ತಿರುಮಲದಲ್ಲಿ ಮುತ್ತು.. ಅಪ್ಪುಗೆ.. ಫ್ಲೈಯಿಂಗ್ ಕಿಸ್: ತಿಮ್ಮಪ್ಪನ ಭಕ್ತರ ಕೆಂಗಣ್ಣಿಗೆ ಗುರಿಯಾದ ಕೃತಿ, ಓಂ ರಾವುತ್
ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಆದಿಪುರುಷ್' ನಿರಂತರ ಪ್ರಚಾರ ಮಾಡುತ್ತಿದೆ. ಪ್ರಭಾಸ್ ಅಭಿನಯದ ಮೊದಲ ಪೌರಾಣಿಕ ಸಿನಿಮಾ ಆಗಿರುವುದರಿಂದ ನಿರೀಕ್ಷೆಗಳು ಅಗತ್ಯಕ್ಕಿಂತ ಹೆಚ್ಚಿದೆ. ಈ ಕಾರಣಕ್ಕೆ ಎಷ್ಟು ಪ್ರಚಾರ ಮಾಡಲು ಸಾಧ್ಯವೋ ಅಷ್ಟು ಪ್ರಚಾರ ಮಾಡಲಾಗುತ್ತಿದೆ.
ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಈ ಸಿನಿಮಾದಲ್ಲಿ ಶ್ರೀರಾಮನ ಅವತಾರ ತಾಳಿದ್ದಾರೆ. ಹಾಗೇ ಸೀತೆಯಾಗಿ ಕೃತಿ ಸನೋನ್, ರಾವಣನಾಗಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಬಹಳ ದಿನಗಳ ಬಳಿಕ ಪೌರಾಣಿಕ ಸಿನಿಮಾವೊಂದು ರಿಲೀಸ್ ಆಗುತ್ತಿರುವುದಕ್ಕೆ ಪ್ರೇಕ್ಷಕರು ಕೂಡ ಕಾತುರದಿಂದ ಕಾಯುತ್ತಿದ್ದಾರೆ.

'ಆದಿಪುರುಷ್' ಪ್ರಚಾರದ ಭಾಗವಾಗಿ ನಿನ್ನೆಯಷ್ಟೇ (ಜೂನ್ 6) ತಿರುಪತಿಯಲ್ಲಿ ಪ್ರೀ ರಿಲೀಸ್ ಈವೆಂಟ್ ನಡೆದಿತ್ತು. ಈ ಕಾರ್ಯಕ್ರಮದ ಬಳಿಕ ಇಂದು(ಜೂನ್ 7) ಚಿತ್ರತಂಡ ತಿಮ್ಮಪ್ಪನ ದರ್ಶನಕ್ಕೆ ತೆರಳಿತ್ತು. ಈ ವೇಳೆ ಕೃತಿ ಸನೋನ್ ಹಾಗೂ ನಿರ್ದೇಶಕ ಓಂ ರಾವುತ್ ವರ್ತನೆಗೆ ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಿಮ್ಮಪ್ಪನ ಸನ್ನಿಧಿಯಲ್ಲಿ ಕೃತಿ ಕೆನ್ನೆಗೆ ಮುತ್ತು
ತಿರುಪತಿಯಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಮುಗಿಸಿದ ಬಳಿಕ ನಟಿ ಕೃತಿ ಸನೋನ್ ಹಾಗೂ ನಿರ್ದೇಶಕ ಓಂ ರಾವುತ್ ದರ್ಶನಕ್ಕೆ ತೆರಳಿದ್ದರು. ತಿಮ್ಮಪ್ಪನ ದರ್ಶನ ಮುಗಿಸಿ ಹೊರಬರುತ್ತಿದ್ದಂತೆ ಕೃತಿಗೆ ನಿರ್ದೇಶಕ ಓಂ ರಾವುತ್ ಬೀಳ್ಕೊಡುಗೆ ನೀಡುವುದಕ್ಕೆ ಮುಂದಾಗಿದ್ದರು. ಈ ವೇಳೆ ಇಬ್ಬರ ವರ್ತನೆ ತಿಮ್ಮಪ್ಪನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ನಿರ್ದೇಶಕ ಓಂ ರಾವುತ್ ನಟಿ ಕೃತಿ ಸನೋನ್‌ಗೆ ಬೀಳ್ಕೊಡುವ ಮುನ್ನ ಅವರನ್ನು ಅಪ್ಪುಕೊಂಡು ಕೆನ್ನೆಗೆ ಮುತ್ತಿಟ್ಟರು. ಅಲ್ಲದೆ ಫ್ಲೈಯಿಂಗ್ ಕಿಸ್ ಕೊಟ್ಟು ಶುಭ ಹಾರೈಸಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ತಿಮ್ಮಪ್ಪನ ಭಕ್ತರು ಗರಂ ಆಗಿದ್ದಾರೆ. ಇಬ್ಬರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಸಿನಿಮಾರಂಗದಲ್ಲಿ ತೀರಾ ಸಾಮಾನ್ಯ
ಸಿನಿಮಾರಂಗದಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವುದು, ಕೆನ್ನೆಗೆ ಮುತ್ತು ಕೊಡುವುದು, ಫ್ಲೈಯಿಂಗ್ ಕಿಸ್ ಕೊಡುವುದೆಲ್ಲವೂ ಸರ್ವೆ ಸಾಮಾನ್ಯ. ಹಾಲಿವುಡ್ ಹಾಗೀ ಪಾಶ್ವಿಮಾತ್ಯ ಸಂಸ್ಕೃತಿಯಿಂದ ಎರವಲು ಪಡೆದಿದ್ದರೂ, ಈಗ ಸಿನಿಮಾರಂಗದಲ್ಲಿ ಕಾಮನ್ ಆಗಿಬಿಟ್ಟಿದೆ.
