ಉತ್ತರ ದಕ್ಷಿಣ ಸಂಗಮ: ಪ್ರಶಾಂತ್ ನೀಲ್ ಕತ್ತಲು ಬೆಳಕಿನ ಆಟದಲ್ಲಿ ಅನಿಲ್ ಕಪೂರ್
ಮಾರುಕಟ್ಟೆಯ ವ್ಯಾಪ್ತಿಯನ್ನು ಮೀರಿ ಹಣ ಮತ್ತು ವರ್ಷಗಳಿಕೆ ಲೆಕ್ಕ ಇಡದೇ ಚಿತ್ರ ಮಾಡಿ ಗೆದ್ದವರು ಪ್ರಶಾಂತ್ ನೀಲ್. ಉಗ್ರಂ ಎಂಬ ಒಂದೇ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡಿದ ಪ್ರಶಾಂತ್ ನೀಲ್ ಕೆ.ಜಿ.ಎಫ್ ಚಿತ್ರದ ಮೂಲಕ ಭಾರತದ ಸ್ಟಾರ್ ಡೈರೆಕ್ಟರ್ ಲಿಸ್ಟ್‌ಗೆ ಸೇರಿದರು. ಇವರ ಪ್ರಭೆ ಹೇಗಿದೆ ಅಂದರೆ ಸೌತ್ ಇಂಡಿಯಾದಲ್ಲಿ ರಾಜಮೌಳಿ ಅವರನ್ನು ಹೊರತು ಪಡಿಸಿದರೆ...
ಯಾರಾದರೂ ಶ್ರೇಷ್ಠ ನಿರ್ದೇಶಕ ಇದ್ದರೆ ಅದು ಪ್ರಶಾಂತ್ ನೀಲ್ ಮಾತ್ರ ಅನ್ನುವ ಮಾತುಗಳು ಕೇಳಿ ಬರ್ತಿವೆ. ಇದಕ್ಕೆ ಪೂರಕವಾಗಿ ಕನ್ನಡ ಚಿತ್ರರಂಗದಿಂದ ಕಣ್ಮರೆಯಾಗಿರುವ ಪ್ರಶಾಂತ್ ನೀಲ್ ತೆಲುಗು ಚಿತ್ರರಂಗದಲ್ಲಿಯೇ ಬಿಡಾರ ಹೂಡಿದ್ದಾರೆ. ಅಲ್ಲಿನ ಸ್ಟಾರ್‌ಗಳಿಗೆ ಚಿತ್ರವನ್ನು ಮಾಡುತ್ತಿದ್ದಾರೆ. ಆ ಪೈಕಿ ಜ್ಯೂನಿಯರ್ ಎನ್.ಟಿ.ಆರ್ ಚಿತ್ರ ಕೂಡ ಒಂದು. ಆ ಚಿತ್ರದ ಹೆಸರು ''ಡ್ರ್ಯಾಗನ್''. ಆರಂಭದಿಂದಲೂ ಸದ್ದು ಗದ್ದಲ ಮಾಡುತ್ತಾ ಬಂದ ಈ ಚಿತ್ರಕ್ಕೆ ಈಗ ಬಾಲಿವುಡ್‌ನ ಚಿರಯುವಕ ಅನಿಲ್ ಕಪೂರ್ ಅವರ ಪ್ರವೇಶವಾಗಿದೆ.

