ತಮ್ಮದೇ ರಾಜ್ಯದಲ್ಲಿ ಬಾಹುಬಲಿ 2 ಕಲೆಕ್ಷನ್ ಮುರಿಯಲು 5 ವರ್ಷ ಒದ್ದಾಡಿದ್ದ ತಮಿಳು ಚಿತ್ರಗಳು; ಆಗ ಬಂದದ್ದೇ ಈ ಸುನಾಮಿ!
ಬಾಹುಬಲಿ 2 ಚಿತ್ರ ದೇಶದಾದ್ಯಂತ ಬರೋಬ್ಬರಿ 1810 ಕೋಟಿ ರೂಪಾಯಿ ಗಳಿಸಿದ ಚಿತ್ರ. ಈ ಚಿತ್ರ ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೇ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಉತ್ತರ ಭಾರತದಲ್ಲಿಯೂ ಅಬ್ಬರಿಸಿತ್ತು. ಈ ಚಿತ್ರ ಬಿಡುಗಡೆಗೊಂಡು ಅನೇಕ ರಾಜ್ಯಗಳಲ್ಲಿ ಇಂಡಸ್ಟ್ರಿ ಹಿಟ್ ಆಗಿತ್ತು.
ಹೌದು, ಹಲವು ರಾಜ್ಯಗಳಲ್ಲಿ ಆಯಾ ಭಾಷೆಯ ಚಿತ್ರಗಳು ಗಳಿಸಿದ್ದ ಗರಿಷ್ಠ ಕಲೆಕ್ಷನ್ ಅನ್ನು ಈ ಬಾಹುಬಲಿ 2 ಹಿಂದಿಕ್ಕಿ ಅಬ್ಬರಿಸಿತ್ತು. ಈ ಮೂಲಕ ಹಲವು ರಾಜ್ಯಗಳಲ್ಲಿ ಬಾಹುಬಲಿ 2 ಇಂಡಸ್ಟ್ರಿ ಹಿಟ್ ಆಗಿ ಬೃಹತ್ ದಾಖಲೆಗಳನ್ನು ಮಾಡಿತ್ತು.

ಕೇರಳ, ತಮಿಳು ನಾಡು ಹಾಗೂ ಕರ್ನಾಟಕದಲ್ಲಿಯೂ ಸಹ ಬಾಹುಬಲಿ 2 ಇಂಡಸ್ಟ್ರಿ ಹಿಟ್ ಆಗಿತ್ತು. ಸದ್ಯ ಈ ಎಲ್ಲಾ ರಾಜ್ಯಗಳಲ್ಲಿಯೂ ಬಾಹುಬಲಿ 2 ಚಿತ್ರದ ಕಲೆಕ್ಷನ್ ಅನ್ನು ಆ ಭಾಷೆಗಳ ಚಿತ್ರಗಳು ಮುರಿದು ಹಾಕಿವೆ. ಇನ್ನು ತಮಿಳುನಾಡಿನಲ್ಲಿ ಬಾಹುಬಲಿ 2 ಚಿತ್ರ ಎಷ್ಟರ ಮಟ್ಟಿಗೆ ಅಬ್ಬರಿಸಿತ್ತು ಎಂದರೆ ಈ ಚಿತ್ರ ತಮಿಳುನಾಡಿನಲ್ಲಿ ಮಾಡಿದ್ದ ಗಳಿಕೆಯನ್ನು ಹಿಂದಿಕ್ಕಲು ಅಲ್ಲಿನ ಚಿತ್ರಗಳಿಗೆ ಐದು ವರ್ಷಗಳ ಸಮಯ ಬೇಕಾಯಿತು.
ಬಾಹುಬಲಿ 2 ಬಳಿಕ ರಜನಿಕಾಂತ್ ನಟನೆಯ ರೋಬೊ 2.0 ಸೇರಿದತೆ ವಿಜಯ್ ನಟನೆಯ ಹಲವಾರು ಚಿತ್ರಗಳು ಬಿಡುಗಡೆಯಾದರೂ ಸಹ ಯಾವ ಚಿತ್ರವೂ ಬಾಹುಬಲಿ 2 ತಮಿಳುನಾಡಿನಲ್ಲಿ ಮಾಡಿದ್ದ ದಾಖಲೆಯನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿರಲಿಲ್ಲ. ಹೀಗೆ ಬೃಹತ್ ದಾಖಲೆ ನಿರ್ಮಿಸಿದ ಬಾಹುಬಲಿ 2 ಚಿತ್ರವನ್ನು ಹಿಂದಿಕ್ಕಿದ್ದು ಕಳೆದ ವರ್ಷ ಬಿಡುಗಡೆಗೊಂಡ ಕಮಲ್ ಹಾಸನ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಶನ್‌ನ ವಿಕ್ರಮ್ ಚಿತ್ರ.
