ಸೂಪರ್‌ಸ್ಟಾರ್ ಮಹೇಶ್ ಬಾಬು ಒಡೆತನದ AMB ಸಿನಿಮಾಸ್'ಗೆ ಜಿಎಸ್‌ಟಿ ಶಾಕ್; ಟ್ರಿಬ್ಯುನಲ್ ಹಾಕಿದ ದಂಡವೆಷ್ಟು ಗೊತ್ತೇ?
ಸಿನಿಮಾ ಪ್ರಿಯರಿಗೆ ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳು ಐಷಾರಾಮಿ ಮನರಂಜನೆಯನ್ನು ನೀಡುತ್ತಿವೆ. ತೆಲುಗು ರಾಜ್ಯಗಳಲ್ಲಿ ಅಲ್ಲಿನ ಸಿನಿಮಾ ತಾರೆಯರದ್ದೇ ಕೆಲವು ಮಲ್ಟಿಪ್ಲೆಕ್ಸ್ ಇವೆ. ಅದರಲ್ಲಿ ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ 'AMB ಸಿನಿಮಾಸ್' ಕೂಡ ಒಂದು. ಇತ್ತೀಚೆಗಷ್ಟೇ ಬೆಂಗಳೂರಿಗೂ ಎಎಂಬಿ ಸಿನಿಮಾಸ್ ಕಾಲಿಟ್ಟಿದೆ. ಕಪಾಲಿ ಚಿತ್ರಮಂದಿರವನ್ನೇ ಮಲ್ಟಿಪ್ಲೆಕ್ಸ್ ಆಗಿ ಬದಲಾಯಿಸಲಾಗಿದೆ.
ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ಏಷ್ಯನ್ ಸಿನಿಮಾಸ್‌ನ ಮಾಲೀಕರಾದ ಸುನಿಲ್ ನಾರಂಗ್ ಜಂಟಿಯಾಗಿ ಎಎಂಬಿ ಸಿನಿಮಾಸ್ ಅನ್ನು ನಡೆಸುತ್ತಿದ್ದಾರೆ. ಈ ಮಲ್ಟಿಪ್ಲೆಕ್ಸ್ ಮೇಲೆ ಈಗ ತೆರಿಗೆ ಹಾಗೂ ಗ್ರಾಹಕರಿಗೆ ವಂಚಿಸಿದ ಆರೋಪದ ಮೇಲೆ ಭಾರಿ ದಂಡ ಬಿದ್ದಿದೆ. ಸದ್ಯ ಇದೇ ವಿಷಯವನ್ನು ಇಟ್ಟುಕೊಂಡು ಮಹೇಶ್ ಬಾಬು ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

ಅಸಲಿ ಮ್ಯಾಟರ್ ಏನು?
ಕೆಲವು ವರ್ಷಗಳಿಂದ ಸಿನಿಮಾ ಮೇಲೆ ವಿಧಿಸಿದ್ದ ಜಿಎಸ್‌ಟಿಯನ್ನು ಕಡಿತಗೊಳಿಸುವ ಕೂಗು ಕೇಳಿ ಬರುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರ ಸಿನಿಮಾ ಟಿಕೆಟ್‌ಗಳ ಮೇಲಿನ ಹಾಕಿದ್ದ ಜಿಎಸ್‌ಟಿ ದರವನ್ನು ಕಡಿತಗೊಳಿಸಿತ್ತು. ಆದರೆ, ಅದರ ಲಾಭವನ್ನು ಕೆಲ ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗೆ ನೀಡಿರಲಿಲ್ಲ. ಅದರ ಲಾಭವನ್ನು ತಾವೇ ಪಡೆದುಕೊಂಡಿದ್ದಕ್ಕಾಗಿ ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (GSTAT) ಮಹೇಶ್ ಬಾಬು ಒಡೆತನದ AMB ಸಿನಿಮಾಸ್ ಸೇರಿದಂತೆ ತೆಲಂಗಾಣದ ಒಟ್ಟು 6 ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್‌ಗಳ ವಿರುದ್ಧ ದಂಡವನ್ನು ವಿಧಿಸಿದೆ.
ಕೇಂದ್ರ ಸರ್ಕಾರದ ಆದೇಶದ ಪ್ರಕಾರ 2019ರ ಜನವರಿ 1 ರಿಂದ ಜಿಎಸ್‌ಟಿ ದರವನ್ನು ₹100 ಕ್ಕಿಂತ ಹೆಚ್ಚಿನ ಟಿಕೆಟ್‌ಗಳಿಗೆ ಶೇ.28 ರಿಂದ ಶೇ.18ಕ್ಕೆ ಇಳಿಸಲಾಗಿತ್ತು. ಹಾಗೇ ₹100 ರೊಳಗಿನ ಟಿಕೆಟ್‌ಗಳಿಗೆ ಶೇ.18 ರಿಂದ ಶೇ.12ಕ್ಕೆ ಇಳಿಕೆ ಮಾಡಲಾಗಿತ್ತು. ಆದರೆ, ಕೆಲವು ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳು ಟಿಕೆಟ್‌ನ ಮೂಲ ಬೆಲೆಯನ್ನು ಏರಿಕೆ ಮಾಡಿ, ಹಳೆಯ ಬೆಲೆಗೆ ಸೇಲ್ ಮಾಡಲಾಗುತ್ತಿತ್ತು. ಹೀಗಾಗಿ ಸರ್ಕಾರ ನೀಡಿದ ತೆರಿಗೆ ವಿನಾಯ್ತಿ ಲಾಭ ಪ್ರೇಕ್ಷಕರಿಗೆ ಸಿಗುತ್ತಿರಲಿಲ್ಲ. ಈ ಲಾಭ ಚಿತ್ರಮಂದಿರಗಳ ಪಾಲಾಗುತ್ತಿತ್ತು. ಇದು ಜಿಎಸ್‌ಟಿ ಕಾಯ್ದೆಯ ನಿಯಮದ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.
ಯಾವ್ಯಾವ ಥಿಯೇಟರ್‌ಗೆ ಎಷ್ಟೆಷ್ಟು ದಂಡ?
ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (GSTAT) ತೆಲಂಗಾಣದ 6 ಚಿತ್ರಮಂದಿರಗಳನ್ನು ಸೇರಿಸಿ ಒಟ್ಟಾರೆ ₹1.7 ಕೋಟಿ ಮೊತ್ತವನ್ನು ಗ್ರಾಹಕರ ಕಲ್ಯಾಣ ನಿಧಿಗೆ (Consumer Welfare Fund) ಜಮೆ ಮಾಡುವಂತೆ ಆದೇಶಿಸಿದೆ. ಅದರಲ್ಲಿ ಮಹೇಶ್ ಬಾಬು ಒಡೆತನದ AMB ಸಿನಿಮಾಸ್ ಎಲ್‌ಎಲ್‌ಪಿ ಜಿಎಸ್‌ಟಿಯಲ್ಲಿ ಗೋಲ್‌ಮಾಲ್ ಮಾಡಿದ್ದು ಬೆಳೆಕಿ ಬಂದಿದೆ.

