'ಕೆಜಿಎಫ್ 2'ಗೆ ಟಕ್ಕರ್ ಕೊಡಲು ಹೋದ 'ಪುಷ್ಪ 2' ರಿಲೀಸ್ ಆಗೋದೇ ಅನುಮಾನ? ಏನಂತಾರೋ ಬನ್ನಿ ತಂದೆ?
'ಪುಷ್ಪ 2'ಗಾಗಿ ಟಾಲಿವುಡ್ ಎದುರು ನೋಡುತ್ತಿತ್ತು. ಬಾಕ್ಸಾಫೀಸ್‌ನಲ್ಲಿ ಹಲವು ದಾಖಲೆಗಳನ್ನು ಮುರಿಯಬಹುದು ಎಂದು ನಿರೀಕ್ಷೆ ಮಾಡಿತ್ತು. ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ್ 'ಪುಷ್ಪ' ಈಗಾಗಲೇ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದೆ. ಹೀಗಾಗಿ ಎರಡನೇ ಪಾರ್ಟ್ ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿತ್ತು.
ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಕೆಜಿಎಫ್ 2' ದಾಖಲೆಯನ್ನು ಮುರಿಯುವುದನ್ನು ಟಾರ್ಗೆಟ್ ಮಾಡಿತ್ತು. ಆದ್ರೀಗ 'ಪುಷ್ಪ 2' ಸಿನಿಮಾ ರಿಲೀಸ್ ಆಗುವುದೇ ಅನುಮಾನ ಅನ್ನೋ ಮಾತುಗಳು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್ ನಡುವಿನ ಭಿನ್ನಾಭಿಪ್ರಾಯವೇ ಕಾರಣವೆಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಅಲ್ಲು ಅರ್ಜುನ್ ವಿಮಾನದಲ್ಲಿ ಪ್ರವಾಸ ಮಾಡುವ ವೇಳೆ ಪ್ರಯಾಣಿಕರು ತೆಗೆದ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋ 'ಪುಷ್ಪ 2' ಸದ್ಯಕ್ಕೆ ಬಿಡುಗಡೆಯಾಗಲ್ಲ ಅನ್ನೋ ಅನುಮಾನವನ್ನು ಹುಟ್ಟಾಕಿದೆ. ಗಡ್ಡ ತೆಗೆದು ಕ್ಲೀನ್ ಆಗಿ ಅಲ್ಲು ಅರ್ಜುನ್ ಅಮೆರಿಕ ಪ್ರವಾಸಕ್ಕೆ ಹೋಗಿದ್ದರೆ, ಇನ್ನೊಂದು ಕಡೆ ನಿರ್ದೇಶಕ ಸುಕುಮಾರ್ ಕೂಡ ಬೇರೊಂದು ಪ್ರವಾಸದಲ್ಲಿ ಇದ್ದಾರೆ. ಈ ಕಾರಣಕ್ಕೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಸದ್ಯಕ್ಕಂತೂ 'ಪುಷ್ಪ 2' ರಿಲೀಸ್ ಆಗುವುದು ಅನುಮಾನ ಎನ್ನಲಾಗುತ್ತಿದೆ.
'ಪುಷ್ಪ 2' ಆಗಸ್ಟ್ ತಿಂಗಳಲ್ಲಿ ರಿಲೀಸ್ ಆಗಬೇಕಿತ್ತು. ಆದರೆ, ಇನ್ನೂ ಸಿನಿಮಾ ಕೆಲಸ ಬಾಕಿ ಇರುವುದರಿಂದ ಡಿಸೆಂಬರ್ 6ಕ್ಕೆ ಪೋಸ್ಟ್‌ಪೋನ್ ಆಗಿತ್ತು. ಆದ್ರೀಗ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ನಡುವೆ ಮನಸ್ತಾಪ ಉಂಟಾಗಿದ್ದು, ಇಬ್ಬರು ಮತ್ತೆ ಒಟ್ಟಿಗೆ ಕೆಲಸ ಮಾಡುವುದೇ ಅನುಮಾನ ಅನ್ನೋ ಮಾತು ಕೇಳಿ ಬರುತ್ತಿದೆ. ಏನಕ್ಕೂ ಅಲ್ಲು ಅರ್ಜುನ್ ತಂದೆ ಇದೇ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ, ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಯಿದೆ.