ಹೌದು, 2022ರ ಜೂನ್ 3ರಂದು ವಿಕ್ರಮ್ ಚಿತ್ರ ಬಿಡುಗಡೆಗೊಂಡಿತ್ತು. ಸದ್ಯ ಇಂದಿಗೆ ಈ ಚಿತ್ರ ತೆರೆಗೆ ಬಂದು ಒಂದು ವರ್ಷ ಕಳೆದಿದ್ದು, ಚಿತ್ರ ಮಾಡಿದ ದಾಖಲೆಗಳನ್ನು ನೆಟ್ಟಿಗರು ನೆನೆಯುತ್ತಿದ್ದಾರೆ. ಈ ಪೈಕಿ ಬಾಹುಬಲಿ ದಾಖಲೆಯನ್ನು ಹಿಂದಿಕ್ಕಿದ್ದೂ ಸಹ ಒಂದು.
2017ರಲ್ಲಿ ತೆರೆಗೆ ಬಂದಿದ್ದ ಬಾಹುಬಲಿ 2 ಚಿತ್ರ ತಮಿಳುನಾಡು ಒಂದರಲ್ಲಿಯೇ 146 ಕೋಟಿ ಕಲೆಹಾಕಿ ತಮಿಳುನಾಡಿನ ಇಂಡಸ್ಟ್ರಿ ಹಿಟ್ ಆಗಿತ್ತು. ಹೀಗೆ ನಿರ್ಮಿತವಾದ ದಾಖಲೆಯನ್ನು 2022ರಲ್ಲಿ ಬಿಡುಗಡೆಗೊಂಡ ವಿಕ್ರಮ್ 184 ಕೋಟಿ ಗಳಿಸುವ ಮೂಲಕ ಮುರಿದು ಹಾಕಿತು ಹಾಗೂ ತಮಿಳು ಚಿತ್ರರಂಗದ ನೂತನ ಇಂಡಸ್ಟ್ರಿ ಹಿಟ್ ಆಯಿತು. ಈ ಮೂಲಕ ತಮಿಳುನಾಡಿನಲ್ಲಿ 150 ಕೋಟಿ ಗಳಿಕೆ ಮಾಡಿದ ಮೊದಲ ಚಿತ್ರ ಎಂಬ ದಾಖಲೆಯನ್ನೂ ಸಹ ವಿಕ್ರಮ್ ಮಾಡಿತು.
ಈ ಹಿಂದೆ ಖೈದಿ ಹಾಗೂ ಮಾಸ್ಟರ್ ಚಿತ್ರಗಳ ಮೂಲಕ ಮಿಂಚಿದ್ದ ನಿರ್ದೇಶಕ ಲೋಕೇಶ್ ಕನಕರಾಜ್ ವಿಕ್ರಮ್‌ಗೆ ಖೈದಿ ಲಿಂಕ್ ಇಟ್ಟು 'ಲೋಕೇಶ್ ಸಿನಿಮಾ ಯೂನಿವರ್ಸ್' ಸೃಷ್ಟಿಸಿದ್ದರು. ಚಿತ್ರದಲ್ಲಿ ನಾಯಕನಾಗಿ ಕಮಲ್ ಹಾಸನ್ ಕಾಣಿಸಿಕೊಂಡರೆ, ವಿಜಯ್ ಸೇತುಪತಿ ಹಾಗೂ ಫಹಾದ್ ಫಾಸಿಲ್ ಸಹ ದೊಡ್ಡ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದರು.
ಇನ್ನು ಕ್ಲೈಮ್ಯಾಕ್ಸ್‌ನಲ್ಲಿ ರೋಲೆಕ್ಸ್ ಅಗಿ ಎಂಟ್ರಿ ಕೊಟ್ಟಿದ್ದ ನಟ ಸೂರ್ಯ ಸಿನಿ ರಸಿಕರಿಗೆ ಕಿಕ್ ನೀಡಿದ್ದರು. ಹೀಗೆ ಕ್ಲೈಮ್ಯಾಕ್ಸ್‌ನಲ್ಲಿ ಕಮಲ್ ಹಾಸನ್, ಸೂರ್ಯ ಹಾಗೂ ಕಾರ್ತಿಯನ್ನು ತೋರಿಸಿದ್ದ ನಿರ್ದೇಶಕ ಲೋಕೇಶ್ ಕನಕರಾಜ್ ಚಿತ್ರಮಂದಿರವನ್ನು ಕ್ರಿಕೆಟ್ ಕ್ರೀಡಾಂಗಣ ಆಗುವ ಹಾಗೆ ಮಾಡಿದ್ದರು.


Click it and Unblock the Notifications











