ಚಿರಂಜೀವಿ ಸಿನಿಮಾದ ಇಳಯರಾಜ ಸಾಂಗ್ ಬಳಕೆ; ಕೇಸ್ ಹಾಕಿಲ್ಲ ಯಾಕೆ? ವಿವಾದಕ್ಕೆ ಸಿಕ್ಕೇಬಿಡ್ತು ಸ್ಪಷ್ಟನೆ
ಮೆಗಾಸ್ಟಾರ್ ಚಿರಂಜೀವಿ ಸಿನಿಮಾ 'ಮನ ಶಂಕರ ವರ ಪ್ರಸಾದ ಗಾರು'ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಈಗಾಗಲೇ ವಿಶ್ವದಾದ್ಯಂತ ₹100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆಯೆಂದು ವರದಿಯಾಗಿದೆ. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಅತೀ ಹೆಚ್ಚು ಜನಪ್ರಿಯತೆ ಗಳಿಸಿದ ಸಿನಿಮಾಗಳಲ್ಲಿ ಇದು ಮೊದಲ ಸ್ಥಾನದಲ್ಲಿದೆ.
'ಮನ ಶಂಕರ ವರ ಪ್ರಸಾದ ಗಾರು' ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ಲಾಂಗ್ ಗ್ಯಾಪ್ ಬಳಿಕ ಮೆಗಾಸ್ಟಾರ್ ಚಿರಂಜೀವಿ ವಿಂಟೇಜ್ ಮಾಸ್-ಕಾಮಿಡಿ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಚಿರಂಜೀವಿ ಲುಕ್ ಹಾಗೂ ಮ್ಯಾನರಿಸಂಗೆ ಅವರ ಅಭಿಮಾನಿಗಳಂತೂ ಶಿಳ್ಳೆಗಳ ಮೇಲೆ ಶಿಳ್ಳೆ ಹಾಕಿ ಸಂಭ್ರಮಿಸುತ್ತಿದ್ದಾರೆ.

ಚಿರಂಜೀವಿ ಸಿನಿಮಾಗೆ ಭರ್ಜರಿ ಯಶಸ್ಸು ಸಿಕ್ಕಿದ್ದೇನೋ ನಿಜ. ಈ ಮಧ್ಯೆ ಸಿನಿಮಾದಲ್ಲಿ ಬಳಸಿದ ಹಳೆಯ ಹಾಡೊಂದನ್ನು ಕೃತಿಸ್ವಾಮ್ಯ ಮಾಡಲಾಗಿದೆ ಟೀಕೆಗಳು ಕೇಳಿ ಬರುತ್ತಿವೆ. ಸೋಶಿಯಲ್ ಮೀಡಿಯಾ ಹಾಗೂ ಟಾಲಿವುಡ್‌ನಲ್ಲಿ ಈ ಬಗ್ಗೆ ತೀವ್ರ ಚರ್ಚೆ ಆಗುತ್ತಿತ್ತು. ಚಿರಂಜೀವಿ-ನಯನತಾರಾ ನಡುವಿನ ಲವ್ ಟ್ರ್ಯಾಕ್‌ನಲ್ಲಿ 'ಸುಂದರಿ ನುವ್ವೇ...' ಹಾಡನ್ನು ಕದಿಯಾಗಿದೆ ಎಂದು ಕೂಗಿ ಕೇಳಿ ಬಂದಿತ್ತು. ಹೀಗಿದ್ದರೂ ಆ ಹಾಡನ್ನು ಕಂಪೋಸ್ ಮಾಡಿದ್ದ ಇಳಯರಾಜ ಯಾಕೆ ಸುಮ್ಮನಿದ್ದಾರೆ? ಚಿರಂಜೀವಿ ಸ್ನೇಹಿತ ಅನ್ನೋ ಕಾರಣಕ್ಕಾ? ಇಂತಹ ಒಂದಿಷ್ಟು ಪ್ರಶ್ನೆಗಳು ಹುಟ್ಟುಕೊಂಡಿದ್ದವು.
'ಮನ ಶಂಕರ ವರ ಪ್ರಸಾದ ಗಾರು' ಸಿನಿಮಾದ 'ಸುಂದರಿ ನುವ್ವೇ...' ಹಾಡು ರಜನಿಕಾಂತ್ ಹಾಗೂ ಶೋಭನಾ ನಟನೆಯ 'ದಳಪತಿ' ಚಿತ್ರದ ಸೂಪರ್ ಹಿಟ್ ಸಾಂಗ್. ಈ ಹಾರನ್ನು ಸಂಗೀತ ಮಾಂತ್ರಿಕ ಇಳಯರಾಜ ಕಂಪೋಸ್ ಮಾಡಿದ್ದಾರೆ. ಇತ್ತೀಚೆಗೆ ತಮ್ಮ ಅನುಮತಿ ಇಲ್ಲದೆ ಅವರು ಕಂಪೋಸ್ ಮಾಡಿದ ಹಾಡನ್ನು ಬಳಸಿಕೊಂಡ ಚಿತ್ರತಂಡದ ವಿರುದ್ಧ ಕೃತಿಸ್ವಾಮ್ಯದ ದೂರುಗಳನ್ನು ದಾಖಲಿಸುತ್ತಿದ್ದಾರೆ. ಹೀಗಿರುವಾಗ ಈ ಹಾಡಿನ ಬಗ್ಗೆ ಮೌನವಾಗಿರೋದ್ಯಾಕೆ? ಅನ್ನೋ ಪ್ರಶ್ನೆನೂ ಕಾಡಿತ್ತು.
