ವಿಜಯ್ ಸೇತುಪತಿ ಸಿನಿಮಾಗೆ ಮನಸೋತ ಚೀನಿಯರು; ಮೊದಲ ದಿನವೇ ಚೀನಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದ 'ಮಹಾರಾಜ'
ವಿಜಯ್ ಸೇತುಪತಿ ನಟಿಸಿದ 'ಮಹಾರಾಜ' ಸಿನಿಮಾಗೆ ತಮಿಳುನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಥ್ರಿಲ್ಲರ್ ಕಮ್ ಎಮೋಷನಲ್ ಸ್ಟೋರಿಗೆ ಸಿನಿಮಾ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೂನ್ 14ರಂದು ತೆರೆಕಂಡಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಉತ್ತಮ ಕಲೆಕ್ಷನ್ ಮಾಡಿತ್ತು. ಈ ಬೆನ್ನಲ್ಲೇ 'ಮಹಾರಾಜ' 2024ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಸಿನಿಮಾಗಳ ಲಿಸ್ಟ್ ಸೇರಿತ್ತು.
ಥಿಯೇಟರ್‌ನಲ್ಲಿ ತೆರೆಕಂಡು ಗೆದ್ದಿದ್ದ ಈ ಸಿನಿಮಾ ಓಟಿಟಿಯಲ್ಲೂ ರಿಲೀಸ್ ಆಗಿದೆ. ಅಲ್ಲೂ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಯೆ ಸಿಕ್ಕಿತ್ತು. ಹೀಗಾಗಿ ಈ ಸಿನಿಮಾವನ್ನು ಚೀನಾದಂತಹ ದೊಡ್ಡ ಏರಿಯಾದಲ್ಲಿ ರಿಲೀಸ್ ಮಾಡುವ ಧೈರ್ಯ ಮಾಡಿತ್ತು. ಈಗಾಗಲೇ ಚೀನಾದ ಮಾರುಕಟ್ಟೆಯಲ್ಲಿ ಭಾರತದ ಕೆಲವು ಸಿನಿಮಾಗಳು ಒಳ್ಳೊಳ್ಳೆ ದಾಖಲೆಗಳನ್ನು ಮಾಡಿವೆ. ಈಗ ವಿಜಯ್ ಸೇತುಪತಿಯ 'ಮಹಾರಾಜ'ನ ಸರದಿ.

'ಮಹಾರಾಜ' ಸಿನಿಮಾಗೆ ಚೀನಾದಲ್ಲಿ ಈ ಮಟ್ಟಿಗೆ ರೆಸ್ಪಾನ್ಸ್ ಸಿಗುತ್ತೆ ಎನ್ನುವ ನಿರೀಕ್ಷೆ ಇರಲಿಲ್ಲ. ಆದರೆ, ಮೊದಲ ದಿನವೇ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ. ಚೀನಿಯರು ಈ ತಮಿಳು ಸಿನಿಮಾವನ್ನು ಇಷ್ಟ ಪಟ್ಟಿದ್ದಾರೆ. ಮೊದಲ ದಿನವೇ ಸೂಪರ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರುವ ಸಿನಿಮಾ ವೀಕೆಂಡ್‌ನಲ್ಲೂ ಒಳ್ಳೆಯ ಕಲೆಕ್ಷನ್ ಮಾಡುತ್ತೆ ಎಂದು ಸಿನಿಮಾ ಮಂದಿ ಗೆಸ್ ಮಾಡುತ್ತಿದ್ದಾರೆ. ಚೀನಾದಲ್ಲಿ ಫಸ್ಟ್ ಡೇ 'ಮಹಾರಾಜ' ಗಳಿಸಿದ್ದೆಷ್ಟು? 10ನೇ ಸ್ಥಾನದಲ್ಲಿರುವ 'ಬಾಹುಬಲಿ 2' ದಾಖಲೆಯನ್ನು ಹಿಂದಿಕ್ಕುತ್ತಾ?
ವಿಜಯ್ ಸೇತುಪತಿ ಸಿನಿಮಾ 'ಮಹಾರಾಜ' ಭಾರತದಲ್ಲಿ ಗಳಿಸಿದ್ದು 82 ಕೋಟಿ ರೂಪಾಯಿ (Gross). ಚೀನಾ ಬಿಟ್ಟು ಬೇರೆ ದೇಶಗಳಲ್ಲೂ ಈ ಸಿನಿಮಾ ರಿಲೀಸ್ ಆಗಿತ್ತು. ಅಲ್ಲಿಂದ 20 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಅಂದಾಜು 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿದ್ದ. ಈ ಸಿನಿಮಾ ಚೀನಾದಲ್ಲಿ ರಿಲೀಸ್ ಆಗುವುದಕ್ಕೂ ಮುನ್ನ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈಗ ಚೀನಾದಲ್ಲಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ.

