ಆಲಿಯಾ ಭಟ್‌ಗೆ ರಶ್ಮಿಕಾ ಮಂದಣ್ಣ ಟಕ್ಕರ್: ಇಬ್ಬರಲ್ಲಿ ಗೆಲ್ಲೋರು ಯಾರು?
ರಶ್ಮಿಕಾ ಮಂದಣ್ಣ ಒಂದು ಕಡೆ, ಇನ್ನೊಂದು ಕಡೆ ಆಲಿಯಾ ಭಟ್. ಇಬ್ಬರೂ ಅಖಾಡಕ್ಕೆ ಇಳಿದರೆ ಗೆಲ್ಲೋರು ಯಾರು? ಈ ಪ್ರಶ್ನೆ ಅಭಿಮಾನಿಗಳನ್ನಂತೂ ಈಗ ಕಾಡುತ್ತಿದೆ. ಹಾಗಂತ ಇವರಿಬ್ಬರೂ ಕುಸ್ತಿ ಮಾಡುತ್ತಿಲ್ಲ. ಆಲಿಯಾ ಭಟ್ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರ ಸಿನಿಮಾಗಳೂ ಕೂಡ ಒಂದೇ ದಿನ ಬಿಡುಗಡೆಯಾಗುತ್ತಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಗೆಲ್ಲೋರು ಯಾರು? ಅಂತ ಇಬ್ಬರ ಫ್ಯಾನ್ಸ್ ಲೆಕ್ಕಾಚಾರ ಹಾಕುತ್ತಿದ್ದಾರೆ.
ಹೌದು.. ಆಲಿಯಾ ಭಟ್ ಅಭಿನಯದ ಬಹುನೀರಿಕ್ಷಿತ ಸಿನಿಮಾ 'ಗಂಗೂಬಾಯಿ ಕಾಠಿಯವಾಡಿ' ಸಿನಿಮಾ ಫೆಬ್ರವರಿ 25ಕ್ಕೆ ಬಿಡುಗಡೆಯಾಗುತ್ತಿದೆ. ಅದೇ ಇನ್ನೊಂದು ಕಡೆ ರಶ್ಮಿಕಾ ಮಂದಣ್ಣ ಹಾಗೂ ಶರ್ವಾನಂದ್ ನಟನೆಯ 'ಆಡುವಾಲ್ಲು ಮೀಕು ಜೊಹಾರ್ಲು' ಸಿನಿಮಾನೂ ಫೆಬ್ರವರಿ 25ಕ್ಕೆ ಬಿಡುಗಡೆಯಾಗುತ್ತಿದೆ. ಹೀಗಾಗಿ ಉತ್ತರದಲ್ಲಿ ಆಲಿಯಾ, ದಕ್ಷಿಣದಲ್ಲಿ ರಶ್ಮಿಕಾ, ಬಾಕ್ಸಾಫೀಸ್ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ? ಅನ್ನುವ ಲೆಕ್ಕಾಚಾರ ಈಗಿನಿಂದಲೇ ಶುರುವಾಗಿದೆ.
ಹೊಸ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ ರಶ್ಮಿಕಾ
ಪುಷ್ಪ ಯಶಸ್ಸಿನ ಬಳಿಕ ರಶ್ಮಿಕಾ ಮಂದಣ್ಣ ಹಾಗೂ ಶರ್ವಾನಂದ್ ಅಭಿನಯದ 'ಆಡುವಾಲ್ಲು ಮೀಕು ಜೊಹಾರ್ಲು' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸ್ವತ: ರಶ್ಮಿಕಾ ಮಂದಣ್ಣ ಇನ್ನ ಇನ್‌ಸ್ಟಾಗ್ರಾಂನಲ್ಲಿ 'ಆಡುವಾಲ್ಲು ಮೀಕು ಜೊಹಾರ್ಲು' ಚಿತ್ರ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆನೇ ಈ ಸಿನಿಮಾ ಸೆಟ್ಟೇರಿತ್ತು. ಈಗ ಸಿನಿಮಾ ಸಂಪೂರ್ಣ ಮುಗಿದಿದ್ದು, 'ಪುಷ್ಪ' ಯಶಸ್ಸಿನ ಬೆನ್ನಲ್ಲೇ 'ಆಡುವಾಲ್ಲು ಮೀಕು ಜೊಹಾರ್ಲು' ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡಿದ್ದಾರೆ.

ಶರ್ವಾನಂದ್ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ಜೊತೆಯಾಗಿ ನಟಿಸುತ್ತಿರುವ ಮೊದಲ ಸಿನಿಮಾ. ಹೀಗಾಗಿ ಈ ಕಾಂಬಿನೇಷನ್ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಿದೆ. ಕೊರೊನಾ ಮೂರನೇ ಅಲೆ ಹೆಚ್ಚು ಪರಿಣಾಮಕಾರಿಯಾಗಿ ಇದೂವರೆಗೂ ಕಾಣಿಸದೇ ಇರುವುದರಿಂದ ಒಂದೊಂದಾಗೇ ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಈ ಬೆನ್ನಲೇ ರಶ್ಮಿಕಾ ಮಂದಣ್ಣ ಹಾಗೂ ಶರ್ವಾನಂದ್ ಜೋಡಿಯ ಸಿನಿಮಾ ಕೂಡ ಬಿಡುಗಡೆಗೆ ತುದಿಗಾಲಲ್ಲಿ ನಿಂತಿದೆ.

ಇನ್ನು ಕೊರೊನಾದಿಂದ ಹಲವು ಬಾರಿ ಬಿಡುಗಡೆಯನ್ನು ಆಲಿಯಾ ಭಟ್ ಸಿನಿಮಾವನ್ನು ಮುಂದೂಡಲಾಗಿತ್ತು. ಈಗ ಗಂಗೂಬಾಯಿ ಕಾಠಿಯವಾಡಿ ಸಿನಿಮಾ ಕೂಡ ಫೆಬ್ರವರಿ 25ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸಂಜಯ್ ಲೀಲಾ ಬನ್ಸಾಲಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಈ ಚಿತ್ರದ ಮೇಲೂ ನಿರೀಕ್ಷೆ ದುಪ್ಪಟ್ಟಾಗಿದೆ. ಇಷ್ಟರೊಳಗೆ ಗಂಗೂಬಾಯಿ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕೆಲವೊಮ್ಮೆ ಕೊರೊನಾ, ಮತ್ತೆ ಕೆಲವೊಮ್ಮೆ RRR ಸಿನಿಮಾದಿಂದಾಗಿ ಮುಂದೂಡಲ್ಪಟ್ಟಿತ್ತು.

ಉತ್ತರದಲ್ಲಿ ಆಲಿಯಾ ಭಟ್ ಹವಾ ಜೋರಿದ್ದರೆ, ಇತ್ತ ದಕ್ಷಿಣದಲ್ಲಿ ರಶ್ಮಿಕಾ ಮಂದಣ್ಣ ಖದರ್ ಜೋರಾಗಿದೆ. ಇಬ್ಬರೂ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಹೀಗಾಗಿ ಇಬ್ಬರಿಗೂ ಈ ಸಿನಿಮಾ ಪ್ರತಿಷ್ಠೆಯ ಸಿನಿಮಾ ಆಗಿದೆ. ಯಾರ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಗೆ ಜಾದು ಮಾಡುತ್ತೋ ಅಂತ ಅಭಿಮಾನಿಗಳು ಕಾದು ಕೂತಿದ್ದಾರೆ.


Click it and Unblock the Notifications











