"ಧನುಷ್ ಅಂದ್ರು, ರಾಜಕಾರಣಿ, ಉದ್ಯಮಿ ಜೊತೆ ಮದ್ವೆ ಅಂದ್ರು": 2ನೇ ವಿವಾಹದ ಬಗ್ಗೆ ಮೀನಾ ಹೇಳಿದ್ದೇನು?
ಬಹುಭಾಷಾ ನಟಿ ಮೀನಾ ಇತ್ತೀಚೆಗೆ ಚರ್ಚೆಯಲ್ಲಿರೋ ನಟಿ. ಅದರಲ್ಲೂ ಪತಿ ವಿದ್ಯಾಸಾಗರ್ ನಿಧನದ ಬಳಿಕ ನಟಿ ಮೀನಾ ಎರಡನೇ ಮದುವೆ ಬಗ್ಗೆ ವದಂತಿಗಳು ಹಬ್ಬಿದ್ದವು. ಇದ್ಯಾವುದಕ್ಕೂ ಮೀನಾ ನೇರವಾಗಿ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ಆದ್ರೀಗ ಕೊನೆಗೂ ಎರಡನೇ ಮದುವೆ ಬಗ್ಗೆ ಹಬ್ಬಿರುವ ಸುದ್ದಿಗಳ ಬಗ್ಗೆ ಮೌನ ಮುರಿದಿದ್ದಾರೆ.
ಒಂದು ಕಾಲದಲ್ಲಿ ನಟಿ ಮೀನಾ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಬ್ಯುಸಿಯಾಗಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಬಿಡುವಿಲ್ಲದೆ ನಟಿಸುತ್ತಿದ್ದರು. ಕನ್ನಡದಲ್ಲೂ ಪುಟ್ನಂಜ, ಸ್ವಾತಿ ಮುತ್ತು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬ್ಯುಸಿಯಿದ್ದ ಕಾರಣ ಹಿಂದಿಯ ಒಂದೇ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮೀನಾ ಹಲವು ಸಂಗತಿಗಳ ಬಗ್ಗೆ ಮೌನ ಮುರಿದಿದ್ದಾರೆ. "ಪತಿ ವಿದ್ಯಾಸಾಗರ್ ಹಾಗೂ ಮೀನಾ ನಡುವೆ ಜಗಳವಾಗಿದೆ. ಎರಡನೇ ಮದುವೆ ಆಗುತ್ತಿದ್ದಾರೆ" ಇಂತಹದ್ದೇ ಒಂದಿಷ್ಟು ಸಂಗತಿಗಳ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.
ಮೀನಾ ಹಾಗೂ ಪತಿ ವಿದ್ಯಾಸಾಗರ್ ನಡುವೆ ಜಗಳ ನಡೆದಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಅವರ ಪೋಷಕರು ಕರೆ ಮಾಡಿ ಇಬ್ಬರಿಗೂ ಪ್ರಶ್ನೆ ಮಾಡಿದ್ದನ್ನು ನೆನೆಪಿಸಿಕೊಂಡಿದ್ದಾರೆ. "ನಿಜವಾಗಿಯೂ ನಮ್ಮ ನಡುವೆ ಜಗಳ ನಡೆದಿರಲಿಲ್ಲ. ನಾವು ತುಂಬಾನೇ ಸಂತೋಷವಾಗಿದ್ದೇವು." ಎಂದು ಮೀನಾ ಹೇಳಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ, "ವಿದ್ಯಾಸಾಗರ್‌ಗೆ ಶ್ವಾಸಕೋಶದ ಕಸಿ ಮಾಡಿಸಬೇಕಿತ್ತು. ಅದಕ್ಕೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿದ್ದವು. ವಿದೇಶಕ್ಕೆ ಕರೆದುಕೊಂಡು ಹೋಗಲು ಯೋಚಿಸಿದ್ದೆವು. ಆದರೆ, ನಾನು ಅಲ್ಲಿಗೆ ಹೋದರೂ ಕೆಲವು ಸಮಯ ಕಾಯಲೇಬೇಕಿತ್ತು. ಅಷ್ಟರಲ್ಲೇ ಊಹಿಸಿಕೊಳ್ಳುವುದಕ್ಕೆ ಅಸಾಧ್ಯವಾದದ್ದು ನಡೆದು ಹೋಯ್ತು. ಈಗಷ್ಟೇ ನಾನು ಆ ನೋವಿನಿಂದ ಹೊರಬರುತ್ತಿದ್ದೇನೆ" ಎಂದು ನಟಿ ಮೀನಾ ಸಂದರ್ಶನದಲ್ಲಿ ಹೇಳಿದ್ದಾರೆ.
