ತೆಲುಗಿನ ವಿವಾದಾತ್ಮಕ ಜ್ಯೋತಿಷಿ ವೇಣುಸ್ವಾಮಿಗೆ ನಟ-ನಟಿಯರ ರಾಶಿ, ನಕ್ಷತ್ರ ಹೇಗೆ ತಿಳಿಯುತ್ತೆ? ಹೇಳೋರು ಯಾರು?
ಒಂದು ಕಾಲದಲ್ಲಿ ಟಾಲಿವುಡ್ ಮಂದಿಯ ಫೇವರಿಟ್ ಜ್ಯೋತಿಷಿಯಾಗಿದ್ದವರು ವೇಣುಸ್ವಾಮಿ. ಆದರೆ, ಇತ್ತೀಚೆಗೆ ಟಾಲಿವುಡ್ ಜೊತೆಗಿನ ತಮ್ಮ ಬಾಂಧವ್ಯವನ್ನು ಕೆಡಿಸಿಕೊಂಡಿದ್ದಾರೆ. ತಾವಾಗಿಯೇ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಪೇಚಿಗೆ ಸಿಲುಕಿದ್ದಾರೆ. ತೆಲುಗು ಚಿತ್ರರಂಗ ನಟಿ-ನಟಿಯರು ಹಾಗೂ ರಾಜಕಾರಣಿಗಳ ವೈಯಕ್ತಿಕ ಜಾತಕ ಹಾಗೂ ಸಂಭವಿಸಬಹುದಾದ ಕಂಟಕಗಳನ್ನು ಮುಂಚಿತವಾಗಿ ಹೇಳುವ ಮೂಲಕ ಪೇಚಿಗೆ ಸಿಲುಕಿದ್ದರು.
ಆರಂಭದ ದಿನಗಳಲ್ಲಿ ವೇಣುಸ್ವಾಮಿ ಹೇಳಿದ ಕೆಲವು ಭವಿಷ್ಯವಾಣಿಗಳು ನಿಜವಾದವು. ಇಲ್ಲಿಂದ ವೇಣುಸ್ವಾಮಿ ತೆಲುಗು ಸಿನಿಮಾ ಮಂದಿಯ ಫೇವರಿಟ್ ಆದರು. ಅಷ್ಟೇ ಅಲ್ಲದೆ ಅಲ್ಲಿನ ಪ್ರಮುಖ ರಾಜಕಾರಣಿಗಳ ಮನೆಯಲ್ಲಿ ಇವರಿಂದಲೇ ವಿಶೇಷ ಪೂಜೆಯನ್ನು ಮಾಡಿಸುತ್ತಿದ್ದರು. ಇವರಿಂದ ಪೂಜೆ ಮಾಡಿಸಿದ ಹಲವು ನಟ-ನಟಿಯರು ಸೂಪರ್‌ಸ್ಟಾರ್ ಪಟ್ಟಕ್ಕೇರಿದ್ದರು. ಇನ್ನು ಕೆಲ ರಾಜಕಾರಣಿಗಳಿಗೆ ತಮ್ಮ ಕ್ಷೇತ್ರದಲ್ಲಿ ಯಶಸ್ಸು ಸಿಕ್ಕಿತ್ತು.

ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ವೇಣುಸ್ವಾಮಿ ಇತ್ತೀಚೆಗೆ ಬಹಿರಂಗವಾಗಿ ಭವಿಷ್ಯವನ್ನು ನುಡಿಯುವುದಕ್ಕೆ ಶುರು ಮಾಡಿದ್ದರು. ಅದು ತೆಲುಗು ರಾಜ್ಯಗಳ ಚುನಾವಣಾ ಫಲಿತಾಂಶ ಇರಬಹುದು. ಇಲ್ಲವೇ ಕ್ರಿಕೆಟ್ ವಿಶ್ವಕಪ್ ಫಲಿತಾಂಶವೇ ಇರಬಹುದು. ವೇಣು ಸ್ವಾಮಿ ಹೇಳಿದ ಭವಿಷ್ಯಗಳೆಲ್ಲವೂ ತಲೆಕೆಳಗಾದಾಗ ಜನರು ತೀವ್ರವಾಗಿ ಟೀಕಿಸುವುದಕ್ಕೆ ಶುರು ಮಾಡಿದ್ದರು. ಅಲ್ಲದೆ, ಅಕ್ಕಿನೇನಿ ನಾಗಚೈತನ್ಯ-ಶೋಭಿತಾ ವೈವಾಹಿಕ ಜೀವನದ ಕುರಿತು ನುಡಿದ ಭವಿಷ್ಯ ತೆಲುಗು ಮಂದಿಯ ಕೆಂಗಣ್ಣಿಗೆ ಗುರಿಯಾಗಿತ್ತು.
