Sankranthiki Vasthunnam Box office:ಸಂಕ್ರಾಂತಿಗೆ ಬಂದು ಬಾಕ್ಸಾಫೀಸ್ ದೋಚಿದ 'ವಿಕ್ಟರಿ' ಮಾಮ ವೆಂಕಟೇಶ್
ಟಾಲಿವುಡ್‌ನಲ್ಲಿ ಸಂಕ್ರಾಂತಿಗೆ ಮೂರು ದೊಡ್ಡ ಸಿನಿಮಾಗಳು ರಿಲೀಸ್ ಆಗಿವೆ. ಅದರಲ್ಲಿ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ನಟಿಸಿದ 'ಗೇಮ್ ಚೇಂಜರ್', ಬಾಲಕೃಷ್ಣ ನಟನೆಯ 'ಡಾಕು ಮಹಾರಾಜ್ ಹಾಗೂ ವಿಕ್ಟರಿ ವೆಂಕಟೇಶ್ ನಟನೆಯ 'ಸಂಕ್ರಾಂತಿಕಿ ವಸ್ತುನ್ನಾಂ'. ಬಿಡುಗಡೆಗೂ ಮುನ್ನ ಈ ಮೂರು ಸಿನಿಮಾಗಳಲ್ಲಿ 'ಗೇಮ್ ಚೇಂಜರ್' ಮೇಲೆ ಹೆಚ್ಚು ನಿರೀಕ್ಷೆ ಇತ್ತು.
ಆದರೆ, ದಗ್ಗುಬಾಟಿ ವೆಂಕಟೇಶ್ ಸಂಕ್ರಾಂತಿಗೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಅಂದರೆ, ಎದುರುಗಡೆ ಯಾರೇ ಇದ್ದರೂ ಅವರು ಒಮ್ಮೆ ಯೋಚನೆ ಮಾಡಬೇಕು. ಕಳೆದ ಕೆಲವು ವರ್ಷಗಳಿಂದ ಸುಗ್ಗಿ ಹಬ್ಬಕ್ಕೆ ರಿಲೀಸ್ ಆದ ವಿಕ್ಟರಿ ವೆಂಕಟೇಶ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಈ ವರ್ಷದ ಕೂಡ ಅದೇ ರಿಸಲ್ಟ್. ಇಬ್ಬರ ದಿಗ್ಗಜರ ಮುಂದೆ ಅಖಾಡಕ್ಕಿಳಿದು ಸಂಕ್ರಾಂತಿ ಸಕ್ಸಸ್ ನನ್ನದೇ ಎಂದಿದ್ದಾರೆ ವಿಕ್ಟರಿ ವೆಂಕಟೇಶ್.

ಈ ವರ್ಷ ಸಂಕ್ರಾಂತಿಗೆ ರಿಲೀಸ್ ಆದ ದಗ್ಗುಬಾಟಿ ವೆಂಕಟೇಶ್ ಸಿನಿಮಾ 'ಸಂಕ್ರಾಂತಿ ವಸ್ತುನ್ನಾಂ'. ಇದೊಂದು ಪಕ್ಕಾ ಕಾಮಿಡಿ ಕಮ್ ಆಕ್ಷನ್ ಸಿನಿಮಾ. ತೆಲುಗು ಮಂದಿ ಕುಟುಂಬ ಸಮೇತ ಬಂದು ಹಬ್ಬದ ಮೂಡ್‌ನಲ್ಲಿ ಸಿನಿಮಾ ನೋಡಿದ್ದಾರೆ. ಅದಕ್ಕೆ ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಬಂಪರ್ ಕಲೆಕ್ಷನ್ ಮಾಡಿದೆ. ಹಾಗಂತ ಆಂಧ್ರ , ತೆಲಂಗಾಣದಲ್ಲಿ ಅಷ್ಟೇ ಅಲ್ಲ ಕರ್ನಾಟಕದಲ್ಲೂ ಮೊದಲನೇ ದಿನ ಕಲೆಕ್ಷನ್ ಸಖತ್ ಆಗಿದೆ.
ಮೊದಲನೇ ದಿನ ಗಳಿಕೆ ಎಷ್ಟು
'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾಗೆ ಬಿಡುಗಡೆಗೂ ಮುನ್ನ ಅಷ್ಟು ದೊಡ್ಡ ಹೈಪ್ ಸಿಕ್ಕಿರಲಿಲ್ಲ. ಉಳಿದೆರಡು ಸಿನಿಮಾಗಳಿಗೆ ಹೋಲಿಸಿದರೆ, ವೆಂಕಟೇಶ್ ಸಿನಿಮಾ ಪ್ರಚಾರ ಮಾಡಿರಲಿಲ್ಲ. ಆದರೂ ಮೊದಲ ದಿನವೇ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಇಂಡಸ್ಟ್ರಿ ಬಾಕ್ಸಾಫೀಸ್ ಟ್ರ್ಯಾಕಿಂಗ್ ವೆಬ್ ಸೈಟ್ ಸ್ಯಾಕ್ನಿಲ್ಕ್ ವರದಿ ಪ್ರಕಾರ ಈ ಸಿನಿಮಾ ಮೊದಲ ದಿನ ಕಲೆಕ್ಷನ್ 25 ಕೋಟಿ ರೂಪಾಯಿ. ಹಾಗಂತ ಇದು ಫೈನಲ್ ರಿಪೋರ್ಟ್ ಅಲ್ಲ. ಕಲೆಕ್ಷನ್ ಇನ್ನೂ ಏರಿಕೆ ಆಗುವ ಸಾಧ್ಯತೆಯಿದೆ.
