"ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗ್ತಿದೆ..ನನ್ನ ಚಾರಿತ್ಯ ಹರಣ ಆಗುತ್ತಿದೆ"; ಅಲ್ಲು ಅರ್ಜುನ್
ಹೈದರಾಬಾದ್‌ನಲ್ಲಿ 'ಪುಷ್ಪ 2' ಪೇಯ್ಡ್ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಆ ಮಹಿಳೆಯ ಪುತ್ರ ಕೋಮಕ್ಕೆ ಜಾರಿದ್ದರು. ಈ ಘಟನೆ ಬಳಿಕ ಅಲ್ಲು ಅರ್ಜುನ್, ಥಿಯೇಟರ್ ಮ್ಯಾನೇಜ್ಮೆಂಟ್ ಸೇರಿದಂತೆ ಹಲವರ ಮೇಲೆ ಕೇಸ್ ದಾಖಲಾಗಿದ್ದು, ಬಂಧಿಸಲಾಗಿತ್ತು. ಅಲ್ಲು ಅರ್ಜುನ್ ಅನ್ನು ಬಂಧನ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು.
ಇಂದು (ಡಿಸೆಂಬರ್ 21) ತೆಲಂಗಾಣದ ಸದನದಲ್ಲಿ ಸಿಎಂ ರೇವಂತ್ ರೆಡ್ಡಿ ಆಕ್ರೋಶವನ್ನು ಹೊರ ಹಾಕಿದ್ದರು. ಅಲ್ಲು ಅರ್ಜುನ್ ಬಂಧನವಾಗುತ್ತಿದ್ದಂತೆ ಒತ್ತಡ ಹೇರಲಾಯ್ತು ಎಂದಿದ್ದರು. ಅಲ್ಲದೆ ಜೈಲಿನಿಂದ ಹೊರ ಬರುತ್ತಿದ್ದಂತೆ ಸಿನಿಮಾ ಮಂದಿ ಕಣ್ಣೀರು ಹಾಕುತ್ತಿದ್ದರು. ಅವರೇನು ಅಪಘಾತದಲ್ಲಿ ಕೈ, ಕಾಲು ಕಳೆದುಕೊಂಡಿದ್ದಾರಾ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಅಲ್ಲು ಅರ್ಜುನ್ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಅದರ ಝಲಕ್ ಇಲ್ಲಿದೆ.

"ಇದು ಒಂದು ಅಚಾತುರ್ಯದಿಂದ ನಡೆದ ಘಟನೆ. ಇದರಲ್ಲಿ ಯಾರದ್ದೂ ತಪ್ಪು ಇಲ್ಲ. ಎಲ್ಲಾ ಡಿಪಾರ್ಟ್‌ಮೆಂಟ್‌ನವರೂ ಒಳ್ಳೆಯದಾಗಬೇಕು ಅಂತಲೇ ಶ್ರಮಿಸಿದ್ದಾರೆ. ನಾನು ಮೊದಲು ಆ ಕುಟುಂಬಕ್ಕೆ ಸಾಂತ್ವಾನವನ್ನು ಹೇಳುತ್ತೇನೆ. ಆ ಕುಟುಂಬಕ್ಕೆ ನಡೆಯಬಾರದ ಘಟನೆ ನಡೆದಿದೆ. ಆ ವಿಷಯದಿಂದ ನನಗೆ ತುಂಬಾನೇ ನೋವಾಗಿದೆ. ನಾನೊಬ್ಬ ನಟನಾಗಿ ನನ್ನ ಉದ್ದೇಶವೇ ಥಿಯೇಟರ್‌ಗೆ ಬರುವ ಜನರನ್ನು ಎಂಟರ್ಟೈನ್ ಮಾಡಬೇಕು ಎಂಬುವುದು. ನನಗೆ ಥಿಯೇಟರ್ ಅಂದರೆ ದೇವಸ್ಥಾನವಿದ್ದಂತೆ. ಅಂತಹ ದೇವಸ್ಥಾನದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ ಅಂದರೆ ನನ್ನಷ್ಟು ನೋವು ಪಡುವವರು ಯಾರಾದರೂ ಇದ್ದಾರಾ?"
"ನನಗೆ ಪ್ರತಿ ಗಂಟೆಗೂ ಬಾಲಕನ ಸ್ಥಿತಿ ಹೇಗಿದೆ ಅನ್ನೋ ಅಪ್‌ಡೇಟ್ ಬರುತ್ತಿದೆ. ಖುಷಿ ವಿಷಯ ಏನು ಅಂದರೆ, ಈಗ ನಿಧಾನವಾಗಿ ಕೈ ಕಾಲು ಅಲ್ಲಾಡಿಸುತ್ತಿದ್ದಾನೆ ಎಂದು ಹೇಳಲಾಗಿದೆ. ಇದೆಲ್ಲದರ ಮಧ್ಯೆ ಅದೊಂದು ಓಳ್ಳೆಯ ಸುದ್ದಿ ಸಿಕ್ಕಿದೆ. ಈ ಪತ್ರಿಕಾಗೋಷ್ಠಿಯ ಪ್ರಮುಖ ಕಾರಣವೇನು ಅಂದರೆ, ನಾನು ಯಾರನ್ನೂ ದೂಷಿಸಿಲ್ಲ. ಆದರೆ, ಹಲವು ಬಾರಿ ತಪ್ಪು ಮಾಹಿತಿ ಹೊರಗೆ ಹೋಗಿದೆ. ಪೊಲೀಸ್, ಪೊಲಿಟಿಷಿಯನ್, ಸರ್ಕಾರ ಯಾವುದರ ಬಗ್ಗೆನೂ ಏನೂ ಹೇಳಿಲ್ಲ."
"ನಾನು ಹೀಗಂತೆ.. ನಾನು ಹಾಗಂದೆ. ನಾನು ಹಾಗೆ ವರ್ತಿಸಿದೆ ಅಂತ ಸುಳ್ಳು ಮಾಹಿತಿ ಹೊರಬಂದಿದೆ. ಇದು ನನಗೆ ಉಸಿರುಗಟ್ಟಿದಂತೆ ಆಗುತ್ತಿದೆ. ಇದು ನನ್ನ ಕ್ಯಾರೆಕ್ಟರ್ ಅನ್ನೇ ಕೊಲ್ಲುತ್ತಿದ್ದಾರೆ. ಇಷ್ಟು ದಿನದಿಂದ ನೀವು ನನ್ನನ್ನು ನೋಡಿದ್ದೀರ. ನಾನು ಏನಾದರೂ ಮಾತಾಡಿದ್ದೇನಾ? ಏನಾದರೂ ಅಂದಿದ್ದೇನಾ?"
"ನಾನು ಅದೇ ಚಿತ್ರಮಂದಿರಕ್ಕೆ ಹಲವು ವರ್ಷಗಳಿಂದ ಹೋಗುತ್ತಿದ್ದೇನೆ. ಯಾವಾಗಲೂ ಏನೂ ಅಪಘಾತ ನಡೆಯಲೇ ಇಲ್ಲ. ನಾನು ಬೇಜವಾಬ್ದಾರಿಯಿಂದ ಥಿಯೇಟರ್‌ಗೆ ಹೋಗಿದ್ದೆ. ಅನುಮತಿ ಪಡೆಯದೆ ಥಿಯೇಟರ್‌ಗೆ ಹೋಗಿದ್ದೆ ಅನ್ನೋದೆಲ್ಲ ಸುಳ್ಳು. ಥಿಯೇಟರ್‌ನವರು ಪರ್ಮಿಷನ್ ಸರಿ ಹೋಗಿದೆ ಅಂತ ಹೇಳಿದ್ದಕ್ಕೆ ನಾನು ಅಲ್ಲಿಗೆ ಹೋದೆ. ಅಲ್ಲಿಗೆ ಹೋದಾಗ ಪೊಲೀಸರೇ ಕ್ಲಿಯರ್ ಮಾಡುತ್ತಿದ್ದರು. ಕೆಲವೊಮ್ಮೆ ಅವರೇ ಹೇಳುತ್ತಾರೆ ಪರ್ಮಿಷನ್ ಇಲ್ಲ ಅಂತ. ಆಗ ನಾನು ಹೊರಟು ಹೋಗುತ್ತೇನೆ."

