ಸೋಮವಾರದ ಪರೀಕ್ಷೆ ಗೆದ್ದ 'ಹನುಮಾನ್'; 'ಕೆಜಿಎಫ್ 1','ಕಾಂತಾರ' ಗಳಿಸಿದ್ದಿದ್ದು ಎಷ್ಟು?
ಸಿನಿಮಾ ಮಂದಿಗೆ ಸಂಕ್ರಾಂತಿ ಹಬ್ಬ ಸಖತ್ ಸರ್ಪ್ರೈಸ್ ಕೊಟ್ಟಿದೆ. ಬಿಗ್ ಬಜೆಟ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಬರೆಯಬಹುದ ಅನ್ನೋ ಲೆಕ್ಕಾಚಾರವಿತ್ತು. ಆದರೆ, ಚಿಕ್ಕ ಬಜೆಟ್ ಸಿನಿಮಾ 'ಹನುಮಾನ್' ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಅಚ್ಚರಿ ಮೂಡಿಸಿದೆ. ಬಿಗ್ ಬಜೆಟ್ ಸಿನಿಮಾಗಳಿಗೆ ಟಕ್ಕರ್ ಕೊಟ್ಟು ಮುನ್ನುಗ್ಗುತ್ತಿದೆ.
ಯುವ ಪ್ರತಿಭೆ ತೇಜ ಸಜ್ಜ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಪ್ರಶಾಂತ್ ವರ್ಮಾ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿರೋ ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕೇವಲ ಭಾರತದಲ್ಲಿ ಅಷ್ಟೇ ಅಲ್ಲ. ವಿದೇಶದಲ್ಲೂ ಈ ಸಿನಿಮಾ ಸಖತ್ ಸದ್ದು ಮಾಡುತ್ತಿದೆ.

ಮೌತ್ ಪಬ್ಲಿಸಿಟಿಯಿಂದ 'ಹನುಮಾನ್' ಸಿನಿಮಾ ಮೊದಲ ಸೋಮವಾರದ ಪರೀಕ್ಷೆಯನ್ನು ಗೆದ್ದಿದೆ. ಸಂಕ್ರಾಂತಿ ಹಬ್ಬದ ಸಂಭ್ರಮವಿದ್ದರೂ, ಜನರು 'ಹನುಮಾನ್' ಸಿನಿಮಾವನ್ನು ವೀಕ್ಷಿಸಿದ್ದಾರೆ. ಮಹೇಶ್ ಬಾಬು ಸಿನಿಮಾ 'ಗುಂಟೂರು ಖಾರಂ', ವಿಕ್ಟರಿ ವೆಂಕಟೇಶ್ ಸಿನಿಮಾ 'ಸೈಂಧವ್' ಹಾಗೂ ನಾಗಾರ್ಜುನಾ ಸಿನಿಮಾ 'ನಾ ಸಾಮಿ ರಂಗ' ಸಿನಿಮಾಗಿಂತ ಹೆಚ್ಚು ಮೆಚ್ಚುಗೆ ಪಡೆದುಕೊಂಡಿದೆ.
ಕಳೆದ ಶುಕ್ರವಾರದಂದು (ಜನವರಿ 12) 'ಹನುಮಾನ್' ಸಿನಿಮಾ ರಿಲೀಸ್ ಆಗಿತ್ತು. ಬಿಡುಗಡೆಯಾದ ನಾಲ್ಕನೇ ದಿನಕ್ಕೆ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹೊಸ ಪ್ರತಿಭೆಯ ಸಿನಿಮಾವೊಂದು ಈ ಮಟ್ಟಿಗೆ ಕಲೆಕ್ಷನ್ ಮಾಡಿದ್ದು, ಟ್ರೇಡ್ ಎಕ್ಸ್‌ಪರ್ಟ್‌ಗಳಿಗೂ ಅಚ್ಚರಿ ಮೂಡಿಸಿದೆ. ಸದ್ಯ ಸೋಮವಾರದ ಪರೀಕ್ಷೆಯಲ್ಲಿ ಗೆದ್ದಿರೋ ಸಿನಿಮಾ 14.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ 55.15 ಕೋಟಿ ರೂಪಾಯಿ (ನೆಟ್) ಕೇವಲ ಭಾರತದಲ್ಲಿ ಕಲೆಕ್ಷನ್ ಮಾಡಿದೆ.

