ಅಲ್ಲು ಅರ್ಜುನ್ ಬಂಧನ; ಮುನಿಸು ಮರೆತು ನೆರವಿಗೆ ಬರುತ್ತಾರಾ ಚಿರಂಜೀವಿ, ಪವನ್ ಕಲ್ಯಾಣ್
'ಪುಷ್ಪ 2' ಸಿನಿಮಾ ರಿಲೀಸ್ ಆದಲ್ಲಿಂದ ಟಾಲಿವುಡ್ ನಟ ಅಲ್ಲು ಅರ್ಜುನ್‌ಗೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ ಸಿಕ್ಕಿದೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಚಿಂದಿ ಮಾಡುತ್ತಾ ಮುಂದೆ ಸಾಗಿದರೆ, ಇತ್ತ ಒಂದೊಂದೇ ಸಂಕಷ್ಟಗಳು ಅಲ್ಲು ಅರ್ಜುನ್ ಅನ್ನು ಆವರಿಸಿಕೊಳ್ಳುತ್ತಿದೆ. ಪ್ರೀಮಿಯರ್ ಶೋನಿಂದ ಒಂದೊಂದು ಅವಘಡಗಳು ಇವರನ್ನು ಕಾಡುತ್ತಲೇ ಇವೆ.
ಡಿಸೆಂಬರ್ 4 ರಂದು ಅಲ್ಲು ಅರ್ಜುನ್ ನಟಿಸಿದ 'ಪುಷ್ಪ 2' ಸಿನಿಮಾದ ಪ್ರೀಮಿಯರ್ ಇತ್ತು. ಈ ವೇಳೆ ಅಭಿಮಾನಿಗಳು ಸಿನಿಮಾವನ್ನು ಮೊದಲು ಕಣ್ತುಂಬಿ ಕೊಳ್ಳುವುದಕ್ಕೆ ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದ ಮುಂದೆ ಕಿಕ್ಕಿರಿದು ಸೇರಿದ್ದರು. ಇದೇ ಪ್ರೀಮಿಯರ್‌ಗೆ ಸಿನಿಮಾ ನೋಡುವುದಕ್ಕೆ ಅಲ್ಲಿಗೆ ಅಲ್ಲು ಅರ್ಜುನ್ ಕೂಡ ಬಂದಿದ್ದರು. ಅಲ್ಲು ಅರ್ಜುನ್ ನೋಡುವ ಆತುರದಲ್ಲಿ ಥಿಯೇಟರ್‌ನಲ್ಲಿ ನೂಕುನುಗ್ಗಲಾಗಿತ್ತು. ಈ ವೇಳೆ 39 ವರ್ಷದ ಮಹಿಳೆ ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು.

'ಪುಷ್ಪ 2' ಸಿನಿಮಾ ನೋಡಲು ಬಂದ ಮಹಿಳೆ ಸಾವು ಹಾಗೂ ಆತನ ಮಗ ಸ್ಥಿತಿ ಚಿಂತಾಜನಕವಾಗಿತ್ತು. ಅಲ್ಲು ಅರ್ಜುನ್, ಅಲ್ಲು ಅರ್ಜುನ್ ಬಾಡಿಗಾರ್ಡ್ಸ್, ಸಂಧ್ಯಾ ಚಿತ್ರಮಂದಿರದ ಮ್ಯಾನೇಜ್ಮೆಂಟ್ ಸೇರಿದಂತೆ ಕೆಲವರ ವಿರುದ್ಧ ಪೊಲೀಸರು ದೂರನ್ನು ದಾಖಲಿಸಿದ್ದರು. ಇಂದು (ಡಿಸೆಂಬರ್ 13) ಅಲ್ಲು ಅರ್ಜುನ್ ಅನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಅಲ್ಲು ಅರ್ಜುನ್ ಫ್ಯಾನ್ಸ್ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದು, ಆಕ್ರೋಶಗೊಂಡಿದ್ದಾರೆ.