ಹೌದು, ಅಸಲಿಗೆ ಡ್ರ್ಯಾಗನ್ ಚಿತ್ರದಲ್ಲಿ ಅನಿಲ್ ಕಪೂರ್ ಇದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಇನ್ನು ''ಅನಿಮಲ್'' ಚಿತ್ರದ ಪ್ರಚಾರದ ಸಮಯದಲ್ಲಿ ಅನಿಲ್ ಕಪೂರ್ ತೆಲುಗು ಚಿತ್ರರಂಗದ ಕುರಿತು ಮಾತನಾಡಿದ್ದರು.
ಯಾಕೆಂದರೆ ''ಪಲ್ಲವಿ ಅನುಪಲ್ಲವಿ'' ಚಿತ್ರಕ್ಕೂ ಮುನ್ನ ಅನಿಲ್ ಕಪೂರ್ ತೆಲುಗಿನಲ್ಲಿ 46 ವರ್ಷಗಳ ಹಿಂದೆ''ವಂಶ ವೃಕ್ಷ'' ಎಂಬ ಚಿತ್ರವನ್ನು ಮಾಡಿದ್ದರು. ಹಾಗೇ ನೋಡಿದರೆ ನಾಯಕನಾಗಿ ಇದು ಇವರ ಮೊದಲ ಚಿತ್ರ. ಈ ಹಿನ್ನೆಲೆ ನಾನು ಇಂದು ಈ ಹಂತಕ್ಕೆ ತಲುಪಲು ನನ್ನ ತೆಲುಗು ಚಿತ್ರ ಕಾರಣ ಎಂದು ಹೇಳಿದ್ದ ಅನಿಲ್ ಕಪೂರ್ ''ವಂಶ ವೃಕ್ಷ''ದ ಪಾತ್ರಕ್ಕಾಗಿ ನಾನು ದಿನ ಬೆಳಗ್ಗೆ 4ಕ್ಕೆ ಎದ್ದೇಳುತ್ತಿದ್ದೇ ಎಂದು ಹೇಳಿದ್ದರು. ಆ ಚಿತ್ರ ನನಗೆ ಶಿಸ್ತು ಕಲಿಸಿತ್ತು ಎಂದು ಹೇಳಿದ್ದರು. ಅನಿಲ್ ಕಪೂರ್ ಅವರ ಈ ಮಾತುಗಳನ್ನು ಕೇಳಿ ಅಂದೇ ಅನಿಲ್ ಕಪೂರ್ ತೆಲುಗು ಚಿತ್ರರಂಗಕ್ಕೆ ಮರಳಿ ಬರುತ್ತಾರೆ ಎಂಬ ಮಾತುಗಳಿಗೆ ಇನ್ನಷ್ಟು ಬಲ ಬಂದಿತ್ತು. ಆದರೆ. ಈ ಸುದ್ದಿಯ ಮೇಲೆ ಅಧಿಕೃತವಾದ ಮುದ್ರೆ ಬಿತ್ತಿರಲಿಲ್ಲ.
ಆದರೆ ಈಗ ಖುದ್ದು ಅನಿಲ್ ಕಪೂರ್ ಅವರೇ ಈ ಸುದ್ದಿಯನ್ನು ಖಚಿತ ಪಡಿಸಿದ್ದಾರೆ.ತಮ್ಮಇನ್‌ಸ್ಟಾಗ್ರಾಮ್‌ನಲ್ಲಿ ''ಡ್ರ್ಯಾಗನ್'' ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ. IMDb ಯ 2026ರ ಅತೀ ಹೆಚ್ಚು ನಿರೀಕ್ಷಿತ ಭಾರತೀಯ ಚಿತ್ರಗಳ ಪಟ್ಟಿಯಲ್ಲಿದ್ದ 'ಡ್ರ್ಯಾಗನ್' ಪೋಸ್ಟರ್‌ನ ಅನಿಲ್ ಕಪೂರ್ ಹಂಚಿಕೊಂಡಿದ್ದು ತಾರಾಬಳಗದಲ್ಲಿ ಇವರ ಹೆಸರು ಕೂಡ ಇದೆ. ಈ ಮೂಲಕ 46 ವರ್ಷಗಳ ನಂತರ ಅನಿಲ್ ಕಪೂರ್ ಮತ್ತೆ ತೆಲುಗು ಚಿತ್ರರಂಗಕ್ಕೆ ಬಂದಂತೆ ಆಗಿದೆ.
ಇನ್ನೂ ರುಕ್ಮಿಣಿ ವಸಂತ್ ಕೂಡ ''ಡ್ರ್ಯಾಗನ್'' ಚಿತ್ರದಲ್ಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ರುಕ್ಮಿಣಿಗೆ ಈ ಪ್ರಶ್ನೆ ಎದುರಾದಾಗೆಲ್ಲಾ ನಯವಾಗಿ ನುಣುಚಿಕೊಳ್ಳುತ್ತಿದ್ದರು. ಆದರೆ. ಕೆಲ ದಿನಗಳ ಹಿಂದೆ ''ಮದರಾಸಿ'' ಚಿತ್ರದ ವೇದಿಕೆಯಲ್ಲಿ ತೆಲುಗು ನಿರ್ಮಾಪಕ ಎನ್. ವಿ ಪ್ರಸಾದ್ ಬಾಯ್ತಪ್ಪಿ ಈ ಸತ್ಯವನ್ನು ಹೇಳಿದ್ದರು. ''ಡ್ರ್ಯಾಗನ್'' ಚಿತ್ರದಲ್ಲಿ ರುಕ್ಮಿಣಿ ಇದ್ದಾರೆ ಎಂದು ಹೇಳಿದ್ದರು. ಸದ್ಯ ಅನಿಲ್ ಕಪೂರ್ ಹಂಚಿಕೊಂಡ ಪೋಸ್ಟರ್ ಕೂಡ ಈ ಮಾತನ್ನು ಧೃಡಿಕರಿಸುತ್ತಿದೆ.

ಇನ್ನುಳಿದಂತೆ ಪ್ರಶಾಂತ್ ನೀಲ್ ಸಿನಿಮಾ ಅಂದರೆ ಆ ಸಿನಿಮಾ ಎರಡು ಭಾಗಗಳಲ್ಲಿ ಬರಲೇಬೇಕು ಎಂಬ ಅಲಿಖಿತ ನಿಯಮ ಇದೆ. ಈ ಚಿತ್ರಕ್ಕೂ ಕೂಡ ಈ ನಿಯಮ ಅನ್ವಯವಾಗುವ ಸಾಧ್ಯತೆ ಇದೆ. ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಂಡವಾಳ ಹೂಡಿದೆ.ಈ ವರ್ಷದ ಜೂನ್ 25ಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಬಿಡುಗಡೆಯ ಈ ದಿನದಲ್ಲಿ ಬದಲಾವಣೆಯಾಗುವ ಸಾಧ್ಯತೆಯೂ ಇದೆ.


Click it and Unblock the Notifications











