ಸೌಂದರ್ಯಾ ಕೊನೆಯ ಸಿನಿಮಾ 'ಆಪ್ತಮಿತ್ರ' ಅಲ್ಲ; ಆ ಚಿತ್ರ ಇನ್ನೂ ರಿಲೀಸ್ ಆಗಲಿಲ್ಲ ಯಾಕೆ ಗೊತ್ತೇ?
ಬಹುಭಾಷಾ ನಟಿ ದಿವಂಗತ ಸೌಂದರ್ಯಾ ಈಗ ಕೇವಲ ನೆನಪು ಅಷ್ಟೇ. ಕನ್ನಡದ ಈ ನಟಿ ಅಪಾರ ಅಭಿಮಾನಿಗಳನ್ನು ಅಗಲಿ ನಿನ್ನೆಗೆ (ಏಪ್ರಿಲ್ 17) ಬರೋಬ್ಬರಿ 20 ವರ್ಷ. ಸಿನಿ ಪ್ರೇಮಿಗಳಿಂದ ದೂರವಾಗಿ 20 ವರ್ಷಗಳೇ ಕಳೆದಿದ್ದರೂ ಇನ್ನೂ ಸೌಂದರ್ಯಾ ಅವರಿಂದ ದೂರ ಆಗಿಲ್ಲ. ಇವರು ನಟಿಸಿದ ಸಿನಿಮಾ ಪ್ರಸಾರ ಆದಾಗಲೆಲ್ಲಾ ನೆನಪಿಗೆ ಬರುತ್ತಾರೆ.
ಸೌಂದರ್ಯಾ ಪಾದರಸದಂತೆ ಇದ್ದ ನಟಿ. ಸದಾ ಚುರುಕಿನಿಂದ ಓಡಾಡಿಕೊಂಡಿದ್ದ ಕಲಾವಿದೆ. ಕನ್ನಡ, ತೆಲುಗು ಭಾಷೆಯ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿ ಇರುವಾಗಲೇ ಸೌಂದರ್ಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ವೃತ್ತಿ ಹಾಗೂ ವೈಯಕ್ತಿಕ ಬದುಕು ಎರಡರಲ್ಲೂ ಪರ್ಫೆಕ್ಟ್.

ಹೆಸರಿಗೆ ತಕ್ಕಂತೆ ಸೌಂದರ್ಯಾ ನಿಜಕ್ಕೂ ಸುಂದರಿ. ತೆರೆಮೇಲೆ ಟ್ರೆಡಿಷನಲ್ ಲುಕ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟಿ ಅಭಿಮಾನಿಗಳೇನು ಕಮ್ಮಿಯಿರಲಿಲ್ಲ. ಇಂದಿಗೂ ಇವರ ಸಿನಿಮಾ ನೋಡುವುದಕ್ಕೆ ಜನರು ತುದಿಗಾಲಲ್ಲಿ ನಿಲ್ಲುತ್ತಾರೆ. ಇಂತಹ ಅಭಿಮಾನಿಗಳಿಗೊಂದು ಸುದ್ದಿಯಿದೆ. ಸೌಂದರ್ಯಾ ಅಗಲುವುದಕ್ಕೂ ಮುನ್ನ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಹಾಗಿದ್ರೆ ಆ ಸಿನಿಮಾ ಯಾವುದು? ಯಾಕೆ ಬಿಡುಗಡೆಯಾಗಿಲ್ಲ ತಿಳಿಯಲು ಮುಂದೆ ಓದಿ.
1992ರಲ್ಲಿ ಸೌಂದರ್ಯಾ ಕನ್ನಡದ 'ಗಂಧರ್ವ' ಸಿನಿಮಾದ ಮೂಲಕ ನಟನೆ ಆರಂಭಿಸಿದ್ದರು. ಇಲ್ಲಿಂದ ಸೌಂದರ್ಯಾ ಕನ್ನಡ, ತೆಲುಗು, ತಮಿಳು ಅಂತ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಾ ಒಂದೊಳ್ಳೆ ವೃತ್ತಿ ಬದುಕನ್ನು ಕಟ್ಟಿಕೊಂಡಿದ್ದರು. 2004ರಲ್ಲಿ ಸೌಂದರ್ಯಾ ವೃತ್ತಿ ಬದುಕಿನ ಎರಡು ಪ್ರಮುಖ ಸಿನಿಮಾಗಳು ರಿಲೀಸ್ ಆಗಿದ್ದವು. ಅದರಲ್ಲೊಂದು 'ಶ್ವೇತ ನಾಗರ', ಇನ್ನೊಂದು 'ಆಪ್ತಮಿತ್ರ'.