ಕರ್ನಾಟಕದ ಕಲೆಕ್ಷನ್ ಎಷ್ಟು?
ಆಂಧ್ರ ಹಾಗೂ ತೆಲಂಗಾಣದಲ್ಲಿ ಸಂಕ್ರಾಂತಿ ಸಂಭ್ರಮ ಜೋರು. ಹೀಗಾಗಿ ಜನರು ಹಬ್ಬದ ಜೊತೆಗೆ ಸಿನಿಮಾ ನೋಡಿ ಎಂಜಾಯ್ ಮಾಡುತ್ತಾರೆ. ಆದರೆ ಕರ್ನಾಟಕದ ಬಾಕ್ಸಾಫೀಸ್‌ನಲ್ಲೂ ಕಲೆಕ್ಷನ್ ಏನೂ ಕಮ್ಮಿಯಿಲ್ಲ. ಮೊದಲ ದಿನ ಇಲ್ಲೂ ಉತ್ತಮ ಗಳಿಕೆ ಆಗಿದೆ. ಕರ್ನಾಟಕದ ವಿತರಕರ ವಲಯಕ್ಕೆ ಸಿಕ್ಕಿರುವ ಲೆಕ್ಕಾಚಾರದ ಪ್ರಕಾರ, ಈ ಸಿನಿಮಾ 2.84 ಕೋಟಿ ರೂಪಾಯಿಯಿಂದ 5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಸಿನಿಮಾದ ಹೈಲೈಟ್ ಏನು?
ಟಾಲಿವುಡ್‌ನ ಜನಪ್ರಿಯ ನಿರ್ಮಾಪಕ ದಿಲ್ ರಾಜು ಹಾಗೂ ಶಿರೀಶ್ ನಿರ್ಮಿಸಿರುವ ಸಿನಿಮಾ 'ಸಂಕ್ರಾಂತಿಕಿ ವಸ್ತುನ್ನಾಂ' ಕೈ ಹಿಡಿದಿದೆ. ಇದೇ ನಿರ್ಮಾಪಕರು ನಿರ್ಮಿಸಿದ್ದ 'ಗೇಮ್ ಚೇಂಜರ್' ಕೈ ಕೊಟ್ಟಿದೆ. ಇನ್ನು ವೆಂಕಟೇಶ್ ಸಿನಿಮಾ ಹೈಲೈಟ್ ಏನಂದ್ರೆ, ಇದೊಂದು ಫ್ಯಾಮಿಲಿ ಎಂಟರ್‌ಟೈನರ್. ಹಾಸ್ಯ, ಆಕ್ಷನ್, ಫ್ಯಾಮಿಲಿ ಡ್ರಾಮ ಸಿನಿಮಾ. ವಿಕ್ಟರಿ ವೆಂಕಟೇಶ್ ಜೊತೆಗೆ ಮೀನಾಕ್ಷಿ ಚೌಧರಿ, ಐಶ್ವರ್ಯ ರಾಜೇಶ್, ವಿಕೆ ನರೇಶ್, ವಿಟಿ ಗಣೇಶ್, ಸಾಯಿ ಕುಮಾರ್, ಪಮ್ಮಿ ಸಾಯಿ ಅಂತಹ ಸ್ಟಾರ್ ಕಾಸ್ಟ್ ಇದೆ. ಹಾಗೇ ಅನಿಲ್ ರವಿಪುಡಿ ನಿರ್ದೇಶನ ಈ ಸಿನಿಮಾದ ಹೈಲೈಟ್.
ಬಜೆಟ್.. ಸ್ಕ್ರೀನ್ ಎಷ್ಟು?
'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾದ ಬಜೆಟ್ 80 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಕಡಿಮೆ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದು, 1300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ. ಮೊದಲ ದಿನವೇ 25 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು, ಒಂದು ವಾರದೊಳಗೆ ಹಾಕಿದ ಬಂಡವಾಳ ರಿಕವರಿ ಆಗುತ್ತೆ ಎಂಬ ನಿರೀಕ್ಷೆಯಿದೆ. ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದರಿಂದ 100 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ.


Click it and Unblock the Notifications