ಮೀನಾ ಪತಿ ವಿದ್ಯಾಸಾಗರ್ ನಿಧನದ ಬಳಿಕ ಎರಡನೇ ಮದುವೆ ಬಗ್ಗೆನೂ ವದಂತಿಗಳು ಹಬ್ಬಿದ್ದವು. ಕೆಲವು ಹೆಸರುಗಳು ಕೂಡ ಮಿನಾ ಜೊತೆ ತಳುಕು ಹಾಕಿಕೊಂಡಿದ್ದವು. ಈ ಬಗ್ಗೆ ನಟಿ ಮೀನಾ ಇದೇ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. "ವಿದ್ಯಾಸಾಗರ್ ನಿಧನರಾದ ಕೆಲವು ತಿಂಗಳ ಬಳಿಕ ನಾನು ಎರಡನೇ ಮದುವೆಯಾಗುತ್ತೇನೆ ಎಂದು ಸುದ್ದಿ ಹಬ್ಬಿತ್ತು. ನಾನು ಹೀರೋ ಧನುಷ್ ಅವರನ್ನು ಮದುವೆಯಾಗುತ್ತೇನೆ ಎಂದು ಪ್ರಚಾರ ಮಾಡಿದ್ದರು. ರಾಜಕಾರಣಿ, ಹಿರಿಯ ಸ್ಟಾರ್ ನಟ, ಉದ್ಯಮಿ ಹೀಗೆ ನನ್ನ ಮದುವೆ ಬಗ್ಗೆ ಬರೆದಿದ್ದಾರೆ. ಪ್ರೀತಿಯಲ್ಲಿ ಬಿದ್ದಿದ್ದೇನೆ ಅಂತೆಲ್ಲ ಬರೆದಿದ್ದರು. ಅದು ನಿಜವೋ ಸುಳ್ಳೋ ಅನ್ನೋದನ್ನು ತಿಳಿದುಕೊಳ್ಳದೆ ಬರೆಯೋದು ಸರಿಯಿಲ್ಲ. ಇಂತಹ ಸುದ್ದಿಗಳಿಂದ ನನ್ನ ಕುಟುಂಬಕ್ಕೆ ತೊಂದರೆಯಾಗಿದೆ" ಎಂದು ಮೀನಾ ಬೇಸರ ವ್ಯಕ್ತಪಡಿಸಿದ್ದಾರೆ.
ಮೀನಾ ಬಾಲ ನಟಿಯಾಗಿ ಸಿನಿಮಾ ಎಂಟ್ರಿ ಕೊಟ್ಟಿದ್ದರು. ಬಳಿಕ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಾಯಕಿಯಾಗಿ ಬ್ಯುಸಿಯಾಗಿದ್ದರು. ಅದರಲ್ಲೂ ತೆಲುಗು, ತಮಿಳು ಭಾಷೆಯ ಸ್ಟಾರ್ ಹೀರೊಗಳೊಂದಿಗೆ ನಟಿಸಿ ಗೆದ್ದಿದ್ದಾರೆ. ಆದರೆ, ಮದುವೆಯ ನಂತರ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದರು. ಮಗಳು ಜನಿಸಿದ ಬಳಿಕ ಸ್ವಲ್ಪ ಗ್ಯಾಪ್ ಕೊಟ್ಟು ಮತ್ತೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭಿಸಿದ್ದಾರೆ. ಆದರೆ, ಪತಿ ನಿಧನದ ಬಳಿಕ ಹಬ್ಬಿದ ವದಂತಿಗಳ ಬಗ್ಗೆ ಮೀನಾ ಬೇಸರ ಹೊರಹಾಕಿದ್ದಾರೆ.


Click it and Unblock the Notifications