'ಶ್ವೇತ ನಾಗರ' ಸೌಂದರ್ಯಾ ನಟನೆಯ 100ನೇ ಸಿನಿಮಾ ಆಗಿತ್ತು. ಇದು ತೆಲುಗು ಹಾಗೂ ಕನ್ನಡ ಎರಡೂ ಭಾಷೆಯಲ್ಲಿಯೂ ರಿಲೀಸ್ ಆಗಿತ್ತು. ಇದೇ ವರ್ಷ ಮೆಗಾ ಬ್ಲಾಕ್‌ಬಸ್ಟರ್ 'ಆಪ್ತಮಿತ್ರ' ರಿಲೀಸ್ ಆಯ್ತು. ಇದೇ ಸೌಂದರ್ಯ ನಟಿಸಿದ ಕೊನೆಯ ಸಿನಿಮಾ ಅಂತ ಅಂದುಕೊಂಡವರು ಅದೆಷ್ಟೋ ಮಂದಿ. ಆದರೆ, ಸೌಂದರ್ಯಾ ನಟಿಸಿದ ಸಿನಿಮಾವೊಂದು ಇನ್ನೂ ರಿಲೀಸ್ ಆಗಬೇಕಿದೆ. ಈ ನಟಿ ಅಗಲಿ 20 ವರ್ಷಗಳಾಗಿದ್ದರೂ, ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
ಹೌದು, ಸೌಂದರ್ಯಾ ನಟಿಸಿರುವ ಸಿನಿಮಾವೊಂದು ಇನ್ನೂ ಬಿಡುಗಡೆಯಾಗಬೇಕಿದೆ. ಕನ್ನಡದಿಂದ ತೆಲುಗಿಗೆ ಸೌಂದರ್ಯಾರನ್ನು ಕರೆದುಕೊಂಡು ಹೋಗಿದ್ದ ತ್ರಿಪುರನೇನಿ ವರಪ್ರಸಾದ್ 'ಗೆಲುಪು' ಅನ್ನುವ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಈ ಸಿನಿಮಾದಲ್ಲಿ ಕೆಲವೇ ಕೆಲವು ನಿಮಿಷಗಳಲ್ಲಿ ಬಂದು ಹೋಗುವ ಪಾತ್ರದಲ್ಲಿ ನಟಿಸಲು ನಿರ್ದೇಶಕರ ಮೇಲಿನ ಅಭಿಮಾನದಿಂದ ಒಪ್ಪಿದ್ದರು.
ಉಷಾ ಕಿರಣ್ ಮೂವೀಸ್ ಸಹಯೋಗದಲ್ಲಿ 'ಗೆಲುಪು' ಸಿನಿಮಾವನ್ನು ವಿಜೇತ ಮೂವೀಸ್ ನಿರ್ಮಣ ಮಾಡುತ್ತಿತ್ತು. ಸಿನಿಮಾ ಮುಗಿದ್ದ ಬಳಿಕ ಉಷಾಕಿರಣ್ ಮೂವೀಸ್ ಬಜೆಟ್ ಮೇಲೆ ಶೇ.10ರಷ್ಟು ಹಣ ಕೊಟ್ಟು ಸಿನಿಮಾವನ್ನು ರಿಲೀಸ್ ಮಾಡಬೇಕಿತ್ತು. ಹೀಗಾಗಿ ಬೇರೆ ಡಿಸ್ಟ್ರಿಬ್ಯೂಟರ್‌ಗಳಿಗೆ ಈ ಸಿನಿಮಾವನ್ನು ಕೊಟ್ಟಿರಲಿಲ್ಲ. ಇನ್ನೇ ರಿಲೀಸ್ ಆಗಬೇಕು ಅನ್ನುವಾಗಲೇ ಉಷಾ ಕಿರಣ್ ಮೂವೀಸ್ ಅವರ ಸಿನಿಮಾಗಳು ಒಂದರ ಹಿಂದೊಂದು ಸೋತಿದ್ದರಿಂದ 'ಗೆಲುಪು' ರಿಲೀಸ್ ಮಾಡಲು ಹಿಂದೇಟು ಹಾಕಿತು. ಇದೇ ವೇಳೆ ಬೇರೆಯವರು ರಿಲೀಸ್ ಮಾಡಲು ಮುಂದೆ ಬಂದಿಲ್ಲ. ಹೀಗಾಗಿ ಇನ್ನೂ ಈ ಸಿನಿಮಾ ಡಬ್ಬದಲ್ಲೇ ಇದೆ ಎಂದು ಹೇಳಲಾಗುತ್ತಿದೆ.
ತೆಲುಗಿನಲ್ಲಿ ಬಾಲಯ್ಯ ಜೊತೆ ನಟಿಸಿದ್ದ 'ನರ್ತಾನಾಶಾಲಾ' ಸಿನಿಮಾ 2020ರಲ್ಲಿ ರಿಲೀಸ್ ಆಗಿತ್ತು. ಇದೇ ಕೊನೆಯ ಸಿನಿಮಾ ಎನ್ನುವವರು ಇದ್ದಾರೆ. ಆದ್ರೀಗ 'ಗೆಲುಪು' ರಿಲೀಸ್ ಆದರೆ, ಇದೇ ಕೊನೆಯ ಸಿನಿಮಾ ಆಗಲಿದೆ.


Click it and Unblock the Notifications











