋಶಿಯಲ್ ಮೀಡಿಯಾ ಪೋಸ್ಟ್ ವಿಜಯ್ ಸೇತುಪತಿಯ ಇಮೇಜ್ ಅನ್ನು ಪ್ರಶ್ನೆ ಮಾಡುವಂತಾಗಿದೆ. ನಿನ್ನೆ (ಜುಲೈ 29) ರಮ್ಯಾ ಮೋಹನ್ ಎಂಬುವ ಯುವತಿಯೊಬ್ಬರು ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್ ವಿಜಯ್ ಸೇತುಪತಿಯ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಯುವತಿಯ ಈ ಪೋಸ್ಟ್ ಬಳಿಕ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದರು. ಆ ಬಳಿಕ ಯುವತಿ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಸದ್ಯ ವಿಜಯ್ ಸೇತುಪತಿ ನಟಿಸಿದ ಹೊಸ ಸಿನಿಮಾ 'ತಲೈವನ್ ತಲೈವಿ' ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಈ ಸಿನಿಮಾಗೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಜಯ್ ಸೇತುಪತಿ ಹಾಗೂ ನಿತ್ಯಾ ಮೆನನ್ ತಮಿಳು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದಾರೆ. ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾದ ಬೆನ್ನಲ್ಲೇ ವಿಜಯ್ ಸೇತುಪತಿ ವಿರುದ್ಧ ಮಹಿಳೆಯೊಬ್ಬರು ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದಾರೆ. ನಿನ್ನೆಯಿಂದಲೂ ಈ ವಿಷಯದ ಬಗ್ಗೆ ಚಿತ್ರರಂಗದಲ್ಲಿ ಗೊಂದಲ ಏರ್ಪಟ್ಟಿದೆ. ವಿಜಯ್ ಸೇತುಪತಿ ವಿರುದ್ಧ ಮಾಡಿದ ಆರೋಪದಲ್ಲಿ ಸತ್ಯವಿದೆಯೇ? ಇಲ್ಲ ವಿಜಯ್ ಸೇತುಪತಿ ವಿರುದ್ಧ ಸಂಚು ನಡೆದಿದೆಯೇ?
ರಮ್ಯಾ ಮೋಹನ್ ಎಂಬುವವರು ವಿಜಯ್ ಸೇತುಪತಿ ವಿರುದ್ಧ ಆರೋಪ ಮಾಡಿದ ಬಳಿಕ ಸಿನಿಮಾ ಮಂದಿ ಸೈಲೆಂಟ್ ಆಗಿದ್ದಾರೆ. ಇತ್ತ ವಿಜಯ್ ಸೇತುಪತಿ ಕೂಡ ತಮ್ಮ ಮೇಲಿನ ಆರೋಪಕ್ಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಈ ಹೊಸ ಕಾಸ್ಟಿಂಗ್ ಕೌಚ್ ಪ್ರಕರಣ ತಮಿಳು ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಸಭ್ಯ ನಟನ ಪಟ್ಟಿಯಲ್ಲಿದ್ದ ವಿಜಯ್ ಸೇತುಪತಿ ಬಗ್ಗೆ ಪ್ರೇಕ್ಷಕರಲ್ಲಿ ಗೊಂದಲದ ಅಭಿಪ್ರಾಯ ಮೂಡಿದೆ.

ವಿಜಯ್ ಸೇತುಪತಿ ಹಾಗೂ ತಮಿಳು ಚಿತ್ರರಂಗದ ವಿರುದ್ಧ ರಮ್ಯಾ ಮೋಹನ್ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕಾಲಿವುಡ್‌ನಲ್ಲಿ ಡ್ರಗ್ಸ್, ಕಾಸ್ಟಿಂಗ್ ಕೌಚ್ ಹೆಚ್ಚಿದೆ ಎಂದು ಹೇಳಿಕೊಂಡಿದ್ದಾರೆ. ಹಾಗೇ ವಿಜಯ್ ಸೇತುಪತಿ ಯುವತಿಯೊಬ್ಬಳ ಮೇಲೆ ಲೈಂಗಿಕ ಕಿರುಕುಳ ನೀಡಿದ್ದು, ಆ ಯುವತಿಯೀಗ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆಂದು ಆರೋಪಿದ್ದಾರೆ.
ಸಿನಿಮಾ ಜಗತ್ತಿಗೆ ಪರಿಚಯವೇ ಇಲ್ಲದ ಯುವತಿಯನ್ನು ಬಲವಂತವಾಗಿ ಕರೆತರಲಾಯಿತು. ಇಲ್ಲಿ ಡ್ರಗ್ಸ್ , ಕಾಸ್ಟಿಂಗ್ ಕೌಚ್, ಶೋಷಣೆ ಅನ್ನೋದು ಸಾಮಾನ್ ಆಗಿದೆ. ಕಾಸ್ಟಿಂಗ್ ಕೌಚ್ ಎನ್ನುವುದು ತಮಾಷೆಯ ವಿಷಯವಲ್ಲ. ವಿಜಯ್ ಸೇತುಪತಿಯಂತಹ ನಟ 'ಕ್ಯಾರವಾನ್ ಪೇವರ್ಸ್'ಗಾಗಿ ಎರಡು ಲಕ್ಷ ರೂಪಾಯಿ ಆಫರ್ ನೀಡಿದ್ದರು. ಹಾಗೇ ಒಂದು ರಾತ್ರಿ ಜೊತೆಲ್ಲಿ ಇರುವುದಕ್ಕೆ ₹50 ಸಾವಿರ ನೀಡುವುದಾಗಿ ಹೇಳಿದ್ದರು. ಇದೀಗ ಆಕೆ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇಂತಹ ನಟನನ್ನು ಸಂತನಂತೆ ಗೌರವಿಸಲಾಗುತ್ತಿದೆ" ಎಂದು ದೂರಿದ್ದಾರೆ.
ವಿಜಯ್ ಸೇತುಪತಿ ವಿರುದ್ಧ ಇಂತಹ ಆರೋಪ ಮಾಡಿದರೂ, ಇದೂವರೆಗೂ ಪ್ರತಿಕ್ರಿಯೆ ನೀಡಿಲ್ಲ. ಈ ಆರೋಪವನ್ನು ಸಾಬೀತು ಮಾಡುವಂತಹ ಸಾಕ್ಷಿಗಳನ್ನು ಆ ಮಹಿಳೆ ಕೊಟ್ಟಿಲ್ಲ. ಕೇಸ್ ದಾಖಲಿಸಿಲ್ಲ. ಕೋರ್ಟ್ ಕೇಸ್ ಆಗಲಿಲ್ಲ. ಅಲ್ಲದೆ ಆ ಯುವತಿಯ ಬಗ್ಗೆ ಸುಳಿವನ್ನು ಬಿಟ್ಟು ಕೊಟ್ಟಿಲ್ಲ. ಹೀಗಾಗಿ ವಿಜಯ್ ಸೇತುಪತಿ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಆ ಪೋಸ್ಟ್ ಅನ್ನು ಈಗ ಯುವತಿ ಡಿಲೀಟ್ ಮಾಡಿದ್ದರಿಂದ ಒತ್ತಡಕ್ಕೆ ಬಿದ್ದು ಪೋಸ್ಟ್ ಮಾಡಿರಬಹುದೇ ಎಂಬ ಅನುಮಾನವನ್ನು ವ್ಯಕ್ತಪಡಿಸಲಾಗುತ್ತಿದೆ.
ಇನ್ನೊಂದು ವರ್ಗ ವಿಜಯ್ ಸೇತುಪತಿ ವಿರುದ್ಧ ಯಾರೋ ಕತ್ತಿ ಮಸೆಯುತ್ತಿರಬಹುದು ಎಂನ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಆದರೆ,ರಮ್ಯಾ ಮೋಹನ್ ಎಂಬುವವರು ತನ್ನ ಪೋಸ್ಟ್ ಮೂಲಕ ಕಿಚ್ಚು ಹಚ್ಚಿ ಈಗ ಅದನ್ನು ಡಿಲೀಟ್ ಮಾಡಿರುವುದು ಕೂಡ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ವಿಜಯ್ ಸೇತುಪತಿ ಅಷ್ಟೇ ಅಲ್ಲ, ತಮಿಳು ಚಿತ್ರರಂಗದ ಗಣ್ಯರು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