ಈ ನಾಲ್ಕು ದಿನಗಳಲ್ಲೇ ಯಶ್ ಸಿನಿಮಾ 'ಕೆಜಿಎಫ್ ಚಾಪ್ಟರ್ 1' ಹಾಗೂ ರಿಷಬ್ ಶೆಟ್ಟಿಯ 'ಕಾಂತಾರ' ಸಿನಿಮಾದ ಮೊದಲ ಸೋಮವಾರದ ಗಳಿಕೆಯನ್ನು ಹಿಂದಿಕ್ಕಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಹೇಳುತ್ತಿದ್ದಾರೆ. ಮೊದಲ ಸೋಮವಾರ 'ಕೆಜಿಎಫ್ ಚಾಪ್ಟರ್ 1' 10.60 ಕೋಟಿ ರೂಪಾಯಿ, ರಿಷಬ್ ಶೆಟ್ಟಿಯ 'ಕಾಂತಾರ' 3.7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಅದೇ 'ಹನುಮಾನ್' 14.50 ಕೋಟಿ ರೂಪಾಯಿ ಗಳಿಸಿದೆ.
ಸೋಮವಾರ (ಜನವರಿ 15) ತೆಲುಗು ಮಂದಿ ಹೆಚ್ಚಾಗಿ 'ಹನುಮಾನ್' ಸಿನಿಮಾ ವೀಕ್ಷಿಸಿದ್ದಾರೆ. ಸುಮಾರು ಶೇ.79.50ರಷ್ಟು ಮಂದಿ ವೀಕ್ಷಿಸಿದ್ದರೆ, ಶೇ.16.50ಯಷ್ಟು ಹಿಂದಿ ಬೆಲ್ಟ್‌ಗಳಲ್ಲಿ ಸಿನಿಮಾ ನೋಡಿದ್ದಾರೆಂದು ವರದಿಯಾಗಿದೆ. ಈ ನಾಲ್ಕು ದಿನಗಳಲ್ಲಿ 'ಹನುಮಾನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಳಿಸಿದ ಗಳಿಕೆ ಹೀಗಿದೆ.
'ಹನುಮಾನ್' ಬಾಕ್ಸಾಫೀಸ್ ಕಲೆಕ್ಷನ್
| ಪ್ರೀ ರಿಲೀಸ್ | 4.15 ಕೋಟಿ ರೂಪಾಯಿ |
| ಮೊದಲ ದಿನ | 8.05 ಕೋಟಿ ರೂಪಾಯಿ |
| ಎರಡನೇ ದಿನ | 12.45 ಕೋಟಿ ರೂಪಾಯಿ |
| ಮೂರನೇ ದಿನ | 16 ಕೋಟಿ ರೂಪಾಯಿ |
| ನಾಲ್ಕನೇ ದಿನ | 14.50 ಕೋಟಿ ರೂಪಾಯಿ |
| ಒಟ್ಟು | 55.15 ಕೋಟಿ ರೂಪಾಯಿ |
ಪ್ರಶಾಂತ್ ವರ್ಮಾ ನಿರ್ದೇಶನದ 'ಹನುಮಾನ್' ಸಿನಿಮಾ ಮೂಲಕ ತೇಜ ಸಜ್ಜ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇವರೊಂದಿಗೆ ದಕ್ಷಿಣ ಭಾರತದ ನಟಿ ವರಲಕ್ಷ್ಮಿ ಶರತ್ ಕುಮಾರ್, ವಿನಯ್ ರೈ, ಅಮೃತಾ ಐಯ್ಯರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆ, ನಿರ್ದೇಶನ ಎಲ್ಲಕ್ಕಿಂತ ಹೆಚ್ಚಾಗಿ 'ಹನುಮಾನ್' ಸಿನಿಮಾದ ವಿಎಫ್‌ಎಕ್ಸ್ ಬಗ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೇ ಸಿನಿಮಾಗೆ ಹೈಲೈಟ್ ಎಂಬಂತಾಗಿದೆ.


Click it and Unblock the Notifications










