ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಮಹಾಹಬ್ಬ
ತೆಲುಗಿನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ. ನ್ಯಾಷನಲ್ ಕ್ರಶ್, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣನಿಗೂ ಇದು ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಈ ಬಿಗ್ ಬಜೆಟ್ ಸಿನಿಮಾ ಬಗ್ಗೆ ಎಲ್ಲಿಲ್ಲದ ಕುತೂಹಲವಿದೆ. ಕೆಜಿಎಫ್ 2 ಗೆ ಟಕ್ಕರ್ ಕೊಡುವುದಕ್ಕೆ ಹೊಂಚು ಹಾಕಿ ಕೂತಿದ್ದ ಪುಷ್ಪ ಸಿನಿಮಾ ಮೊದಲ ಭಾಗ ಇದೇ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಕಾರಣಕ್ಕೆ ಚಿತ್ರತಂಡ ಪುಷ್ಪದ ಉಳಿದ ಭಾಗದ ಚಿತ್ರೀಕರಣವನ್ನು ಭರದಿಂದ ಚಿತ್ರೀಕರಿಸುತ್ತಿದೆ.
ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್ ಸದ್ಯ ಒಂದು ಹಾಡಿನ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹಬ್ಬವನ್ನೂ ಲೆಕ್ಕಿಸದೆ ದೊಡ್ಡ ಸೆಟ್ ಹಾಕಿ ದುಬಾರಿ ಐಟಂ ಸಾಂಗ್ ಅನ್ನು ಚಿತ್ರೀಕರಿಸಲಾಗುತ್ತಿದೆ. ಪುಷ್ಟ ಸಿನಿಮಾದ ಈ ಹಾಡಿನಲ್ಲಿ ವಿಶೇಷತೆಯೇನು? ಎಷ್ಟು ಮಂದಿ ಡ್ಯಾನ್ಸರ್ಸ್ ಹೆಜ್ಜೆ ಹಾಕುತ್ತಿದ್ದಾರೆ? ಅನ್ನುವುದನ್ನು ಮುಂದೆ ಓದಿ.
ಪುಷ್ಪ ಐಟಂ ಸಾಂಗ್‌ಗೆ 1000 ಮಂದಿ ಡ್ಯಾನ್ಸರ್ಸ್
ಅಲ್ಲು ಅರ್ಜುನ್ ಟಾಲಿವುಡ್‌ನ ಐಕಾನ್ ಸ್ಟಾರ್. ಅಲ್ಲು ಸ್ಟೈಲ್‌ಗೆ, ಹಾಕುವ ಹೆಜ್ಜೆಗೆ ಫಿದಾ ಆಗದವರೇ ಇಲ್ಲ. ಅಲ್ಲು ಸ್ಟೆಪ್ಸ್ ಕಂಡ ಬಾಲಿವುಡ್ ಮಂದಿ ಹೊಗಳಿ ಅಟ್ಟಕ್ಕೇರಿಸಿದ್ದೂ ಇದೆ. ಈ ಕಾರಣಕ್ಕೆ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಮುಂದಾಗಿದ್ದರು. ಅಲ್ಲು ಜೊತೆ ಟಾಲಿವುಡ್ ಸ್ಟಾರ್ ನಿರ್ದೇಶಕ ಸುಕುಮಾರನ್ ಸೇರಿದ್ದು ಪುಷ್ಪ ಸಿನಿಮಾಗೆ ಆನೆ ಬಲ ಬಂದಂತಾಗಿತ್ತು. ಇನ್ನೇನು ಪಷ್ಪ ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಬಾಕಿಯಿದೆ ಅನ್ನುವಾಗಲೇ ದುಬಾರಿ ಐಟಂ ಸಾಂಗ್ ಅನ್ನು ಚಿತ್ರೀಕರಿಸುತ್ತಿದೆ. ಈ ಹಾಡು ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಹಬ್ಬ ಅಂತಿದೆ ಚಿತ್ರತಂಡ.

