Anushka Shetty; ಸೈಲೆಂಟ್ ಆಗಿದ್ದ ಅನುಷ್ಕಾ ಶೆಟ್ಟಿ ಮತ್ತೆ ಆಕ್ಟಿವ್; ಈಗ ಸ್ವೀಟಿ ಅಲ್ಲ 'ಘಾಟಿ'
ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಅವರ ಸಿನಿಮಾಗಳಿಗಿಂತ ಹೆಚ್ಚಾಗಿ ಮದುವೆ ವಿಚಾರಕ್ಕೆ ಚರ್ಚೆಯಲ್ಲಿದ್ದರು. ಅವರು ಮದುವೆ ಆಗುತ್ತಿಲ್ಲ. ಅಭಿಮಾನಿಗಳು ಕೇಳೋದು ಬಿಡುತ್ತಿಲ್ಲ, ಹಾಗಿತ್ತು ಪರಿಸ್ಥಿತಿ. ಈ ಮಧ್ಯೆ ಅನುಷ್ಕಾ ಶೆಟ್ಟಿ ಹೊಸ ಪ್ರಾಜೆಕ್ಟ್‌ಗಳು ಕೂಡ ಸುದ್ದಿ ಮಾಡುತ್ತಿರಲಿಲ್ಲ. ಅಲ್ಲಿಗೆ ಅನುಷ್ಕಾ ಶೆಟ್ಟಿ ಸಿನಿಮಾದಿಂದ ಹೊರ ಬಂದು ಬಿಡುತ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು ಇತ್ತು.
ಈ ಗ್ಯಾಪ್‌ನಲ್ಲಿ ಅನುಷ್ಕಾ ಶೆಟ್ಟಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅನ್ನೋ ಸುದ್ದಿನೂ ಹೊರಬಿದ್ದಿತ್ತು. ಈ ಕಾರಣಕ್ಕೆ ಅನುಷ್ಕಾ ಶೆಟ್ಟಿ ಹೊಸ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕುತ್ತಿಲ್ಲ ಅನ್ನೋ ವಿಷಯಗಳು ಟಾಲಿವುಡ್‌ನಲ್ಲಿ ಸದ್ದು ಮಾಡಿದ್ದೂ ಇತ್ತು. ಆದರೆ, ಈ ಎಲ್ಲಾ ಸುದ್ದಿಗಳಿಗೂ ಬ್ರೇಕ್ ಹಾಕುವುದಕ್ಕೆ ಅನುಷ್ಕಾ ಶೆಟ್ಟಿ ಬರುತ್ತಿದ್ದಾರೆ. ತಮ್ಮ ಟ್ರೇಡ್ ಮಾರ್ಕ್ ಸಿನಿಮಾಗಳ ಮೂಲಕ ಸದ್ದು ಮಾಡುವ ಸೂಚನೆ ಕೊಟ್ಟಿದ್ದಾರೆ.

ಅನುಷ್ಕಾ ಶೆಟ್ಟಿ ಇದೇ ನವೆಂಬರ್ 7ರಂದು 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಎರಡು ಸರ್ಪ್ರೈಸ್ ಸಿಗಲಿದೆ. ಎರಡು ಸಿನಿಮಾಗಳ ಬಗ್ಗೆ ಮಾಹಿತಿ ಸಿಗಲಿದೆ. ಅದರಲ್ಲೊಂದು ಅವರ ಹೊಸ ಸಿನಿಮಾ 'ಘಾಟಿ'. ಬಿಗ್ ಬಜೆಟ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳುವ ಕ್ರಿಶ್ ಜಗರ್ಲಮುಡಿ ಈ ಸಿನಿಮಾದ ನಿರ್ದೇಶಕರು. ಹಾಗಿದ್ದರೆ, ಈ ಸಿನಿಮಾದ ವಿಶೇಷತೆ ಏನು? ಅನುಷ್ಕಾ ಶೆಟ್ಟಿ ಹೇಗೆ ಕಾಣಿಸಿಕೊಳ್ಳಬಹುದು ತಿಳಿಯಲು ಮುಂದೆ ಓದಿ.
