Thangalaan Vs KGF:ಅಸಲಿ ಕಥೆ ಹೇಳಲು ಬರುತ್ತಿರೋ 'ತಂಗಲಾನ್' ಯಶ್ 'ಕೆಜಿಎಫ್'ಗೆ ಸೆಡ್ಡು ಹೊಡೆಯುತ್ತಾ?
ಸಿನಿಮಾ ಪ್ರಿಯರ ನೆನಪಿನಿಂದ ಇನ್ನೂ ಯಶ್ ಅಭಿನಯದ 'ಕೆಜಿಎಫ್' ಮರೆಯಾಗಿಲ್ಲ. ಅಷ್ಟರಲ್ಲೇ ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್)ನ ಅಸಲಿ ಕಥೆಯನ್ನು ಹೇಳುವುದಕ್ಕೆ ತಮಿಳಿನ ನಿರ್ದೇಶಕ ಪಾ. ರಂಜಿತ್ ಬರುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಕ್ರಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಲುಕ್ ಸಿನಿಪ್ರಿಯರು ಭೇಷ್ ಎನಿಸುವಂತೆ ಮಾಡಿದೆ.
ಅಂದ್ಹಾಗೆ, ಆ ಸಿನಿಮಾದ ಹೆಸರು 'ತಂಗಲಾನ್'. ರಾಕಿಂಗ್ ಸ್ಟಾರ್ ಯಶ್ ನಟಿಸಿದ 'ಕೆಜಿಎಫ್ 2' ತೆರೆಕಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡುವ ವೇಳೆ ತಮಿಳಿನ ನಿರ್ದೇಶಕ ಪಾ.ರಂಜಿತ್ 'ಕೆಜಿಎಫ್'ನ ಅಸಲಿ ಕಥೆಯನ್ನು ಹೇಳುತ್ತೇನೆ ಎಂದು ಟಕ್ಕರ್ ಕೊಟ್ಟಿದ್ದರು. ಅದೇ ಸಿನಿಮಾದ ಟ್ರೈಲರ್ ಇಂದು (ಜುಲೈ 10) ರಿಲೀಸ್ ಆಗಿದೆ.

'ತಂಗಲಾನ್' ಕೂಡ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ವಿಶೇಷ. ಈ ಟ್ರೈಲರ್ ರಿಲೀಸ್ ಬಳಿಕ ವಿಕ್ರಮ್ ಹಾಗೂ ಯಶ್‌ಗೂ, ಪಾ.ರಂಜಿತ್ ಹಾಗೂ ಪ್ರಶಾಂತ್ ನೀಲ್‌ಗೂ ಹೋಲಿಕೆ ಮಾಡುವುದಕ್ಕೆ ಶುರು ಮಾಡಬಹುದು. ಹಾಗೇ ರಿಯಲ್ ಸ್ಟೋರಿನಾ? ಕಾಲ್ಪನಿಕ ಕಥೆನಾ? ಯಾವುದು ಮೆಚ್ಚಿಕೊಳ್ಳಬಹುದು? ಅನ್ನೋ ಪ್ರಶ್ನೆನೂ ಹುಟ್ಟಿಕೊಳ್ಳಬಹುದು.
'ಕಬಾಲಿ', 'ಸರ್ಪಟ್ಟ ಪರಂಬರೈ' ಅಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಪಾ.ರಂಜಿತ್ ಆಕ್ಷನ್ ಕಟ್ ಹೇಳಿರುವ ಮತ್ತೊಂದು ಸಿನಿಮಾವಿದು. 2022ರಲ್ಲಿ ಕಾನ್ ಫಿಲ್ಮ್‌ಫೆಸ್ಟಿವಲ್‌ಗೆ ಅತಿಥಿಯಾಗಿ ಭಾಗವಹಿಸಿದ್ದ ಪಾ.ರಂಜಿತ್ ಅದೇ ವೇದಿಕೆ ಮೇಲೆ 'ರಿಯಲ್ ಕೆಜಿಎಫ್' ತೋರಿಸುತ್ತೇನೆ ಎಂದಿದ್ದರು. ಆ ವೇಳೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್'ಗೆ ಪರೋಕ್ಷ ಟಕ್ಕರ್ ಕೊಟ್ಟಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿ ಬಂದಿದ್ದವು.
ಈಗ ಎರಡು ವರ್ಷಗಳ ಬಳಿಕ ಅದೇ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಪಾ.ರಂಜಿತ್ ನಿರ್ದೇಶಿಸಿದ 'ತಂಗಲಾನ್' ರಿಯಲ್ 'ಕೆಜಿಎಫ್' ಕಥೆಯನ್ನು ತೆರೆದಿಡಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ವಿಕ್ರಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಿ ಸಿನಿಮಾ ವಿಕ್ರಮ್ ಈ ಸಿನಿಮಾದಲ್ಲೂ ವಿಚಿತ್ರ ಹಾಗೂ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಇವರೊಂದಿಗೆ ಪ್ರಮುಖ ಪಾತ್ರದಲ್ಲಿ ಮಾಳವಿಕಾ ಮೋಹನನ್ ನಾಯಕಿಯಾಗಿ ನಟಿಸುತ್ತಿದ್ದಾರೆ.

'ತಂಗಲಾನ್' ಟ್ರೈಲರ್ 200 ವರ್ಷಗಳ ಹಿಂದೆ ಬ್ರಿಟಿಷ್ ಅಧಿಕಾರಿ ಚಿನ್ನದ ಗಣಿಯನ್ನು ಹುಡುಕಿಕೊಂಡು ಬರುವುದಕ್ಕೂ ಮುನ್ನ ಹೇಗಿತ್ತು ಅನ್ನುವುದರಿಂದ ಆರಂಭ ಆಗುತ್ತೆ. ಆ ಬ್ರಿಟಿಷ್ ಅಧಿಕಾರಿ ಗ್ರಾಮದ ಜನರಿಗೆ ಚಿನ್ನವನ್ನು ಹುಡುಕುವಂತೆ ಆದೇಶ ನೀಡುತ್ತಾನೆ. ಅಲ್ಲಿಂದ ಕಥೆ ಆರಂಭ ಆಗುತ್ತೆ. ಇಲ್ಲಿ ಚಿನ್ನ ಹುಡುಕುವುದು ಸಾವಿಗೆ ಸಮ ಅನ್ನುವುದು ಸಿನಿಮಾದಲ್ಲಿ ಗಂಭೀರವಾದ ವಿಷಯವನ್ನು ಹೇಳುವುದಕ್ಕೆ ಹೊರಟಿರಬಹುದು ಅನ್ನೋದು ಅರ್ಥವಾಗುತ್ತೆ.
ಆದರೆ, 'ತಂಗಲಾನ್' ಟ್ರೈಲರ್ ನೋಡಿದ ಮೇಲೆ ಈ ಸಿನಿಮಾ ನೈಜ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇನೋ ನಿಜ. ಆದರೆ, ಈಗಾಗಲೇ ಬಂದಿರೋ ಕಾಲ್ಪನಿಕ ಕಥೆಯ 'ಕೆಜಿಎಫ್' ಅನ್ನು ಮೀರಿಸಬಹುದೇ? ಜನರು ಈ ಸಿನಿಮಾವನ್ನು ಇಷ್ಟ ಪಡಬಹುದೇ? ಅನ್ನುವ ಅನುಮಾನವಂತೂ ಮೂಡಿದೆ. ಈ ಕಾರಣಕ್ಕೆ 'ತಂಗಲಾನ್' ಸಿನಿಮಾ 'ಕೆಜಿಎಫ್' ಫೇಮ್ ಜೊತೆ, ಯಶ್ ಜೊತೆ ಚಿಯಾನ್ ವಿಕ್ರಮ್, ಪ್ರಶಾಂತ್ ನೀಲ್ ಜೊತೆ ಪಾ. ರಂಜಿತ್ ಪೈಪೋಟಿ ಮಾಡುತ್ತಲೇ ಥಿಯೇಟರ್ ಲಗ್ಗೆ ಇಡಬೇಕಿದೆ. ಆಮೇಲೆ ಬಾಕ್ಸಾಫೀಸ್‌ನಲ್ಲಿ ಅಸಲಿ ಕಥೆ ಶುರುವಾಗುತ್ತೆ.


Click it and Unblock the Notifications