AMB ಸಿನಿಮಾಸ್ ಎಲ್‌ಎಲ್‌ಪಿ: ಒಟ್ಟು ₹1.1 ಕೋಟಿ ಅಕ್ರಮ ಲಾಭ- ₹35 ಲಕ್ಷ ಜಮೆ ಮಾಡಲು ಆದೇಶ
ಭ್ರಮರಾಂಬ ಸಿನಿಮಾಸ್ (ಕೂಕಟ್‌ಪಲ್ಲಿ): ₹11.80 ಲಕ್ಷ ಜಮೆಗೆ ಆದೇಶ
ಜ್ಯೋತಿ ಥಿಯೇಟರ್: ₹19.80 ಲಕ್ಷ ಜಮೆಗೆ ಆದೇಶ
ಎಎಸ್‌ಆರ್ ಸಿನಿಮಾಸ್: ₹9.6 ಲಕ್ಷ (+ ಶೇ. 18 ಬಡ್ಡಿ) ಜಮೆಗೆ ಆದೇಶ
ವಿಶ್ವನಾಥ್ ಥಿಯೇಟರ್: ₹9 ಲಕ್ಷ (+ ಶೇ. 18 ಬಡ್ಡಿ) ಜಮೆಗೆ ಆದೇಶ
ಕುಮಾರ್ ಥಿಯೇಟರ್: ₹2.5 ಲಕ್ಷ (+ ಶೇ. 18 ಬಡ್ಡಿ) ಜಮೆಗೆ ಆದೇಶ
ಮಹೇಶ್ ಬಾಬು ಟ್ರೋಲ್
ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಮಹೇಶ್ ಬಾಬು ಟ್ರೋಲ್ ಆಗುತ್ತಿದ್ದಾರೆ. ಈ ಹಿಂದೆನೂ AMB ಪ್ರಾಪರ್ಟಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿ ಮಾಡಿಲ್ಲ ಸುದ್ದಿ ಹೊರಬಿದ್ದಿತ್ತು. ಈಗ ಮತ್ತೊಮ್ಮೆ ಪ್ರೇಕ್ಷಕರಿಂದ ಹೆಚ್ಚಿನ ಜಿಎಸ್‌ಟಿ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ನೆಟ್ಟಿಗರು ನಟನ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಬಗ್ಗೆ ಮಹೇಶ್ ಬಾಬು ಹಾಗೂ ಅವರ ಟೀಮ್ ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲ. ಇದೇ ವೇಳೆ ಹೈದರಾಬಾದ್‌ನ ಆರ್‌ಟಿಸಿ ಕ್ರಾಸ್ ರೋಡ್ಸ್‌ನಲ್ಲಿ 'AMB ಕ್ಲಾಸಿಕ್' ಎಂಬ ಮತ್ತೊಂದು ಹೊಸ ಮಲ್ಟಿಪ್ಲೆಕ್ಸ್ ಶುಭಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ.


Click it and Unblock the Notifications