"ನಿನ್ನ ಫೋಟೋ ಜೊತೆ ರೇಟು ಕೂಡ ಹರಿದಾಡುತ್ತಿದೆ ಅಂದ್ರು..ಅಂತವ್ರು ನಾಯಿಯನ್ನೂ ಬಿಡುವುದಿಲ್ಲ"; ನಟಿ ಆಕ್ರೋಶ
ಚಿತ್ರರಂಗದಲ್ಲಿ ಸಾಕಷ್ಟು ಲೈಂಗಿಕ ಕಿರುಕುಳ ಪ್ರಕರಣಗಳು ಹೊರ ಬರುತ್ತಿವೆ. ನಟಿಯರು ತಮಗಾದ ಅನುಭವವನ್ನು ಹಂಚಿಕೊಳ್ಳುವುದಕ್ಕೆ ಹಿಂದೆಲ್ಲ ಹಿಂದೇಟು ಹಾಕುತ್ತಿದ್ದರು. ಆದರೆ, ಮೀಟೂ ಅಭಿಯಾನದ ಬಳಿಕ ಧೈರ್ಯವಾಗಿ ತಮಗಾದ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ನಿರ್ಮಾಪಕ, ನಟ ಹೀಗೆ ಕಿರುಕುಳ ಕೊಟ್ಟವರ ಹೆಸರನ್ನು ಬಹಿರಂಗ ಪಡಿಸುತ್ತಿದ್ದಾರೆ. ಈಗ ನಟಿಯೊಬ್ಬರು ಇಂತಹದ್ದೇ ಒಂದು ಅನುಭವವನ್ನು ಹಂಚಿಕೊಂಡಿದ್ದಾರೆ.
ನೈನಿಖಾ ಅನಸುರು ಬಿಗ್ ಬಾಸ್ ತೆಲುಗು ಸೀಸನ್ 8 ರ ಸ್ಪರ್ಧಿ. ಈ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಲ್ಲಿಂದ ನಟಿಗೆ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿತ್ತು. ಬಿಗ್ ಬಾಸ್ ಸೀಸನ್ 8ರಲ್ಲಿ ತಮ್ಮದೇ ವಿಶಿಷ್ಟ ಶೈಲಿಯಿಂದ ತೆಲುಗು ಮಂದಿಯನ್ನು ಸೆಳೆದಿದ್ದರು. ರಿಯಾಲಿಟಿ ಶೋಗೆ ಎಂಟ್ರಿ ಕೊಡುವುದಕ್ಕೂ ಮುನ್ನ ನೈನಿಖಾ ಸೋಶಿಯಲ್ ಮೀಡಿಯಾಗಳಲ್ಲಿ ಡ್ಯಾನ್ಸ್ ಪ್ರತಿಭೆಯಿಂದಲೇ ಹೆಸರು ಮಾಡಿದ್ದರು. ಅಲ್ಲದೇ 'ಢೀ' ನಂತಹ ಡ್ಯಾನ್ಸಿಂಗ್ ಶೋನಲ್ಲಿ ಹೆಜ್ಜೆ ಹಾಕುವುದರ ಮೂಲಕ ಜನರನ್ನು ಮಂತ್ರಮುಗ್ಧರನ್ನಾಗಿಸಿದ್ದರು.

ಇವರು ತೆಲುಗಿನ 'ಪಿಳ್ಳಾ ಪಡೇಸಾವೇ' ಎಂಬ ಟಿವಿ ಶೋ ಮೂಲಕ ನಾಯಕಿಯಾಗಿ ಗುರುತಿಸಿಕೊಂಡಿದ್ದರು. ಇದು 2023ರಲ್ಲಿ ಪ್ರಸಾರ ಆಗಿತ್ತು. ಈ ಜನಪ್ರಿಯತೆ ಹಿನ್ನೆಲೆಯಲ್ಲಿಯೇ 2024 ರಲ್ಲಿ ಬಿಗ್ ಬಾಸ್ ತೆಲುಗು ಸೀಸನ್ 8ಗೆ ಸ್ಪರ್ಧಿಯಾಗಿ ಆಯ್ಕೆಯಾಗಿ ಮನೆಗೆ ಪ್ರವೇಶಿಸಿದರು. ಬಿಗ್ ಬಾಸ್‌ನ ಪ್ರತಿ ಟಾಸ್ಕ್‌ನಲ್ಲೂ ಸಕ್ರಿಯವಾಗಿ ಭಾಗವಹಿಸಿ ತಮ್ಮ ಸಾಮರ್ಥ್ಯವೇನು ಅನ್ನೋದನ್ನು ಸಾಬೀತುಪಡಿಸಿದ್ದರು.
ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿರುವ ನೈನಿಖಾ ಇತ್ತೀಚೆಗೆ ಜಬರ್‌ದಸ್ತ್ ವರ್ಷಾ ನಿರೂಪಣೆ ಮಾಡುತ್ತಿರುವ ಸೆಲೆಬ್ರಿಟಿ ಟಾಕ್ ಶೋ 'ಕಿಸ್ಸಿಕ್ ಟಾಕ್ಸ್'ಗೆ ಅತಿಥಿಯಾಗಿ ಬಂದಿದ್ದರು. ಈ ಟಾಕ್ ಶೋಗೆ ಈಗಾಗಲೇ ತೆಲುಗಿನ ಹಲವು ತಾರೆಯರು ಆಗಮಿಸಿ ತಮ್ಮ ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಹಾಗೇ ನೈನಿಖಾ ಕೂಡ ಕೆಲವು ವಿಷಯಗಳನ್ನು ಈ ಶೋನಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲಿ ಕಾಸ್ಟಿಂಗ್ ಕೌಚ್ ಕೂಡ ಸೇರಿಕೊಂಡಿದೆ.
ಈ ಶೋನಲ್ಲಿ ನೈನಿಕಾ ತನ್ನ ಭವಿಷ್ಯದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. "ನಾನೀಗ ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಆರೋಗ್ಯವಾಗಿದ್ದೇನೆ. ಮನಸ್ಸು ಆರೋಗ್ಯವಾಗಿದ್ದರೆ, ನಾವು ಸುಂದರವಾಗಿ ಕಾಣುತ್ತೇವೆ. ನಾನು ಕೊರಿಯೋಗ್ರಫಿ ಜೊತೆಗೆ ನಟಿಯಾಗಿಯೂ ಬೆಳೆಯಬೇಕೆಂದು ಅಂದುಕೊಂಡಿದ್ದೆ. ಆದರೆ ಕೆಲವು ಕಾರಣಗಳಿಂದಾಗಿ ಆ ದಾರಿ ಹಿಡಿಯಬಾರದು ಎಂದು ಅಂದುಕೊಂಡೆ. ಏಕೆಂದರೆ ನಾವು ಬೆಳೆಯುತ್ತಿರುವಾಗ ನಮ್ಮನ್ನು ಕೆಳಗೆ ಎಳೆಯುವವರು ಬಹಳಷ್ಟು ಮಂದಿ ಇರುತ್ತಾರೆ. ವಿಶೇಷವಾಗಿ ನಾನು ನನ್ನ ಜೀವನದಲ್ಲಿ ಬಹಳಷ್ಟು ನೊಂದಿದ್ದೇನೆ" ಎಂದು ನೈನಿಖಾ ಹೇಳಿದ್ದಾರೆ.