ಆದರೆ, ಮ್ಯಾಟರ್ ಅದಲ್ಲ. 'ಪುಷ್ಪ' ಸಿನಿಮಾ ಆರಂಭ ಆದ ದಿನದಿಂದಲೂ 'ಕೆಜಿಎಫ್' ಸಿನಿಮಾವನ್ನು ಟಾರ್ಗೆಟ್ ಮಾಡಿದ್ದೇ ಹೆಚ್ಚು. 'ಕೆಜಿಎಫ್' ದಾಖಲೆಗಳನ್ನು ಮುರಿಯಲು ಪಣ ತೊಟ್ಟು ನಿಂತಿದ್ದರು. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್, ಸುಕುಮಾರ್ ಶಿಷ್ಯ ಬುಚ್ಚಿಬಾಬು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ 'ಕೆಜಿಎಫ್' ಸಿನಿಮಾವನ್ನು ಟಾರ್ಗೆಟ್ ಮಾಡುತ್ತಲೇ ಇದ್ದರು. 'ಕೆಜಿಎಫ್'ಗಿಂತ 'ಪುಷ್ಪ 2' ಅತ್ಯುತ್ತಮ ಸಿನಿಮಾ ಅಂತ ಪರೋಕ್ಷವಾಗಿ ಹೇಳಿಕೊಂಡಿದ್ದರು.
ಟಾರ್ಗೆಟ್ ಮಾಡಿದಂತೆ 'ಪುಷ್ಪ' ಮೊದಲ ಪಾರ್ಟ್ 'ಕೆಜಿಎಫ್' ಚಾಪ್ಟರ್ 1ನ ಬಾಕ್ಸಾಫೀಸ್ ದಾಖಲೆಯನ್ನು ಹಿಂದಿಕ್ಕೆ ಹಾಕುವಲ್ಲಿ ಯಶಸ್ವಿಯಾಗಿತ್ತು. ಆದರೆ, 'ಕೆಜಿಎಫ್ 2' ಬಾಕ್ಸಾಫೀಸ್ ಕಲೆಕ್ಷನ್ ಸರಿ ಸುಮಾರು 1250 ಕೋಟಿ ರೂಪಾಯಿ. ಹೀಗಾಗಿ ಹಲವು ಬಾರಿ ಸ್ಕ್ರಿಪ್ಟ್ ಬದಲಾವಣೆ ಮಾಡಿದ್ದರು. ಸಿನಿಮಾದ ಬಜೆಟ್ ಅನ್ನು ಹೆಚ್ಚಿಸಿದ್ದರು. ಹೀಗಿದ್ದರೂ 'ಪುಷ್ಪ 2' ತಂಡಕ್ಕೆ ಯಾಕೋ ಸಮಾಧಾನವಿಲ್ಲ ಅನ್ನೋ ಮಾತುಗಳು ಟಾಲಿವುಡ್‌ನಲ್ಲಿ ಓಡಾಡುತ್ತಿವೆ.
'ಪುಷ್ಪ 2' ಸಿನಿಮಾದ ಶೂಟಿಂಗ್ ಇನ್ನೂ ಮುಗಿದಿಲ್ಲ. ನಿರ್ದೇಶಕ ಸುಕುಮಾರ್ ಚಿತ್ರೀಕರಣ ತಡ ಮಾಡುತ್ತಿರುವುದಕ್ಕೆ ಅಲ್ಲು ಅರ್ಜುನ್ ಬೇಸರಗೊಂಡಿದ್ದಾರಂತೆ. ಅಲ್ಲು ಅರ್ಜುನ್ ಕಟ್ಟ ಐಡಿಯಾಗಳನ್ನು ಸುಕುಮಾರ್ ಒಪ್ಪಿಕೊಂಡಿಲ್ಲ. ಹೀಗಾಗಿ ಇಬ್ಬರೂ ನಾನೊಂದು ತೀರ. ನೀನೊಂದು ತೀರಾ ಅಂತಾಗಿದ್ದಾರೆ ಎನ್ನುತ್ತಿವೆ ಮೂಲಗಳು. ಇನ್ನೂ 30 ದಿನ ಶೂಟಿಂಗ್ ಇದ್ದು, ಡಿಸೆಂಬರ್ 6ಕ್ಕೂ ರಿಲೀಸ್ ಅನುಮಾನ ಅನ್ನೋ ಮಾತಿದೆ. ಒಟ್ನಲ್ಲಿ 'ಕೆಜಿಎಫ್ 2' ದಾಖಲೆ ಮುರಿಯುತ್ತಾ? ಅಂತ ಕಾದು ನೋಡುತ್ತಾ ಕೂತವರಿಗೆ 'ಪುಷ್ಪ 2' ರಿಲೀಸ್ ಸದ್ಯಕ್ಕಿಲ್ಲ ಅನ್ನೋ ವಿಷಯ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ.


Click it and Unblock the Notifications











