ಬಾಹುಬಲಿ 2 ಬಳಿಕ ಥಿಯೇಟರ್‌ನಲ್ಲಿ ಯಶಸ್ವಿ ಪ್ರದರ್ಶನ ಕಂಡ ಸಿನಿಮಾ ಅಖಂಡ: ಏನಿದು ಲೆಕ್ಕ?
ಟಾಲಿವುಡ್ ಸೂಪರ್‌ಸ್ಟಾರ್ ಬಾಲಕೃಷ್ಣ ಅಭಿನಯದ 'ಅಖಂಡ' ಸದ್ದು ಕಡಿಮೆ ಆಗುವ ಹಾಗೇ ಕಾಣುತ್ತಲೇ ಇಲ್ಲ. ದಿನದಿಂದ ದಿನಕ್ಕೆ ಈ ಸಿನಿಮಾ ಅಬ್ಬರಿಸುತ್ತಲೇ ಇದೆ. ಬಾಲಕೃಷ್ಣ ವೃತ್ತಿ ಜೀವನದಲ್ಲೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ 'ಅಖಂಡ' ಥಿಯೇಟರ್‌ನಲ್ಲಿ ಮತ್ತೂ ಜೋರಾಗೇ ಸದ್ದು ಮಾಡುತ್ತಿದೆ. ಸದ್ಯ ಈ ಸಿನಿಮಾ 50 ದಿನಗಳನ್ನು ಪೂರೈಸಿ ಥಿಯೇಟರ್‌ನಲ್ಲಿ ಮುನ್ನುಗ್ಗುತ್ತಿದೆ.
ಬಾಲಯ್ಯನ ಸಿನಿಮಾ 'ಅಖಂಡ' ಸಿನಿಮಾ ಮೊದಲ ದಿನದಿಂದಲೇ ತೆಲುಗು ಬಾಕ್ಸಾಫೀಸ್ ಸೌಂಡ್ ಮಾಡುತ್ತಲೇ ಇದೆ. ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಸೇರಿದಂತೆ ವಿದೇಶದಲ್ಲಿ ನಂದಮೂರಿ ಬಾಲಕೃಷ್ಣ ಅಭಿಮಾನಿಗಳು ಮುಗಿಬಿದ್ದು 'ಅಖಂಡ' ಸಿನಿಮಾ ನೋಡುತ್ತಿದ್ದಾರೆ. ಸದ್ಯ 50 ದಿನಗಳನ್ನು ಯಶಸ್ವಿಯಾಗಿ ಮುಗಿಸಿರುವ ಸಿನಿಮಾ 'ಬಾಹುಬಲಿ 2' ಬಳಿಕ ಚಿತ್ರಮಂದಿರದಲ್ಲಿ ಯಶಸ್ಸು ಗಳಿಸಿದ ಸಿನಿಮಾ ಎನ್ನಲಾಗುತ್ತಿದೆ.