"ನಾನು ರೋಡ್ ಶೋ ಮಾಡಿದೆ. ಅಭಿಮಾನಿಗಳಿಗೆ ಕೈ ಮುಗಿದೆ ಅಂತೆಲ್ಲ ಹೇಳುತ್ತಾರೆ. ಅದೆಲ್ಲ ಸುಳ್ಳು. ನಾನು ಕಾರಿನ ಹತ್ತಿರ ಹೋದಾಗ ಜನರು ಬಿಡಲಿಲ್ಲ. ಪೊಲೀಸರೇ ಹೇಳಿದರು. ನೋವು ಅವರ ಕಡೆಗೆ ಕೈ ಮೇಲಕ್ಕೆ ಎತ್ತಿದರೇ ಅವರು ಹೋಗುತ್ತಾರೆ ಎಂದಿದ್ದರು. ಅದಕ್ಕೆ ನಾನು ಜನರಿಗಾಗಿ ಗೌರವ ಕೊಟ್ಟು ಹಾಗೆ ಮಾಡಿದೆ. ನಾನು ಹಾಗೆ ಮಾಡಿದರೇ ಅವರು ಹೋಗುತ್ತಾರೆ. ಇಲ್ಲ ಅಂದರೆ ಹೋಗುವುದಿಲ್ಲ. ಅದು ರೋಡ್ ಶೋ ಅಲ್ಲ. ಪ್ರೊಸೆಷನ್ ಅಲ್ಲ."
"ಆ ಥಿಯೇಟರ್‌ನಲ್ಲಿ ನನ್ನ ಜೊತೆಗೆ ನನ್ನ ಪತ್ನಿ, ನನ್ನ ಮಕ್ಕಳು ಇದ್ದರು. ಕ್ರೌಡ್ ಹೆಚ್ಚಾಗುತ್ತಿದೆ ಹೋಗಿ ಅಂದಿದ್ದಕ್ಕೆ ಹೋದೆ. ನನಗೆ ಗೊತ್ತೇ ಆಗಿಲ್ಲ. ಮಾರನೇ ದಿನವೇ ನನಗೆ ಗೊತ್ತಾಗಿತ್ತು. ನಾನು ಆಸ್ಪತ್ರೆಗೆ ಹೋಗ್ತೀನಿ ಅಂದೆ, ನಮ್ಮ ಮ್ಯಾನೇಜರ್ ಬೇಡ ಅಂದರು. ಅವರು ನಿಮ್ಮ ಮೇಲೆ ಕೇಸ್ ಹಾಕಿದ್ದಾರೆ ಅಂದರು. ಈ ಸಮಯದಲ್ಲಿ ಅವರ ಬಳಿ ಹೋಗಿ ಮಾತಾಡುವುದಕ್ಕೆ ಸರಿಯಲ್ಲ ಅಂದರು. ಹಾಗೇ ಶೋಗಳನ್ನು ಕ್ಯಾನ್ಸಲ್ ಮಾಡಿದೆ. ಕರ್ನಾಟಕದಲ್ಲಿ ಸೇರಿದಂತೆ ಎಲ್ಲಾ ಕಡೆಗೆ ಹೋಗಬೇಕಿತ್ತು." ಎಂದು ಅಲ್ಲು ಅರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications










