ಕನ್ನಡಕ್ಕೂ ಎಂಟ್ರಿ ಕೊಟ್ಟ ಈ ತಮಿಳಿನ ಹಾಸ್ಯ ನಟ: ಬೋಟ್ ಏರಿ ಹೊರಟಿದ್ದ ಯೋಗಿ ಸಮುದ್ರಕ್ಕೆ ಬಿದ್ದಿದ್ದು ಹೇಗೆ?
ತಮಿಳಿನ ಹಾಸ್ಯ ನಟ ಯೋಗಿ ಬಾಬು ಮತ್ತೆ ತಮ್ಮ ಅಭಿಮಾನಿಗಳನ್ನು ಹಾಸ್ಯದ ಮೂಲಕ ರಂಜಿಸುವುದಕ್ಕೆ ಸಜ್ಜಾಗಿದ್ದಾರೆ. 'ಬೋಟ್' ಅನ್ನುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಸಿನಿಮಾಗೆ 'ಬೋಟ್' ಅನ್ನೋ ಟೈಟಲ್ ಫಿಕ್ಸ್ ಆಗಿದೆ. ಚಿಂಬು ದೇವನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
1943ರ ಕಾಲಘಟ್ಟದಲ್ಲಿ ನಡೆಯುವ ಕಥೆಯಿದು. ಜಪಾನ್ ತಮಿಳುನಾಡಿನ ಮೇಲೆ ಬಾಂಬ್ ಹಾಕುವ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ಶೂಟ್ ಮಾಡಲಾಗಿದೆ. ಇತ್ತೀಚೆಗಷ್ಟೇ ಈ 'ಬೋಟ್' ಸಿನಿಮಾದ ಮೋಷನ್ ಪೋಸ್ಟರ್ ಅನ್ನು ದುಬೈನಲ್ಲಿ ರಿಲೀಸ್ ಮಾಡಲಾಗಿತ್ತು. ಈಗ ಸಿನಿಮಾ ಟೀಸರ್ ರಿಲೀಸ್ ಆಗಿದೆ.

ತಮಿಳಿನ ಈ ಹಾಸ್ಯ ನಟ ಯೋಗಿ ಬಾಬು ದಕ್ಷಿಣ ಭಾರತಕ್ಕೆ ಚಿರಪರಿಚಿತ. ತಮ್ಮ ಕಾಮಿಡಿ ಸೆನ್ಸ್‌ನಿಂದಾನೇ ದಕ್ಷಿಣ ಭಾರತದ ಜನರ ಮನಸ್ಸು ಗೆದ್ದಿರೋ ನಟ. ಈಗ ಮತ್ತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಮಿಡಿ ಸ್ಟಾರ್ ಆಗಿ ಮಿಂಚುತ್ತಿದ್ದ ಯೋಗಿ ಬಾಬು ಎರಡನೇ ಬಾರಿ ಹೀರೋ ಆಗಿ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಯೋಗಿ ಬಾಬು ನಟನೆಯ 'ಬೋಟ್' ಸಿನಿಮಾದ ಟೀಸರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತಮಿಳಿನ 'ಬೋಟ್' ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲದೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ತೆರೆಗೆ ಬರುತ್ತಿದೆ. ಕನ್ನಡದಲ್ಲೂ ರಿಲೀಸ್ ಆಗುತ್ತಿರೋದ್ರಿಂದ ಯೋಗಿ ಬಾಬು ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಂತಾಗಿದೆ. ಈ ಸಂದರ್ಭದಲ್ಲಿ ಯೋಗಿ ಬಾಬುಗೆ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ. ಟೀಸರ್ ರಿಲೀಸ್ ಮಾಡಿ ಯೋಗಿ ಬಾಬು ಹಾಗೂ ತಂಡಕ್ಕೆ ಶುಭ ಹಾರೈಸಿದ್ದರು.
'ಬೋಟ್' ಸಿನಿಮಾವನ್ನು ಚಿಂಬು ದೇವನ್ ನಿರ್ದೇಶನ ಮಾಡಿದ್ದಾರೆ. ದಳಪತಿ ವಿಜಯ್ ಹಾಗೂ ಕಿಚ್ಚ ಸುದೀಪ್ ನಟಿಸಿದ್ದ 'ಪುಲಿ' ಸಿನಿಮಾವನ್ನು ಇವರೇ ನಿರ್ದೇಶನ ಮಾಡಿದ್ದರು. ಇಷ್ಟೇ ಅಲ್ಲದೆ ಹಲವು ಸೂಪರ್ ಹಿಟ್ ಸಿನಿಮಾಗಳಿಗೂ ಆಕ್ಷನ್ ಕಟ್ ಹೇಳಿದ್ದಾರೆ. ಈಗ ಯೋಗಿ ಬಾಬುಗೆ 'ಬೋಟ್' ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ವೇಳೆ ನಡೆದ ಒಂದು ಘಟನೆಯನ್ನು ನಿರ್ದೇಶಕರು ನೆನಪಿಸಿಕೊಂಡಿದ್ದಾರೆ.

ಚೆನ್ನೈ ಮೇಲೆ ಜಪಾನ್ ಬಾಂಬ್ ಹಾಕಿದಾಗ, 10 ಮಂದಿ ಚಿಕ್ಕದೊಂದು ಬೋಟ್ ತೆಗೆದುಕೊಂಡು ಸಮುದ್ರದ ಮೂಲಕ ಎಸ್ಕೇಪ್ ಆಗಲು ಯತ್ನಿಸುತ್ತಾರೆ. ಆ ವೇಳೆ ಮಧ್ಯದಲ್ಲಿ ಆ ಬೋಟ್ ನಿಂತು ಬಿಡುತ್ತೆ. ಬೋಟ್‌ನಲ್ಲಿ ಚಿಕ್ಕದೊಂದು ರಂಧ್ರ ಆಗಿ ಮುಳುಗುವುದಕ್ಕೆ ಶುರುವಾಗುತ್ತೆ. ಮುಂದೇನಾಗುತ್ತೆ ಅನ್ನೋದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾವನ್ನು ಶೂಟ್ ಮಾಡುವ ವೇಳೆ ನಡೆದ ಘಟನೆಯೊಂದನ್ನು ನಿರ್ದೇಶಕರು ಶೇರ್ ಮಾಡಿಕೊಂಡಿದ್ದಾರೆ.
ಸೀನ್ ಒಂದನ್ನು ಶೂಟ್ ಮಾಡುವ ವೇಳೆ ಯೋಗಿ ಬಾಬು ಅಚಾನಕ್ ಆಗಿ ಬೋಟ್‌ನಿಂದ ಸಮುದ್ರಕ್ಕೆ ಬಿದ್ದಿದ್ದರು. ಈ ವೇಳೆ ಯೋಗಿ ಬಾಬು ಸ್ವಿಮ್ಮಿಂಗ್ ಕಲೆಯನ್ನು ನೋಡಿ ಶಾಕ್ ಆಗಿದ್ದಾಗಿ ನಿರ್ದೇಶಕ ಚಿಂಬು ದೇವನ್ ಟೈಮ್ಸ್ ಆಫ್ ಇಂಡಿಯಾ ಜೊತೆ ಹಂಚಿಕೊಂಡಿದ್ದಾರೆ.
'ಬೋಟ್' ಸಿನಿಮಾದ ವಿಶೇಷವೆಂದರೆ ಇಡೀ ಸಿನಿಮಾವನ್ನು ಸಮುದ್ರದಲ್ಲಿಯೇ ಶೂಟ್ ಮಾಡಲಾಗಿದೆ. ಯೋಗಿ ಬಾಬು, ಗೌರಿ ಜಿ ಕಿಶನ್ ಸೇರಿದಂತೆ ದೊಡ್ಡ ತಾರಾ ಬಳಗವೇ 'ಬೋಟ್' ಸಿನಿಮಾದಲ್ಲಿದೆ. ಈ ಸಿನಿಮಾಗೆ ಘಿಬ್ರಾನ್ ಟ್ಯೂನ್ ಹಾಕಿದ್ದಾರೆ. ಎಲ್ಲವೂ ಸಮಯಕ್ಕೆ ತಕ್ಕಂತೆ ನಡೆದರೆ 'ಬೋಟ್' ಸಿನಿಮಾ ಫೆಬ್ರವರಿಯಲ್ಲಿ ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ.


Click it and Unblock the Notifications











