₹100 ಕೋಟಿ ಬೋಗಸ್ ಕಲೆಕ್ಷನ್; 'ಗ್ಲೋಬಲ್ ಫ್ರಾಡ್ ರಾಮ್ ಚರಣ್' ಎನ್ನುತ ತಿರುಗಿಬಿದ್ದ ನೆಟ್ಟಿಗರು!
ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟನೆಯ ಸಿನಿಮಾ 'ಗೇಮ್ ಚೇಂಜರ್' ವಿಶ್ವದಾದ್ಯಂತ ಬಿಡುಗಡೆಯಾಗಿದೆ. ರಿಲೀಸ್ ಆದ ಮೊದಲ ದಿನವೇ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಶಂಕರ್ ಅಂತ ನಿರ್ದೇಶಕ ಆಕ್ಷನ್ ಕಟ್ ಹೇಳಿದ್ದರೂ ಪ್ರೇಕ್ಷಕರಿಗೆ ಈ ಸಿನಿಮಾ ಆಗಿಲ್ಲ. ಹೀಗಾಗಿ ಮೊದಲ ದಿನವೇ ನಿರ್ದೇಶಕ ಶಂಕರ್ ವಿರುದ್ಧ ರಾಮ್ ಚರಣ್ ಫ್ಯಾನ್ಸ್ ಅಸಮಧಾನಗೊಂಡಿದ್ದರು.
ಇದೇ ಬೆನ್ನಲ್ಲೇ ಎನ್‌ಟಿಆರ್ ಅಭಿಮಾನಿಗಳು, ಅಲ್ಲು ಅರ್ಜುನ್ ಅಭಿಮಾನಿಗಳು ಕೂಡ 'ಗೇಮ್ ಚೇಂಜರ್' ಸಿನಿಮಾವನ್ನು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದರು. ಅದರಲ್ಲೂ ಇತ್ತೀಚೆಗೆ ನಡೆದ ಘಟನೆ ಅಲ್ಲು ಅರ್ಜುನ್ ಅಭಿಮಾನಿಗಳನ್ನು ಕೆರಳಿಸಿತ್ತು. ಈಗ ಸಿನಿಮಾ ಅಷ್ಟಕ್ಕಷ್ಟೆ ಎನ್ನುವಾಗಲೇ 'ಗೇಮ್ ಚೇಂಜರ್' ವಿರುದ್ಧವೂ ಟ್ರೋಲ್ ಮಾಡಿ, ಮೂವರು ಫ್ಯಾನ್ಸ್ ಕೂಡ ಕಿತ್ತಾಡುವುದಕ್ಕೆ ಶುರು ಮಾಡಿದ್ದಾರೆ.

ಸಾಲದು ಎಂಬಂತೆ 'ಗೇಮ್ ಚೇಂಜರ್' ಸಿನಿಮಾದ ಕಲೆಕ್ಷನ್ ವಿಚಾರವಾಗಿ ರಾಮ್ ಚರಣ್ ಟ್ರೆಂಡಿಂಗ್‌ನಲ್ಲಿದ್ದಾರೆ. 'ಗ್ಲೋಬಲ್ ಫ್ರಾಡ್ ರಾಮ್ ಚರಣ್' ಅಂತ ಟ್ವಿಟರ್‌ನಲ್ಲಿ ಟ್ರೆಂಡ್ ಮಾಡುವುದಕ್ಕೆ ಶುರುಮಾಡಿದ್ದಾರೆ. ಅಷ್ಟಕ್ಕೂ ರಾಮ್ ಚರಣ್ ಯಾಕೆ ಟ್ರೋಲ್ ಆಗುತ್ತಿದ್ದಾರೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಗೇಮ್ ಚೇಂಜರ್' ಸಿನಿಮಾ ನಿನ್ನೆ (ಜನವರಿ 10) ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲಾಗಿದೆ. ತೆಲುಗಿನ ಜನಪ್ರಿಯ ನಿರ್ಮಾಪಕ ದಿಲ್ ರಾಜ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. 'ಗೇಮ್ ಚೇಂಜರ್' ಸಿನಿಮಾದ ಮೊದಲ ದಿನದ ಕಲೆಕ್ಷನ್ ಮೇಲೆ ಕಣ್ಣಿಟ್ಟು ಕೂತಿದ್ದ ನೆಟ್ಟಿಗರಿಗೆ ಭಾರತದಲ್ಲಿ 51 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಅನ್ನೋ ವರದಿ ಸಿಕ್ಕಿತ್ತು. ಇಷ್ಟೇ ಆಗಿದ್ದರೆ, 'ಗ್ಲೋಬಲ್ ಫ್ರಾಡ್ ರಾಮ್ ಚರಣ್' ಅಂತ ಟ್ರೆಂಡ್ ಆಗುತ್ತಿರಲಿಲ್ಲ. ನಿರ್ಮಾಣ ಸಂಸ್ಥೆ ವಿಶ್ವದಾದ್ಯಂತ ಸಿನಿಮಾದ ಕಲೆಕ್ಷನ್ ರಿಪೋರ್ಟ್ ಹೊರ ಹಾಕಿದ್ದರು.
'ಗೇಮ್ ಚೇಂಜರ್' ಗ್ಲೋಬಲ್ ಬಾಕ್ಯಾಫೀಸ್‌ನಲ್ಲಿ ₹186 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂಬ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಫಿಲ್ಮ್ ಮೇಕರ್ಸ್ ರಿಲೀಸ್ ಮಾಡಿದ ಈ ಪೋಸ್ಟರ್ ನೆಟ್ಟಿಗರ ನಿದ್ದೆ ಕೆಡಿಸಿತ್ತು. ಸಿನಿಮಾ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಪೋಸ್ಟರ್ ವಿರುದ್ಧ ಕಾಮೆಂಟ್‌ಗಳು ಹರಿದಾಡುವುದಕ್ಕೆ ಶುರು ಮಾಡಿದ್ದವು. ಇತ್ತ ಟ್ವಿಟರ್‌ನಲ್ಲಿ (ಎಕ್ಸ್) 'ಗ್ಲೋಬಲ್ ಫ್ರಾಡ್ ರಾಮ್ ಚರಣ್' ಅಂತ ಹ್ಯಾಶ್‌ಟ್ಯಾಗ್ ಹಾಕಿ ಟ್ರೆಂಡ್ ಮಾಡಿದ್ದಾರೆ. ಇದು ರಾಮ್ ಚರಣ್ ಹಾಗೂ ಅಭಿಮಾನಿಗಳಿಗೆ ಮುಜುಗರ ಆಗುವಂತೆ ಮಾಡಿದೆ.
'ಗೇಮ್ ಚೇಂಜರ್' ನಿರ್ಮಾಣ ಸಂಸ್ಥೆ ₹186 ಕೋಟಿ ರೂ. ಕಲೆಕ್ಷನ್ ಎಂದು ಅನೌನ್ಸ್ ಮಾಡುತ್ತಿದ್ದಂತೆ ಬಾಕ್ಸಾಫೀಸ್ ಲೆಕ್ಕಾಚಾರದ ಬಗ್ಗೆ ಅನುಮಾನ ಎದ್ದಿದೆ. ನಿರ್ಮಾಣ ಸಂಸ್ಥೆಗಳು ನಕಲಿ ಬಾಕ್ಸಾಫೀಸ್ ಕಲೆಕ್ಷನ್ ವರದಿಯನ್ನು ನೀಡುತ್ತಿವೆ ಎಂಬ ಆರೋಪ ಕೇಳಿ ಬರುತ್ತಿವೆ. ಅಲ್ಲದೆ, ರಾಮ್ ಚರಣ್ ಹಾಗೂ ಸಿನಿಮಾ ಸಂಸ್ಥೆಯ ವಿರುದ್ಧ ಸುಳ್ಳು ಬಾಕ್ಸಾಫೀಸ್ ವರದಿಯನ್ನು ನೀಡುತ್ತಿದ್ದಾರೆಂದು ನೆಟ್ಟಿಗರು ಕಿಡಿಕಾರಿದ್ದಾರೆ.
ರಾಮ್ ಚರಣ್ ಜೊತೆಗೆ ಟಾಲಿವುಡ್‌ನ ಸೂಪರ್‌ಸ್ಟಾರ್‌ಗಳನ್ನು ಎಳೆದು ತರುತ್ತಿದ್ದಾರೆ. ಇತ್ತೀಚೆಗೆ ಮೆಗಾ ಬ್ಲಾಕ್‌ಬಸ್ಟರ್ ಎಂದು ಘೋಷಿಸಿಕೊಂಡಿರುವ 'ಪುಷ್ಪ 2' ಹೀರೋ ಅಲ್ಲುಅರ್ಜುನ್, 'ದೇವರ' ಚಿತ್ರದ ಹೀರೋ ಜೂ.ಎನ್‌ಟಿಆರ್ ಹಾಗೂ 'ಸಲಾರ್' ನಾಯಕಿ ಪ್ರಭಾಸ್ ಅನ್ನು ನೆಟ್ಟಿಗರು ಎಳೆದು ತರುತ್ತಿದ್ದಾರೆ. ನಕಲಿ ಬಾಕ್ಸಾಫೀಸ್ ರಿಪೋರ್ಟ್ ಕೊಡುವುದರಲ್ಲಿ ಟಾಲಿವುಡ್ ಹೀರೋಗಳು ಮುಂದೆ ಎಂದು ಆರೋಪಿಸುತ್ತಿದ್ದಾರೆ. ಶೇಮ್ ಆನ್ ತೆಲುಗು ಇಂಡಸ್ಟ್ರಿ ಅಂತಲೂ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.


Click it and Unblock the Notifications











