'Jr.NTR ತೆಲುಗಿನ ಹೆಮ್ಮೆ' ಎಂದ ಅಲ್ಲು ಅರ್ಜುನ್ ವಿರುದ್ಧ ಕೆಂಡಕಾರಿದ ರಾಮ್ ಚರಣ್ ಫ್ಯಾನ್ಸ್!
ಮೆಗಾ ಕುಟುಂಬದಲ್ಲಿ ಇಬ್ಬರು ಪ್ಯಾನ್ ಇಂಡಿಯಾ ಸ್ಟಾರ್‌ಗಳಿದ್ದಾರೆ. ಒಬ್ಬರು ಮೆಗಾ ಪವರ್‌ಸ್ಟಾರ್ ರಾಮ್ ಚರಣ್. ಮತ್ತೊಬ್ಬರು ಐಕಾನ್ ಸ್ಟಾರ್ ಅಲ್ಲು ಅರ್ಜುನ್. ಇವರಿಬ್ಬರ ನಡುವಿ ಸಂಬಂಧ ಚೆನ್ನಾಗಿಲ್ಲ ಅಂತ ಹಲವು ದಿನಗಳಿಂದ ಸುದ್ದಿಯಾಗುತ್ತಲೇ ಇತ್ತು. ಆದರೂ, ಇಬ್ಬರೂ ಅಭಿಮಾನಿಗಳ ಮುಂದೆ, ಸಹೋದ್ಯೋಗಿಗಳ ಮುಂದೆ ಇದೆಲ್ಲವನ್ನೂ ತೋರಿಸಿಕೊಂಡಿಲ್ಲ.
ಆದರೆ, ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳು ಮಾತ್ರ ಬಹಿರಂಗವಾಗಿಯೇ ಕಿತ್ತಾಡುತ್ತಿದ್ದಾರೆ. ಮೆಗಾ ಕುಟುಂಬದ ಅಭಿಮಾನಿಗಳು ಅಲ್ಲು ಅರ್ಜುನ್ ವಿರುದ್ಧ ತಿರುಗಿಬಿದ್ದರೆ, ಇತ್ತ ಅಲ್ಲು ಅರ್ಜುನ್ ಮೆಗಾ ಕುಟುಂಬದ ವಿರುದ್ಧ ಕೆಂಡಕಾರುತ್ತಿದ್ದರು. ಈಗ ಅಲ್ಲು ಅರ್ಜುನ್ ಮಾಡಿದ ಒಂದು ಟ್ವೀಟ್ ಇಬ್ಬರ ರಾಮ್ ಚರಣ್ ಅಭಿಮಾನಿಗಳ ನಿದ್ದೆ ಕೆಡಿಸಿದೆ.

RRR ಸಿನಿಮಾದ "ನಾಟು ನಾಟು.." ಹಾಡಿಗೆ ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಟಾಲಿವುಡ್ ಸೇರಿದಂತೆ ಇಡೀ ವಿಶ್ವದಾದ್ಯಂತ ದಿಗ್ಗಜರೆಲ್ಲರೂ ಚಿತ್ರತಂಡಕ್ಕೆ ಶುಭಕೋರುತ್ತಿದ್ದಾರೆ. ಹೀಗೆ ಅಲ್ಲು ಅರ್ಜುನ್ ಕೂಡ ಟ್ವೀಟ್ ಮೂಲಕ ಇಡೀ RRR ತಂಡಕ್ಕೆ ಶುಭಕೋರಿದ್ದರು. ಈ ವೇಳೆ ಜೂ.ಎನ್‌ಟಿಆರ್‌ಗೆ ಕುರಿತು ಮಾಡಿದ ಒಂದೇ ಒಂದು ಟ್ವೀಟ್ ರಾಮ್ ಚರಣ್ ಅಭಿಮಾನಿಗಳ ನಿದ್ದೆ ಕೆಡಿಸಿದೆ.
ಅಲ್ಲು ಅರ್ಜುನ್ ಮಾಡಿದ ಟ್ವೀಟ್ ಏನು?
RRR ಆಸ್ಕರ್ ಗೆಲ್ಲುತ್ತಿದ್ದ ಒಂದು ದಿನದ ಬಳಿಕ ಟ್ವೀಟ್ ಮೂಲಕ ಶುಭಕೋರಿದ್ದರು. " ಭಾರತಕ್ಕೆ ಇದೊಂದು ಅದ್ಭುತ ಕ್ಷಣ.. ತೆಲುಗು ಹಾಡೊಂದು ಆಸ್ಕರ್ ವೇದಿಕೆಯಲ್ಲಿ ಶೇಕ್ ಮಾಡುವುದನ್ನು ನೋಡಿ ಖುಷಿಯಾಗುತ್ತಿದೆ. ಎಂಎಂ ಕೀರವಾಣಿಯವರಿಗೆ,ಚಂದ್ರಬೋಸ್ ಅವರಿಗೆ, ಪ್ರೇಮ್ ರಕ್ಷಿತ್ ಅವರಿಗೆ, ಕಾಲ ಭೈರವ ಅವರಿಗೆ, ರಾಹುಲ್ ಅವರಿಗೆ, ನನ್ನ ಸಹೋದರ ಗ್ಲೋಬಲ್ ಸ್ಟಾರ್ ರಾಮ್ ಚರಣ್‌ಗೆ ಅಭಿನಂದನೆಗಳು" ಎಂದು ಟ್ವೀಟ್ ಮಾಡಿದ್ದರು.

