ತೆಲುಗು ಸೂಪರ್ ಸ್ಟಾರ್ ಕೃಷ್ಣ ಪ್ರತಿಮೆ ಅನಾವರಣ ಮಾಡಿದ ಕಮಲ್ ಹಾಸನ್, ಮಹೇಶ್ ಬಾಬು ಪ್ರತಿಕ್ರಿಯೆ ಹೀಗಿದೆ
ಕಮಲ್ ಹಾಸನ್ ಅವರು ನವೆಂಬರ್ 10 ರಂದು ದಿವಂಗತ ತೆಲುಗು ಸೂಪರ್ ಸ್ಟಾರ್ ಕೃಷ್ಣ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ಸಮಾರಂಭದಲ್ಲಿ ವೈಎಸ್‌ಆರ್‌ಸಿಪಿ ಉಸ್ತುವಾರಿ ದೇವಿನೇನಿ ಅವಿನಾಶ್ ಅವರೊಂದಿಗೆ ಪ್ರತಿಮೆ ಅನಾವರಣ ಮಾಡಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸೂಪರ್ ಸ್ಟಾರ್ ಕೃಷ್ಣ ಪ್ರತಿಮೆ ಅನಾವರಣಗೊಳಿಸಿದ ಕಮಲ ಹಾಸನ್
ನಟ ಕಮಲ್ ಹಾಸನ್ ಪ್ರಸ್ತುತ ಆಂಧ್ರಪ್ರದೇಶದಲ್ಲಿ ತಮ್ಮ ಬಹುನಿರೀಕ್ಷಿತ ಚಿತ್ರ 'ಇಂಡಿಯನ್ 2' ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಈ ವೇಳೆ ವಿಜಯವಾಡದಲ್ಲಿ ನಡೆದ ಸುಂದರ ಸಮಾರಂಭದಲ್ಲಿ, ಉಲಗನಾಯಕನ್ ಕಮಲ್ ಹಾಸನ್ ಅವರು ತೆಲುಗು ಚಿತ್ರರಂಗದ ದಿಗ್ಗಜ ಕೃಷ್ಣ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಕಳೆದ ವರ್ಷ ನಿಧನರಾದ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಕೃಷ್ಣ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ರಾಜ್ಯದ ಪ್ರಮುಖ ವಿಷಯಗಳಲ್ಲಿ ಒಂದಾಗಿತ್ತು. ಆಂಧ್ರಪ್ರದೇಶದ ಪ್ರಮುಖ ಯುವ ಮುಖಂಡರಾದ ದೇವಿನೇನಿ ಅವಿನಾಶ್ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು.
ಕಮಲ್ ಹಾಸನ್‌ಗೆ ಧನ್ಯವಾದ ಹೇಳಿದ ಮಹೇಶ್ ಬಾಬು
ಪ್ರತಿಮೆ ಅನಾವರಣ ಸಮಾರಂಭದ ವಿಡಿಯೋ, ಫೋಟೋಗಳನ್ನು ನಟ ಕೃಷ್ಣ ಅವರ ಪುತ್ರ ಮಹೇಶ್ ಬಾಬು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕಮಲ್ ಹಾಸನ್ ಮತ್ತು ದೇವಿನೇನಿ ಅವಿನಾಶ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದು, ಸಮಾರಂಭದಲ್ಲಿ ಭಾಗಿಯಾಗಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.
"ವಿಜಯವಾಡದಲ್ಲಿ ಕೃಷ್ಣ ಅವರ ಪ್ರತಿಮೆಯ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಕ್ಕಾಗಿ ಕಮಲ್ ಹಾಸನ್ ಸರ್ ಮತ್ತು ದೇವಿನೇನಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಅವರು ಬಿಟ್ಟುಹೋದ ಪರಂಪರೆಗೆ ಗೌರವವಾಗಿ ನನ್ನ ತಂದೆ ಅವರ ಪ್ರತಿಮೆಯನ್ನು ಅನಾವರಣಗೊಳಿಸಿರುವುದು ನಿಜವಾಗಿಯೂ ಅವರಿಗೆ ಸಂದ ಗೌರವ. ಜೊತೆಗೆ, ಧನ್ಯವಾದಗಳು. ಈ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ ನನ್ನ ಎಲ್ಲಾ ಅಭಿಮಾನಿಗಳಿಗೆ ಪ್ರೀತಿಯಿಂದ ಧನ್ಯವಾದಗಳು" ಎಂದು ಮಹೇಶ್ ಬಾಬು ಬರೆದುಕೊಂಡಿದ್ದಾರೆ.

