"ನಾಟು ನಾಟು.." ಆಸ್ಕರ್ ಗೆಲ್ಲುತ್ತಿದ್ದಂತೆ ಉಲ್ಟಾ ಹೊಡೆದ ತಮ್ಮಾರೆಡ್ಡಿ: ಕೀರವಾಣಿ ನಮ್ಮ ಹೆಮ್ಮೆ ಎಂದ ನಿರ್ಮಾಪಕ
ಬಹಳ ಕುತೂಹಲದಿಂದ ಕಾದು ಕೂತಿದ್ದ ಘಳಿಗೆ ಬಂದೇ ಬಿಟ್ಟಿದೆ. RRR ಸಿನಿಮಾದ "ನಾಟು ನಾಟು.." ಹಾಡು ಆಸ್ಕರ್ ಗೆದ್ದು ಬಂದಿದೆ. ಅಮೆರಿಕದ ಲಾಸ್ ಏಂಜಲೀಸ್‌ನ ಡಾಲ್ಭಿ ಥಿಯೇಟರ್‌ನಲ್ಲಿ "ನಾಟು ನಾಟು.."ಗೆ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ವಿಶ್ವದ ಮೂಲೆ ಮೂಲೆಯಲ್ಲಿರೋ ಭಾರತೀಯರು ಹೆಮ್ಮೆ ಪಟ್ಟಿದ್ದರು.
ಆಸ್ಕರ್ ಅನೌನ್ಸ್ ಆಗುವುದಕ್ಕೂ ಮುನ್ನ RRR ಇಡೀ ತಂಡ ಲಾಸ್ ಏಂಜಲೀಸ್‌ನಲ್ಲಿ ಪ್ರಚಾರದಲ್ಲಿ ಭಾಗಿಯಾಗಿತ್ತು. ಎಲ್ಲೆಲ್ಲಿ ಈ ಹಾಡಿನ ಬಗ್ಗೆ ಪ್ರಚಾರ ಮಾಡುವುದಕ್ಕೆ ಸಾಧ್ಯವಾಗಿತ್ತೋ ಅಲ್ಲೆಲ್ಲ ಪ್ರಚಾರ ಮಾಡಿತ್ತು. ಇದಕ್ಕೆ ತೆಲುಗಿನ ವಿವಾದಾತ್ಮಕ ನಿರ್ಮಾಪಕ ತಮ್ಮಾರೆಡ್ಡಿ ರಾಜಮೌಳಿ ತಂಡದ ಮೇಲೆ ಗಂಭೀರ ಆರೋಪ ಮಾಡಿದ್ದರು. ಅದೇ ನಿರ್ಮಾಪಕ "ನಾಟು ನಾಟು.." ಆಸ್ಕರ್ ಗೆಲ್ಲುತ್ತಿದ್ದಂತೆ ಉಲ್ಟಾ ಹೊಡೆದಿದ್ದಾರೆ.

"ನಾಟು ನಾಟು" ಹಾಡಿಗೆ ಆಸ್ಕರ್.. ಉಲ್ಟಾ ಹೊಡೆದ ತಮ್ಮಾರೆಡ್ಡಿ
RRR ತಂಡ ಆಸ್ಕರ್ ಗೆಲ್ಲುವ ಮುನ್ಸೂಚನೆ ಇತ್ತು. ಈ ಕಾರಣಕ್ಕಾಗಿಯೇ ಸಿನಿಮಾ ಬಗ್ಗೆ ತಮ್ಮಿಂದ ಎಷ್ಟು ಪ್ರಚಾರ ಮಾಡಲು ಸಾಧ್ಯವಾಗುತ್ತೋ ಅಷ್ಟು ಪ್ರಯತ್ನ ಪಟ್ಟಿದ್ದರು. ಆಸ್ಕರ್ ಪ್ರಶಸ್ತಿ ಘೋಷಣೆ ಇನ್ನೇನು ಕೆಲವೇ ದಿನಗಳು ಉಳಿದಿದೆ ಅನ್ನುವಾಗಲೇ ಮತ್ತೊಮ್ಮೆ ಅಮೆರಿಕ ಹಲವೆಡೆ RRR ಸಿನಿಮಾವನ್ನು ಮರು ಬಿಡುಗಡೆ ಮಾಡಿದ್ದರು. ಇಷ್ಟೆಲ್ಲ ಪ್ರಯತ್ನ ನಡೆಯುತ್ತಿರುವಾಗಲೇ ತೆಲುಗು ನಿರ್ದೇಶಕ ಚಿತ್ರತಂಡದ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
"ಆಸ್ಕರ್ ಪ್ರಚಾರಕ್ಕಾಗಿ RRR ತಂಡ ಸುಮಾರು 80 ಕೋಟಿ ರೂ. ಖರ್ಚು ಮಾಡಿದ್ದರು. ಅದೇ ನಮಗೆ ಆ ಹಣ ಕೊಟ್ಟಿದ್ದರೆ, 8 ಸಿನಿಮಾಗಳನ್ನು ಮಾಡಿ ಅವರ ಮುಖಕ್ಕೆ ಎಸೆಯುತ್ತಿದ್ದೆವು" ಎಂದು ಹೇಳಿದ್ದರು. "ನಾಟು ನಾಟು" ಈಗ ಆಸ್ಕರ್ ಗೆಲ್ಲುತ್ತಿದ್ದಂತೆ ತಮ್ಮಾರೆಡ್ಡಿ ಉಲ್ಟಾ ಹೊಡೆದಿದ್ದಾರೆ. ಚಿತ್ರತಂಡಕ್ಕೆ ವಿಶ್ ಮಾಡಿದ್ದಲ್ಲದೆ, "ನಾಟು ನಾಟುಗೆ ಆಸ್ಕರ್ ಬಂದಿದ್ದು ನಮ್ಮ ಹೆಮ್ಮೆ" ಎಂದಿದ್ದಾರೆ.
"ಆಸ್ಕರ್ ಪ್ರಶಸ್ತಿ ಬಂದಿದ್ದು ನಮ್ಮ ಹೆಮ್ಮೆ"
ಇಂದು (ಮಾರ್ಚ್ 13)ರಂದು RRR ಸಿನಿಮಾದ "ನಾಟು ನಾಟು" ಹಾಡಿಗೆ ಆಸ್ಕರ್ ಪ್ರಶಸ್ತಿ ಅನೌನ್ಸ್ ಮಾಡಲಾಗಿದೆ. ಆಸ್ಕರ್ ಪ್ರಶಸ್ತಿ ಬರುತ್ತಿದ್ದಂತೆ, ನಿರ್ಮಾಪಕ ತಮ್ಮಾರೆಡ್ಡಿ ಭಾರದ್ವಾಜ್ ಯೂಟರ್ನ್ ಹೊಡೆದಿದು, ವಿಶ್ ಮಾಡಿದ್ದಾರೆ. "ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದಿರುವುದು ಹೆಮ್ಮೆಯಾಗಿದೆ. ನನಗಷ್ಟೇ ಅಲ್ಲ, ಸಿನಿಮಾವನ್ನು ಪ್ರೀತಿಸುವ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ಎನಿಸಿದೆ." ಎಂದು ತಮ್ಮಾರೆಡ್ಡಿ ಹೇಳಿದ್ದಾರೆ.

