ಭೀಕರ ರಸ್ತೆ ಅಪಘಾತದ ಬಳಿಕ ನಭಾ ನಟೇಶ್ ಸಕ್ಸಸ್ ಜರ್ನಿ ಶುರು;'ನಾಗಬಂಧಂ' ಬಳಿಕ 'ಸ್ವಯಂಭು' ಮೇಲೆ ಕಣ್ಣು
ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಡುತ್ತಿದ್ದಂತೆ ಪಟ ಪಟ ಅಂತ ಡೈಲಾಗ್ ಬಿಟ್ಟು 'ಪಟಾಕಿ' ಅಂತಲೇ ಫೇಮಸ್ ಆಗಿದ್ದ ನಟಿ ನಭಾ ನಟೇಶ್. ಸದ್ಯಕ್ಕೀಗ ತೆಲುಗು ಚಿತ್ರರಂಗದಲ್ಲಿ ಹೆಜ್ಜೆ ಸಿನಿಮಾಗಳನ್ನು ಮಾಡಿದ್ದಾರೆ. ಇವರು ನಟಿಸಿದ ಸಿನಿಮಾ 'ನಾಗಬಂಧಂ' ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಈ ಬಿಗ್ ಬಜೆಟ್ ಸಿನಿಮಾ ಅವರ ವೃತ್ತಿ ಬದುಕಿಗೆ ಮತ್ತೊಂದು ತಿರುವು ಕೊಟ್ಟಿದೆ. ಮತ್ತೆ ಅವರನ್ನು ಯಶಸ್ಸಿನ ಹಾದಿಯಲ್ಲಿ ಕರೆದುಕೊಂಡು ಹೋಗುತ್ತಿದೆ.
'ನಾಗಬಂಧಂ' ಸಿನಿಮಾದಲ್ಲಿ ನಭಾ ನಟೇಶ್ ಅವರ ನಟನೆ ಹಾಗೂ ನೃತ್ಯಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಮತ್ತೆ ಭರ್ಜರಿ ಯಶಸ್ಸು ಗಳಿಸಬೇಕು ಅಂತಿದ್ದ ನಭಾ ನಟೇಶ್‌ಗೆ 'ನಾಗಬಂಧಂ' ಪಾಸಿಟಿವ್ ರಿಸಲ್ಟ್ ಕೊಟ್ಟಿದೆ. ಮೇಲ್ನೋಟಕ್ಕೆ ಇದೊಂದು ಸಂಪೂರ್ಣ ಆಧ್ಯಾತ್ಮಿಕ ಹಿನ್ನೆಲೆಯ ಸಿನಿಮಾ ಎಂದು ಅನಿಸಿದರೂ, ಕಮರ್ಷಿಯಲ್ ಎಲಿಮೆಂಟ್ಸ್ ಜೊತೆಗೆ ಪಕ್ಕಾ ಮನರಂಜನಾತ್ಮಕ ಸಿನಿಮಾ ಎನಿಸಿಕೊಂಡಿದೆ. 'ನಾಗಬಂಧಂ' ಬಳಿಕ ಇವರ ಮತ್ತೊಂದು ಸಿನಿಮಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ನಭಾ ನಟೇಶ್ ದಕ್ಷಿಣ ಭಾರತದ ಜನಪ್ರಿಯ ನಟಿ. ಕನ್ನಡದ ನಟಿಯಾದರೂ, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು ಕಮ್ಮಿನೇ. ಆದರೂ, ತೆಲುಗು ಸಿನಿಮಾಗಳಲ್ಲಿ ಅವರಿಗೆ ಅವಕಾಶಗಳು ಹೆಚ್ಚು ಸಿಕ್ಕಿದ್ದರಿಂದ ಅಲ್ಲೇ ಸೆಟೆಲ್ ಆಗಿಬಿಟ್ಟರು. ಅವರ ಕರಿಯರ್‌ನಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಅನ್ನೋವಾಗಲೇ ಅಪಘಾತಕ್ಕೆ ಸಿಲುಕಿ ಒಂದಿಷ್ಟು ವರ್ಷ ಬ್ರೇಕ್ ತೆಗೆದುಕೊಳ್ಳಬೇಕಾಯ್ತು. ಅಲ್ಲಿಂದ ಮತ್ತೆ ಬಿಗ್ ಸಕ್ಸಸ್‌ಗಾಗಿ ಕಾದು ಕೂತ್ತಿದ್ದ ನಟಿಗೆ ಕೊನೆಗೆ ಬಿಗ್ ಪ್ರಾಜೆಕ್ಟ್ಸ್ ಸಿಗುತ್ತಿವೆ.
ಬ್ರೇಕ್ ಬಳಿಕ ಕಮ್‌ಬ್ಯಾಕ್
ನಭಾ ನಟೇಶ್ ಒಂದರ ಹಿಂದೊಂದು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತು. ಅಷ್ಟರಲ್ಲೇ ಅವರು ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡರು. ಈ ದುರ್ಘಟನೆಯಲ್ಲಿ ನಭಾ ನಟೇಶ್ ಎಡ ಭುಜದ ಮೂಳೆ ಮುರಿದಿತ್ತು. ಇದರಿಂದ ಚೇತರಿಸಿಕೊಳ್ಳುವುದಕ್ಕೆ ಒಂದಿಷ್ಟು ಸಮಯ ತೆಗೆದುಕೊಂಡಿದ್ದರು. ತೆಲುಗು ಮೂಲಗಳ ಪ್ರಕಾರ ಪದೇ ಪದೇ ಶಸ್ತ್ರಚಿಕಿತ್ಸೆಗಳಿಗೂ ಒಳಗಾಗಿದ್ದರು ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದರಿಂದ ದೀರ್ಘಕಾಲದವರೆಗೂ ಸಿನಿಮಾದಿಂದ ದೂರ ಉಳಿದಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಂಡು 'ನಾಗಬಂಧಂ' ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಸಿನಿಮಾರಂಗದಿಂದ ಮತ್ತೆ ಅವರಿಗೆ ಬೆಂಬಲ ಸಿಗುತ್ತಿದೆ.
ನಿಖಿಲ್ ಸಿದ್ಧಾರ್ಥ್ ಜೊತೆ 'ಸ್ವಯಂಭು'
'ನಾಗಬಂಧಂ' ಸಿನಿಮಾ ಮೂಲಕ ನಭಾ ನಟೇಶ್ ಮತ್ತೊಂದು ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ಪಿರಿಯಾಡಿಕಲ್ ಹೈ-ಬಜೆಟ್ ಸಿನಿಮಾ ಆಗಿದ್ದು, ನಭಾ ನಟೇಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಕಾರ್ತಿಕೇಯ', 'ಕಾರ್ತಿಕೇಯ-2' ಹಾಗೂ 'ಸ್ಪೈ' ನಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಿಖಿಲ್ ಸಿದ್ಧಾರ್ಥ್ 'ಸ್ವಯಂಭು' ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ನಭಾ ನಟೇಶ್ 'ಸುಂದರ ವಲ್ಲಿ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ 'ಸ್ವಯಂಭು' ಭಾರಿ ನಿರೀಕ್ಷೆಗಳನ್ನು ಹುಟ್ಟಾಕಿದೆ. ಭರತ್ ಕೃಷ್ಣಮಾಚಾರಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. 'ಬಾಹುಬಲಿ', 'ಆರ್ ಆರ್ ಆರ್' ಅಂತಹ ಸಿನಿಮಾಗಳಿಗೆ ಕೆಲಸ ಮಾಡಿರೋ ಸೆಂತಿಲ್ ಕುಮಾರ್ ಈ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು ರಿಲೀಸ್‌ಗೆ ಸಜ್ಜಾಗುತ್ತಿದೆ.
ಕನ್ನಡದ ನಟಿ ಸಣ್ಣದೊಂದು ಗ್ಯಾಪ್ ಕೊಟ್ಟು ಟಾಲಿವುಡ್‌ನಲ್ಲಿ ಮತ್ತೆ ಹವಾ ಸೃಷ್ಟಿಸುವುದಕ್ಕೆ ಸಜ್ಜಾಗಿದ್ದಾರೆ. 'ನಾಗಬಂಧಂ'ಗೆ ಸಕ್ಸಸ್ ಬೆನ್ನಲ್ಲೇ ನಭಾ ನಟೇಶ್ 'ಸ್ವಯಂಭು' ಮೂಲಕ ಮತ್ತೊಂದು ಹಿಟ್ ನೀಡುವುದಕ್ಕೆ ರೆಡಿಯಾಗಿದ್ದಾರೆ. ಇದರ ಜೊತೆಗೆ ಇನ್ನೂ ಹೊಸ ಆಫರ್‌ಗಳಿಗೆ ನಭಾ ನಟೇಶ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಹೊಸ ಪ್ರಾಜೆಕ್ಟ್ ಬಗ್ಗೆನೂ ಸುಳಿವು ನೀಡಬಹುದು.


Click it and Unblock the Notifications
