ಅನುಷ್ಕಾ ಶೆಟ್ಟಿಗೆ ನಗುವಿನ ಖಾಯಿಲೆ? ಒಮ್ಮೆ ನಗಲು ಶುರು ಮಾಡಿದರೆ 10-15 ನಿಮಿಷ ನಗು ನಿಲ್ಲಿಸಲ್ಲ!
ಸಿನಿಮಾ ಮಂದಿಗೆ ಚಿತ್ರ ವಿಚಿತ್ರವಾದ ಖಾಯಿಲೆಗಳು. ಒಬ್ಬೊಬ್ಬರಿಗೂ ಒಂದೊಂದು ವಿಚಿತ್ರವಾದ ಸಮಸ್ಯೆಯಿದೆ. ಸಮಂತಾ ತನಗೆ ಮಯೋಸೈಟಿಸ್ ಖಾಯಿಲೆಯಿದೆ ಎಂದು ಹೇಳಿಕೊಂಡಿದ್ದರು. ಅದಕ್ಕೆ ಟ್ರೀಟ್ಮೆಂಟ್ ಕೂಡ ಪಡೆದುಕೊಳ್ಳುತ್ತಿರುವುದು ಗೊತ್ತೇ ಇದೆ. ಈಕೆಯ ಹಿಂದೆನೇ ದಕ್ಷಿಣ ಭಾರತದ ಮತ್ತೊಬ್ಬ ನಟಿ ಅನುಷ್ಕಾ ಶೆಟ್ಟಿ ಕೂಡ ಅಪರೂಪ ಖಾಯಿಲೆಯಿಂದ ಬಳಲುತ್ತಿದ್ದಾರೆ.
ಅನುಷ್ಕಾ ಶೆಟ್ಟಿ ಆರೋಗ್ಯ ಸಮಸ್ಯೆ ಬಗ್ಗೆ ಕೇಳಿ ಆಕೆಯ ಅಭಿಮಾನಿಗಳು ಶಾಕ್ ಆಗಿದ್ದಾರೆ. ತೆಲುಗು ಮಾಧ್ಯಮಗಳು ಅನುಷ್ಕಾ ಶೆಟ್ಟಿಗೆ ಇರುವ ಈ ಅಪರೂಪ ಖಾಯಿಲೆಯನ್ನು ಹೈಲೈಟ್ ಮಾಡುತ್ತಿವೆ. ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಅನುಷ್ಕಾ ಶೆಟ್ಟಿ ತನ್ನದೇ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ. ಈ ಎರಡೂ ಚಿತ್ರರಂಗಕ್ಕೆ ಮೆಗಾ ಸಿನಿಮಾಗಳನ್ನು ಕೂಡ ಕೊಟ್ಟಿದ್ದಾರೆ.

'ಅರುಂಧತಿ', 'ಸಿಂಗಂ','ಬಾಹುಬಲಿ' ಅಂತಹ ಮೆಗಾ ಸಿನಿಮಾಗಳಲ್ಲಿ ನಟಿಸಿರುವ ಅನುಷ್ಕಾ ಶೆಟ್ಟಿ ದಿಢೀರನೇ ಅಪರೂಪ ಖಾಯಿಲೆಯಿಂದ ಬಳಲುತ್ತಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅಷ್ಟಕ್ಕೂ ಅನುಷ್ಕಾ ಶೆಟ್ಟಿ ನಗುವಿನ ಖಾಯಿಲೆಯಿಂದ ಬಳಲುತ್ತಿದ್ದಾರೆಂದು ಹೇಳಲಾಗುತ್ತಿದೆ. ತೆಲುಗಿನ ಹಲವು ಮಾಧ್ಯಮಗಳು ಈ ಬಗ್ಗೆ ವರದಿಯನ್ನು ಮಾಡಿವೆ.
ಕೆಲವು ದಿನಗಳ ಹಿಂದೆ ಅನುಷ್ಕಾ ಶೆಟ್ಟಿ ಇಂಡಿಯಾಗ್ಲಿಟ್ಸ್‌ಗೆ ಸಂದರ್ಶನವನ್ನು ನೀಡಿದ್ದರು. ಆ ವೇಳೆ ಅನುಷ್ಕಾ ಶೆಟ್ಟಿ "ತನಗೆ ನಗುವಿನ ಖಾಯಿಲೆ ಇದೆ. ನಿಮಗೆ ಅನಿಸಬಹುದು. ನಗುವುದು ಏನಾದರೂ ಸಮಸ್ಯೆನಾ ಅಂತ ನೀವು ಕೇಳಬಹುದು. ಆದರೆ, ನನ್ನ ಪಾಲಿಗೆ ಅದೇ ಸಮಸ್ಯೆ." ಎಂದು ಹೇಳಿಕೆ ಕೊಟ್ಟಿದ್ದರು. ಹೀಗಾಗಿ ತನಗೆ ನಗುವಿನ ಖಾಯಿಲೆಯಿದೆ ಅನ್ನೋದನ್ನು ಅವರೇ ಒಪ್ಪಿಕೊಂಡಂತೆ ಆಗಿತ್ತು.
ಹಾಗೇ "ಕಾಮಿಡಿ ದೃಶ್ಯವನ್ನು ಶೂಟ್ ಮಾಡುವಾಗ ಅಥವಾ ನೋಡುತ್ತಾ ಕೂರುವಾಗ ಒಮ್ಮೆಗೆ ನಗು ಬಂದರೆ ಮತ್ತೆ ಕಂಟ್ರೋಲ್ ಮಾಡುವುದು ಕಷ್ಟ. ಸುಮಾರು 10 ರಿಂದ 15 ನಿಮಿಷ ನಗುವನ್ನು ತಡೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ ಎಷ್ಟೋ ಬಾರಿ ಶೂಟಿಂಗ್ ನಿಂತಿದೆ." ಎಂದು ಅನುಷ್ಕಾ ಶೆಟ್ಟಿ ಹೇಳಿಕೊಂಡಿದ್ದರು. ತಮಗಿರುವ ಅಪರೂಪ ಖಾಯಿಲೆ ಬಗ್ಗೆ ಹೀಗೆ ಓಪನ್ ಆಗಿ ಮಾತಾಡಿದ್ದರು.

ಇನ್ನು ಈ ಅಪರೂಪ ನಗುವಿನ ಖಾಯಿಲೆಯ ಲಕ್ಷಣಗಳ ಬಗ್ಗೆ ಹಲವು ಮಾಧ್ಯಮಗಳಲ್ಲಿ ವೈದ್ಯರು ಹಂಚಿಕೊಂಡಿದ್ದಾರೆ. ಈ ನಗುವಿನ ಕಾಯಿಲೆಯನ್ನು ವೈಜ್ಞಾನಿಕವಾಗಿ ಸ್ಯೂಡೋಬಲ್ಬಾರ್ ಎಫೆಕ್ಟ್ ಎಂದು ಕರೆಯುತ್ತಾರೆ.ಈ ಸಮಸ್ಯೆಯಿಂದ ಬಳಲುತ್ತಿರುವವರು ಒಮ್ಮೆ ನಗುವುದಕ್ಕೆ ಶುರು ಮಾಡಿದರೆ, ಇಲ್ಲ ಅಳುವುದಕ್ಕೆ ಶುರು ಮಾಡಿದರೆ ನಿರಂತರವಾಗಿ 10 ರಿಂದ 15 ನಿಮಿಷ ನಡೆಯುತ್ತಿರುತ್ತೆ.
ಈ ಖಾಯಿಲೆ ದೊಡ್ಡ ಸಮಸ್ಯೆ ಅಂತಲ್ಲ. ಆದರೆ, ಯಾವುದೋ ಸನ್ನಿವೇಶದಲ್ಲಿ ಇದ್ದಕ್ಕಿಂತ ವ್ಯಕ್ತಿಯೊಬ್ಬ ನಗುವುದಕ್ಕೆ ಶುರು ಮಾಡಿದರೆ, ಅವಮಾನ ಆಗುವ ಸಾಧ್ಯತೆಯಿದೆ. ಹೀಗಾಗಿ ಮಾನಸಿಕವಾಗಿಯೇ ಈ ಅಪರೂಪದ ಖಾಯಿಲೆಯನ್ನು ಕಂಟ್ರೋಲ್ ಮಾಡಬೇಕು ಎನ್ನುತ್ತಾರೆ ವೈದ್ಯರು. ಸದ್ಯ ಅನುಷ್ಕಾ ಶೆಟ್ಟಿ 'ಘಾಟಿ ಹಾಗೂ 'ಕಥನಾರ್' ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