ಹಾಗೇ " ನಮ್ಮ ತೆಲುಗಿನ ಹೆಮ್ಮೆ,ತಮ್ಮ ಹೆಜ್ಜೆಗಳಿಂದ ಪ್ರಪಂಚವನ್ನೇ ಕುಣಿಯುವಂತೆ ಮಾಡಿದ ಜೂ.ಎನ್‌ಟಿಆರ್ ಅವರಿಗೆ, ಈ ಎಲ್ಲಾ ಮ್ಯಾಜಿಕ್ ಹಿಂದಿರುವ ಹಿಂದಿರುವ ವ್ಯಕ್ತಿ ರಾಜಮೌಳಿಯವರಿಗೆ ಅಭಿನಂದನೆ ಎಂದಿದ್ದರು. ಭಾರತೀಯ ಸಿನಿಮಾಗಿದು ಹೃದಯಸ್ಪರ್ಷಿಸಿದ ಕ್ಷಣ" ಎಂದು ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದರು.
ಅಲ್ಲು ಅರ್ಜುನ್ ವಿರುದ್ಧ ಮೆಗಾಫ್ಯಾನ್ಸ್ ಕಿಡಿ
ಅಲ್ಲು ಅರ್ಜುನ್ ಈ ಟ್ವೀಟ್ ಮಾಡುತ್ತಿದ್ದಂತೆ ರಾಮ್ ಚರಣ್ ಅಭಿಮಾನಿಗಳು ಮತ್ತೆ ಕಿಡಿಕಾರಿದ್ದಾರೆ. ಈ ಟ್ವೀಟ್‌ನಲ್ಲಿ ಜೂ.ಎನ್‌ಟಿಆರ್ ಅನ್ನು ತೆಲುಗಿನ ಹೆಮ್ಮೆ ಎಂದಿದ್ದಕ್ಕೆ ರಾಮ್ ಚರಣ್ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಅಲ್ಲು ಅರ್ಜುನ್ ವಿರುದ್ಧ ಸಿಟ್ಟಿಗೇಳುತ್ತಿದ್ದಾರೆ.
ಅಲ್ಲು ಅರ್ಜುನ್ ಟ್ವೀಟ್ ವಿರುದ್ಧ ಕೆಲ ರಾಮ್ ಚರಣ್ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಟಾಲಿವುಡ್‌ನ ನಂದಮೂರಿ ಕುಟುಂಬದ ಹೀರೊಗಳಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇಷ್ಟೇ ಅಲ್ಲದೆ ಅಲ್ಲು ಅರ್ಜುನ್ ಯಂಗ್ ಟೈಗರ್ ಜೂ.ಎನ್‌ಟಿಆರ್‌ಗೆ, ಹಾಗೂ ಅಲ್ಲು ಅರವಿಂದ್ ಮಾಸ್ ಹೀರೊ ಬಾಲಕೃಷ್ಣಗೆ ಸಪೋರ್ಟ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಕೆಲವರು "ಜೂ.ಎನ್‌ಟಿಆರ್ ತೆಲುಗಿನ ಹೆಮ್ಮೆ ಆದರೆ, ರಾಮ್ ಚರಣ್ ಏನು? ರಾಮ್ ಚರಣ್ ಅವರನ್ನು ಅವಮಾನ ಮಾಡುತ್ತಿದ್ದೀರ" ಎಂದು ಮೆಗಾ ಪವರ್‌ಸ್ಟಾರ್ ಅಭಿಮಾನಿಗಳು ಅಲ್ಲು ಅರ್ಜುನ್ ವಿರುದ್ಧ ಕಿಡಿಕಾರುತ್ತಿದ್ದಾರೆ.


Click it and Unblock the Notifications











