ನಾವಿಬ್ಬರು ಇನ್ಮುಂದೆ ಒಟ್ಟಿಗೆ ನಟಿಸಲ್ಲ ಎಂದು ಕಮಲ್-ರಜನಿ ಘೋಷಣೆ ಮಾಡಿದ್ದೇಕೆ?
ಸೂಪರ್ ಸ್ಟಾರ್ ರಜನಿಕಾಂತ್.. ಉಳಗನಾಯಗನ್ ಕಮಲ್ ಹಾಸನ್.. ಇಬ್ಬರೂ ಒಬ್ಬರಿಗಿಂತ ಒಬ್ಬರು ಅದ್ಭುತ ಕಲಾವಿದರು. ಇಬ್ಬರಿಗೂ ದೊಡ್ಡ ಅಭಿಮಾನಿ ಬಳಗವಿದೆ. ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಹೆಚ್ಚು ಕಮ್ಮಿ ಇಬ್ಬರೂ ಒಟ್ಟೊಟ್ಟಿಗೆ ಚಿತ್ರರಂಗದಲ್ಲಿ ಬೆಳೆದು ಬಂದವರು.
ಬಾಲನಟನಾಗಿಯೇ ಕಮಲ್ ಹಾಸನ್ ಚಿತ್ರರಂಗ ಪ್ರವೇಶಿಸಿದರು. ರಜನಿಗಿಂತ ಚಿತ್ರರಂಗದಲ್ಲಿ ಚಿತ್ರರಂಗದಲ್ಲಿ ಸೀನಿಯರ್. ಆದರೆ 'ಅಪೂರ್ವ ರಾಗಂಗಳ್' ರಜನಿಕಾಂತ್ ಕೂಡ ನಟಿಸಿದ್ದರು. ಇವರಿಬ್ಬರು ಒಟ್ಟಿಗೆ ನಟಿಸಿದ್ದ ಸಿನಿಮಾ ಅದು. ಬಳಿಕ ಒಂದೆರಡು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದರು. ಆದರೆ ಒಮ್ಮೆ ಇದ್ದಕ್ಕಿದಂತೆ ಸುದ್ದಿಗೋಷ್ಠಿ ನಡೆಸಿ ನಾವಿಬ್ಬರು ಇನ್ನುಮುಂದೆ ಒಟ್ಟಿಗೆ ನಟಿಸುವುದಿಲ್ಲ ಎಂದು ಘೋಷಣೆ ಮಾಡಿದ್ದರು. ಅದಕ್ಕೆ ಕಾರಣ ಏನು ಎನ್ನುವುದನ್ನು ಕಮಲ್ ಹಾಸನ್ ತೆಲುಗಿನ 'ABN' ವಾಹಿನಿ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದರು.

ಕಮಲ್ ಹಾಸನ್ ಅದ್ಭುತ ನಟ. ಕ್ರೇಜ್ ವಿಚಾರದಲ್ಲಿ ತಲೈವಾಗಿಂತ ಹಿಂದೆ ಉಳಿದಿರಬಹುದು. ಆದರೆ ನಟನೆಯಲ್ಲಿ ಬಹಳ ಮುಂದಿದ್ದಾರೆ. ತಮ್ಮ ಅದ್ಭುತ ನಟನೆಯಿಂದ ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿಗಳು ಸೇರಿದಂತೆ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ರಜನಿಕಾಂತ್ ಅದ್ಭುತ ನಟ ಅಲ್ಲದೇ ಇದ್ದರೂ ತಮ್ಮ ಸ್ಟೈಲ್, ವಿಭಿನ್ನ ಮ್ಯಾನರಿಸಂನಿಂದ ಮೋಡಿ ಮಾಡುತ್ತಾರೆ. ಸಕ್ಸಸ್ ರೇಟ್ ವಿಚಾರದಲ್ಲಿ ರಜನಿಕಾಂತ್ ಸಿನಿಮಾಗಳು ಎತ್ತರದಲ್ಲಿ ನಿಲ್ಲುತ್ತದೆ.
ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್, ಸಂಭಾವನೆ ಎಲ್ಲದರಲ್ಲೂ ಸೂಪರ್ ಸ್ಟಾರ್ ಕೈ ಮೇಲಾಗಿದೆ. ಅದೆಲ್ಲಾ ಏನೇ ಇದ್ದರೂ ರಜನಿಕಾಂತ್ ಹಾಗೂ ಕಮಲ್ ಹಾಸನ್ ಇಬ್ಬರೂ ಒಟ್ಟಿಗೆ ನಟಿಸಬೇಕು ಎನ್ನುವುದು ಅಭಿಮಾನಿಗಳ ಆಸೆ. ಆದರೆ ಅದು ಈಡೇರುತ್ತಲೇ ಇಲ್ಲ. ಅಂದಹಾಗೆ ರಜನಿಕಾಂತ್ ಹಾಗೂ ಕಮಲ್ ಹಾಸನ್‌ಗಾಗಿಯೇ ಶಂಕರ್ 'ರೋಬೊ- 2' ಕಥೆ ಮಾಡಿದ್ದರು. ಚಿತ್ರದ ಪಕ್ಷಿರಾಜನ್ ಪಾತ್ರವನ್ನು ಕಮಲ್ ಮಾಡಬೇಕಿತ್ತು. ಅವರು ಒಪ್ಪದಿದ್ದಾಗ ಅಕ್ಷಯ್ ಕುಮಾರ್ ಮಾಡುವಂತಾಗಿತ್ತು.

ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ 20 ಸಿನಿಮಾಗಳಲ್ಲಿ ರಜನಿಕಾಂತ್ ಹಾಗೂ ಕಮಲ್ ಹಾಸನ್ ನಟಿಸಿದ್ದರು. ಬಳಿಕ ಇದ್ದಕ್ಕಿದಂತೆ ದೂರಾಗಿಬಿಟ್ಟರು. ಇದೇ ಕಾರಣಕ್ಕೆ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಿದೆ ಎನ್ನುವ ಗುಸುಗುಸು ಕೂಡ ಕೇಳಿ ಬಂದಿತ್ತು. ಆದರೆ ಇಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಭೇಟಿಯಾದಾಗ ಮಾತನಾಡುತ್ತಾರೆ.
ಅಷ್ಟಕ್ಕೂ ರಜನಿಕಾಂತ್ ಹಾಗೂ ಕಮಲ್ ಹಾಸನ್ ದಿಢೀರನೆ ಒಟ್ಟಿಗೆ ನಟಿಸಲ್ಲ ಎಂದು ಹೇಳಲು ಕಾರಣವಿದೆ. ಇಬ್ಬರು ಸೇರಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಅಂದು ಘೋಷಣೆ ಮಾಡಿದ್ದರು. ಅದಕ್ಕೆ ಕಾರಣ ಸಂಭಾವನೆ. ಇಬ್ಬರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡಲು ನೆಪದಲ್ಲಿ ಕಮ್ಮಿ ಸಂಭಾವನೆ ಕೊಟ್ಟು ಸಿನಿಮಾ ಮಾಡಿಸುವ ಪ್ರಯತ್ನವನ್ನು ಮಾಡುತ್ತಾರೆ. ಅದೇ ಕಾರಣಕ್ಕೆ ಆ ರೀತಿ ಆಗುವುದು ಬೇಡ ಎಂದು ಈ ನಿರ್ಧಾರಕ್ಕೆ ಬಂದಿದ್ದಾಗಿ ಕಮಲ್ ಹಾಸನ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
"ಆಗ ನನ್ನ ಸಂಭಾವನೆ 2.50 ಲಕ್ಷ ರೂ. ಇತ್ತು. ಒಬ್ಬ ನಿರ್ಮಾಕಪಕರು ಬಂದು ಒಂದೊಳ್ಳೆ ಕಥೆಯಿದೆ. ನೀವು ಹಾಗೂ ರಜನಿಕಾಂತ್ ಒಟ್ಟಿಗೆ ನಟಿಸಬೇಕು. ನಿಮಗೆ 1.75 ಲಕ್ಷ ರೂ. ಸಂಭಾವನೆ ಕೊಡುತ್ತೇನೆ ಎಂದು ಒಪ್ಪಿಸಿದರು. ರಜನಿಕಾಂತ್ ಜೊತೆ ಸಿನಿಮಾ, ಒಳ್ಳೆಕಥೆ ಎನ್ನುತ್ತಿದ್ದಾರೆ ಸರಿ ಎಂದು ಒಪ್ಪಿ ನಟಿಸಿದೆ. ಬಳಿಕ ರಜನಿಕಾಂತ್ ಬಳಿ ನಿನಗೆ ಎಷ್ಟು ಸಂಭಾವನೆ ಕೊಟ್ರು ಎಂದು ಕೇಳಿದೆ. 1 ಲಕ್ಷ ರೂ. ಎಂದಿದ್ರು. ಅದನ್ನು ಕೇಳಿ ಅಚ್ಚರಿಯಾಗಿತ್ತು. ಅಂದರೆ ನಿರ್ಮಾಪಕರು 25 ಲಕ್ಷ ರೂ. ಹೆಚ್ಚು ಕೊಟ್ಟು ನಮ್ಮಿಬ್ಬರನ್ನು ಚಿತ್ರಕ್ಕೆ ಬಳಸಿಕೊಂಡಿದ್ದರು" ಎಂದ ಕಮಲ್ ಹಾಸನ್ ಆ ಘಟನೆ ನೆನಪಿಸಿಕೊಂಡಿದ್ದರು.
