'ಥ್ಯಾಂಕ್ ಯೂ' ಸೋಲಿನ ಬಳಿಕ ನಾಗಚೈತನ್ಯ ಹೊಸ ಸಿನಿಮಾ ಆರಂಭ!
ಸಮಂತಾಗೆ ವಿಚ್ಛೇದನ ನೀಡಿದ ಬಳಿಕ ನಾಗಚೈತನ್ಯ ಸಿನಿಮಾಗಳ ಬಗ್ಗೆ ಸಿಕ್ಕಾ ಪಟ್ಟೆ ಚರ್ಚೆಯಾಗುತ್ತಿದೆ. ಈ ಹಿಂದೆ ರಿಲೀಸ್ ಆಗಿದ್ದ ಸಿನಿಮಾ 'ಥ್ಯಾಂಕ್ ಯೂ' ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಹೀಗಾಗಿ ನಾಗ ಚೈತನ್ಯ ಸಿನಿ ಜರ್ನಿಯ ಬಗ್ಗೆ ಆತಂಕ ಎದುರಾಗಿತ್ತು.
'ಥ್ಯಾಂಕ್ ಯೂ' ಸಿನಿಮಾಗೂ ಮುನ್ನ ನಾಗಚೈತನ್ಯ ಸಿನಿಮಾಗಳು ನಿರಂತರವಾಗಿ ಗೆದ್ದಿದ್ದವು. 'ಲವ್ ಸ್ಟೋರಿ' ಮತ್ತು 'ಬಂಗಾರರಾಜು' ಅಂತಹ ಸಿನಿಮಾಗಳು ಹಿಟ್ ಲಿಸ್ಟ್ ಸೇರಿದ್ದವು. ಹೀಗಾಗಿ ನಾಗಚೈತನ್ಯ ಸಿನಿಮಾಗಳ ಬಗ್ಗೆ ಟಾಲಿವುಡ್ ಒಳ್ಳೆ ಟಾಕ್ ಇತ್ತು. ಆದರೆ, 'ಥ್ಯಾಂಕ್ ಯೂ' ಸಿನಿಮಾ ಆ ಎಲ್ಲಾ ಲೆಕ್ಕಾಚಾರವನ್ನೂ ತಲೆ ಕೆಳಗೆ ಮಾಡಿತ್ತು.
ಸೋಲಿನಿಂದ ಕಂಗೆಟ್ಟು ಹೋಗಿದ್ದ ನಾಗ ಚೈತನ್ಯ ಹೊಸ ಸಿನಿಮಾ ಆರಂಭ ಆಗಿದೆ. ವೆಂಕಟ್ ಪ್ರಭು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಬ್ಯಾನರ್‌ನಿಂದ ಚಿತ್ತೂರಿ ಶ್ರೀನಿವಾಸ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

ಅಂದ್ಹಾಗೆ ಇದು ನಾಗ ಚೈತನ್ಯ ಅಭಿನಯದ 22ನೇ ಸಿನಿಮಾ. ನಾಗ ಚೈತನ್ಯ ಅಭಿನಯದ 'NC22' ಸಿನಿಮಾದ ಶೂಟಿಂಗ್ ನಾಳೆ (ಸೆಪ್ಟೆಂಬರ್ 21) ಇಂದು ಪ್ರಾರಂಭವಾಗಲಿದೆ. ವಿಶೇಷ ಅಂದರೆ, ಅಜ್ಜನ ಹುಟ್ಟುಹಬ್ಬದ ದಿನವೇ ಹೊಸ ಸಿನಿಮಾವನ್ನು ಆರಂಭ ಮಾಡುತ್ತಿದ್ದಾರೆ. ಶುಭ ದಿನ ಆಗಿರೋದ್ರಿಂದ ಈ ಸಿನಿಮಾವನ್ನು ಅಂದೇ ಆರಂಭ ಮಾಡುತ್ತಿದ್ದಾರೆ ಎನ್ನಲಾಗಿದೆ.
ಈ ಸಿನಿಮಾದಲ್ಲಿ ನಾಗ ಚೈತನ್ಯ ಎದುರು ಟಾಲಿವುಡ್ ನಟಿ ಕೃತಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ, ಸಂಗೀತ ಮಾಂತ್ರಿಕ ಇಳಯರಾಜ ಅವರ ಪುತ್ರ ಯುವನ್ ಶಂಕರ್ ರಾಜ್ ಈ ಇನ್ನೂ ಹೆಸರಿಡದ ಈ ಸಿನಿಮಾ ಸಂಗೀತ ನೀಡುತ್ತಿದ್ದಾರೆ.
ವೆಂಕಟ್ ಪ್ರಭು ಹಾಗೂ ಯುವನ್ ಶಂಕರ್ ರಾಜ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಮ್ಯೂಸಿಕಲ್ ಹಿಟ್ ಆಗುತ್ತೆ ಎಂದೇ ನಿರೀಕ್ಷೆ ಮಾಡಲಾಗಿದೆ. ಸದ್ಯ ಸಿನಿಮಾದ ಶೂಟಿಂಗ್ ಆರಂಭ ಆಗುತ್ತಿರೋದ್ರಿಂದ ಅಕ್ಕಿನೇನಿ ಅಭಿಮಾನಿಗಳಲ್ಲಿ ಸಂತಸ ಮೂಡಿದೆ.

ನಾಗ ಚೈತನ್ಯ ಹೊಸ ಸಿನಿಮಾದ ಶೂಟಿಂಗ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ "ನಾಗ ಚೈತನ್ಯ ಹಾಗೂ ವೆಂಕಟ್ ಪ್ರಭು ಅವರ ಸಿನಿಮಾ ದಿವಂಗತ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಆಶೀರ್ವಾದದಿಂದ ಪ್ರಾರಂಭವಾಗುತ್ತಿದೆ. ಇದೇ ವೇಳೆ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಆಗಿದೆ." ಎಂದು ನಿರ್ಮಾಪಕರು ಟ್ವೀಟ್ ಮಾಡಿದ್ದಾರೆ.


Click it and Unblock the Notifications