"ಕೀರವಾಣಿ ಹಾಗೂ ಚಂದ್ರಬೋಸ್ ವೀರರಿಬ್ಬರು ಜೋಡಿಯಾಗಿ ನೀಡಿದ ನಾಟು ನಾಟು ಹಾಡಿಗೆ ಆಸ್ಕರ್ ಬಂದಿರೋದು ಖುಷಿಯಾಗಿದೆ. ಅದರಲ್ಲೂ ಭಾರತದ ಸಿನಿಮಾಗೆ ಈ ಕ್ಯಾಟಗರಿಗೆ ಮೊದಲ ಪ್ರಶಸ್ತಿ ಬಂದಿರೋದು, ಅದರಲ್ಲೂ ತೆಲುಗು ಸಿನಿಮಾ ಬಂದಿರೋದು ಅದ್ಭುತ. ಈ ಅದ್ಭುತಕ್ಕೆ ನಿಜವಾಗಿಯೂ ಹೆಮ್ಮೆಯಾಗುತ್ತಿದೆ. ಕೀರವಾಣಿ, ಚಂದ್ರಬೋಸ್, RRR ತಂಡಕ್ಕೆ ನನ್ನ ಅಭಿನಂದನೆಗಳನ್ನು ಹೇಳುತ್ತಿದ್ದೇನೆ." ಎಂದು ವೀಡಿಯೊದಲ್ಲಿ ಹೇಳಿದ್ದಾರೆ.
ತಮ್ಮಾರೆಡ್ಡಿ ವಿರುದ್ಧ ಕಿಡಿಕಾರಿದ್ದ ಟಾಲಿವುಡ್
RRR ಸಿನಿಮಾ ಪ್ರಚಾರಕ್ಕೆ 80 ಕೋಟಿ ರೂ. ಖರ್ಚು ಮಾಡುತ್ತಿದೆ ಎಂದು ಆರೋಪ ಮಾಡುತ್ತಿದ್ದಂತೆ, ಟಾಲಿವುಡ್ ದಿಗ್ಗಜರು ರೊಚ್ಚಿಗೆದ್ದಿದ್ದರು. ಮೆಗಾ ಕುಟುಂಬದ ಹೀರೊ ನಾಗಬಾಬು, ನಿರ್ದೇಶಕ ಕೆ.ರಾಘವೇಂದ್ರ ರಾವ್ ಸೇರಿದಂತೆ ಹಲವು ಮಂದಿ ಕಿಡಿಕಾರಿದ್ದರು. ಆ ಬಳಿಕ ತಮ್ಮಾರೆಡ್ಡಿ ತಮ್ಮ ಹೇಳಿಕೆ ಬಗ್ಗೆ ಸಮಜಾಯಿಷಿ ನೀಡಿದ್ದರು.
ತಮ್ಮಾರೆಡ್ಡಿ ಅದೆಷ್ಟೇ ಸಮಜಾಯಿಷಿ ಕೊಟ್ಟರೂ ಸೋಶಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಳ್ಳುವುದು ಮಾತ್ರ ನಿಂತಿರಲಿಲ್ಲ. ಇದೇ ಬೆನ್ನಲ್ಲಿ ನಿರ್ಮಾಪಕ ತಮ್ಮಾರೆಡ್ಡಿ RRR ತಂಡಕ್ಕೆ ಶುಭಾಶಗಳನ್ನು ತಿಳಿಸಿದ್ದಾರೆ.


Click it and Unblock the Notifications