ಇತ್ತೀಚೆಗೆ ಚಿರಂಜೀವಿ ಸಿನಿಮಾ 'ಮನ ಶಂಕರ ವರ ಪ್ರಸಾದ ಗಾರು' ಗೆದ್ದ ಬೆನ್ನಲ್ಲೇ ಚಿತ್ರತಂಡ ಥ್ಯಾಂಕ್ಯೂ ಮೀಟ್ ಹಮ್ಮಿಕೊಂಡಿತ್ತು. ಈ ವೇಳೆ ಮಾಧ್ಯಮಗಳು ನಿರ್ದೇಶಕ ಅನಿಲ್ ರವಿಪುಡಿಗೆ ಈ ಪ್ರಶ್ನೆಯನ್ನು ಕೇಳಿದ್ದರು. ಇಳಯರಾಜ ಅವರ ಹಾಡನ್ನು ಬಳಸಿಕೊಂಡಿದ್ದಕ್ಕೆ ಚಿರಂಜೀವಿ ಸಿನಿಮಾದ ನಿರ್ದೇಶಕ ಅನಿಲ್ ರವಿಪುಡಿ ಸ್ಪಷ್ಟನೆ ಕೊಟ್ಟಿದ್ದಾರೆ.

"ಇಳಯರಾಜ ಅವರ ಹಾಡು ಬಳಸಲು ಕಡ್ಡಾಯವಾಗಿ ಒಂದು ಪ್ರಕ್ರಿಯೆ ಇರುತ್ತೆ. ನಮ್ಮ ಸಿನಿಮಾದ ನಿರ್ಮಾಪಕರು ಸ್ವತಃ ಅವರನ್ನು ಭೇಟಿ ಮಾಡಿದ್ದರು. ಎಲ್ಲಾ ಕಾನೂನು ವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಈ ಹಾಡನ್ನು ಬಳಸಿಕೊಳ್ಳುವುದಕ್ಕೆ ಗ್ರೀನ್ ಸಿಗ್ನಲ್ ನೀಡಲಾಯ್ತು" ಎಂದು ನಿರ್ದೇಶಕ ಅನಿಲ್ ರವಿಪುಡಿ ಹೇಳಿದ್ದಾರೆ. ಈ ಮೂಲಕ ಕೃತಿಸ್ವಾಮ್ಯದ ಆರೋಪದ ಬಗ್ಗೆ ಒಂದು ಸ್ಪಷ್ಟನೆ ಸಿಕ್ಕಂತೆ ಆಗಿದೆ.
ಈ ಹಿಂದೆ ಇಳಯರಾಜ ಕೆಲವು ಸಿನಿಮಾಗಳ ವಿರುದ್ಧ ದೂರನ್ನು ದಾಖಲಿಸಿದ್ದರು. 'ಮಂಜುಮ್ಮೆಲ್ ಬಾಯ್ಸ್', 'ಗುಡ್ ಬ್ಯಾಡ್ ಅಗ್ಲಿ' ಅಂತಹ ಸಿನಿಮಾಗಳಲ್ಲಿ ತಮ್ಮ ಅನುಮತಿ ಇಲ್ಲದೆ ಅವರೇ ಕಂಪೋಸ್ ಮಾಡಿದ ಹಾಡುಗಳನ್ನು ಬಳಸಿಕೊಂಡಿದ್ದಕ್ಕೆ ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಈ ಸಿನಿಮಾ ವಿರುದ್ಧವೂ ಕೇಸ್ ದಾಖಲಿಸಬಹುದೆಂಬ ಅನುಮಾನವಿತ್ತು.
"ಇಳಯರಾಜ ಅವರು ಯಾರ ವಿರೋಧಿಯಲ್ಲ. ಸರಿಯಾದ ವಿಧಾನದಲ್ಲಿ ಹೋಗಿ ಅನುಮತಿ ಪಡೆದರೆ ಅವರು ಸಂತೋಷದಿಂದ ಹಾಡನ್ನು ನೀಡುವುದಕ್ಕೆ ಒಪ್ಪಿಕೊಳ್ಳುತ್ತಾರೆ. ಅವರ ಹಾಡುಗಳನ್ನು ಗೌರವದಿಂದ ಬಳಸಿದರೆ ಯಾವುದೇ ಸಮಸ್ಯೆಯೂ ಇರುವುದಿಲ್ಲ" ಎಂದು ನಿರ್ದೇಶಕ ಅನಿಲ್ ರವಿಪುಡಿ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications