ಪವನ್ ಕಲ್ಯಾಣ್-ಚಿರಂಜೀವಿ ತಾಯಿಗೆ ಕ್ಷಮೆ ಕೇಳಿದ ವಿವಾದಾತ್ಮಕ ನಟಿ ಶ್ರೀರೆಡ್ಡಿ: ಏನಿದು ಕಥೆ?
ಟಾಲಿವುಡ್‌ನ ವಿವಾದಾತ್ಮಕ ನಟಿ ಶ್ರೀ ರೆಡ್ಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಮೀಟೂ ಪ್ರಕರಣದ ವೇಳೆ ಶ್ರೀರೆಡ್ಡಿ ಹೆಸರು ಹೆಚ್ಚು ಕೇಳಿ ಬರುತ್ತಿತ್ತು. ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಬ್ಬ ತಾರೆಯ ಮೇಲೆ ಆರೋಪ ಹೊರಿಸುತ್ತಿದ್ದರು. ಇದೇ ವೇಳೆ ಪವನ್ ಕಲ್ಯಾಣ್ ವಿರುದ್ಧ ಶ್ರೀರೆಡ್ಡಿ ತಿರುಗಿಬಿದ್ದಿದ್ದರು. ಈಗ ಮತ್ತೆ ಶ್ರೀರೆಡ್ಡಿ ಹೆಸರು ಟಾಲಿವುಡ್‌ನಲ್ಲಿ ಕೇಳಿಬರುತ್ತಿದೆ. ಈ ಬಾರಿ ಪವನ್ ಕಲ್ಯಾಣ್ ತಾಯಿಗೆ ಕ್ಷಮೆ ಕೇಳಿ ಸುದ್ದಿಯಾಗಿದ್ದಾರೆ.
ಹೌದು.. ತೆಲುಗು ನಟಿ ಶ್ರೀರೆಡ್ಡಿ ಪವನ್ ಕಲ್ಯಾಣ್ ಹಾಗೂ ಮೆಗಾ ಸ್ಟಾರ್ ಚಿರಂಜೀವಿ ತಾಯಿ ಅಂಜನಾ ದೇವಿಯವರಿಗೆ ಕ್ಷಮೆ ಕೇಳಿದ್ದು ಸುದ್ದಿಯಾಗುತ್ತಿದೆ. ಈ ಹಿಂದೆ ಮೀಟೂ ಅಭಿಯಾನದ ವೇಳೆ ಪವನ್ ಕಲ್ಯಾಣ್ ವಿರುದ್ಧ ಶ್ರೀ ರೆಡ್ಡಿ ತಿರುಗಿಬಿದ್ದಿದ್ದರು. ಅಲ್ಲದೆ ಪವರ್‌ಸ್ಟಾರ್‌ಗೆ ಮಿಡಲ್ ಫಿಂಗರ್ ತೋರಿಸಿ ಪವನ್ ಕಲ್ಯಾಣ್ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದ್ದರು. ಇದೇ ವೇಳೆ ಪವನ್ ಮೇಲಿನ ಸಿಟ್ಟಿಗೆ ಅವರ ತಾಯಿಯನ್ನೂ ಎಳೆದು ತಂದಿದ್ದರು.
ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ತಾಯಿಗೆ ಕ್ಷಮೆ ಕೇಳಿದ ಶ್ರೀರೆಡ್ಡಿ
ಮೀಟೂ ಅಭಿಯಾನದ ವೇಳೆ ಶ್ರೀರೆಡ್ಡಿ ಅರೆಬೆತ್ತಲಾಗಿ ಬಂದು ಅವಾಂತರ ಸೃಷ್ಟಿಸಿದ್ದರು. ತೆಲುಗು ಚಿತ್ರರಂಗದ ನಿರ್ಮಾಪಕ ಸುರೇಶ್ ಬಾಬು ಪುತ್ರ ಅಭಿರಾಮ್ ದಗ್ಗುಬಾಟಿ ಮೇಲೆ ಆರೋಪ ಮಾಡಿದ್ದರು. ಈ ವೇಳೆ ಪವನ್ ಕಲ್ಯಾಣ್ ಅವರ ಪ್ರತಿಕ್ರಿಯೆ ಕೇಳಿದಾಗ, ಶ್ರೀರೆಡ್ಡಿಗೆ ಬೆಂಬಲ ನೀಡಿರಲಿಲ್ಲ. ಈ ವಿಚಾರಕ್ಕೆ ಕೋಪಗೊಂಡ ಶ್ರೀರೆಡ್ಡಿ, ಪವನ್ ಕಲ್ಯಾಣ್ ಹಿಗ್ಗಾಮುಗ್ಗ ಬೈದಿದ್ದರು. ಪವನ್ ಕಲ್ಯಾಣ್ ಮೇಲಿನ ಕೋಪಕ್ಕೆ ಅವರ ತಾಯಿಯನ್ನೂ ಎಳೆದು ತಂದಿದ್ದರು. ಇದು ಟಾಲಿವುಡ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