ಆದರೂ, "ತಿರುಪತಿ, ತಿರುಮಲದಂತಹ ಪುಣ್ಯಕ್ಷೇತ್ರದಲ್ಲಿ ಇಂತಹ ವರ್ತನೆ ಒಳ್ಳೆಯದಲ್ಲ. ಭಕ್ತಿ ಉಕ್ಕುವ ಸ್ಥಳದಲ್ಲಿ ಹೀಗೆ ಅಪ್ಪಿಕೊಳ್ಳುವುದು, ಕೆನ್ನೆಗೆ ಮುತ್ತಿಡುವಂತಹ ವರ್ತನೆ ಸರಿಯಿಲ್ಲ" ಎಂದು ತಿಮ್ಮಪ್ಪನ ಭಕ್ತರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಕೆಲವರು ಇದು "ಉದ್ದೇಶ ಪೂರ್ವಕವಾಗಿ ನಡೆದಿದ್ದಲ್ಲ. ಆತನಿಗೆ ಅಪಾರ ಭಕ್ತಿಯಿದೆ" ಎಂದು ಬೆಂಬಲಕ್ಕೆ ನಿಂತಿದ್ದಾರೆ.
ವಿಶ್ವದಾದ್ಯಂತ 3ಡಿಯಲ್ಲಿ ರಿಲೀಸ್
'ಆದಿಪುರುಷ್' ಸಿನಿಮಾ ವಿಶ್ವದಾದ್ಯಂತ ಜೂನ್ 16ಕ್ಕೆ ಬಿಡುಗಡೆಯಾಗುತ್ತಿದೆ. 3D ನಲ್ಲಿ ರಿಲೀಸ್ ಆಗುತ್ತಿರುವುದರಿಂದ ಸಿನಿಮಾ ಬಗ್ಗೆ ನಿರೀಕ್ಷೆಗಳು ಗಗನಕ್ಕೇರಿವೆ. ಪ್ರಭಾಸ್ ಅಂತಹ ಸೂಪರ್ ಸ್ಟಾರ್, ಕೃತಿ ಸನೋನ್, ಸೈಫ್ ಅಲಿಖಾನ್ ಅಂತಹ ಕಲಾವಿದರು ಸಿನಿಮಾದಲ್ಲಿ ಇದ್ದಾರೆ. ಹೀಗಾಗಿ ಭರ್ಜರಿ ಪ್ರಚಾರ ನಡೆಯುತ್ತಿದೆ.
'ತಾನಾಜಿ' ಅಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟಿರೋ ಓಂ ರಾವುತ್ ಮತ್ತೊಂದು ಬಿಗ್ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಸಿನಿಮಾ ಕೇವಲ ತೆಲುಗಿನಲ್ಲಿ 170 ಕೋಟಿ ರೂ. ಬ್ಯುಸಿನೆಸ್ ಮಾಡಿದೆ. ಬಿಡುಗಡೆಗೂ ಮುನ್ನವೇ 432 ಕೋಟಿ ರೂ. ಅಧಿಕ ವ್ಯಾಪಾರ ಮಾಡಿದೆ ಎನ್ನಲಾಗಿದ್ದು, ಥಿಯೇಟರ್‌ನಲ್ಲಿ ರೆಸ್ಪಾನ್ಸ್ ಹೇಗಿರುತ್ತೆ? ಅನ್ನೋ ಕುತೂಹಲವಿದೆ.


Click it and Unblock the Notifications