'ಅಖಂಡ' 103 ಚಿತ್ರಮಂದಿರಗಳಲ್ಲಿ 50 ದಿನ
'ಅಖಂಡ' ಬಿಡುಗಡೆಯಾದಲ್ಲಿಂದಲೂ ನಂದಮೂರಿ ಬಾಲಕೃಷ್ಣ ಅಭಿಮಾನಿಗಳು ಈ ಸಿನಿಮಾವನ್ನು ಟ್ರೆಂಡಿಂಗ್‌ನಲ್ಲಿ ಇಟ್ಟಿದ್ದರು. 'ಅಖಂಡ' ಬಾಕ್ಸಾಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗುತ್ತೆ ಎನ್ನಲಾಗಿತ್ತು. ಅವರ ನಂಬಿಕೆ ನಿಜವಾಗಿದೆ. ಬಾಲಕೃಷ್ಣ ಸಿನಿಮಾ ಥಿಯೇಟರ್‌ನಲ್ಲಿ 50 ದಿನಗಳನ್ನು ಪೂರೈಸಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಸುಮಾರು 103 ಥಿಯೇಟರ್‌ಗಳಲ್ಲಿ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಥಿಯೇಟರ್‌ನಲ್ಲಿ ಹೆಚ್ಚು ದಿನ ಪ್ರದರ್ಶನ ಕಂಡ ಚಿತ್ರ
ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ-2' ಥಿಯೇಟರ್‌ಗಳಲ್ಲಿ ಹೆಚ್ಚು ದಿನ ಕಚ್ಚಿಕೊಂಡಿತ್ತು. ಪ್ರೇಕ್ಷಕರು ಈ ಸಿನಿಮಾವನ್ನು ತೆರೆಮೇಲೆ ನೋಡಿ ಆನಂದಿಸಿದ್ದರು. ಆ ಬಳಿಕ ತೆರೆಕಂಡ ಅದೆಷ್ಟೋ ಸಿನಿಮಾಗಳು 50 ದಿನ, 100 ದಿನಗಳನ್ನು ಪೂರೈಸಿದರೂ, 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 50 ದಿನಗಳ ಕಾಲ ಪ್ರದರ್ಶನ ಕಂಡಿರಲಿಲ್ಲ. ಹೀಗಾಗಿ 'ಬಾಹುಬಲಿ 2' ಸಿನಿಮಾ ಬಳಿಕ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ತೆಲುಗು ಸಿನಿಮಾವಿದು ಎನ್ನಲಾಗಿದೆ.

'ಅಖಂಡ' 200 ಕೋಟಿ ವಹಿವಾಟು
ಬಾಲಕೃಷ್ಣ ಕರಿಯರ್‌ನಲ್ಲಿ ಇಂತಹದ್ದೊಂದು ಸಕ್ಸಸ್ ಸಿಕ್ಕಿರಲಿಲ್ಲ. ಲೆಜೆಂಡ್ ಬಾಲಕೃಷ್ಣಗೆ ಬೊಯಾಪಟ್ಟಿ ಶ್ರೀನು ನಿರ್ದೇಶಿಸಿದ ಈ ಸಿನಿಮಾ ಹೊಸ ಹುರುಪು ನೀಡಿದೆ. ಒಂದು ಲೆಕ್ಕಾಚಾರದ ಪ್ರಕಾರ, 'ಅಖಂಡ' ವರ್ಲ್ಡ್ ವೈಡ್ ಕಲೆಕ್ಷನ್ ಸುಮಾರು 130 ಕೋಟಿ ದಾಟಿದೆ ಎನ್ನಲಾಗಿದೆ. ಇನ್ನು ಸೈಟಲೈಟ್ ಹಕ್ಕು, ಓಟಿಟಿ ಹಕ್ಕು, ಆಡಿಯೋ, ಡಬ್ಬಿಂಗ್ ಹಕ್ಕುಗಳನ್ನು ಸೇರಿಸಿ ಸುಮಾರು 200 ಕೋಟಿಗೂ ಅಧಿಕ ಹಣ ನಿರ್ಮಾಪಕರ ಜೇಬು ಸೇರಿದೆ ಎನ್ನಲಾಗಿದೆ.

'ಲೆಜೆಂಡ್' ಬಾಲಕೃಷ್ಣಗೆ ಸಕ್ಸಸ್
ಟಾಲಿವುಡ್ ದಿಗ್ಗಜ ಬಾಲಕೃಷ್ಣ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಒಂದು ಕಡೆ 'ಅಖಂಡ' ಸಕ್ಸಸ್ ಕಂಡಿದ್ದರೆ. ಇನ್ನೊಂದು ಕಡೆ ಟಾಕ್ ಶೋ ಕೂಡ ಗೆದ್ದಿದೆ. ಹೀಗಾಗಿ 107ನೇ ಸಿನಿಮಾಗೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಕೂಡ ನಟಿಸುತ್ತಿದ್ದಾರೆ. ಗೋಪಿಚಂದ್ ಮಲಿನೇನಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.


Click it and Unblock the Notifications











