ತೆಲುಗು ಚಿತ್ರರಂಗದ ದಿನಗೂಲಿ ಕಾರ್ಮಿಕರಿಗೆ ಅಮಿತಾಬ್ ಬಚ್ಚನ್ ಸಹಾಯ
ಲಾಕ್‌ಡೌನ್ ಕಾರಣದಿಂದ ತೊಂದರೆಗೆ ಸಿಲುಕಿರುವ ದಿನಗೂಲಿ ಕಾರ್ಮಿಕರಿಗೆ ಕೆಲವರು ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಇರುವುದರಲ್ಲಿಯೇ ಹೆಚ್ಚು ಸಂಘಟನಾ ವಲಯವಾಗಿರುವ ಚಿತ್ರರಂಗದಲ್ಲಿಯೂ ದಿನಗೂಲಿ ಕಾರ್ಮಿಕರಿದ್ದಾರೆ. ಅವರಿಗೆ ಕಲಾವಿದರು, ತಂತ್ರಜ್ಞರು, ಸಂಘಟನೆಗಳು ನೆರವು ನೀಡುತ್ತಿದ್ದಾರೆ.
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತೀಯ ಚಿತ್ರರಂಗ ಒಗ್ಗಟ್ಟಾಗಿದೆ ಎಂದು ಸಾರುವ 'ಫ್ಯಾಮಿಲಿ' ಎಂಬ ಕಿರುಚಿತ್ರ ಇತ್ತೀಚೆಗೆ ಬಿಡುಗಡೆಯಾಗಿತ್ತು. ಅದರಲ್ಲಿ ಹಿಂದಿ ಚಿತ್ರರಂಗದ ಅಮಿತಾಬ್ ಬಚ್ಚನ್, ರಣಬೀರ್ ಕಪೂರ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಹಾಗೆಯೇ ಶಿವರಾಜ್ ಕುಮಾರ್, ರಜಿನಿಕಾಂತ್, ಮೋಹನ್ ಲಾಲ್, ಮಮ್ಮೂಟ್ಟಿ, ಚಿರಂಜೀವಿ ಮುಂತಾದವರೂ ತಮ್ಮ ಭಾಷೆಗಳಲ್ಲಿಯೇ ಮಾತನಾಡಿದ್ದರು. ಸಾಮಾಜಿಕ ಅಂತರದ ಮಹತ್ವವನ್ನು ಈ ಕಿರುಚಿತ್ರ ಸಾರಿತ್ತು. ಮುಂದೆ ಓದಿ...

ತೆಲುಗು ಚಿತ್ರರಂಗಕ್ಕೆ ಸಹಾಯ
ಈ ಕಿರುಚಿತ್ರವು ಸಾಕಷ್ಟು ವೈರಲ್ ಆಗಿತ್ತು. ಇದರಿಂದ ಬಂದ ಹಣವನ್ನು ಚಿತ್ರರಂಗದಲ್ಲಿನ ಕಷ್ಟದಲ್ಲಿರುವ ಕಾರ್ಮಿಕರಿಗೆ ಬಳಸುವುದು ಮೂಲ ಉದ್ದೇಶವಾಗಿತ್ತು. ಅದೇ ರೀತಿ ನಟ ಅಮಿತಾಬ್ ಬಚ್ಚನ್ ತೆಲುಗು ಚಿತ್ರರಂಗದ ದಿನಗೂಲಿ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ ಎಂಬ ಮಾಹಿತಿಯನ್ನು ಚಿರಂಜೀವಿ ನೀಡಿದ್ದಾರೆ.

12,000 ಕೂಪನ್ ಸೌಲಭ್ಯ
ತೆಲುಗು ಚಿತ್ರರಂಗದ ದಿನಗೂಲಿ ಸಿನಿ ಕಾರ್ಮಿಕರಿಗೆ ತಲಾ 1,500 ರೂಪಾಯಿ ಮೌಲ್ಯದ ಕೊರೊನಾ ರಿಲೀಫ್ ಕೂಪನ್‌ಗಳನ್ನು ಒದಗಿಸಲು ಅಮಿತಾಬ್ ಬಚ್ಚನ್ ವ್ಯವಸ್ಥೆ ಮಾಡಿದ್ದಾರೆ. ಇಂತಹ ಒಟ್ಟು 12,000 ಕೂಪನ್‌ಗಳನ್ನು ಅಮಿತಾಬ್ ಒದಗಿಸಿದ್ದಾರೆ ಎಂದು ಚಿರಂಜೀವಿ ತಿಳಿಸಿದ್ದಾರೆ.

ಎರಡು ರಾಜ್ಯಗಳಿಗೆ ನೆರವು
ಒಟ್ಟು ಸುಮಾರು 18 ಲಕ್ಷ ರೂ ಮೌಲ್ಯದ ಕೂಪನ್‌ಗಳನ್ನು ಟಾಲಿವುಡ್‌ಗೆ ರವಾನಿಸಲು ಅಮಿತಾಬ್ ಸಹಾಯ ಮಾಡಿದ್ದಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿನ ಸಿನಿಮಾ ಕಾರ್ಮಿಕರಿಗೆ ಇದರಿಂದ ಸಹಾಯವಾಗಲಿದೆ.
ಬಿಗ್‌ಬಿಗೆ ಧನ್ಯವಾದ
ಈ ಅದ್ಭುತ ಕಾರ್ಯಕ್ಕಾಗಿ ಬಿಗ್ ಬಿ ಅಮಿತಾಬ್ ಬಚ್ಚನ್‌ಗೆ ಬಿಗ್ ಥ್ಯಾಂಕ್ಯೂ ಎಂದು ಚಿರಂಜೀವಿ ಹೇಳಿದ್ದಾರೆ. ಕಾರ್ಮಿಕರಿಗೆ ಹಣ ನೀಡುವ ಬದಲು ಈ ಕೂಪನ್‌ಗಳನ್ನು ನೀಡಿದರೆ ಹೆಚ್ಚು ಅನುಕೂಲವಾಗಲಿದೆ. ಈ ಕೂಪನ್ ಬಿಗ್ ಬಜಾರ್ ಮಳಿಗೆಗಳಲ್ಲಿ ನೀಡಿ ಅದರ ಮೌಲ್ಯಕ್ಕೆ ತಕ್ಕಷ್ಟು ಸಾಮಗ್ರಿಗಳನ್ನು ಪಡೆದುಕೊಳ್ಳಬಹುದು ಎಂದು ಚಿರಂಜೀವಿ ತಿಳಿಸಿದ್ದಾರೆ.


Click it and Unblock the Notifications