ಈ ಹಿಂದೆ ಅನುಷ್ಕಾ ಶೆಟ್ಟಿಯ ಎರಡು ಸಿನಿಮಾಗಳು ಅನೌನ್ಸ್ ಆಗಿದ್ದವು. ಮೊದಲ ಮಲಯಾಳಂ ಸಿನಿಮಾ 'ಕಟನಾರ್'. ಇನ್ನೊಂದು ತೆಲುಗು ಸಿನಿಮಾ 'ಘಾಟಿ'. ಸಿನಿಮಾ ಏನೋ ಅನೌನ್ಸ್ ಆಗಿದ್ದವು. ಆದರೆ, ಯಾವ ಹಂತದಲ್ಲಿದೆ ಅನ್ನೋ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಈಗ ಈ ಎರಡೂ ಸಿನಿಮಾಗಳ ತಂಡ ಸ್ವೀಟಿ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಡುವುದಕ್ಕೆ ಮುಂದಾಗಿದೆ.
ಅನುಷ್ಕಾ ಶೆಟ್ಟಿ ಬರ್ತ್‌ಡೇ ದಿನವೇ (ನವೆಂಬರ್ 7) ಕ್ರಿಶ್ ಜಗರ್ಲಮುಡಿ ನಿರ್ದೇಶಿಸುತ್ತಿರುವ 'ಘಾಟಿ' ಸಿನಿಮಾ ಶೂಟಿಂಗ್ ಕೂಡ ಮುಗಿಯಲಿದೆ. ಅಂದೇ ಸಿನಿಮಾದ ಗ್ಲಿಂಪ್ ಅನ್ನು ರಿಲೀಸ್ ಮಾಡುತ್ತಿದೆ ಅನ್ನೋ ಸುದ್ದಿ ಅನುಷ್ಕಾ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದೆ. ಇನ್ನೊಂದು ಕಡೆ ಅದೇ ದಿನ ಈ ಸಿನಿಮಾ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಲಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಸದ್ಯ ಅನುಷ್ಕಾ ಶೆಟ್ಟಿ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಬಹುದು ಅನ್ನೋ ಕುತೂಹಲಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ.
ಈ ಹಿಂದೆ ಅನುಷ್ಕಾ ಶೆಟ್ಟಿ ನಟಿಸಿದ 'ವೇದ' ಸಿನಿಮಾಗೆ ಕ್ರಿಶ್ ಜಗರ್ಲಮುಡಿ ಅವರೇ ಆಕ್ಷನ್ ಕಟ್ ಹೇಳಿದ್ದರು. ಇದು ತೆಲುಗು ಚಿತ್ರರಂಗದಲ್ಲಿ ಸದ್ದು ಮಾಡಿತ್ತು. ಈ ಬಾರಿಗೂ ಅನುಷ್ಕಾ ಶೆಟ್ಟಿಯನ್ನು ಮಾಸ್ ಅವತಾರದಲ್ಲಿ ಕ್ರಿಶ್ ಜಗರ್ಲಮುಡಿ ತೋರಿಸಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಇದು ಅನುಷ್ಕಾ ಶೆಟ್ಟಿಯ ಕಮ್ ಬ್ಯಾಕ್ ಸಿನಿಮಾ ಆಗುತ್ತೆ ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿವೆ. ಅದಕ್ಕೆ ನೆವೆಂಬರ್ 7ರ ವರೆಗೂ ಕಾಯಲೇಬೇಕು.
ಅನುಷ್ಕಾ ಶೆಟ್ಟಿ 'ಬಾಹುಬಲಿ 2' ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರು. ಆದರೆ, ಆ ಸಿನಿಮಾ ಬಳಿಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವಂತಹ ಸಿನಿಮಾಗಳು ಬಂದಿಲ್ಲ. 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೂ, ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಆದ್ರೀಗ ಎರಡೆರಡು ಸಿನಿಮಾಗಳಲ್ಲಿ ನಟಿಸುತ್ತಾರೆ. ಮಲಯಾಳಂ ಸಿನಿಮಾ 'ಕಟನಾರ್' ಮೇಲೆ ಹೋಪ್ಸ್ ಇದ್ದು, ಆ ತಂಡ ಕೂಡ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡುತ್ತಿದೆ ಎನ್ನಲಾಗಿದೆ. ಈ ಬಾರಿ ಸ್ವೀಟಿ ಅಭಿಮಾನಿಗಳಿಗೆ ಡಬಲ್ ಸರ್ಪ್ರೈಸ್ ಅಂತೂ ಪಕ್ಕಾ.


Click it and Unblock the Notifications











