'ಪುಷ್ಪ – 3 ಖಂಡಿತಾ ಬರುತ್ತೆ"; ಬರ್ಲಿನ್‌ನಲ್ಲಿ ಅಲ್ಲು ಅರ್ಜುನ್ ಕೊಟ್ಟ ಅಪ್‌ಡೇಟ್ ಏನು?
'ಪುಷ್ಪ-ದಿ ರೈಸ್' ಮೊದಲನೇ ಭಾಗ ಅದ್ಯಾವ ಮಟ್ಟಿಗೆ ಸಂಚಲನ ಸೃಷ್ಟಿಸಿತ್ತು ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರ. ಇನ್ನೂ ಪುಷ್ಪರಾಜ್ ಗುಂಗಲ್ಲೇ ಇರೋ ಅಭಿಮಾನಿಗಳು ಈ ಸರಣಿಯ ಎರಡನೇ ಸಿನಿಮಾ 'ಪುಷ್ಪ -2'ಗಾಗಿ ಕಾತರತೆಯಿಂದ ಕಾಯ್ತಿದ್ದಾರೆ. ಮೊದಲನೇ ಚಿತ್ರದ ಹವಾ ಇನ್ನೂ ಕಡಿಮೆ ಆಗಿಲ್ಲ ಅನ್ನೋದಕ್ಕೆ ಇತ್ತೀಚೆಗೆ ನಡೆದ ಬರ್ಲಿನ್ ಫಿಲ್ಮ್ ಫೆಸ್ಟಿವಲ್ ಸಾಕ್ಷಿಯಾಯ್ತು.
'ಪುಷ್ಪ' ಸಿನಿಮಾ ಈ ಚಿತ್ರೋತ್ಸವದಲ್ಲಿ ತೆರೆಕಂಡು ಭಾರೀ ಮೆಚ್ಚುಗೆ ಪಡೆಯಿತು. ಈ ಸಂದರ್ಭದಲ್ಲಿ ಸಿನಿಮಾದ ನಾಯಕ ಅಲ್ಲುಅರ್ಜುನ್ ಕೂಡಾ ಇದ್ದರು. ಅಲ್ಲಿನ ವೇದಿಕೆ ಮೇಲೆ ಮಾತನಾಡುತ್ತಾ ಮುಂದಿನ ಸಿನಿಮಾಗಳ ವಿಚಾರವನ್ನು ಈ ಸ್ಟಾರ್ ನಟ ಹಂಚಿಕೊಂಡರು. ಆಗ ಬಂದಿದ್ದೇ 'ಪುಷ್ಪ- 3' ಬಗೆಗಿನ ಬ್ರೇಕಿಂಗ್ ನ್ಯೂಸ್.

"ಪುಷ್ಪ ಸರಣಿಯ ಎರಡನೇ ಸಿನಿಮಾ ಎಲ್ರೂ ಅಂದುಕೊಂಡಂತೆ ಮೊದಲನೆಯದ್ದಕ್ಕಿಂತ ಹೆಚ್ಚು ಅದ್ಧೂರಿತನದಿಂದ ಕೂಡಿರುತ್ತೆ. ಮೊದಲನೇ ಭಾಗದಲ್ಲಿ ಪುಷ್ಪರಾಜ್ ಲೋಕಲ್ ಲೆವೆಲ್‌ನಲ್ಲಿ ತನ್ನ ಸ್ಥಾನ ಕಂಡುಕೊಂಡಿದ್ದು, ಅದನ್ನು ಭದ್ರಪಡಿಸಿಕೊಂಡದ್ದು ನೋಡಿದ್ದೀರಿ. ಈಗ ಅವನು ನ್ಯಾಷನಲ್- ಇಂಟರ್ನ್ಯಾಷನಲ್ ಲೆವೆಲ್‌ನಲ್ಲಿ ವ್ಯವಹಾರ ಮಾಡ್ತಾನೆ. ಹಾಗಾಗಿ ಇದು ಬೇರೆಯದ್ದೇ ಲೆವೆಲ್‌ನಲ್ಲಿ ಮಾಡಿರೋ ಸಿನಿಮಾ" ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
"ಪುಷ್ಪದಿಂದ ಒಂದು ವಿಭಿನ್ನ ಬಗೆಯ ಕ್ರೇಜ್, ಬೇರೆಯದ್ದೇ ಹಂತದ ಸಿನಿಮಾ ಜರ್ನಿ ಶುರುವಾಗಿದೆ. ನಾನಿನ್ನು ಇದೇ ಹಂತದ ಸಿನಿಮಾಗಳನ್ನು ಮಾಡ್ಬೇಕು, ಮಾಡ್ತೀನಿ. ಬರೀ ಇಷ್ಟೇ ಅಲ್ಲ, ಫಾಹದ್ ಫಾಸಿಲ್ ನಿರ್ವಹಿಸಿದ್ದ ಪೊಲೀಸ್ ಪಾತ್ರ ಕೂಡಾ 'ಪುಷ್ಪ 2'ನಲ್ಲಿ ಹೆಚ್ಚು ವಿಜೃಂಭಿಸಿದೆ. ಇಲ್ಲಿ ಆ ಪಾತ್ರಕ್ಕೆ ಬೇರೆಯದ್ದೇ ಶೇಡ್ ನೀಡಲಾಗಿದೆ. ಎಲ್ಲಾ ಪಾತ್ರಗಳನ್ನೂ ಖಂಡಿತಾ ಜನ ಇಷ್ಟಪಡ್ತಾರೆ. ಪುಷ್ಪರಾಜ್ ಎಲ್ಲರ ಊಹೆಗೂ ಮೀರಿ ಬೆಳೆದಿದ್ದಾನೆ" ಎಂದು ಪಾತ್ರಗಳ ಬಗ್ಗೆಯೂ ವಿವರಿಸಿದ್ದಾರೆ.

ಇಷ್ಟೆಲ್ಲಾ ಆಸಕ್ತಿ ಜನರಲ್ಲಿ ಇರೋದ್ರಿಂದ ಈ ಫ್ರಾಂಚೈಸಿ ಮುಂದೆ ಯಾವ ರೀತಿಯ ಬೆಳವಣಿಗೆ ಕಾಣುತ್ತೆ ಅನ್ನೋ ಪ್ರಶ್ನೆ ಸಹಜ. ಇದಕ್ಕೂ ಅಲ್ಲು ಅರ್ಜುನ್ ಸೂಪರ್ ಆನ್ಸರ್ ಕೊಟ್ಟಿದ್ದಾರೆ. 'ಪುಷ್ಪ- 3' ಖಂಡಿತಾ ಬರುತ್ತೆ ಎಂದಿದ್ದಾರೆ. ಜನರ ನಿರೀಕ್ಷೆಯ ಮಟ್ಟ ದೊಡ್ಡದೇ ಇರೋದ್ರಿಂದ ಪ್ರತೀ ಸಿನಿಮಾ ಕೂಡಾ ಹಿಂದಿನ ಚಿತ್ರಕ್ಕಿಂದ ಮೇಲಿನ ಹಂತದಲ್ಲೇ ಇರ್ಬೇಕಾಗುತ್ತೆ. ಆ ಜವಾಬ್ದಾರಿ ಜೊತೆಗೇ ಸಿನಿಮಾಗಳನ್ನು ಆಯ್ಕೆ ಮಾಡ್ತಿದ್ದೀನಿ. ಪುಷ್ಪ ಸರಣಿ ಅಲ್ಲದೇ ಇನ್ನೂ ಕೆಲವು ಚಿತ್ರಗಳ ಮಾತುಕತೆ ನಡೆಯುತ್ತಿದೆ. ಆದರೆ, ಎಲ್ಲದಕ್ಕೂ ಪುಷ್ಪ ಕೊಟ್ಟಿರುವ ಹೈಪ್ ಮಾನದಂಡ ಇದ್ದೇ ಇರುತ್ತೆ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
ಆದರೆ, ತಮ್ಮ ಮುಂದಿನ ಚಿತ್ರಗಳು ಯಾವುದು ಅನ್ನೋದರ ಬಗ್ಗೆ ಅಲ್ಲು ಅರ್ಜುನ್ ಯಾವುದೇ ಸುಳಿವು ಬಿಟ್ಟುಕೊಡ್ಲಿಲ್ಲ. ಎಲ್ಲವೂ ದೊಡ್ಡ ಸ್ಕೇಲ್‌ನ ಚಿತ್ರಗಳೇ ಆಗಿರುತ್ತವೆ ಎಂದಷ್ಟೇ ಹೇಳಿದ್ದಾರೆ. 'ಪುಷ್ಪ- ದಿ ರೂಲ್' ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ಮತ್ತು ಫಾಹದ್ ಫಾಸಿಲ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಮೊದಲನೇ ಪಾರ್ಟ್‌ನಲ್ಲಿದ್ದ ಅನೇಕ ಪಾತ್ರಗಳ ಜೊತೆ ಹೊಸಾ ಇಂಟರೆಸ್ಟಿಂಗ್ ಪಾತ್ರಗಳೂ ಸೇರಿ ಪ್ರೇಕ್ಷಕರಿಗೆ ಮತ್ತಷ್ಟು ಜಬರದಸ್ತ್ ಮನರಂಜನೆ ಕೊಡೋದು ಪಕ್ಕಾ ಎಂದು ಚಿತ್ರತಂಡ ಹೇಳಿದೆ.


Click it and Unblock the Notifications