ಹಾಗೇ ತನಗೆ ಮೋಸ ಮಾಡಿದವರ ಬಗ್ಗೆನೂ ಓಪನ್ ಆಗಿ ಮಾತಾಡಿದ್ದಾರೆ. "ಒಬ್ಬ ವ್ಯಕ್ತಿಗಾಗಿ ನನ್ನ ವೃತ್ತಿಜೀವನವನ್ನೂ ಪಕ್ಕಕ್ಕಿಟ್ಟು ಹೋರಾಡಿದೆ. ನನ್ನ ಜೀವನದಲ್ಲಿ ಇಂತಹದ್ದೊಂದು ತಪ್ಪು ಅನ್ನು ಮಾಡಬಾರದಿತ್ತು. ಹೀಗೇಕೆ ಮಾಡಿದೆ ಎಂದು ಹಲವು ಬಾರಿ ನೋವು ಅನುಭವಿಸಿದ್ದೇನೆ. ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ನನಗೆ ಹೀಗೆ ಆಗಿತ್ತು. ಪ್ರೀತಿಯ ಹೆಸರಿನಲ್ಲಿ ಮೋಸ ಮಾಡುವವರಿಗೆ ನಾನು ಒಂದೇ ಮಾತು ಹೇಳೋದು. ದೇವರು ನೋಡಿಕೊಳ್ಳುತ್ತಾನೆ" ಎಂದು ನೈನಿಖಾ ಬೇಸರ ಹೊರ ಹಾಕಿದ್ದಾರೆ.
ಈ ಶೋನಲ್ಲಿ ಕಾಸ್ಟಿಂಗ್ ಕೌಚ್ ಅನುಭವವನ್ನೂ ಹಂಚಿಕೊಂಡಿದ್ದಾರೆ. "ನಾನು ಕಾಸ್ಟಿಂಗ್ ಕೌಚ್ ಅನ್ನು ಸಹ ಎದುರಿಸಿದ್ದೇನೆ. ಒಬ್ಬರು ನನಗೆ ಫೋನ್ ಕರೆ ಮಾಡಿದರು. ನಿನ್ನ ಫೋಟೋಗಳ ಜೊತೆ ನಿನ್ನ ರೇಟು ಕೂಡ ಹರಿದಾಡುತ್ತಿದೆ ಅಂದರು. ಅಂತಹವರು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು, ಯಾಕೆ ನಾಯಿಯನ್ನು ಬಿಡುವುದಿಲ್ಲ" ಎಂದು ಈ ಶೋನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಹಾಗೇ ತನ್ನ ಮಾತನ್ನು ಯಾರೂ ನಂಬುತ್ತಿಲ್ಲ ಎಂದು ಅನಿಸಿದಾಗ ಒಮ್ಮೆ ಆತ್ಮ*ಹತ್ಯೆಗೂ ಯತ್ನಿಸಿದ್ದರಂತೆ. "ಕರ್ಮ ಖಂಡಿತವಾಗಿಯೂ ವಾಪಸ್ ಬರುತ್ತೆ. ನನಗೆ ಮೋಸ ಮಾಡಿದವರು ಯಾರೂ ಈಗ ಖುಷಿಯಾಗಿಲ್ಲ. ಅದೇ ಅವರಿಗೆ ಶಿಕ್ಷೆ." ಎಂದು ಕಿಡಿಕಾರಿದ್ದಾರೆ.


Click it and Unblock the Notifications