"ನಿರ್ಮಾಪಕರು ನಿಜಕ್ಕೂ ಚಾಲಾಕಿ. ಇಬ್ಬರ ಸಿನಿಮಾ ಎಂದು ಹೇಳಿ ಇಬ್ಬರನ್ನು ಕಡಿಮೆ ಸಂಭಾವನೆಗೆ ಒಪ್ಪಿಸಿದರೆ ಕಷ್ಟ. ಅದೇ ಕಾರಣಕ್ಕೆ ಇನ್ನು ಮುಂದೆ ಒಟ್ಟಿಗೆ ನಟಿಸೋದು ಬೇಡ ಎಂದು ಇಬ್ಬರೂ ನಿರ್ಧರಿಸಿದ್ದೆವು. ನೀನು ಚಿತ್ರದ ನಾಯಕನಾಗಿ ಸಂಪೂರ್ಣ ಸಂಭಾವನೆ ಪಡೆಯುಬೇಕು ಎಂದು ರಜನಿಕಾಂತ್‌ಗೆ ಹೇಳಿದೆ. ಬಳಿಕ ಸುದ್ದಿಗೋಷ್ಠ ಸುದ್ದಿಗೋಷ್ಠಿ ಕರೆದು ಈ ಬಗ್ಗೆ ಘೋಷಣೆ ಮಾಡಿಬಿಟ್ಟೆವು. ಆ ಅನುಭವದಿಂದ ಇನ್ನು ಮುಂದೆ ನಟಿಸಬಾರದು ಎಂದು ತೀರ್ಮಾನಿಸಿಬಿಟ್ಟೆವು" ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.
"ನಾವಿಬ್ಬರು ಇನ್ನು ಮುಂದೆ ಒಟ್ಟಿಗೆ ನಟಿಸುವುದಿಲ್ಲ ಎಂದು ಘೋಷಿಸಿದ ಬಳಿಕ ಇಬ್ಬರಿಗೂ ತಲಾ 3 ಲಕ್ಷ ರೂ. ಸಂಭಾವನೆ ಕೊಡಲು ನಿರ್ಮಾಪಕರು ಮುಂದೆ ಬಂದರು. ನಾನು ಸಿನಿಮಾ ನಿರ್ದೇಶಿಸಿ ನಿರ್ಮಿಸಿದರೆ, ಅಥವಾ ಅವರು ಸಿನಿಮಾ ನಿರ್ಮಾಣ ಮಾಡಿದರೆ ಇಬ್ಬರು ಒಟ್ಟಿಗೆ ನಟಿಸುವ ಸಾಧ್ಯತೆಯಿದೆ. ಇಲ್ಲದಿದ್ದರೆ ಸಾಧ್ಯವಿಲ್ಲ" ಎಂದು ಕಮಲ್ ಹಾಸನ್ ಇದೇ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದರು.
ನಟರು ಯಾವುದಾದರೂ ಒಂದು ಪಾತ್ರದಲ್ಲಿ ನಟಿಸಿ ಗೆದ್ದರೆ ಅಂತಹ ಪಾತ್ರಗಳೇ ಹೆಚ್ಚು ಬರುತ್ತವೆ. ಅದೇ ತರಹದ ಕಥೆಗಳನ್ನು, ಪಾತ್ರಗಳನ್ನು ಡಿಸೈನ್ ಮಾಡುತ್ತಾರೆ. 'ರೋಬೊ- 2' ಚಿತ್ರದಲ್ಲಿ ವಿಲನ್ ಆಗಿ ನಟಿಸಬೇಕು ಎಂದಾಗಲೂ ಅಷ್ಟು ಬೇಗ ವಿಲನ್ ಆಗಿ ನಟಿಸುವುದು ಬೇಡ ಎನ್ನುವ ಕಾರಣಕ್ಕೆ ಪಕ್ಷಿರಾಜನ್ ಪಾತ್ರವನ್ನು ಕಮಲ್ ಹಾಸನ್ ನಿರಾಕರಿಸಿದ್ದರು. ಈ ಬಗ್ಗೆ ಸ್ವತಃ ನಿರ್ದೇಶಕ ಶಂಕರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
'ವೆಟ್ಟೆಯಾನ್' ಸಿನಿಮಾ ಚಿತ್ರೀಕರಣದ ವೇಳೆ ಸೆಟ್‌ನಲ್ಲಿ ಕಮಲ್ ಹಾಸನ್ ಜೊತೆ ರಜನಿಕಾಂತ್ ಕಾಣಿಸಿಕೊಂಡಿದ್ದರು. ಚೆನ್ನೈ ಪ್ರಸಾದ್ ಸ್ಟುಡಿಯೋದಲ್ಲಿ ಅಂದು ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಅದೇ ಸ್ಟುಡಿಯೋದ ಮತ್ತೊಂದು ಭಾಗದಲ್ಲಿ ಕಮಲ್ ಹಾಸನ್ ನಟನೆಯ 'ಇಂಡಿಯನ್-2' ಸಿನಿಮಾ ಸೆರೆಹಿಡಿಯಲಾಗುತ್ತಿತ್ತು. ಸೆಟ್‌ನಲ್ಲಿ ರಜನಿಕಾಂತ್ ಇರುವುದು ಗೊತ್ತಾಗಿ ಕಮಲ್ ಹಾಸನ್ ಹೋಗಿ ಭೇಟಿ ಆಗಿದ್ದರು. ಕೆಲವೊತ್ತು ಮಾತನಾಡಿದ್ದರು. ಆ ಫೋಟೊಗಳು ವೈರಲ್ ಆಗಿತ್ತು.