ಅಲ್ಲು ಅರ್ಜುನ್ ಬಂಧನದ ವಿಷಯ ಹೊರ ಬೀಳುತ್ತಿದ್ದಂತೆ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ಅಲ್ಲು ಅರ್ಜುನ್ ಬೆಂಬಲಕ್ಕೆ ನಿಂತಿದ್ದಾರೆ. 'ಪುಷ್ಪ 2' ನಟನ ತಪ್ಪು ಏನಿದೆ? ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಸ್ಟಾರ್‌ಗಳು ಬಂದಾಗ ಜನರು ಸೇರುವುದು ಸಾಮಾನ್ಯ. ಪೊಲೀಸರು ಜನರನ್ನು ಕಂಟ್ರೋಲ್ ಮಾಡಬೇಕಿತ್ತು. ಅದಕ್ಕೆ ಅಲ್ಲು ಅರ್ಜುನ್ ಬಂಧಿಸುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನೊಂದು ಕಡೆ ಮೆಗಾ ಫ್ಯಾಮಿಲಿ ಹೆಸರು ಕೇಳಿ ಬರುತ್ತಿದೆ. ಇತ್ತೀಚೆಗೆ ಅಲ್ಲು ಅರ್ಜುನ್ ಹಾಗೂ ಮೆಗಾ ಫ್ಯಾಮಿಲಿ ನಡುವೆ ಸಂಬಂಧ ಅಷ್ಟೊಂದು ಸರಿಯಾಗಿಲ್ಲ. ಎರಡೂ ಕುಟುಂಬಗಳು ಬೇರೆ ಬೇರೆ ದಿಕ್ಕಿಗೆ ಮುಖ ಮಾಡಿ ಕೂತಿವೆ. 'ಪುಷ್ಪ 2' ರಿಲೀಸ್ ಆದ ವೇಳೆನೂ ಮೆಗಾ ಫ್ಯಾಮಿಲಿ ಅಲ್ಲು ಅರ್ಜುನ್ ಬೆಂಬಲಕ್ಕೆ ನಿಂತಿರಲಿಲ್ಲ. ಜೊತೆಗೆ ಈ ಸಿನಿಮಾ ಬಿಡುಗಡೆ ವೇಳೆ ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡಿಕೊಂಡಿದ್ದರು.
ಅಂದ್ಹಾಗೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಪತ್ನಿಯ ಅಣ್ಣನೇ ನಿರ್ಮಾಪಕ ಅಲ್ಲು ಅರವಿಂದ್. ಇವರ ಪುತ್ರ ಅಲ್ಲು ಅರ್ಜುನ್. ಇತ್ತೀಚೆಗೆ ಭಾಮೈದನ ಮಗನ ವಿರುದ್ಧವೇ ಚಿರಂಜೀವಿ ಮುನಿಸಿಕೊಂಡಿದ್ದರು. ಹಾಗೇ ಅಲ್ಲು ಅರ್ಜುನ್ ಕೂಡ ಚುನಾವಣೆಯಲ್ಲಿ ಪವನ್ ಕಲ್ಯಾಣ್ ವಿರುದ್ಧ ಪ್ರಚಾರ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಎಲ್ಲಾ ಕಾರಣದಿಂದ ಮೆಗಾ ಕುಟುಂಬಕ್ಕೂ ಅಲ್ಲು ಕುಟುಂಬದ ನಡುವೆಯೂ ಸಂಬಂಧ ಹಳಸಿದೆ ಅನ್ನೋ ಕನ್ಫರ್ಮ್. ಆದ್ರೀಗ ಅಲ್ಲು ಅರ್ಜುನ್ ಬಂಧನದ ಬಳಿಕ ಮೆಗಾಸ್ಟಾರ್ ನೆರವಿಗೆ ಬರುತ್ತಾರಾ? ಅಲ್ಲು ಅರ್ಜುನ್ ಬಂಧವನ್ನು ಖಂಡಿಸುತ್ತಾರಾ? ಇಲ್ಲ ಮೌನಕ್ಕೆ ಶರಣಗಾಗುತ್ತಾರಾ? ಅನ್ನೋದನ್ನು ಮೆಗಾ ಫ್ಯಾನ್ಸ್ ಹಾಗೂ ಅಲ್ಲು ಅರ್ಜುನ್ ಎದುರು ನೋಡುತ್ತಿದ್ದಾರೆ.
ಇನ್ನೊಂದು ಕಡೆ ಈ ಘಟನೆಯಲ್ಲಿ ಅಲ್ಲು ಅರ್ಜುನ್ ತಪ್ಪಿಲ್ಲ. ಆದರೂ, ಅವರನ್ನು ಉದ್ದೇಶ ಪೂರ್ವಕವಾಗಿ ಬಂಧಿಸಲಾಗಿದೆ. ದ್ವೇಷದ ಕಾರಣಕ್ಕೆ ಅಲ್ಲು ಅರ್ಜುನ್ ಅರೆಸ್ಟ್ ಮಾಡಿದ್ದಾರೆಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿವೆ. ಅಲ್ಲು ಅರ್ಜುನ್ ಬಂಧನದ ಹಿಂದೆ ಯಾರಾದರೂ ಹಗೆ ಸಾಧಿಸಿದರೇ? ಪ್ರಭಾವಿಗಳ ಕೆಂಗಣ್ಣಿಗೆ ಗುರಿಯಾಗಿ ಅಲ್ಲು ಅರ್ಜುನ್ ಬಂಧನ ಆಯ್ತಾ? ಅನ್ನೋ ಪ್ರಶ್ನೆ ಈ ಚರ್ಚೆಯ ಬಳಿಕ ಹುಟ್ಟಿಕೊಂಡಿದೆ.


Click it and Unblock the Notifications