ಪುಷ್ಪ ಸಿನಿಮಾದಲ್ಲಿ ಒಂದು ದುಬಾರಿ ಐಟಂ ಸಾಂಗ್ ಇದೆ. ಈ ಹಾಡಿನ ಚಿತ್ರೀಕರಣ ಈಗಾಗಲೇ ಶುರುವಾಗಿದ್ದು, ಇದೊಂದು ಹಾಡಿಗಾಗಿ ಸುಮಾರು 1000 ಮಂದಿ ಹೆಜ್ಜೆ ಹಾಕಲಿದ್ದಾರೆ. ಡ್ಯಾನ್ಸಿಂಗ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಈ ಸಾವಿರ ಮಂದಿ ಕುಣಿದರೆ ನೋಡುಗನ ಕಣ್ಣುಗಳು ಹಬ್ಬ ಆಚರಿಸುವುದರಲ್ಲಿ ಅನುಮಾನವೇ ಇಲ್ಲ. ಇದು ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್ ಇಬ್ಬರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ನಿರ್ದೇಶಕ ಸುಕುಮಾರ್ ದುಬಾರಿ ಹಾಡನ್ನು ಚಿತ್ರೀಕರಿಸುತ್ತಿದ್ದಾರೆ.

ಇಶಾ ಗುಪ್ತಾ, ನುರಾ ಫತೇಹಿ ಇಬ್ಬರಲ್ಲಿ ಹೆಜ್ಜೆ ಹಾಕುವುದು ಯಾರು?
ಪುಷ್ಪ ಸಿನಿಮಾದ ಈ ದುಬಾರಿ ಐಟಂ ಸಾಂಗಿನಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಾರಾ ಅನ್ನುವ ರಹಸ್ಯವನ್ನು ಚಿತ್ರತಂಡ ಹೊರ ಹಾಕಿಲ್ಲ. ಆದರೆ ಕೆಲವು ದಿನಗಳಿಂದ ಈ ಐಟಂ ಸಾಂಗಿನಲ್ಲಿ ಬಾಲಿವುಡ್‌ನ ಹಾಟ್ ಬೆಡಗಿಯರು ಇಶಾ ಗುಪ್ತಾ, ನುರಾ ಫತೇಹಿ ಹೆಜ್ಜೆ ಹಾಕುತ್ತಾರೆ ಅನ್ನು ಸುದ್ದಿ ಹರಿದಾಡಿತ್ತು. ಆದರೆ, ಇದೂವರೆಗೂ ನಿರ್ದೇಶಕ ಸುಕುಮಾರ್ ಈ ಐಟಂ ಸಾಂಗಿನಲ್ಲಿ ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕುವ ಬೆಡಗಿ ಯಾರು ಅನ್ನು ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ, ಚಿತ್ರತಂಡ ಮಾತ್ರ ಈ ಅದ್ಧೂರಿ ಹಾಡು ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಅಭಿಮಾನಿಗಳಿಗೆ ಹಬ್ಬ ಅಂತಿದೆ.
ಡಿಸೆಂಬರ್ 17ಕ್ಕೆ ಪುಷ್ಪ ಗ್ರ್ಯಾಂಡ್ ರಿಲೀಸ್
ಆರಂಭದಲ್ಲಿ ಪುಷ್ಪ ಸಿನಿಮಾ ಕ್ರಿಸ್‌ಮಸ್ ಹಬ್ಬದಂದು ರಿಲೀಸ್ ಆಗುತ್ತೆ ಅನ್ನುವ ಮಾತು ಕೇಳಿಬಂದಿತ್ತು. ಆದರೀಗ, ಒಂದು ವಾರ ಮುನ್ನವೇ ತೆರೆಗಪ್ಪಳಿಸಲಿದೆ. ಡಿಸೆಂಬರ್ 17ರಂದು ಪುಷ್ಪ ಸಿನಿಮಾ ವಿಶ್ವದ ಮೂಲೆ ಮೂಲೆಯಲ್ಲೂ ಪ್ರದರ್ಶನ ಕಾಣಲಿದೆ. ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಪುಷ್ಪ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಹೀಗಾಗಿ 1000 ಮಂದಿ ಡ್ಯಾನ್ಸರ್ಸ್ ಜೊತೆ ಐಟಂ ಸಾಂಗ್ ಶೂಟ್ ಮಾಡಲಾಗುತ್ತಿದ್ದು, ಅಲ್ಲುಅರ್ಜುನ್, ರಶ್ಮಿಕಾ ಅಭಿಮಾನಿಗಳಿಗೆ ಬೆಳ್ಳಿತೆರೆಮೇಲೆ ವಿಜ್ಯೂವಲ್ ಟ್ರೀಟ್ ಕೊಡಲು ಚಿತ್ರತಂಡ ಸಜ್ಜಾಗಿದೆ.


Click it and Unblock the Notifications