ರಜನಿಕಾಂತ್ ಹಾಗೂ ಕಮಲ್ ಹಾಸನ್ ಕ್ರೇಜ್ ಅಷ್ಟಿಷ್ಟಲ್ಲ. ಇಬ್ಬರೂ ಒಟ್ಟಿಗೆ ನಟಿಸಿದರೆ ಬಾಕ್ಸಾಫೀಸ್ ಶೇಕ್ ಆಗುವುದು ಗ್ಯಾರಂಟಿ. ಆದರೆ ಇಬ್ಬರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡುವುದು ಸವಾಲಿನ ಕೆಲಸ. 35 ವರ್ಷಗಳ ಹಿಂದೆ ಅದು ನಡೆಯುತ್ತಿತ್ತು. ಆಗ ಇಬ್ಬರೂ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳುತ್ತಿದ್ದ ಸಮಯ. ಸೋಶಿಯಲ್ ಮೀಡಿಯಾ ಇರಲಿಲ್ಲ. ಎಲ್ಲಾ ಸಾಧ್ಯವಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಆ ರೀತಿ ಇಲ್ಲ.
ಮಲ್ಟಿಸ್ಟಾರರ್ ಸಿನಿಮಾಗಳನ್ನು ಮಾಡುವುದು ಫಿಲ್ಮ್ ಮೇಕರ್ಸ್‌ಗೆ ಕೂಡ ಸವಾಲಿನ ಕೆಲಸ. ಇಬ್ಬರೂ ನಟನೆಗೆ ಸಮನಾದ ಅವಕಾಶ ಇರುವ ಪಾತ್ರಗಳನ್ನು ಕಟ್ಟಿಕೊಡಬೇಕು. ಆ ರೀತಿ ಮಾಡಿದರೆ ಚಿತ್ರದಲ್ಲಿ ಮಜಾ ಇರುವುದಿಲ್ಲ. ಸಾಧ್ಯವಾಗದಿದ್ದರೆ ಅಭಿಮಾನಿಗಳು ಒಪ್ಪುವುದಿಲ್ಲ. ಕನ್ನಡದಲ್ಲಿ ಪ್ರೇಮ್ 'ದಿ ವಿಲನ್' ಚಿತ್ರ ಮಾಡಿದ್ದಾಗ ಇದೇ ಸಮಸ್ಯೆ ಎದುರಾಗಿತ್ತು. ಸುದೀಪ್ ಹಾಗೂ ಶಿವಣ್ಣ ಇಷ್ಟಪಟ್ಟು ನಟಿಸಿದರೂ ಶಿವಣ್ಣನ ಅಭಿಮಾನಿಗಳು ಒಪ್ಪಿಕೊಳ್ಳಲಿಲ್ಲ. ತಮ್ಮ ನೆಚ್ಚಿನ ನಟನಿಗೆ ಸರಿಯಾದ ಪಾತ್ರ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ರಾಜಮೌಳಿ ನಿರ್ದೇಶನದ 'RRR' ಚಿತ್ರದಲ್ಲಿ ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ಅಭಿಮಾನಿಗಳ ನಡುವೆ ಇದೇ ವಿಚಾರಕ್ಕೆ ಕಿರಿಕ್ ಆಗಿತ್ತು. ಚಿತ್ರದಲ್ಲಿ ಹೀರೊ ಯಾರು? ಸೈಡ್ ರೋಲ್ ಯಾರದ್ದು? ಎಂದು ಇವತ್ತಿಗೂ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಕೆಸರೆರಚಾಟ ನಡೆಸುತ್ತಾರೆ.


Click it and Unblock the Notifications