ಈ ವಿವಾದ ಯಾವಾಗ ತೆಲಂಗಾಣ ಮಹಿಳಾ ಆಯೋಗದವರೆಗೂ ಹೋಯ್ತೋ ಆ ಸಂದರ್ಭದಲ್ಲಿ ಸೆಲೆಬ್ರೆಟಿಗಳಿಗೆ ಭವಿಷ್ಯವನ್ನು ಹೇಳುವುದನ್ನೇ ನಿಲ್ಲಿಸುತ್ತೇನೆ ಎಂದರು. ಹೀಗಾಗಿ ಒಂದಿಷ್ಟು ದಿನ ಸೈಲೆಂಟ್ ಆಗಿದ್ದರು. ಆದರೆ, ಇತ್ತೀಚೆಗೆ ವೇಣುಸ್ವಾಮಿ ಮತ್ತೆ ಆಕ್ಟಿವ್ ಆಗಿದ್ದಾರೆ. ಹಲವು ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶಗಳನ್ನು ನೀಡುತ್ತಿದ್ದಾರೆ. ಇಂತಹದ್ದೇ ಒಂದು ಸಂದರ್ಶನದಲ್ಲಿ ಸೆಲೆಬ್ರೆಟಿಗಳ ರಾಶಿ, ನಕ್ಷತ್ರವೆಲ್ಲ ಅವರಿಗೆ ಹೇಗೆ ಸಿಗುತ್ತೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ತೆಲುಗು ರಾಜ್ಯಗಳಲ್ಲಿ ದಿಗ್ಗಜರೇ ಇರುವಾಗ ವೇಣುಸ್ವಾಮಿಗೆ ಸೆಲೆಬ್ರೆಟಿಗಳ ಭವಿಷ್ಯ ಹೇಗೆ ಗೊತ್ತಾಗುತ್ತೆ? ಈ ಪ್ರಶ್ನೆ ಹಲವರನ್ನು ಕಾಡಿದ್ದು ಇದೆ. ಈ ಪ್ರಶ್ನೆಗಳಿಗೆ ವೇಣುಸ್ವಾಮಿ ಉತ್ತರಿಸಿದ್ದಾರೆ. ಟಾಲಿವುಡ್‌ಗೂ ತಮಗೂ ಇವರು ನಂಟ ಅನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. 1993ರಲ್ಲಿ ತೆರೆಕಂಡ 'ಆಪದ್ಭಾಂದವುಡು' ಸಿನಿಮಾದಲ್ಲಿ ಚಿರಂಜೀವಿ ಜೊತೆ ಬ್ರಾಹ್ಮಣನ ಪಾತ್ರ ಮಾಡಬೇಕಿತ್ತು ಎಂದು ವೇಣುಸ್ವಾಮಿ ಹೇಳಿಕೊಂಡಿದ್ದಾರೆ. 1988ರಿಂದಲೂ ತೆಲುಗು ಸಿನಿಮಾಗಳ ಮುಹೂರ್ತ ಪೂಜೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. "ಎಲ್ಲರೂ ಪ್ರಭಾಸ್, ಕೆಸಿಆರ್ ಜಾತಕ ಹೇಗೆ ಗೊತ್ತಾಗುತ್ತದೆ ಎಂದು ಕೇಳುತ್ತಾರೆ. ಇದೇ ನನ್ನ ತಾಕತ್ತು" ಎಂದಿದ್ದಾರೆ.
ಇದೇ ವೇಳೆ ಚಂದ್ರಬಾಬು ನಾಯ್ಡು ಅವರ ಮನೆಯಲ್ಲಿ 10 ವರ್ಷಗಳ ಕಾಲ ಪೂಜೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಪವನ್ ಕಲ್ಯಾಣ್ ಅವರ 'ಅಕ್ಕ ಅಮ್ಮಾಯಿ ಇಕ್ಕ ಅಬ್ಬಾಯಿ' ಮತ್ತು 'ಸುಸ್ವಾಗತಂ' ಸಿನಿಮಾಗಳಿಗೆ ಪೂಜೆ ಮಾಡಿದ ತನಗೆ ಅವರಲ್ಲಿ ನಕ್ಷತ್ರ ಕೇಳುವ ಧೈರ್ಯ ಇರುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. "ನಾನು 13 ವರ್ಷ ವಯಸ್ಸಿನಲ್ಲಿಯೇ ಸಿನಿಮಾರಂಗಕ್ಕೆ ಬಂದಿದ್ದೇನೆ. ಹೀಗಾಗಿ ಸಿನಿಮಾ ಮತ್ತು ರಾಜಕೀಯ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಯ ನಕ್ಷತ್ರ ಮತ್ತು ಹುಟ್ಟಿದ ದಿನಾಂಕದ ಬಗ್ಗೆ ನನ್ನ ಬಳಿ ಮಾಹಿತಿ ಇದೆ" ಎಂದಿದ್ದಾರೆ.


Click it and Unblock the Notifications











