ನಿಂತು ಹೋದ ವಿಷ್ಣು ಚಿತ್ರಕ್ಕೆ ಮರುಜೀವ: ದಾದಾ ಸಿನಿಮಾದಲ್ಲಿ ಕಮಲ್- ವಿಕ್ರಂ?
ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ನಟಿಸಿದ ಕೊನೆಯ ಸಿನಿಮಾ 'ಆಪ್ತರಕ್ಷಕ'. ನಂತರ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ 2016ರಲ್ಲಿ ಬಂದ 'ನಾಗರಹಾವು' ಹಾಗೂ 'ರಾಜಸಿಂಹ' ಸಿನಿಮಾಗಳಲ್ಲಿ ದಾದಾನನ್ನು ಮತ್ತೆ ತೆರೆಮೇಲೆ ತರುವ ಪ್ರಯತ್ನ ನಡೀತು. ವಿಷ್ಣುವರ್ಧನ್ ನಟಿಸಿದ ಹಳೇ ಸಿನಿಮಾಗಳನ್ನು ಹೊಸ ರೂಪದಲ್ಲಿ ರೀ ರಿಲೀಸ್ ಕೂಡ ಮಾಡಲಾಯಿತು.
ತಮಿಳು ನಟ ಚಿಯಾನ್ ವಿಕ್ರಂ ಒಪ್ಪಿದ್ರೆ ಮತ್ತೊಮ್ಮೆ ತೆರೆಮೇಲೆ ಸಾಹಸಸಿಂಹನನ್ನು ನೋಡುವ ಅವಕಾಶ ಸಿನಿರಸಿಕರಿಗೆ ಸಿಗಲಿದೆ. ಅರೇ ವಿಕ್ರಂ ಒಪ್ಪುವುದಕ್ಕೂ ದಾದಾ ತೆರೆಮೇಲೆ ದರ್ಶನ ಕೊಡುವುದಕ್ಕೂ ಏನು ಸಂಬಂಧ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಅದಕ್ಕೆ ಉತ್ತರ ನಾವು ಹೇಳ್ತೀವಿ ಕೇಳಿ. 90ರ ದಶಕದಲ್ಲಿ ವಿಷ್ಣುವರ್ಧನ್ ನಟಿಸಿದ್ದ ಸಿನಿಮಾವೊಂದು ಅರ್ಧಕ್ಕೆ ನಿಂತು ಹೋಗಿತ್ತು. ಆ ಸಿನಿಮಾವನ್ನು ಪೂರ್ಣಗೊಳಿಸಿ ಈಗ ರಿಲೀಸ್ ಮಾಡುವ ಬಗ್ಗೆ ಚರ್ಚೆ ನಡೀತಿದೆ.

1997ರಲ್ಲಿ ಕಮಲ್ ಹಾಸನ್ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ್ದ 'ಮರುದನಾಯಗಂ' ಸಿನಿಮಾ ಸೆಟ್ಟೇರಿತ್ತು. ಅವತ್ತಿನ ಕಾಲಕ್ಕೆ 80 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮಾಡಲು ಕಮಲ್ ಮನಸ್ಸು ಮಾಡಿದ್ದರು. ವಿದೇಶಿ ಸಿನಿಮಾ ನಿರ್ಮಾಣ ಸಂಸ್ಥೆ ಕೂಡ ನಿರ್ಮಾಣಕ್ಕೆ ಕೈ ಜೋಡಿಸಿತ್ತು. ಒಂದಷ್ಟು ಚಿತ್ರೀಕರಣ ನಡೆದಿತ್ತು. ಈ ಐತಿಹಾಸಿಕ ಚಿತ್ರದಲ್ಲಿ ಕಮಲ್ ಟೈಟಲ್ ರೋಲ್ ಪ್ಲೇ ಮಾಡಿದ್ರೆ, ವಾಜಿದ್ ಖಾನ್ ಎನ್ನುವ ಮತ್ತೊಂದು ಪ್ರಮುಖ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದರು.
26 ವರ್ಷಗಳ ಹಿಂದೆ 'ಮರುದನಾಯಗಂ' ಸಿನಿಮಾ ಮುಹೂರ್ತ ಸಮಾರಂಭಕ್ಕೆ ಇಂಗ್ಲೆಂಡ್ ರಾಣಿ ಎಲಿಜಬೆತ್ ಸಾಕ್ಷಿ ಆಗಿದ್ದರು. ಜೊತೆಗೆ ಅಂದಿನ ತಮಿಳುನಾಡು ಸಿಎಂ ಕರುಣಾನಿಧಿ ಹಾಗೂ ನಟ ಶಿವಾಜಿ ಗಣೇಶನ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಇಷ್ಟೆಲ್ಲಾ ಆರ್ಭಟದಿಂದ ಶುರುವಾಗಿದ್ದ ಸಿನಿಮಾ ಶೂಟಿಂಗ್ ಕುಂಟುತ್ತಲೇ ಸಾಗಿತ್ತು. ಈ ಸಿನಿಮಾ ಮಾಡಿ ಮುಗಿಸಲು ಕಮಲ್ ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ನಾಲ್ಕೈದು ವರ್ಷಗಳ ಹಿಂದೆ ಕೂಡ ಒಮ್ಮೆ ಈ ಬಗ್ಗೆ ಚರ್ಚೆ ನಡೆದಿತ್ತು.

'ಮರುದನಾಯಗಂ' ಸಿನಿಮಾ ಚಿತ್ರೀಕರಣಕ್ಕೆ ಪದೇ ಪದೇ ವಿಘ್ನಗಳು ಎದುರಾಗಿತ್ತು. ವಿಷ್ಣುವರ್ಧನ್ ನಟಿಸಿದ್ದ ಒಂದಷ್ಟು ದೃಶ್ಯಗಳ ಚಿತ್ರೀಕರಣ ಕೂಡ ನಡೆದಿತ್ತು. ಚಿತ್ರದ ಸಣ್ಣ ಸಣ್ಣ ತುಣುಕುಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದೀಗ ಈ ಚಿತ್ರವನ್ನು ಮತ್ತೆ ಕೈಗೆತ್ತಿಕೊಳ್ಳಲು ಕಮಲ್ ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಚಿತ್ರದ 40 ನಿಮಿಷಗಳ ಸನ್ನಿವೇಶಗಳನ್ನು ಚಿತ್ರೀಕರಣ ಮಾಡಲಾಗಿದೆ. ಕಮಲ್ ಮಾಡುತ್ತಿದ್ದ 'ಮರುದನಾಯಗಂ' ಪಾತ್ರದಲ್ಲಿ ಈಗ ವಿಕ್ರಂ ನಟಿಸುವಂತೆ ಮಾಡುವ ಪ್ರಯತ್ನ ನಡೀತಿದೆಯಂತೆ.
ವಿಕ್ರಂ ನಟಿಸಿದರೂ ಕೂಡ ಈಗಾಗಲೇ ಕಮಲ್ ಕಾಣಿಸಿಕೊಂಡಿರುವ ದೃಶ್ಯಗಳನ್ನು ಚಿತ್ರದಲ್ಲಿ ಉಳಿಸಿಕೊಳ್ಳುವ ಲೆಕ್ಕಾಚಾರ ಇದೆಯಂತೆ. ಇತ್ತೀಚಿನ ವರ್ಷಗಳಲ್ಲಿ 'ಬಾಹುಬಲಿ' ಹಾಗೂ 'ಪೊನ್ನಿಯಿನ್ ಸೆಲ್ವನ್' ರೀತಿಯ ಕಾಸ್ಟ್ಯೂಮ್ ಡ್ರಾಮಾ ಸಿನಿಮಾಗಳು ಸಕ್ಸಸ್ ಕಂಡಿವೆ. ಹಾಗಾಗಿ 'ಮರುದನಾಯಗಂ' ಚಿತ್ರಕ್ಕೆ ಮರುಜೀವ ಕೊಡುವ ಬಗ್ಗೆ ಚರ್ಚೆ ನಡೀತಿದೆ ಎನ್ನಲಾಗ್ತಿದೆ. ಒಂದು ವೇಳೆ ಈ ಸಿನಿಮಾ ಮತ್ತೆ ಶುರುವಾದರೆ ವಾಜಿದ್ ಖಾನ್ ಅವತಾರದಲ್ಲಿ ಸಾಹಸಸಿಂಹನನ್ನು ಕನ್ನಡ ಸಿನಿರಸಿಕರು ಕೂಡ ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದು.

26 ವರ್ಷಗಳ ಹಿಂದೆ ನಿಂತು ಹೋದ ಚಿತ್ರವನ್ನು ಮತ್ತೆ ತೆರೆಗೆ ತರೋದು ಅಂದರೆ ಸಾಮಾನ್ಯದ ಮಾತಲ್ಲ. ಸದ್ಯ ರಾಜಕೀಯರಂಗದಲ್ಲೂ ಬ್ಯುಸಿಯಾಗಿರುವ ಕಮಲ್ ಈ ಸಿನಿಮಾ ಮೂಲಕ ಮತ್ತೆ ಸದ್ದು ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಾಗುತ್ತದೆ. ಮೊಹಮ್ಮದ್ ಯೂಸೂಫ್ ಖಾನ್ ಅಲಿಯಾಸ್ 'ಮರುದನಾಯಗಂ' ಜೀವನಾಧರಿತ ಸಿನಿಮಾ ತೆರೆಗೆ ಬಂದರೆ ಬಾಕ್ಸಾಫೀಸ್ ಶೇಕ್ ಮಾಡೋದು ಗ್ಯಾರೆಂಟಿ.
4 ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಕಮಲ್ ಹಾಸನ್ ತಮ್ಮ ಕನಸಿನ ಸಿನಿಮಾ 'ಮರುದನಾಯಗಂ' ಕುರಿತು ಮಾತನಾಡಿದ್ದರು. "ನಾನು ರಾಜಕೀಯರಂಗದಲ್ಲಿ ಗುರ್ತಿಸಿಕೊಂಡಿರುವುದರಿಂದ ಈ ಸಿನಿಮಾದಲ್ಲಿ ನಟಿಸೋದು ಕಷ್ಟ. ಬೇರೆ ಯಾರಾದರೂ ನಟಿಸಿದರೆ ಸಿನಿಮಾ ಪೂರ್ಣ ಮಾಡಬಹುದು" ಎಂದಿದ್ದರು.


Click it and Unblock the Notifications