ತಮ್ಮ ತಂದೆಯ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ನಟ ಮಹೇಶ್ ಬಾಬು ಹಾಜರಾಗಿಲ್ಲ. ದುರದೃಷ್ಟವಶಾತ್, ಹೈದರಾಬಾದ್‌ನಲ್ಲಿ ಗುಂಟೂರು ಕಾರಮ್ ಸೆಟ್‌ನಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ಕಾರಣ ಮಹೇಶ್ ಬಾಬು ಹಾಜರಾಗಲು ಸಾಧ್ಯವಾಗಲಿಲ್ಲ. ಅವರ ಅನುಪಸ್ಥಿತಿಯ ಹೊರತಾಗಿಯೂ, ಕಾರ್ಯಕ್ರಮ ಸೂಪರ್ ಸ್ಟಾರ್ ಕೃಷ್ಣ ಅವರಿಗೆ ಗೌರವ ಸಲ್ಲಿಸಿದೆ.
ಕಾರ್ಯಕ್ರಮಕ್ಕೆ ತಕ್ಷಣ ಒಪ್ಪಿಕೊಂಡಿದ್ದ ಕಮಲ್ ಹಾಸನ್
ವಿಜಯವಾಡದಲ್ಲಿ ತಮ್ಮಮುಂಬರುವ ಬಹುನಿರೀಕ್ಷಿತ ಸಿನಿಮಾ ಇಂಡಿಯನ್ 2 ಚಿತ್ರೀಕರಣದ ಗಡಿಬಿಡಿಯಲ್ಲಿರುವ ನಟ ಕಮಲ್ ಹಾಸನ್, ಸಮಾರಂಭದ ಆಹ್ವಾನವನ್ನು ತಕ್ಷಣವೇ ಒಪ್ಪಿಕೊಂಡಿದ್ದರು ಎಂದು ವರದಿಯಾಗಿದೆ.ಈ ಪ್ರತಿಮೆಯನ್ನು ಮಾಡಿರುವ ನಟ ಕೃಷ್ಣ ಅವರ ಕೃಷ್ಣ ಜಿಲ್ಲೆಯ ಅಭಿಮಾನಿಗಳು ಕಮಲ್ ಹಾಸನ್ ಅವರನ್ನು ವೈಯಕ್ತಿಕವಾಗಿ ಆಹ್ವಾನಿಸಿದ್ದರು. ಬ್ಯುಸಿ ಶೆಡ್ಯೂಲ್‌ನಲ್ಲಿಯೂ ನಟ ಕಮಲ್ ಹಾಸನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅವರಿಗೆ ಕೃಷ್ಣ ಅವರ ಮೇಲಿರುವ ಗೌರವವನ್ನು ತೋರಿಸುತ್ತದೆ.
ಘಟ್ಟಮನೇನಿ ಶಿವ ರಾಮ ಕೃಷ್ಣ ಮೂರ್ತಿ ಎಂದು ಕರೆಯಲ್ಪಡುವ ನಟ ಕೃಷ್ಣ ಅವರು 350 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದು, ನಟರಾಗಿ ಮಾತ್ರವಲ್ಲದೆ ನಿರ್ದೇಶಕ ಮತ್ತು ನಿರ್ಮಾಪಕರಾಗಿಯೂ ತೆಲುಗು ಚಿತ್ರೋದ್ಯಮದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಕಳೆದ ವರ್ಷ ಹೃದಯಾಘಾತದಿಂದ ಅವರು ನಿಧನರಾದರು. ಅವರ ಅಗಲಿಕೆಗೆ ಇಡೀ ಚಿತ್ರೋದ್ಯಮವೇ ಕಂಬನಿ ಮಿಡಿದಿತ್ತು.


Click it and Unblock the Notifications