ಅಂದು ಆಡಿದ ಮಾತಿಗೆ ಇಂದು ಶ್ರೀರೆಡ್ಡಿ ಕ್ಷಮೆ ಕೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋದನ್ನು ಬಿಟ್ಟಿದ್ದು, "ಚಿರಂಜೀವಿ ಟಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್. ನಾನು ಅವರ ತಾಯಿಯ ಅಂಜನಾ ದೇವಿ ಮೇಲೆ ಅಂತಹ ಶಬ್ದಗಳನ್ನು ಬಳಸಬಾರದಿತ್ತು. ನಾನು ಅಂದು ಆಡಿದ ಮಾಡಿದ ಮಾತಿಗೆ ಇಂದು ಅಂಜನಾ ದೇವಿಯವರಿಗೆ ಕ್ಷಮೆ ಕೇಳುತ್ತೇನೆ." ಎಂದು ತಾನು ಮಾಡಿದ ವಿಡಿಯೋದಲ್ಲಿ ತಿಳಿಸಿದ್ದಾರೆ.

ಪರೋಕ್ಷವಾಗಿ ಕ್ಷಮೆ ಕೇಳಿದ ಪವನ್ ಕಲ್ಯಾಣ್
ಶ್ರೀರೆಡ್ಡಿ ರಿಲೀಸ್ ಮಾಡಿದ ವಿಡಿಯೋದಲ್ಲಿ ಪವನ್ ಕಲ್ಯಾಣ್‌ರನ್ನು ಅವಮಾನ ಮಾಡಿದ್ದಕ್ಕೆ ಪರೋಕ್ಷವಾಗಿ ಕ್ಷಮೆ ಕೇಳಿದ್ದಾರೆ. ಪವನ್ ಕಲ್ಯಾಣ್ ಹೆಸರನ್ನು ಬಳಸದೆ, ಕ್ಷಮೆ ಕೇಳಿರುವುದು ಗಮನಕ್ಕೆ ಬಂದಿದೆ. ಆದರೆ, ಈ ವಿಡಿಯೋ ರಿಲೀಸ್ ಆದ ಬಳಿಕ ಪವನ್ ಕಲ್ಯಾಣ್ ಅಭಿಮಾನಿಗಳು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಅನ್ನುವುದು ಗಮನಿಸಬೇಕಿದೆ. ಆದರೆ, ಪವನ್ ಕಲ್ಯಾಣ್‌ಗೆ ನೇರವಾಗಿ ಕ್ಷಮೆ ಕೇಳದೆ, ತಾಯಿ ಕ್ಷಮೆ ಕೇಳಿರುವುದು ಪವರ್‌ಸ್ಟಾರ್ ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಅಸಭ್ಯ ಪದಗಳನ್ನು ಬಳಸಿ ಪವನ್ ಕಲ್ಯಾಣ್‌ರನ್ನು ನಿಂದಿಸಿದ್ದ ಬಳಿಕ ಅಖಾಡಕ್ಕೆ ರಾಮ್ ಗೋಪಾಲ್ ವರ್ಮಾ ಇಳಿದಿದ್ದರು. ಶ್ರೀರೆಡ್ಡಿಗೆ ಪವನ್ ಕಲ್ಯಾಣ್ ಜೊತೆ ಸಮರ ಸಾರುವಂತೆ ಹೇಳಿದ್ದೇ ನಾನು ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದರು. ಆ ಬಳಿಕ ರಾಮ್ ಗೋಪಾಲ್ ವರ್ಮಾ ಪವರ್ ಸ್ಟಾರ್ ಪವನ್ ಕಲ್ಯಾಣ್‌ಗೆ ಕ್ಷಮೆ ಕೇಳಿದ್ದರು. ಈ ಘಟನೆ ನಡೆದ ಬಳಿಕ ಪವನ್ ಕಲ್ಯಾಣ್ ಅಭಿಮಾನಿಗಳು ಶ್ರೀ ರೆಡ್ಡಿ ಹಾಗೂ ರಾಮ್ ಗೋಪಾಲ್ ವರ್ಮಾ ಇಬ್ಬರ ವಿರುದ್ಧವೂ ತಿರುಗಿಬಿದ್ದಿದ್ದರು. ಪವನ್ ಕಲ್ಯಾಣ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಏನೇ ಆದರೂ ತಾವು ಸದಾ ಮುಂದಿರುತ್ತಾರೆ. ಹೀಗಾಗಿ ಪವನ್ ಕಲ್ಯಾಣ್ ಅಭಿಮಾನಿಗಳನ್ನು ಎದುರು ಹಾಕಿಕೊಳ್ಳಲು ತಾರೆಯರು ಇಷ್ಟಪಡುವುದಿಲ್ಲ. ಆದರೆ, ಶ್ರೀರೆಡ್ಡಿ ಹಾಗೂ ಆರ್‌ಜಿವಿ ಇಂತಹದ್ದೊಂದು ಸಾಹಸಕ್ಕೆ ಕೈ ಹಾಕಿದ್ದರು.


Click it and Unblock the Notifications