ಚೀನಾದಲ್ಲಿ 'ಮಹಾರಾಜ' ಸಿನಿಮಾ ನಿನ್ನೆ (ನವೆಂಬರ್ 29)ರಂದು ಬಿಡುಗಡೆಯಾಗಿದೆ. ಚೀನಾದ ಬಹುತೇಕ ಏರಿಯಾಗಳಲ್ಲಿ ಸುಮಾರು 32 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ. ಚೀನಾದಲ್ಲಿ 'ಮಹಾರಾಜ' ಸಿನಿಮಾವನ್ನು ಪ್ರೀಮಿಯರ್ ಮಾಡಲಾಗಿತ್ತು. ಅದರಿಂದ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಆಗಿದೆ. ಜೊತೆಗೆ ಮೊದಲನೇ ದಿನವೂ ರೆಸ್ಪಾನ್ಸ್ ಚೆನ್ನಾಗಿದೆ. ಹೀಗಾಗಿ ಚೀನಾದಲ್ಲಿ 'ಬಾಹುಬಲಿ 2' ದಾಖಲೆಯನ್ನು ಮೀರಿಸಬಹುದು ಎಂದು ಲೆಕ್ಕ ಹಾಕಲಾಗುತ್ತಿದೆ.
ಚೀನಾದ ಪ್ರೀಮಿಯರ್ ನಿಂದ 'ಮಹಾರಾಜ' ಸುಮಾರು 5.4 ಕೋಟಿ ರೂಪಾಯಿಯನ್ನು ಕಲೆ ಹಾಕಿದೆ. ಹಾಗೇ ಮೊದಲ ದಿನ 4.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಮೊದಲ ದಿನ ಹಾಗೂ ಪ್ರೀಮಿಯರ್ ಎರಡೂ ಸೇರಿ ಸುಮಾರು 2.20 ಲಕ್ಷದ ಮಂದಿ ಚಿತ್ರಮಂದಿರಕ್ಕೆ ಬಂದು ಸಿನಿಮಾವನ್ನು ನೋಡಿದ್ದಾರೆ. ಮೊದಲ ದಿನ ಸುಮಾರು 1 ಲಕ್ಷ ಮಂದಿ ಚೀನಿಯರು 'ಮಹಾರಾಜ' ಸಿನಿಮಾ ನೋಡಿದ್ದಾರೆ ಎನ್ನುತ್ತಾರೆ ಟ್ರೇಡ್ ಎಕ್ಸ್‌ಪರ್ಟ್ಸ್.
ವಿಜಯ್ ಸೇತುಪತಿ ಸಿನಿಮಾ 'ಮಹಾರಾಜ' ಮೊದಲ ದಿನ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅದೇ ಚೀನಾದ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡಿರುವ ಭಾರತದ ಸಿನಿಮಾಗಳ ಪೈಕಿ 'ಬಾಹುಬಲಿ 2' 10ನೇ ಸ್ಥಾನದಲ್ಲಿದೆ. ಇದು ಸುಮಾರು 89 ಕೋಟಿ ರೂಪಾಯಿಯನ್ನು ಕಲೆ ಹಾಕಿತ್ತು. 'ಮಹಾರಾಜ' ಈಗ ಸಿಕ್ಕಿರುವ ಹಾಗೆ ಪ್ರತಿಕ್ರಿಯೆ ಮುಂದುವರೆದರೆ ಚೀನಾದ ಬಾಕ್ಸಾಫೀಸ್‌ನಲ್ಲಿಯೇ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎನ್ನಲಾಗುತ್ತಿದೆ. ಕೋವಿಡ್ ಬಳಿಕ ಭಾರತದ ಸಿನಿಮಾವೊಂದು ಚೀನಾದಲ್ಲಿ ಸದ್ದು ಮಾಡುತ್ತಿರುವುದು ಸಿನಿಮಾ ಮಂದಿಗೆ ಖುಷಿ ಕೊಟ್ಟಿದೆ.


Click it and Unblock the Notifications











